ಖಮೇನಿ ಹತ್ಯೆ ಖಂಡಿಸಿ ದೊಡ್ಡಬಳ್ಳಾಪುರದಲ್ಲಿ ಕ್ಯಾಂಡಲ್ ಹಿಡಿದು ಮೆರವಣಿಗೆ
ಇರಾನ್ ಸುಪ್ರೀಂ ನಾಯಕ ಖಮೇನಿ ಹತ್ಯೆ ಖಂಡಿಸಿ ದೊಡ್ಡಬಳ್ಳಾಪುರದಲ್ಲಿ ಪ್ರತಿಭಟನಾಕಾರರು ಮೆರವಣಿಗೆ ನಡೆಸಿದರು.

Published : March 2, 2026 at 10:44 AM IST
ದೊಡ್ಡಬಳ್ಳಾಪುರ: ಇರಾನ್ನ ಸರ್ವೋಚ್ಛ ನಾಯಕ ಅಯಾತೊಲ್ಲಾ ಅಲಿ ಖಮೇನಿ ಹತ್ಯೆ ಖಂಡಿಸಿ ನಗರದಲ್ಲಿ ಭಾನುವಾರ ರಾತ್ರಿ 8 ಗಂಟೆಯ ಸಮಯದಲ್ಲಿ ಶಿಯಾ ಮುಸ್ಲಿಮರು ಮೊಂಬತ್ತಿ ಹಿಡಿದು ಮೆರವಣಿಗೆ ನಡೆಸಿದರು.
ಖಮೇನಿ ಹತ್ಯೆ ಖಂಡಿಸಿದ ಬರಹ, ಫೋಟೋಗಳನ್ನು ಹಿಡಿದು ಪ್ರತಿಭಟನಾಕಾರರು ಇಲ್ಲಿನ ಕೋಟೆ ರಸ್ತೆಯಲ್ಲಿನ ಶಿಯಾ ಮುಸ್ಲಿಂ ಸಮುದಾಯದ ಮಸೀದಿಯಿಂದ ಸಿದ್ದಲಿಂಗಯ್ಯ ವೃತ್ತದವರೆಗೆ ಮೆರವಣಿಗೆಯಲ್ಲಿ ಸಾಗಿದರು. ಅಮೆರಿಕ, ಇಸ್ರೇಲ್ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮಕ್ಕಳು, ಮಹಿಳೆಯರು ಸೇರಿದಂತೆ ನೂರಾರು ಜನ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ಇದೇ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಶಿಯಾ ಸಮುದಾಯದ ಯುವಕ ಅಬ್ಬಾಸ್, ಅಮೆರಿಕ ಇವತ್ತು ಎಲ್ಲರಿಗೂ ಟೆರರಿಸ್ಟ್ ಲೇಬಲ್ ಅಂಟಿಸುತ್ತದೆ. ಆದರೆ ಶಸ್ತ್ರಾಸ್ತ್ರಗಳನ್ನು ಸರಬರಾಜು ಮಾಡುವ ಮೂಲಕ ಅಮೆರಿಕ ಟೆರರಿಸ್ಟ್ ದೇಶವಾಗಿದೆ. ಅಮೆರಿಕ ಮಾತಿಗೆ ಸೊಪ್ಪು ಹಾಕದಿದ್ದಕ್ಕೆ ಖಮೇನಿಯವರನ್ನು ಹತ್ಯೆ ಮಾಡಿದೆ. ಮುಂಬರುವ ನಾಯಕರು ಸಹ ಅಮೆರಿಕ ಮಾತಿಗೆ ಸೊಪ್ಪು ಹಾಕುವುದಿಲ್ಲ, ಯುಎಸ್ ಕ್ರಮವನ್ನು ವಿರೋಧಿಸುತ್ತೇವೆ ಎಂದರು.
ಖಮೇನಿ ಹತ್ಯೆ ಖಂಡಿಸಿ ಹಲವೆಡೆ ಪ್ರತಿಭಟನೆ: ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನ ಅಲಿಪುರದಲ್ಲೂ ಭಾನುವಾರ ಶಿಯಾ ಮುಸ್ಲಿಮರು ಪ್ರತಿಭಟನೆ ನಡೆಸಿದರು. ಕಪ್ಪು ಬಟ್ಟೆ ಧರಿಸಿ, ಬಾವುಟಗಳನ್ನು ಹಿಡಿದು ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಖಮೇನಿ ಅವರ ಫೋಟೋ ಹಿಡಿದು ಕಣ್ಣೀರು ಹಾಕಿದರು. ಮೂರು ದಿನಗಳವರೆಗೆ ಶೋಕಾಚರಣೆ ಘೋಷಿಸಿ, ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲಾಗಿದೆ.
ಬೆಂಗಳೂರಿನಲ್ಲಿಯೂ ಮುಸ್ಲಿಂ ಸಮುದಾಯದ ಮುಖಂಡರು ಮತ್ತು ಸದಸ್ಯರು ಖಮೇನಿ ಹತ್ಯೆಯನ್ನು ಖಂಡಿಸಿದ್ದಾರೆ.
ಖಮೇನಿ 1986ರಲ್ಲಿ ಅಲಿಪುರ ಗ್ರಾಮಕ್ಕೆ ಭೇಟಿ ನೀಡಿದ್ದರು. ಗ್ರಾಮದ ಬಹುತೇಕ ಮಂದಿ ಇರಾನ್, ಅರಬ್ ದೇಶಗಳು ಸೇರಿದಂತೆ ಜಗತ್ತಿನ ವಿವಿಧ ದೇಶಗಳ ಜೊತೆ ವ್ಯಾಪಾರ, ವಹಿವಾಟು ಮತ್ತು ಶಿಕ್ಷಣ ಕಾರಣಕ್ಕೆ ಸಂಬಂಧ ಹೊಂದಿದ್ದಾರೆ. ವಿಶೇಷವಾಗಿ ಅಲಿಪುರದ ಜನರು ಇರಾನ್ ದೇಶದೊಂದಿಗೆ ವೈವಾಹಿಕ ಸಂಬಂಧಗಳನ್ನೂ ಸಹ ಮಾಡಿಕೊಂಡಿದ್ದಾರೆ.
ಇರಾನ್ ಮೇಲಿನ ದಾಳಿ ಮತ್ತು ಖಮೇನಿ ಹತ್ಯೆಯಿಂದ ನಾವು ಬಹಳ ದುಃಖಿತರಾಗಿದ್ದೇವೆ. ಅವರು ತುಳಿತಕ್ಕೊಳಗಾದವರ, ವಿಶೇಷವಾಗಿ ಪ್ಯಾಲೆಸ್ಟೈನ್ ಜನರ ಪರ ಧ್ವನಿಯಾಗಿದ್ದರು ಎಂದು ಅಲಿಪುರದ ಕರ್ನಾಟಕ ಉರ್ದು ಅಕಾಡೆಮಿ ಸದಸ್ಯ ನಾತಿಕ್ ಅಲಿಪುರಿ ತಿಳಿಸಿದರು.
ಮಧ್ಯಪ್ರಾಚ್ಯ ಉದ್ವಿಗ್ನ: ಇರಾನ್ ಮೇಲೆ ಇಸ್ರೇಲ್ ಅಮೆರಿಕ ಜಂಟಿ ದಾಳಿ ನಡೆಸಿದ ಪರಿಣಾಮ ಇರಾನ್ ಸುಪ್ರೀಂ ನಾಯಕ ಖಮೇನಿ ಸೇರಿದಂತೆ ಪ್ರಮುಖ ನಾಯಕರು ಹತರಾಗಿದ್ದಾರೆ. ಬಳಿಕ ಮಧ್ಯಪ್ರಾಚ್ಯದಲ್ಲಿ ಯುದ್ಧ ಆರಂಭವಾಗಿದ್ದು, ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ಇವುಗಳನ್ನೂ ಓದಿ:

