ಸತೀಶ ಜಾರಕಿಹೊಳಿ ವಿರುದ್ಧ ಪೋಸ್ಟ್: ಎರಡು ಫೇಸ್‌ಬುಕ್ ಪೇಜ್ ವಿರುದ್ಧ ಪ್ರಕರಣ ದಾಖಲು
ಸತೀಶ ಜಾರಕಿಹೊಳಿ ವಿರುದ್ಧ ಪೋಸ್ಟ್ ಹಾಕಿದ್ದ ಎರಡು ಫೇಸ್‌ಬುಕ್ ಪೇಜ್ಗಳ ವಿರುದ್ಧ ಪ್ರಕರಣ ದಾಖಲಾಗಿದೆ.

Published : May 31, 2026 at 8:25 PM IST
ಬೆಳಗಾವಿ: ʻಕರುನಾಡ ಕುರುಬಗೌಡ್ರು ಹಾಗೂ ಬಂಡಾಯ ಧ್ವನಿʼ ಎಂಬ ನಕಲಿ ಫೇಸ್‌ಬುಕ್ ಖಾತೆಯಲ್ಲಿ ಮಾಜಿ ಸಚಿವ ಸತೀಶ್ ಜಾರಕಿಹೊಳಿ ಅವರ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ಬೆಳಗಾವಿ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಾಲ್ಮೀಕಿ ಸಮಾಜದ ಮುಖಂಡ ರಾಜಶೇಖರ ತಳವಾರ ಎಂಬವರು ದೂರು ದಾಖಲಿಸಿದ್ದಾರೆ. ʻಕರುನಾಡ ಕುರುಬಗೌಡ್ರು ಹಾಗೂ ಬಂಡಾಯ ಧ್ವನಿʼ ಎಂಬ ನಕಲಿ ಫೇಸ್ ಬುಕ್ ಖಾತೆಯಲ್ಲಿ "ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಸಿದ್ದರಾಮಯ್ಯ ಅವರ ವಿರುದ್ದ 37 ಶಾಸಕರಿಂದ ಮಾಜಿ ಸಚಿವ ಸತೀಶ್ ಜಾರಕಿಹೊಳಿ ಅವರು ಸಹಿ ಸಂಗ್ರಹ ಮಾಡಲಾಗಿದೆ" ಎಂಬ ಗಂಭೀರ ಆರೋಪ ಮಾಡಲಾಗಿದೆ. ರಾಜಕೀಯ ವಲಯದಲ್ಲಿ ಇದು ದೊಡ್ಡ ಮಟ್ಟದ ಚರ್ಚೆ ಹುಟ್ಟು ಹಾಕಿತ್ತು.
ಆದರೆ, ಈ ಆರೋಪವನ್ನು ಸ್ವತಃ ಮಾಜಿ ಸಚಿವ ಸತೀಶ್ ಜಾರಕಿಹೊಳಿ ನಿರಾಕರಿಸಿದ್ದರು. ಹೀಗಾಗಿ ಸತೀಶ್ ಅವರ ವಿರುದ್ಧ ಇಲ್ಲಸಲ್ಲದ ಅಪವಾದ ಹೊರಿಸಿ ಅವರ ಹೆಸರು ಹಾಳು ಮಾಡಲು ನಕಲಿ ಫೇಸ್‌ಬುಕ್ ಖಾತೆಯಲ್ಲಿ ಸಂಚು ರೂಪಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇದರಲ್ಲಿ ಮುಖ್ಯವಾಗಿ ಕುರುಬ ಸಮುದಾಯ ಮತ್ತು ವಾಲ್ಮೀಕಿ ಸಮುದಾಯದ ನಡುವೆ ಭಿನ್ನಾಭಿಪ್ರಾಯ ಉಂಟಾಗಿ ಸಾರ್ವಜನಿಕರಲ್ಲಿ ಶಾಂತಿಭಂಗ ಮತ್ತು ದೊಂಬಿ ಉಂಟು ಮಾಡುವಂತೆ ಮಾಡಲು ಸುಳ್ಳು, ಸುದ್ದಿಗಳನ್ನು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿದೆ. ಶೀಘ್ರವೇ ಸುಳ್ಳು ಸುದ್ದಿ ಹರಡಿಸುವವರ ಹಾಗೂ ಈ ಎರಡು ನಕಲಿ ಫೇಸ್‌ಬುಕ್ ಮಾಡಿ ಅವಹೇಳನಕಾರಿ ಪೋಸ್ಟ್ ಹಾಕಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸೈಬರ್ ಕ್ರೈಂ ಠಾಣೆಯಲ್ಲಿ ದೂರು ದಾಖಲಾಗಿದೆ.
ದೂರನ್ನು ಸ್ವೀಕರಿಸಿರುವ ಬೆಳಗಾವಿ ಸಿಇಎನ್ ಪೊಲೀಸರು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆ ನಕಲಿ ಫೇಸ್‌ಬುಕ್ ಖಾತೆಯ ಹಿಂದಿರುವ ವ್ಯಕ್ತಿಗಳು ಯಾರು? ಇದರ ಹಿಂದಿರುವ ಉದ್ದೇಶವೇನು? ಎಂಬ ಬಗ್ಗೆ ತಾಂತ್ರಿಕ ತನಿಖೆ ಆರಂಭಿಸಿದ್ದಾರೆ. ರಾಜಕೀಯ ಲಾಭಕ್ಕಾಗಿ ಅಥವಾ ವೈಯಕ್ತಿಕ ದ್ವೇಷಕ್ಕಾಗಿ ಇಂತಹ ಕೃತ್ಯ ಎಸಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಎಚ್ಚರಿಸಿದ್ದಾರೆ.
ಸತೀಶ್ ಜಾರಕಿಹೊಳಿ ಅವರ ಹೆಸರಿಗೆ ಮಸಿ ಬಳಿಯುವ ಹಾಗೂ ಸಾರ್ವಜನಿಕವಾಗಿ ದ್ವೇಷ ಹುಟ್ಟುಹಾಕುವ ಉದ್ದೇಶದಿಂದ ಈ ರೀತಿ ನಕಲಿ ಪೋಸ್ಟ್ ಮಾಡಲಾಗಿದೆ. ಆ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ, ಕಾನೂನು ಕ್ರಮ ಕೈಗೊಳ್ಳುವಂತೆ ದೂರುದಾರ ರಾಜಶೇಖರ ತಳವಾರ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಪದಗ್ರಹಣ ದಿನದಂದೇ ಕಾಂಗ್ರೆಸ್ ಕಚೇರಿ ಭೂಮಿ ಪೂಜೆಗೆ ಚಿಂತನೆ: ಡಿ.ಕೆ. ಶಿವಕುಮಾರ್

