ETV Bharat / state

ಹುಬ್ಬಳ್ಳಿ: ಮಾಲೀಕನ 24 ಕೆಜಿ ಬೆಳ್ಳಿ ಆಭರಣ ದೋಚಿ ಪರಾರಿಯಾದ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲು

59 ಲಕ್ಷ ಮೌಲ್ಯದ ಸುಮಾರು 24 ಕೆ.ಜಿ. ಬೆಳ್ಳಿ ಆಭರಣಗಳನ್ನು ದೋಚಿ ಪರಾರಿಯಾಗಿರುವ ಕೆಲಸಗಾರನ ವಿರುದ್ಧ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

24 KG OF SILVER JEWELLERY THEFT
ಘಟನಾ ಸ್ಥಳ ಮಹಾದೇವಿ ಸಿಲ್ಕ್ ಸಾರೀಸ್ ಬಟ್ಟೆ ಅಂಗಡಿ (ETV Bharat)
author img

By ETV Bharat Karnataka Team

Published : March 3, 2026 at 7:53 PM IST

2 Min Read
Choose ETV Bharat

ಹುಬ್ಬಳ್ಳಿ: ಬೆಂಗಳೂರಿನ ಬೆಳ್ಳಿ ವ್ಯಾಪಾರಿಯೊಬ್ಬರ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ ಬೆಳ್ಳಿ ಮಾರಾಟ ಮಾಡಲು ಹುಬ್ಬಳ್ಳಿಗೆ ಬಂದಿದ್ದಾಗ 59 ಲಕ್ಷ ಮೌಲ್ಯದ ಸುಮಾರು 24 ಕೆ.ಜಿ. ಬೆಳ್ಳಿ ಆಭರಣಗಳನ್ನು ದೋಚಿ ಪರಾರಿಯಾಗಿರುವ ಬಗ್ಗೆ ಶಹರ್​ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರಿನ ಮಾಗಡಿ ಕ್ರಾಸ್‌ನ ವ್ಯಾಪಾರಿ ಅಶಿಸಕುಮಾರ ಜೈನ್ ಎನ್ನುವರು ತಮ್ಮ ಅಂಗಡಿಯಲ್ಲಿಯೇ ಕೆಲಸ ಮಾಡುತ್ತಿದ್ದ ರಾಜಸ್ಥಾನದ ಯೋಗೇಶ ಸಿಂಗ್ ವಿರುದ್ಧ ದೂರು ನೀಡಿದ್ದಾರೆ. ಹುಬ್ಬಳ್ಳಿಯ ಲ್ಯಾಮಿಂಗ್ಟನ್ ರಸ್ತೆಯ ಮಹಾದೇವಿ ಸಿಲ್ಕ್ ಸಾರೀಸ್ ಬಟ್ಟೆ ಅಂಗಡಿ ಎದುರು ಕಾರಿನಲ್ಲಿ ಎರಡು ಬ್ಯಾಗ್‌ನಲ್ಲಿದ್ದ ಕಾಲುಗೆಜ್ಜೆ, ಕತ್ತಿನ ಚೈನ್, ಬ್ರಾಸ್‌ಲೇಟ್, ಕೈ ಕಡಗ, ಕಾಲು ಕಡಗಗಳನ್ನು ಬ್ಯಾಗ್ ಸಮೇತ ಕಳವು ಮಾಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಪ್ರಕರಣದ ಹಿನ್ನೆಲೆ: ವ್ಯಾಪಾರಿ ಆಶಿಸಕುಮಾರ ಅವರ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಅಮಿತ್​ ಪುರೋಹಿತ ಮತ್ತು ಯೋಗೇಶ ಸಿಂಗ್ ಅವರಿಗೆ ಬೆಳ್ಳಿಯ ಆಭರಣಗಳನ್ನು ಮಾರಾಟ ಮಾಡಿಕೊಂಡು ಬರುವಂತೆ, ತಮ್ಮದೇ ಕಾರು ನೀಡಿ 29 ಕೆ.ಜಿ. ಬೆಳ್ಳಿ ಆಭರಣಗಳನ್ನು ನೀಡಿದ್ದರು. ಚಿತ್ರದುರ್ಗ, ದಾವಣಗೆರೆಯಲ್ಲಿ 3.167 ಕೆ.ಜಿ. ಆಭರಣಗಳನ್ನು ಮಾರಾಟ ಮಾಡಿ, ಉಳಿದ 24.760 ಕೆ.ಜಿ. ಆಭರಣವನ್ನು ಮಾರಾಟ ಮಾಡಲು ಫೆ.‌ 28ರಂದು ಹುಬ್ಬಳ್ಳಿಗೆ ಬಂದಿದ್ದರು.

ಲ್ಯಾಮಿಂಗ್ಟನ್ ರಸ್ತೆಯ ಮಹಾದೇವಿ ಸಿಲ್ಕ್ ಸಾರೀಸ್ ಬಟ್ಟೆ ಅಂಗಡಿ ಎದುರು ಕಾರು ನಿಲ್ಲಿಸಿ, ಅಲ್ಲಿರುವ ಕೆಜಿಪಿ ಜ್ಯೂವಲರ್ಸ್ ಅಂಗಡಿಗೆ ಹೋಗಿದ್ದರು. ನಂತರ ಆಭರಣ ತರುವಂತೆ ಅಮಿತ್​ ಅವರು, ಯೋಗೇಶ ಸಿಂಗ್‌ಗೆ ಹೇಳಿ ಕಾರಿನ ಕೀ ಕೊಟ್ಟಿದ್ದರು. ಅವನು ಕಾರನ್ನು ಲಾಕ್ ಮಾಡಿ ಕೀ ಸಮೇತ ಬೆಳ್ಳಿಯ ಆಭರಣಗಳಿರುವ ಎರಡು ಬ್ಯಾಗ್​​ಗಳನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಕುರಿತಂತೆ ಪ್ರಕರಣ ದಾಖಲಿಸಿಕೊಂಡಿರುವ ಶಹರ್​ ಠಾಣೆ ಪೊಲೀಸರು ತನಿಖೆ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.

ಗಂಡನ ಚಿಕಿತ್ಸೆಗಾಗಿ ಮಾಲೀಕರ ಮನೆಯಲ್ಲಿ 12 ಕೆಜೆ ಬೆಳ್ಳಿ ಸಾಮಗ್ರಿ ಕದ್ದ ಮಹಿಳೆ ಅರೆಸ್ಟ್(ಪ್ರತ್ಯೇಕ ಘಟನೆ): ಕೆಲಸ ಮಾಡುತ್ತಿದ್ದ ಮನೆಯಲ್ಲೇ ಕಳ್ಳತನ ಮಾಡಿದ್ದ ಮಹಿಳೆಯೊಬ್ಬಳನ್ನು ಬೆಂಗಳೂರಿನ ಜೀವನ್ ಬಿಮಾ ನಗರ ಠಾಣೆ ಪೊಲೀಸರು ಬಂಧಿಸಿದ್ದರು. ದಾವಣಗೆರೆ ಮೂಲದ ಚೈತ್ರಾ ಬಂಧಿತ ಆರೋಪಿ. ಕಳೆದ ಒಂದು ವರ್ಷದಿಂದ ಹಂತಹಂತವಾಗಿ ಕಳ್ಳತನ‌ ಮಾಡಿದ್ದ ಮಹಿಳೆಯಿಂದ ಸುಮಾರು 35 ಲಕ್ಷ ರೂಪಾಯಿ ಮೌಲ್ಯದ 12.5 ಕೆ.ಜಿ ಬೆಳ್ಳಿ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದರು.

ನಗರದ ಪ್ರತಿಷ್ಠಿತ ಆಸ್ಪತ್ರೆಯೊಂದರ ಸರ್ಜನ್ ಒಬ್ಬರ ಮನೆಯಲ್ಲಿ ಕಳೆದ ಒಂದೂವರೆ ವರ್ಷದಿಂದ ಚೈತ್ರಾ ಮನೆ ಕೆಲಸ ಮಾಡಿಕೊಂಡಿದ್ದಳು. ಮಾಲೀಕರು ಮನೆಯ ಮಹಡಿಯ ಮೇಲಿದ್ದ ಕೊಠಡಿಯೊಂದರಲ್ಲಿ ಬೆಳ್ಳಿಯ ಪಾತ್ರೆ ಹಾಗೂ ಪೂಜಾ ಸಾಮಗ್ರಿಗಳನ್ನು ಸಂಗ್ರಹಿಸಿಟ್ಟಿದ್ದರು. ಆ ಸಾಮಗ್ರಿಗಳನ್ನು ಕೇವಲ ಹಬ್ಬದ ಸಂದರ್ಭಗಳಲ್ಲಿ ಮಾತ್ರ ಹೊರತೆಗೆಯಲಾಗುತ್ತಿತ್ತು. ಇದನ್ನೇ ಬಂಡವಾಳವಾಗಿಸಿಕೊಂಡಿದ್ದ ಚೈತ್ರಾ, ಮಾಲೀಕರಿಗೆ ತಿಳಿಯದಂತೆ ಮಹಡಿಯಲ್ಲಿದ್ದ ಬೆಳ್ಳಿ ಸಾಮಗ್ರಿಗಳನ್ನು ಒಂದೊಂದಾಗಿ ಕದಿಯಲು ಆರಂಭಿಸಿದ್ದಳು. ಕಳೆದ ಒಂದು ವರ್ಷದಿಂದ ಹಂತ ಹಂತವಾಗಿ ಒಟ್ಟು 12.5 ಕೆಜಿ ತೂಕದ ಬೆಳ್ಳಿ ಪಾತ್ರೆಗಳನ್ನು ಎಗರಿಸಿದ್ದಳು. ದೀಪಾವಳಿ ಹಬ್ಬಕ್ಕೂ ಕೆಲವು ದಿನಗಳ ಮೊದಲೇ ಚೈತ್ರಾ ಇದ್ದಕ್ಕಿದ್ದಂತೆ ಕೆಲಸ ಬಿಟ್ಟಿದ್ದಳು. ಹಬ್ಬದ ಪೂಜೆಗಾಗಿ ಮನೆಯವರು ಬೆಳ್ಳಿ ಪಾತ್ರೆಗಳಿದ್ದ ಚೀಲವನ್ನು ತೆರೆದಾಗ ಕಳ್ಳತನದ ಕೃತ್ಯ‌ ಬಯಲಾಗಿತ್ತು. ತಕ್ಷಣ ಮಾಲೀಕರು ಜೀವನ್ ಭಿಮಾ ನಗರ ಠಾಣೆಗೆ ದೂರು ನೀಡಿದ್ದರು.

ಇವುಗಳನ್ನೂ ಓದಿ: