ಬೈಲಾ ನಿಯಮಗಳ ಉಲ್ಲಂಘನೆ ಆರೋಪ: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ವಿರುದ್ಧದ ತನಿಖೆಗೆ ತಡೆ
ಬೈಲಾ ನಿಯಮಗಳ ಉಲ್ಲಂಘನೆ ಆರೋಪದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ (ರಿ) ವಿರುದ್ಧದ ವಿಚಾರಣೆಗೆ ಹೈಕೋರ್ಟ್ ತಡೆ ನೀಡಿದೆ.

Published : February 26, 2026 at 9:48 AM IST
ಬೆಂಗಳೂರು: ಬೈಲಾ (ಉಪ ನಿಯಮ) ನಿಯಮಗಳನ್ನು ಉಲ್ಲಂಘಿಸಿರುವ ಆರೋಪಕ್ಕೆ ಸಂಬಂಧಿಸಿದಂತೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ (ರಿ) ವಿರುದ್ಧದ ವಿಚಾರಣೆಗೆ ಹೈಕೋರ್ಟ್ ತಡೆ ನೀಡಿದೆ.
ಮಹಾಸಭಾದ ಆಡಳಿತ ಮಂಡಳಿಯುವ ಬೈಲಾ ಉಲ್ಲಂಘಿಸಿದೆ ಎಂದು ಆರೋಪಿಸಿ ಮಹಾಸಭಾದ ಸದಸ್ಯ ಕೆ.ಮೋಹನ್ ಎಂಬುವರ ದೂರು ಆಧರಿಸಿ ವಿಚಾರಣೆಗೆ ಆದೇಶಿಸಿರುವ ಮತ್ತು ತನಿಖೆಯನ್ನು ಅಧಿಕಾರ ವ್ಯಾಪ್ತಿ ಮೀರಿ ಸಹಕಾರ ಸಂಘಗಳ ಉಪ ನಿಬಂಧಕರಿಂದ (ವಲಯ-3) ಸಹಕಾರ ಸಂಘಗಳ ಉಪ ನಿಬಂಧಕರಿಗೆ (ವಲಯ-4) ವರ್ಗಾಯಿಸಿರುವ ಬೆಂಗಳೂರು ಪ್ರಾಂತ ಸಹಕಾರ ಸಂಘಗಳ ಜಂಟಿ ನಿಬಂಧಕರ ಆದೇಶವನ್ನು ಪ್ರಶ್ನಿಸಿ ಅಖಿಲ ಕರ್ನಾಟಕ ಮಹಾಸಭಾ ಅರ್ಜಿ ಸಲ್ಲಿಸಿತ್ತು.
ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ಎಂ. ಶ್ಯಾಮ್ ಪ್ರಸಾದ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ನೀಡಿದೆ. ಅಲ್ಲದೆ, ಮಹಾಸಭಾ ವಿರುದ್ಧದ ವಿಚಾರಣೆಗೆ ಮಧ್ಯಂತರ ತಡೆ ನೀಡಿತು. ಅರ್ಜಿ ಸಂಬಂಧ ಸಹಕಾರ ಇಲಾಖೆ, ಸಹಕಾರ ಸಂಘಗಳ ಜಂಟಿ ನಿಬಂಧಕರು ಬೆಂಗಳೂರು ಪ್ರಾಂತ, ಉಪ ನಿಬಂಧಕರು-ವಲಯ 3 ಮತ್ತು ಉಪ ನಿಬಂಧಕರು ವಲಯ-4 ಇವರಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಏಪ್ರಿಲ್ 15ಕ್ಕೆ ಮುಂದೂಡಿತು.
ಮಹಾಸಭಾದ ಆಡಳಿತ ಮಂಡಳಿಗೆ ಬೈಲಾ ಪ್ರಕಾರ 2026ರ ಏಪ್ರಿಲ್ 13ಕ್ಕೆ ಚುನಾವಣೆ ನಡೆದಿದೆ. ಬೈಲಾ ಉಲ್ಲಂಘನೆ ಆಗಿದೆ ಎಂದು ಕೆ. ಮೋಹನ್ ತನಿಖೆಗೆ ಆಗ್ರಹಿಸಿ ಮನವಿ ಸಲ್ಲಿಸಿದ್ದರು. ಈ ಸಂಬಂಧ ಉಪನಿಬಂಧಕರು ವಲಯ-3 ಮಹಾಸಭಾಗೆ ನೋಟಿಸ್ ಕೊಟ್ಟಿದ್ದರು. ಅದಕ್ಕೆ ಮಹಾಸಭಾದಿಂದ 2025ರ ಡಿಸೆಂಬರ್ 17ರಂದು ವಿವರವಾದ ಉತ್ತರ ಕೊಡಲಾಗಿತ್ತು. ಈ ಮಧ್ಯೆ ಮೋಹನ್ ಅವರ ಮನವಿ ಆಧರಿಸಿ ಸಹಕಾರ ಸಂಘಗಳ ಕಾಯ್ದೆಯ ಸೆಕ್ಷನ್ 25ರಡಿ ಉಪ ನಿಬಂಧಕರು ವಲಯ -4 ಇವರನ್ನು ತನಿಖಾಧಿಕಾರಿಯನ್ನಾಗಿ ಜಂಟಿ ನಿಬಂಧಕರು ನೇಮಿಸಿದ್ದರು. ಅದರಂತೆ ಉಪ ನಿಬಂಧಕರು ವಲಯ-4 ಮಹಾಸಭಾಗೆ ನೋಟಿಸ್ ಜಾರಿಗೊಳಿಸಿ ಫೆ.25ರೊಳಗೆ ಉತ್ತರಿಸುವಂತೆ ಸೂಚಿಸಿದ್ದರು. ಇದನ್ನು ಪ್ರಶ್ನಿಸಿ ಮಹಾಸಭಾ ಹೈಕೋರ್ಟ್ ಮೆಟ್ಟಿಲೇರಿದೆ.
ಜಂಟಿ ನಿಬಂಧಕರು ಹಾಗೂ ಉಪ ನಿಬಂಧಕರ ಕ್ರಮ ಕಾನೂನುಬಾಹಿರ ಮತ್ತು ಏಕಪಕ್ಷೀಯವಾಗಿದೆ. ಅಧಿಕಾರ ವ್ಯಾಪ್ತಿ ಇಲ್ಲದೆ, ಸಹಜ ನ್ಯಾಯ ತತ್ವವನ್ನು ಉಲ್ಲಂಘಿಸಿ ಜಂಟಿ ನಿಬಂಧಕರು 2026ರ ಫೆ.9ರಂದು ಹೊರಡಿಸಿರುವ ಆದೇಶ ರದ್ದುಪಡಿಸಬೇಕು. ವಿಚಾರಣಾ ಪ್ರಕ್ರಿಯೆ ಕಾನೂನು ಬಾಹಿರವೆಂದು ಘೋಷಿಸಬೇಕು. ಅರ್ಜಿಯ ಅಂತಿಮ ಇತ್ಯರ್ಥದವರೆಗೆ ಮಹಾಸಭಾದ ವಿರುದ್ಧದ ವಿಚಾರಣೆಗೆ ತಡೆ ನೀಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.
ಇದನ್ನೂ ಓದಿ: ವಿಚ್ಛೇದನಕ್ಕಾಗಿ ಪತಿ ಅರ್ಜಿ: ಪತ್ನಿಗೆ 10 ಸಾವಿರ ದಂಡ ವಿಧಿಸಿದ ಹೈಕೋರ್ಟ್

