ETV Bharat / state

ನರೇಗಾ ಹೆಸರು ಬದಲಾಯಿಸಿ ಕೇಂದ್ರ ಸರ್ಕಾರ ಬಡವರ ಬದುಕಿಗೆ ಬರೆ ಹಾಕಿದೆ: ಸಿಎಂ ಸಿದ್ದರಾಮಯ್ಯ

ಅಂಬಾದೇವಿಯ ಮಹಾರಥೋತ್ಸವದಲ್ಲಿ ಭಾಗವಹಿಸಿದ ಮುಖ್ಯಮಂತ್ರಿ ಸಿದ್ಧರಾಮಯ್ಯ, ಅಂದಾಜು 400 ಕೋಟಿ ರೂ. ಮೌಲ್ಯದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮತ್ತು ಲೋಕಾರ್ಪಣೆ ಮಾಡಿದರು.

CM SIDDARAMAIAH
ಸಿಎಂ ಸಿ್ದರಾಮಯ್ಯ (ETV Bharat)
author img

By ETV Bharat Karnataka Team

Published : January 4, 2026 at 10:15 AM IST

4 Min Read
Choose ETV Bharat

ರಾಯಚೂರು: ಐತಿಹಾಸಿ ಹಾಗೂ ಪುರಾಣ ಪ್ರಸಿದ್ಧಿ ಅಂಬಾಮಠದ ಶ್ರೀ ಅಂಬಾದೇವಿಯ ಮಹಾರಥೋತ್ಸವ ಸಹಸ್ರ ಸಂಖ್ಯೆಯ ಭಕ್ತರ ಜಯಘೋಷದೊಂದಿಗೆ ಅದ್ಧೂರಿಯಾಗಿ ನೇರವೇರಿತು.

ಜಿಲ್ಲೆಯ ಸಿಂಧನೂರು ತಾಲೂಕಿನ ಸೋಮಲಾಪುರ ಗ್ರಾಮದ ಬಳಿಯ ಸಿದ್ದಪರ್ವದಲ್ಲಿ ನೆಲೆಸಿರುವ ಶ್ರೀ ಅಂಬಾದೇವಿ ಜಾತ್ರಾ ಮಹೋತ್ಸವ ಬನದ ಹುಣ್ಣಿಮೆಯಂದು ಶ್ರೀಮಠದ ಪದ್ಧತಿಯಂತೆ ನಡೆಸಲಾಯಿತು. ಬೆಳಗ್ಗೆಯಿಂದಲೇ ವಿವಿಧ ಪೂಜೆ ಕೈಂಕರ್ಯಗಳು ಹಾಗೂ ವಿಶೇಷ ಪೂಜೆಗಳು ನೇರವೇರಿದವು. ಸಂಜೆಯ ವೇಳೆ ಜಿಲ್ಲೆ ರಾಜ್ಯ ಹಾಗೂ ಬೇರೆ ಬೇರೆ ರಾಜ್ಯಗಳಿಂದ ಬಂದಂತಹ ಅಸಂಖ್ಯ ಭಕ್ತರ ಸಮ್ಮುಖದಲ್ಲಿ ವಿವಿಧ ವಾದ್ಯಗಳ ಮೇಳದೊಂದಿಗೆ ಮಹಾರಥೋತ್ಸವ ಜರುಗಿತು.

ಅಂಬಾದೇವಿಯ ಮಹಾರಥೋತ್ಸವ (ETV Bharat)

ಜಾತ್ರಾ ಮಹೋತ್ಸವ ಹಿನ್ನೆಲೆ ಈ ಬಾರಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಸಚಿವರಾದ ಹೆಚ್.ಕೆ. ಪಾಟೀಲ್, ಡಾ.ಶರಣಪ್ರಕಾಶ್​ ಪಾಟೀಲ್, ಎನ್.ಎಸ್. ಬೋಸರಾಜು, ಶಿವರಾಜ್ ತಂಗಡಗಿ, ಸತೀಶ್ ಜಾರಕಿಹೊಳಿ, ಶಾಸಕರಾದ ಹಂಪನಗೌಡ ಬಾದರ್ಲಿ, ಬಸವನಗೌಡ ಬಾದರ್ಲಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಇದೇ ವೇಳೆ ಮುಖ್ಯಮಂತ್ರಿ ಸಿದ್ಧರಾಮಯ್ಯ, ಅಂದಾಜು 400 ಕೋಟಿ ರೂ. ಮೌಲ್ಯದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮತ್ತು ಲೋಕಾರ್ಪಣೆ ಮಾಡಿದರು. ನಂತರ ಮಾತನಾಡಿದ ಅವರು, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (ಮ-ನರೇಗಾ) ಕಾಯ್ದೆಯನ್ನು ಹೊಸ ಹೆಸರಲ್ಲಿ ಹೊಸ ಕಾಯ್ದೆಯೆಂದು ಘೋಷಿಸಿರುವ ಕೇಂದ್ರ ಸರ್ಕಾರ ಬಡವರು, ಮಹಿಳೆಯರು, ದಲಿತರು, ಸಣ್ಣ ರೈತರ ಬದುಕಿಗೆ ಬರೆ ಹಾಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೊದಲ ಬಾರಿಗೆ ಅಂಬಾ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸುತ್ತಿದ್ದೇನೆ. ತಾಯಿಯ ದರ್ಶನವಾಗಿದ್ದು ನನ್ನ ಪುಣ್ಯ. ಈ ಕ್ಷೇತ್ರದಲ್ಲಿ ಸಾಲಗುಂದಾ ಏತನೀರಾವರಿ ಮುಳ್ಳೂರು ಏತ ನೀರಾವರಿ ಮತ್ತು ಒಳಬಳ್ಳಾರಿ ವಿಯರ್ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದರು.

30 ಲಕ್ಷಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶಕ್ಕೆ ನೀರು: ನೀರಾವರಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಎಲ್ಲಾ ನಿಗಮಗಳಿಗೆ 176 ಕೋಟಿ ರೂ.ಗಳನ್ನು ಒದಗಿಸಲಾಗಿದೆ. ಸಾಲಗುಂದಾ ಏತ ನೀರಾವರಿಗೆ 71 ಕೋಟಿ, ಮಳ್ಳೂರು ಏತ ನೀರಾವರಿಗೆ 21 ಕೋಟಿ, ಒಳಬಳ್ಳಾರಿ ಏತ ನೀರಾವರಿಗೆ 43 ಕೋಟಿಗೂ ಹೆಚ್ಚು ಅನುದಾನವನ್ನು ಒದಗಿಸಲಾಗಿದೆ. ಹಂಪನಗೌಡ ಬಾದರ್ಲಿ ಅವರು ಈ ಕ್ಷೇತ್ರದ ಅಭಿವೃದ್ಧಿಯನ್ನು ಉತ್ತಮವಾಗಿ ಮಾಡುತ್ತಿದ್ದಾರೆ. ನೀರಾವರಿಗೆ 42 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ನೀರು ಒದಗಿಸುವ ಪ್ರಯತ್ನದಲ್ಲಿ 30 ಲಕ್ಷಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶಕ್ಕೆ ನೀರು ಒದಗಿಸಲಾಗಿದೆ. ಉಳಿದ 12 ಲಕ್ಷ ಪ್ರದೇಶಕ್ಕೆ ನೀರು ಒದಗಿಸುವ ಕಾರ್ಯ ವಿವಿಧ ಹಂತಗಳಲ್ಲಿದೆ ಎಂದು ತಿಳಿಸಿದರು.

₹431 ಕೋಟಿಗಳನ್ನು ಪಾಪಯ್ಯ ಟನಲ್ ಮತ್ತು ಕಾಲುವೆ ಅಭಿವೃದ್ಧಿಗೆ ಹಾಗೂ ತುಂಗಭದ್ರಾ 33 ಗೇಟ್​ಗಳನ್ನು ಅಳವಡಿಸುವ ಕೆಲಸ ಮಾಡಲಾಗುತ್ತಿದೆ. ಜೂನ್ ಒಳಗೆ ಈ ಕೆಲಸವನ್ನು ಪೂರ್ಣಗೊಳಿಸಿ ಮುಂದಿನ ಮುಂಗಾರು ಬೆಳೆಗೆ ನೀರು ಒದಗಿಸಲಾಗುವುದು. ಎಷ್ಟೇ ವೆಚ್ಚವಾದರೂ ಹೊಸ ಗೇಟ್​ಗಳನ್ನು ಅಳವಡಿಸಿ ನೀರು ಒದಗಿಸುತ್ತೇವೆ ಎಂದು ಸಿಎಂ ಭರವಸೆ ನೀಡಿದರು.

ಸಿಎಂ ಸಿದ್ದರಾಮಯ್ಯ (ETV Bharat)

ಅಭಿವೃದ್ಧಿ ಕಾರ್ಯಗಳಿಗೆ ಹಣವಿಲ್ಲ ಎನ್ನುವುದು ಅಪ್ಪಟ ಸುಳ್ಳು: ನಮ್ಮ ಸರ್ಕಾರದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಹಣವಿಲ್ಲ ಎನ್ನುವುದು ಅಪ್ಪಟ ಸುಳ್ಳು. ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಕೆಲಸಗಳಿಗೆ ತಡೆ ಉಂಟಾಗಿಲ್ಲ ಎಂದು ಸ್ಪಷ್ಟಪಡಿಸಿದ ಮುಖ್ಯಮಂತ್ರಿಗಳು ಗ್ಯಾರಂಟಿಗಳಿಗೆ ಒಂದು ಲಕ್ಷದ 12 ಕೋಟಿ ರೂ. ಗಳನ್ನು ವೆಚ್ಚ ಮಾಡಲಾಗಿದೆ. ಶಕ್ತಿ ಯೋಜನೆಯಡಿ 643 ಕೋಟಿ ಮಹಿಳೆಯರು ಉಚಿತವಾಗಿ ಬಸ್ಸುಗಳಲ್ಲಿ ಪ್ರಯಾಣ ಮಾಡಿದ್ದಾರೆ. ಸುಮಾರು 16 ಸಾವಿರ ಕೋಟಿ ವೆಚ್ಚವಾಗಿದೆ ಎಂದರು. 52,000 ಕೋಟಿ ರೂ.ಗಳನ್ನು ಈ ವರ್ಷ ವೆಚ್ಚ ಮಾಡಲಾಗಿದೆ ಎಂದರು.

ಹಸಿರು ವಲಯ ಹೆಚ್ಚಳಕ್ಕೆ ಕ್ರಮ: ದೇಶದಲ್ಲಿಯೇ ಕರ್ನಾಟಕ ಅತಿ ಹೆಚ್ಚು ಒಣ ಭೂಮಿಯನ್ನು ಹೊಂದಿರುವ ಎರಡನೇ ರಾಜ್ಯ. ಆದ್ದರಿಂದ ರಾಜ್ಯದಲ್ಲಿ ಹೆಚ್ಚಿನ ನೀರಾವರಿ ಕೈಗೊಂಡು ಹಸಿರು ವಲಯ ಮಾಡುವುದು ನಮ್ಮ ಉದ್ದೇಶ ಎಂದರು. ಸಿಂಧನೂರು ಮಾತ್ರವಲ್ಲದೆ ರಾಜ್ಯದ ಎಲ್ಲ ನೀರಾವರಿ ಯೋಜನೆಗಳನ್ನು ಚುರುಕುಗೊಳಿಸಲಾಗುತ್ತಿದೆ. ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೇ ಹಂತಕ್ಕೆ ಕೇಂದ್ರ ಸರ್ಕಾರ ಗೆಜೆಟ್ ಅಧಿಸೂಚನೆಯನ್ನು ಇನ್ನೂ ಹೊರಡಿಸಿಲ್ಲ. 2003 ರಲ್ಲಿಯೇ ಇತ್ಯರ್ಥವಾಗಿ ನಮಗೆ ನ್ಯಾಯ ದೊರಕಿದ್ದರೂ 173 ಟಿಎಂಸಿ ನೀರನ್ನು ಬಳಕೆ ಮಾಡಬೇಕಿದೆ. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಒತ್ತಾಯವನ್ನು ಹೇರಲಾಗಿದೆ. ಗ್ಯಾರಂಟಿ ಯೋಜನೆಗಳಿಂದ ಕರ್ನಾಟಕ ತಲಾ ಆದಾಯದಲ್ಲಿ ದೇಶದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ. ಅಭಿವೃದ್ಧಿ ಕೆಲಸಗಳನ್ನು ಮಾಡಲು ನಾವು ಹಿಂದೆ ಬೀಳುವುದಿಲ್ಲ. ನುಡಿದಂತೆ ನಡೆಯುವ ಸರ್ಕಾರ ನಮ್ಮದು ಎಂದು ಹೇಳಿದರು.

ಕಟ್ಟಕಡೆಯ ಭಾಗದ ರೈತರಿಗೆ ನೀರು ಒದಗಿಸಲಾಗುವುದು: ಆದಷ್ಟು ಶೀಘ್ರವಾಗಿ ಕಟ್ಟಕಡೆಯ ಭಾಗದ ರೈತರಿಗೆ ನೀರು ಒದಗಿಸುವ ಕೆಲಸವನ್ನು ಮಾಡುತ್ತೇವೆ. ದೇವಸ್ಥಾನದ ಅಭಿವೃದ್ಧಿಗೆ ಮೊದಲನೇ ಹಂತದಲ್ಲಿ 6.30 ಕೋಟಿ ರೂ. ಅನುದಾನದ ಪೈಕಿ 2 ಕೋಟಿ ರೂ. ಈಗಾಗಲೇ ವೆಚ್ಚ ಮಾಡಲಾಗಿದೆ. ಉಳಿದ ಹಣವನ್ನೂ ಬಿಡುಗಡೆ ಮಾಡಲಾಗುವುದು. ದೇವಸ್ಥಾನ ಮತ್ತು ನೀರಾವರಿ ಯೋಜನೆಗಳನ್ನು ಶೀಘ್ರವಾಗಿ ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದರು.

ವಿಬಿ ಜಿ ರಾಮ್ ಜಿ ರದ್ದುಗೊಳ್ಳಬೇಕು: 6000 ಕೋಟಿ ರೂ.ಗಳನ್ನು ಪ್ರತಿ ವರ್ಷ ಖರ್ಚು ಮಾಡಲಾಗುತ್ತಿತ್ತು. ಆದರೆ ಕೇಂದ್ರದವರು ಈಗ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ(ಮ-ನರೇಗಾ) ಯೋಜನೆಯನ್ನು ಬದಲಾಯಿಸಿ ವಿಬಿ ಜಿ ರಾಮ್ ಜಿ ಕಾಯ್ದೆಯನ್ನು ಜಾರಿ ಮಾಡಿದ್ದಾರೆ. ಬಡವರು, ಮಹಿಳೆಯರು, ದಲಿತರು, ಸಣ್ಣ ರೈತರಿಗೆ ತೀವ್ರ ತೊಡಕುಂಟು ಮಾಡುವ ಈ ಹೊಸ ಕಾಯ್ದೆಯನ್ನು ರಾಜ್ಯ ಸರ್ಕಾರ ತೀವ್ರವಾಗಿ ಖಂಡಿಸುತ್ತದೆ ಎಂದರು.

ಜನಪರ ಯೋಜನೆಯ ಸ್ವರೂಪವೇ ಬದಲಾಗಿದೆ: ವಿಬಿ ಜಿ ರಾಮ್ ಜಿ ಕಾನೂನನ್ನು ರದ್ದು ಮಾಡಿ, ಮನರೇಗಾ ಕಾನೂನು ಪುನರ್ ಸ್ಥಾಪನೆಯಾಗಬೇಕೆಂಬುದೇ ನಮ್ಮ ಉದ್ದೇಶ. ಈ ಕಾನೂನಿನ ಸ್ವರೂಪವನ್ನೇ ಬದಲಾಯಿಸಲಾಗಿದೆ. ಹಿಂದಿನ ಕಾಯ್ದೆ ಪ್ರಕಾರ ಕೇಂದ್ರ ಸರ್ಕಾರ ಪೂರ್ಣ ಅನುದಾನವನ್ನು ಭರಿಸುತ್ತಿತ್ತು. ಆದರೆ ಈಗ ಕೇಂದ್ರವು ಶೇ.60ರಷ್ಟು ಹಾಗೂ ರಾಜ್ಯ ಸರ್ಕಾರ ಶೇ. 40ರಷ್ಟು ಅನುದಾನ ಭರಿಸಬೇಕೆಂಬ ಹೊಸ ನಿಯಮ ತಂದಿರುವುದು ಸೂಕ್ತವಲ್ಲ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಜಾರಿಗೊಳಿಸಿದ್ದ ಈ ಜನಪರವಾಗಿದ್ದ ಕಾನೂನನ್ನು, 20 ವರ್ಷಗಳ ನಂತರ ಪ್ರಧಾನಿ ಮೋದಿಯವರು ಮಹಾತ್ಮ ಗಾಂಧಿಯವರ ಹೆಸರನ್ನೂ ಬದಲಾಯಿಸಿ ವಿಬಿ ಜಿ ರಾಮ್ ಜಿ ಎಂದು ಹೆಸರಿಟ್ಟಿದ್ದಾರೆ. ಕೇಂದ್ರದ ಈ ಕ್ರಮವನ್ನು ರಾಜ್ಯದ ಜನರೆಲ್ಲರೂ ಒಕ್ಕೊರಲಿನಿಂದ ವಿರೋಧಿಸಬೇಕು ಎಂದು ಸಿಎಂ ಕರೆ ನೀಡಿದರು.

ಇದನ್ನೂ ಓದಿ: ಮಹಾತ್ಮ ಗಾಂಧಿಯನ್ನು ಗೋಡ್ಸೆ ಕೊಲೆ ಮಾಡಿದ್ದ, ಇದೀಗ ಎರಡನೇ ಬಾರಿ ಗಾಂಧಿಯನ್ನು ಕೊಂದಿದ್ದಾರೆ: ಸಿಎಂ ಸಿದ್ದರಾಮಯ್ಯ