ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕ್ರಿಕೆಟ್ ಪಂದ್ಯಗಳ ಅನುಮತಿಗೆ ಸಂಪುಟ ತಾತ್ವಿಕ ಒಪ್ಪಿಗೆ; ಹೊಸ ವಾಹನಗಳಿಗೆ ಸೆಸ್ ವಿಧಿಸುವ ಮಸೂದೆಗೂ ಅಸ್ತು
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕ್ರಿಕೆಟ್ ಪಂದ್ಯಾಟಕ್ಕೆ ಅನುಮತಿಸಲು ಸಂಪುಟ ತಾತ್ವಿಕ ಒಪ್ಪಿಗೆ ನೀಡಿದೆ. ಆರ್ಸಿಬಿ ದುರಂತದ ಹಿನ್ನೆಲೆ ಈ ಕ್ರೀಡಾಂಗಣದಲ್ಲಿ ಎಲ್ಲಾ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಾಟಕ್ಕೆ ನಿರ್ಬಂಧ ಹೇರಲಾಗಿತ್ತು.

Published : December 12, 2025 at 7:29 AM IST
ಬೆಳಗಾವಿ: ಮೈಕೆಲ್ ಡಿಕುನ್ಹಾ ವಿಚಾರಣಾ ಆಯೋಗದ ಮಾರ್ಗಸೂಚಿಯನ್ವಯ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕ್ರಿಕೆಟ್ ಪಂದ್ಯವಾಡಲು ಅನುಮತಿ ನೀಡುವ ಬಗ್ಗೆ ಸಚಿವ ಸಂಪುಟ ಸಭೆ ತಾತ್ವಿಕ ಒಪ್ಪಿಗೆ ನೀಡಿದೆ. ಅಗತ್ಯ ಸುರಕ್ಷತಾ ಕ್ರಮ, ಜನಸಂದಣಿ ನಿಯಂತ್ರಣಾ ಕ್ರಮ ಸೇರಿ ಮುಂಜಾಗ್ರತಾ ಕ್ರಮಗಳ ಸಂಬಂಧ ಡಿಕುನ್ಹಾ ಆಯೋಗದ ವರದಿ ಶಿಫಾರಸು ಮಾಡಿದ ಎಸ್ಒಪಿ ಅನುಷ್ಠಾನ ನಿಟ್ಟಿನಲ್ಲಿ ಗೃಹ ಇಲಾಖೆ ಜೊತೆ ಸಮಾಲೋಚಿಸಿ ಬಳಿಕ ಪಂದ್ಯಕ್ಕೆ ಅನುಮತಿ ನೀಡುವಂತೆ ಸಂಪುಟ ತೀರ್ಮಾನಿಸಿದೆ.
ಆ ಮೂಲಕ ಬೆಂಗಳೂರಿನ ಕ್ರಿಕೆಟ್ ಪ್ರಿಯರಿಗೆ ಸದ್ಯದಲ್ಲೇ ಗುಡ್ ನ್ಯೂಸ್ ಸಿಗಲಿದೆ. ಏಪ್ರಿಲ್ನಲ್ಲಿ ನಡೆಯಲಿರುವ ಐಪಿಎಲ್ ಪಂದ್ಯಗಳನ್ನು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಡಲು ಕೆಎಸ್ಸಿಎಗೆ (ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್) ಅನುಮತಿ ನೀಡುವ ಸಾಧ್ಯತೆ ಇದೆ.
ಆರ್ಸಿಬಿ ದುರಂತದ ಹಿನ್ನೆಲೆಯಲ್ಲಿ ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಎಲ್ಲಾ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಾಟಕ್ಕೆ ನಿರ್ಬಂಧ ಹೇರಲಾಗಿತ್ತು. ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣ ಬೆಂಗಳೂರಿನ ಹೆಮ್ಮೆಯಾಗಿದೆ. ಕ್ರಿಕೆಟ್ ಪಂದ್ಯ ಆಡಲು ಕೆಎಸ್ಸಿಎಗೆ ಅನುಮತಿ ನೀಡಬೇಕು ಎಂದು ಡಿಸಿಎಂ ಡಿಕೆ ಶಿವಕುಮಾರ್ ಸೇರಿ ಹಲವು ಸಚಿವರು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ನಡುವೆ ಬುಧವಾರ ಬೆಳಗಾವಿಯಲ್ಲಿ ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ ನೂತನ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಸಿಎಂ ಹಾಗೂ ಡಿಸಿಎಂ ಅವರನ್ನು ಭೇಟಿಮಾಡಿ ಕ್ರಿಕೆಟ್ ಪಂದ್ಯಾಟಕ್ಕೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದರು. ಇದೀಗ ಕಾಲ್ತುಳಿತ ಪ್ರಕರಣ ಕುರಿತು ರಚಿಸಲಾದ ಡಿಕುನ್ಹಾ ವಿಚಾರಣಾ ಆಯೋಗದ ವರದಿ ಶಿಫಾರಸು ಮಾಡಿದ್ದ ಸುರಕ್ಷತಾ ಮಾರ್ಗಸೂಚಿಯನ್ನು ಅನುಷ್ಠಾನಗೊಳಿಸುವ ಸಂಬಂಧ ಗೃಹ ಇಲಾಖೆ ಜೊತೆ ಚರ್ಚಿಸಿ ಬಳಿಕ ಅನುಮತಿ ನೀಡಲು ಸಂಪುಟ ಸಭೆ ತೀರ್ಮಾನಿಸಿದೆ.
ಹೊಸ ವಾಹನಗಳಿಗೆ ಸೆಸ್ ವಿಧಿಸುವ ಮಸೂದೆಗೆ ಅಸ್ತು: ವಾಹನ ನೋದಣಿ ವೇಳೆ ಸಂಗ್ರಹಿಸುವ ಒಂದು ಬಾರಿಯ ಸೆಸ್ನ ಗರಿಷ್ಠ ಮಿತಿ ಕೈ ಬಿಡುವ ಕರ್ನಾಟಕ ರಾಜ್ಯ ರಸ್ತೆ ಸುರಕ್ಷತೆ ಪ್ರಾಧಿಕಾರ (ತಿದ್ದುಪಡಿ) ಬಿಲ್ಗೆ ಸಂಪುಟ ಅಂಗೀಕಾರ ನೀಡಿದೆ. ಇದರ ಪ್ರಕಾರ ವಾಹನಗಳ ಮೌಲ್ಯಕ್ಕೆ ಅನುಗುಣವಾಗಿ ಸೆಸ್ ವಿಧಿಸಲು ಪ್ರಸ್ತಾಪಿಸಲಾಗಿದೆ. ಕನಿಷ್ಠ 1,000 ರೂ.ನಿಂದ ಆರಂಭವಾಗಿ ವಾಹನಗಳ ಮೌಲ್ಯಕ್ಕೆ ಅನುಗುಣವಾಗಿ ಸ್ಲ್ಯಾಬ್ವೈಸ್ ಸೆಸ್ ವಿಧಿಸುವ ಮಸೂದೆ ಇದಾಗಿದೆ.
ಗ್ರಾಮ ಪಂಚಾಯಿತಿ ವ್ಯಾಪ್ರಿಯಲ್ಲೂ ಒಸಿಗೆ ವಿನಾಯಿತಿ: ರಾಜ್ಯದಲ್ಲಿ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಕಟ್ಟಡಗಳ ನಿರ್ಮಾಣದ ಮೇಲೆ ಜಿಲ್ಲಾ ಪಂಚಾಯಿತಿಗಳ, ತಾಲೂಕು ಪಂಚಾಯಿತಿಗಳ ಮತ್ತು ಗ್ರಾಮ ಪಂಚಾಯಿತಿಗಳ ನಿಯಂತ್ರಣ (ಎರಡನೇ ತಿದ್ದುಪಡಿ) ಮಾದರಿ ಉಪ ವಿಧಿಗಳು, 2025ರ ಉಪ ವಿಧಿ 13ರ ಕೆಲವೊಂದು ಅವಕಾಶದಡಿ ವರ್ಗದ ನಿವೇಶನಗಳಲ್ಲಿ ನಿರ್ಮಿಸಲಾಗಿರುವ ವಸತಿ ಕಟ್ಟಡಗಳಿಗೆ ಸ್ವಾಧೀನಾನುಭವ ಪ್ರಮಾಣ ಪಡೆಯುವುದರಿಂದ ವಿನಾಯಿತಿ ನೀಡಲು ಸಂಪುಟ ಸಭೆ ಒಪ್ಪಿಗೆ ನೀಡಿದೆ.
ಈಗಾಗಲೇ ಬೆಂಗಳೂರು ವ್ಯಾಪ್ತಿಯಲ್ಲಿ ನಿಯಮ ಉಲ್ಲಂಘಿಸಿ ನಿರ್ಮಿಸಿದ ಮನೆಗಳಿಗೆ ವಿದ್ಯುತ್, ನೀರಿನ ಸಂಪರ್ಕಕ್ಕಾಗಿ ಒಸಿ ಪಡೆಯುವುದರಿಂದ ವಿನಾಯಿತಿ ನೀಡಲು ತೀರ್ಮಾನಿಸಲಾಗಿದೆ. ಅದೇ ರೀತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲೂ ಇದೇ ರೀತಿ ಒಸಿ ವಿನಾಯಿತಿಯನ್ನು ವಿಸ್ತರಿಸಲಾಗಿದೆ.
ಖಾಸಗಿ ಆಂಬ್ಯುಲೆನ್ಸ್ ನಿಯಂತ್ರಣದ ಬಿಲ್ಗೆ ಅಸ್ತು: ಖಾಸಗಿ ಆಂಬ್ಯುಲೆನ್ಸ್ಗಳನ್ನು ನಿಯಂತ್ರಿಸಲು ಹಾಗೂ ಸಂಚಾರಿ ವೈದ್ಯಕೀಯ ಘಟಕಗಳನ್ನು ಖಾಸಗಿ ವೈದ್ಯಕೀಯ ಸಂಸ್ಥೆ ಎಂದು ನೋಂದಾಯಿಸಲು ಕರ್ನಾಟಕ ರಾಜ್ಯ ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ) ವಿಧೇಯಕ, 2025ಕ್ಕೆ ಸಂಪುಟ ಒಪ್ಪಿಗೆ ನೀಡಿದೆ.
ಸ್ವಯಂ ಪ್ರೇರಿತವಾಗಿ ನೋಂದಾಯಿಸಿದ ಖಾಸಗಿ ಆಂಬ್ಯುಲೆನ್ಸ್ ಸೇವಾ ನಿರ್ವಾಹಕರನ್ನು ನಿಯಂತ್ರಿಸಲು ಮತ್ತು ಸಂಚಾರಿ ವೈದ್ಯಕೀಯ ಘಟಕಗಳನ್ನು ಖಾಸಗಿ ವೈದ್ಯಕೀಯ ಸಂಸ್ಥೆಯೆಂದು ನೋಂದಾಯಿಸಲು ಅವಶ್ಯಕವಾಗಿರುವುದರಿಂದ ತಿದ್ದುಪಡಿಯನ್ನು ತರಲಾಗುತ್ತಿದೆ. ಪ್ರಸ್ತುತ ಅಧಿನಿಯಮದಲ್ಲಿ ತಾತ್ಕಾಲಿಕ ನೋಂದಣಿಗೆ ಅವಕಾಶ ಇಲ್ಲದೆ ಇರುವುದರಿಂದ ಕೇಂದ್ರ ಅಧಿನಿಯಮದ ಮಾದರಿಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಸ್ವ ಮಾನ್ಯತೆ ಪತ್ರ ಒದಗಿಸಿದ ವೈದ್ಯಕೀಯ ಸಂಸ್ಥೆಗಳಿಗೆ ಮೂವತ್ತು ದಿನಗಳೊಳಗಾಗಿ ಖಾಯಂ ನೋಂದಣಿ ನೀಡಲು ತಿದ್ದುಪಡಿಯನ್ನು ಪ್ರಸ್ತಾಪಿಸಲಾಗಿದೆ.
ಖಾಸಗಿ ಆಂಬ್ಯುಲೆನ್ಸ್ಗಳ ಸೇವೆಯನ್ನು ಮೊಬೈಲ್ ಆ್ಯಪ್ ಮೂಲಕ ಪಡೆಯಲು ಮತ್ತು ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆ (ಕೆಪಿಎಂಇ) ಕಾಯ್ದೆಯಂತೆ ಅವುಗಳ ಸೇವೆಗೆ ನಿರ್ದಿಷ್ಟ ದರ ನಿಗದಿಪಡಿಸಲು ಈ ತಿದ್ದುಪಡಿ ಮಸೂದೆ ಅನುವು ಮಾಡಿಕೊಡಲಿದೆ. ಈ ಮಸೂದೆಯಲ್ಲಿ ಮೋಟಾರು ವಾಹನಗಳ ಅಧಿನಿಯಮ 1988 ಮತ್ತು ಅದರ ಅಡಿ ರಚಿಸಲಾದ ನಿಯಮಗಳ ಜೊತೆಗೆ ಐಚ್ಚಿಕವಾಗಿ ನೋಂದಾಯಿಸಿದ ಆಂಬ್ಯುಲೆನ್ಸ್ ಸೇವಾದಾರರನ್ನು ಅಗ್ರೆಗೇಟರ್ ನಂತೆ ನಿಯಂತ್ರಿಸಲು ನಿಯಮ ರೂಪಿಸಲಾಗಿದೆ.
ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ಸಂಪುಟ ಒಪ್ಪಿಗೆ: ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿಯ ಚುನಾವಣೆಯನ್ನು ಏಪ್ರಿಲ್ ಒಳಗಡೆ ನಡೆಸಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಚುನಾವಣೆ ನಡೆಸುವ ಕುರಿತು ಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಲು ನಡೆದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಗಿದೆ.
ಹೊರ ವರ್ತುಲ ರಸ್ತೆ ಜಾಗತಿಕ ವಿನ್ಯಾಸದಲ್ಲಿ ಅಭಿವೃದ್ಧಿ: ಸಿಲ್ಕ್ ಬೋರ್ಡ್ ಜಂಕ್ಷನ್‌ನಿಂದ ಕೆ.ಆರ್. ಪುರಂ ಮೆಟ್ರೋ ನಿಲ್ದಾಣದವರೆಗೂ ಹೊರವರ್ತುಲ ರಸ್ತೆಯನ್ನು ಜಾಗತಿಕ ರೂಪದಲ್ಲಿ ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಬೆಂಗಳೂರು ಸ್ಮಾರ್ಟ್ ಇನ್ಪ್ರಾಸ್ಟ್ರಕ್ಟರ್ ಲಿಮಿಟೆಡ್ ವತಿಯಿಂದ ಕೈಗೊಳ್ಳಲಾಗುವ 307 ಕೋಟಿಗಳ ಅಂದಾಜು ಮೊತ್ತದ ಈ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ಇತರ ಪ್ರಮುಖ ತೀರ್ಮಾನಗಳೇನು?:
- ಬೆಂಗಳೂರಿನ ಸಾಫ್ಟ್‌ವೇರ್ ಟೆಕ್ನಾಲಜಿ /ಪಾರ್ಕ್ಸ್ ಆಫ್ ಇಂಡಿಯಾ (STPI) ಸಂಸ್ಥೆಯಿಂದ 100 ರ್ಯಾಕ್‌ಗಳಿಗೆ ಸಹ ಸ್ಥಳಾವಕಾಶವನ್ನು (Co-Location Space) ಪಡೆದು 131.20 ಕೋಟಿಗಳ ಅಂದಾಜು ಮೊತ್ತದಲ್ಲಿ ಕರ್ನಾಟಕ ರಾಜ್ಯ ದತ್ತಾಂಶ ಕೇಂದ್ರದ ಕಾರ್ಯಾಚರಣೆಗಳನ್ನು ಸ್ಥಳಾಂತರಿಸಲು ಆಡಳಿತಾತ್ಮಕ ಅನುಮೋದನೆ
- 2021ನೇ ಸಾಲಿನ ಕಾಲೇಜು ಶಿಕ್ಷಣ ಇಲಾಖೆ ವ್ಯಾಪ್ತಿಗೊಳಪಡುವ ಸರ್ಕಾರಿ ಪ್ರಥಮ ದರ್ಜಿ ಕಾಲೇಜುಗಳಲ್ಲಿ ಖಾಲಿ ಇರುವ ಸಹಾಯಕ ಪ್ರಾಧ್ಯಾಪಕ ಹುದ್ದೆಯ ನೇರ ನೇಮಕಾತಿ ಪ್ರಕ್ರಿಯೆಯಲ್ಲಿ ಭರ್ತಿಯಾಗದೇ ಉಳಿದ ಎಸ್.ಸಿ/ಎಸ್.ಟಿ ಮತ್ತು ಹಿಂದುಳಿದ ವರ್ಗಗಳಿಗೆ ಮೀಸಲಿರಿಸಲಾಗಿದ್ದ ಉರ್ದು ವಿಷಯದ ಪ್ರಾಧ್ಯಾಪಕರ ಹುದ್ದೆಗಳನ್ನು ಆಯಾ ಪ್ರವರ್ಗದ ಇತರೇ ಅಭ್ಯರ್ಥಿಗಳಿಂದ ಅಥವಾ ಸಾಮಾನ್ಯ ಅಭ್ಯರ್ಥಿಗಳಿಂದ ಭರ್ತಿ ಮಾಡಲು ಅವಕಾಶ ಕಲ್ಪಿಸಲು ಒಪ್ಪಿಗೆ
- ಕೊಡಗು ಜಿಲ್ಲೆ, ಮಡಿಕೇರಿ ನಗರದಲ್ಲಿ ತೋಟಗಾರಿಕೆ ಇಲಾಖೆಯ ಅಧೀನದಲ್ಲಿರುವ "ರಾಜಾ ಸೀಟ್ ಉದ್ಯಾನವನ"ದಲ್ಲಿ Food Court ನ್ನು ಪಿಪಿಪಿ ಮಾದರಿಯಲ್ಲಿ ನಿರ್ಮಿಸಲು 4,300 ಚ.ಅಡಿ ಪ್ರದೇಶವನ್ನು 20 ವರ್ಷಗಳ ಅವಧಿಗೆ ಗುತ್ತಿಗೆ ನೀಡಲು ಅಸ್ತು
- ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ತರಗತಿ 1ರಿಂದ 10ರವರೆಗೆ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಶ್ರೀ ಸತ್ಯ ಸಾಯಿ ಅನ್ನಪೂರ್ಣ ಟ್ರಸ್ಟ್ ಮುದ್ದೇನಹಳ್ಳಿ ಚಿಕ್ಕಬಳ್ಳಾಪುರ ಜಿಲ್ಲೆ ಈ ಸಂಸ್ಥೆಯ ವತಿಯಿಂದ ಸಾಯಿ ಶೂರ್ ರಾಗಿ ಹೆಲ್ತ್ ಮಿಕ್ಸ್ ಪುಡಿಯನ್ನು ಬಿಸಿ ಹಾಲಿನೊಂದಿಗೆ ಮಿಶ್ರಣ ಮಾಡಿ ವಿತರಿಸಲಾಗುತ್ತಿರುವ ಯೋಜನೆಯ ಶೇಕಡಾ 25ರಷ್ಟು ವೆಚ್ಚವನ್ನು ಅಂದರೆ 27.02 ಕೋಟಿಗಳನ್ನು ರಾಜ್ಯ ಸರ್ಕಾರದಿಂದ ಭರಿಸಲು ಒಪ್ಪಿಗೆ
- ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ 268 ತರಗತಿ ಕೊಠಡಿಗಳು ಮತ್ತು 123 ಶೌಚಾಲಯ ಬ್ಲಾಕ್‌ಗಳ ನಿರ್ಮಾಣ ಹಾಗೂ 264 ತರಗತಿ ಕೊಠಡಿಗಳ ದುರಸ್ತಿ ಕಾಮಗಾರಿಯನ್ನು ಒಟ್ಟು ರೂ.94.38 ಕೋಟಿಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ
- ರಾಯಚೂರು ಜಿಲ್ಲೆ, ಸಿಂಧನೂರು ತಾಲ್ಲೂಕಿನಲ್ಲಿ ನೂತನವಾಗಿ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (GTTC)ಯನ್ನು KKRDB Macro ಅನುದಾನದಿಂದ 73.75 ಕೋಟಿಗಳ ವೆಚ್ಚದಲ್ಲಿ ಸ್ಥಾಪಿಸಲು ಆಡಳಿತಾತ್ಮಕ ಅನುಮೋದನೆ
- ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದಿಂದ ಗೋಕುಲ ರೋಡ್ ದೇವಾಂಗ ಸಮಾಜ(ರಿ) ಹುಬ್ಬಳ್ಳಿ ಇವರಿಗೆ 30 ವರ್ಷಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ಹಂಚಿಕೆಯಾಗಿರುವ ಉಣಕಲ್ ಗ್ರಾಮದ ರಿ.ಸ.ನಂ: 268.57 ಚ.ಮೀ. ನಾಗರಿಕ ಸೌಲಭ್ಯ ನಿವೇಶನದ ಮೊತ್ತದಲ್ಲಿ ರಿಯಾಯಿತಿ ನೀಡಲು ಒಪ್ಪಿಗೆ
- ಬೆಂಗಳೂರು ಮಹಾನಗರ ಭೂಸಾರಿಗೆ ಪ್ರಾಧಿಕಾರ (ತಿದ್ದುಪಡಿ) ವಿಧೇಯಕ, 2025"ಕ್ಕೆ ಅನುಮೋದನೆ
- ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲ್ಲೂಕಿನಲ್ಲಿರುವ ಮಲಪ್ರಭಾ ಎಡದಂಡೆ ಕಾಲುವೆ (ಕಿ.ಮೀ. 127 ರಿಂದ 150) ವಿತರಣಾ ಮತ್ತು ಉಪ ವಿತರಣಾ ಕಾಲುವೆಗಳ ಆಧುನೀಕರಣ ಕಾಮಗಾರಿಗಳನ್ನು ರೂ.421.25 ಕೋಟಿಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ
- ಬಾಂಬೆ ಸಾರ್ವಜನಿಕ ನ್ಯಾಸ | (ಕರ್ನಾಟಕ ತಿದ್ದುಪಡಿ) ವಿಧೇಯಕ, 2025"ಕ್ಕೆ ಅನುಮೋದನೆ
- ನಾಡಪ್ರಭು ಕೆಂಪೇಗೌಡ ಪಾರಂಪರಿಕ ತಾಣದ ಅಭಿವೃದ್ಧಿ ಪ್ರಾಧಿಕಾರ | (ತಿದ್ದುಪಡಿ) ವಿಧೇಯಕ, 2025ಕ್ಕೆ ಅನುಮೋದನೆ
- ಗದಗ ಜಿಲ್ಲೆ, ಗದಗ ತಾಲೂಕು ಲಕ್ಕುಂಡಿ ಗ್ರಾಮದ ರಿ.ಸ.ನಂ.2ರಲ್ಲಿ 3-01/2 ಎಕರೆ/ಗುಂಟೆ ಜಮೀನನ್ನು ಬಯಲು ವಸ್ತು ಸಂಗ್ರಹಾಲಯ ನಿರ್ಮಾಣಕ್ಕಾಗಿ ಹಾಗೂ ಲಕ್ಕುಂಡಿ ಗ್ರಾಮ ಠಾಣಾ ಆಸ್ತಿ ನಂ.905/ಬ ರಲ್ಲಿನ 5388 ಚದರ ಅಡಿ ಜಾಗವನ್ನು ಉತ್ಪನನದ ಸಲುವಾಗಿ ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರಕ್ಕಾಗಿ ಭೂ ಮಾಲೀಕರಿಂದ ನೇರವಾಗಿ ಖರೀದಿಸಲು ಅಸ್ತು
- ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ ಕರ್ನಾಟಕ ರಾಜ್ಯ ಆಯೋಗಕ್ಕೆ ಓರ್ವ ಮಹಿಳೆ ಹಾಗೂ ಒಬ್ಬ ಎಸ್ ಸಿ ವ್ಯಕ್ತಿಯನ್ನು ನೇಮಕ ಮಾಡಲು (ತಿದ್ದುಪಡಿ) ವಿಧೇಯಕ, 2025ಕ್ಕೆ ಅನುಮೋದನೆ
ಇದನ್ನೂ ಓದಿ: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯ ಆಯೋಜನೆಗೆ ಸಿಎಂ, ಡಿಸಿಎಂ ಜೊತೆ ಚರ್ಚೆ: ವೆಂಕಟೇಶ್ ಪ್ರಸಾದ್

