ಚಾಮರಾಜನಗರ: ಬಿಳಿಗಿರಿರಂಗನ ಬೆಟ್ಟದಲ್ಲಿ ನಿಲ್ಲಿಸಿದ್ದ ಕಾರು, ಕೈಗಾಡಿ ಮೇಲೆ ಕಾಡಾನೆ ದಾಳಿ
ರಾಜಗೋಪುರ ಬಳಿ ನಿಲ್ಲಿಸಿದ್ದ ಕಾರು, ಕಬ್ಬಿನ ಹಾಲಿನ ಗಾಡಿ ಮೇಲೆ ಕಾಡಾನೆ ರೋಷಾವೇಷ ತೋರಿದ್ದು, ಕಾರು ಜಖಂಗೊಂಡಿದ್ದರೆ ಕೈಗಾಡಿ, ಅಂಗಡಿಗಳು ಧ್ವಂಸವಾಗಿದೆ.

Published : June 23, 2026 at 12:37 PM IST
ಚಾಮರಾಜನಗರ: ಪ್ರಸಿದ್ಧ ಪ್ರವಾಸಿ ತಾಣ ಮತ್ತು ಯಾತ್ರಾಸ್ಥಳವಾದ ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟದಲ್ಲಿ ಕಾಡಾನೆಯೊಂದು ಕಾರು, ಕೈಗಾಡಿ ಮೇಲೆ ದಾಳಿ ಮಾಡಿ ಧ್ವಂಸ ಮಾಡಿದ ಘಟನೆ ನಡೆದಿದೆ.
ಬಿಳಿಗಿರಿರಂಗನ ಬೆಟ್ಟದ ದೇವಾಲಯದ ರಾಜಗೋಪುರ ಬಳಿ ನಿಲ್ಲಿಸಿದ್ದ ಕಾರು, ಕಬ್ಬಿನ ಹಾಲಿನ ಗಾಡಿ ಮೇಲೆ ಕಾಡಾನೆ ರೋಷಾವೇಷ ತೋರಿದ್ದು ಕಾರು ಜಖಂಗೊಂಡಿದ್ದರೆ ಕೈಗಾಡಿ, ಅಂಗಡಿಗಳು ಧ್ವಂಸವಾಗಿದೆ. ಕಾಡಾನೆ ದಾಳಿ ಸ್ಥಳೀಯರಲ್ಲಿ ಆತಂಕ ಹುಟ್ಟಿಸಿದೆ.
ಬಿಳಿಗಿರಿರಂಗನ ಬೆಟ್ಟ ನಿವಾಸಿ ರಂಗನಾಥ್ ಎಂಬವರಿಗೆ ಸೇರಿದ ಕಾರು ಇದಾಗಿದ್ದು, ದೇವಾಲಯದ ರಾಜಗೋಪುರ ಬಳಿ ಕಾರು ನಿಲ್ಲಿಸಿದ್ದಾಗ ಆಹಾರ ಅರಸಿ ಬಂದ ಕಾಡಾನೆಯೊಂದು ದಾಳಿ ಮಾಡಿದೆ. ಮಾರುತಿ ಆಲ್ಟೋ ಕಾರು ಕಾಡಾನೆಯ ಆರ್ಭಟಕ್ಕೆ ಜಖಂ ಆಗಿದ್ದು, ಮಾಲೀಕರಿಗೆ ನಷ್ಟ ಉಂಟಾಗಿದೆ. ಅರಣ್ಯ ಇಲಾಖೆ ಸೂಕ್ತ ಪರಿಹಾರವನ್ನು ಕೊಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಹುಲಿ ದಾಳಿಗೆ ಎರಡು ಹಸು ಬಲಿ: ಚಾಮರಾಜನಗರ ತಾಲೂಕಿನ ಚನ್ನಪ್ಪನಪುರ ಗ್ರಾಮದ ನಿವಾಸಿ ಮಹದೇವಯ್ಯ ಎಂಬುವವರಿಗೆ ಸೇರಿದ 2 ಹಸುಗಳ ಮೇಲೆ ದಾಳಿ ನಡೆಸಿದ್ದು, ಹಸುಗಳು ಮೃತಪಟ್ಟ ಘಟನೆ ಸೋಮವಾರ ತಡರಾತ್ರಿ ನಡೆದಿದೆ.
ಹುಲಿ ದಾಳಿಯ ಮಾಹಿತಿ ತಿಳಿಯುತ್ತಿದ್ದಂತೆ ಚಾಮರಾಜನಗರ ಬಫರ್ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹುಲಿ ಸೆರೆ ಹಿಡಿಯಲು ಮುಂದಾಗಿದ್ದಾರೆ. ಅಮಚವಾಡಿ ಮತ್ತು ಹೊನ್ನಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ಹಾಗೂ ಹುಲಿ ಕಂಡುಬಂದಲ್ಲಿ ಕೂಡಲೇ ಚಾಮರಾಜನಗರ ಪ್ರಾದೇಶಿಕ ವಲಯದ ಸಿಬ್ಬಂದಿಗೆ ಮಾಹಿತಿ ನೀಡುವಂತೆ ಅರಣ್ಯ ಇಲಾಖೆ ಕೋರಿದೆ.
ಕಳೆದ ಎರಡು ದಿನಗಳ ಹಿಂದೆ ಸಿದ್ಧಲಿಂಗಪುರ ಗ್ರಾಮದಲ್ಲಿ ಕುರಿ ಮತ್ತು ಮೇಕೆಗಳ ಮೇಲೆ ಹುಲಿ ದಾಳಿ ನಡೆಸಿ 2 ಕುರಿ ಮತ್ತು 2 ಮೇಕೆಗಳನ್ನು ಬಲಿ ಪಡೆದಿತ್ತು. ಸಿದ್ದಲಿಂಗಪುರ ಗ್ರಾಮದ ಮಹೇಶ್ ಮತ್ತು ಶೇಷ ಎಂಬ ಸಹೋದರರಿಗೆ ಸೇರಿದ ಕುರಿ ಮತ್ತು ಮೇಕೆಗಳ ಮೇಲೆ ಹುಲಿ ದಾಳಿ ನಡೆಸಿ ಕೊಂದಿತ್ತು.
ಇದನ್ನೂ ಓದಿ: ದಾವಣಗೆರೆ: ಬಾಲಕಿ ಮೇಲೆ ದಾಳಿಗೆ ಯತ್ನಿಸಿದ ಬೀದಿ ನಾಯಿಗಳ ಗುಂಪು

