ETV Bharat / state

ದಾವಣಗೆರೆ ದಕ್ಷಿಣ ಮತಕ್ಷೇತ್ರಕ್ಕೆ ಉಪ ಚುನಾವಣೆ: ಟಿಕೆಟ್​​ಗಾಗಿ ಪಟ್ಟು ಹಿಡಿದ ಅಲ್ಪಸಂಖ್ಯಾತರು, ಯಾರಾಗಬಹುದು ಕೈ - ಕಮಲದ ಅಭ್ಯರ್ಥಿಗಳು

ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ತನ್ನ ಪಾರುಪತ್ಯ ಮೆರೆಯಲು ಕಾಂಗ್ರೆಸ್ ಹಾಗೂ ಬಿಜೆಪಿ ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿವೆ.

by-election-for-davangere-south-constituency
ದಾವಣಗೆರೆ (ETV Bharat)
author img

By ETV Bharat Karnataka Team

Published : January 5, 2026 at 5:46 PM IST

|

Updated : January 5, 2026 at 7:01 PM IST

5 Min Read
Choose ETV Bharat

ವರದಿ : ನೂರುಲ್ಲಾ ಡಿ

ದಾವಣಗೆರೆ : ಹಿರಿಯ ಶಾಸಕರಾಗಿದ್ದ ಶಾಮನೂರು ಶಿವಶಂಕರಪ್ಪ ಅವರು ಲಿಂಗೈಕ್ಯರಾದ ಬಳಿಕ ತೆರವಾಗಿರುವ ದಕ್ಷಿಣ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿದೆ. ಚುನಾವಣೆ ನಡೆಸಲು ಈಗಾಗಲೇ ಪಕ್ಷಗಳಿಂದ ತೆರೆಮರೆಯಲ್ಲಿ ಸಿದ್ಧತೆ ನಡೆಯುತ್ತಿದೆ. ಇತ್ತ ಈ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದಲ್ಲಿ ಉತ್ತರಾಧಿಕಾರಿ ಯಾರು? ಎನ್ನುವ ಪ್ರಶ್ನೆಗಳು ಉದ್ಭವಿಸಿದೆ. ಈ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರೇ ನಿರ್ಣಾಯಕರಾಗಿದ್ದರಿಂದ ಟಿಕೆಟ್ ನಮಗೆ ನೀಡಬೇಕು ಎಂದು ಮುಸ್ಲಿಂ‌ ಸಮುದಾಯದ ಮುಖಂಡರು ಪಟ್ಟು ಹಿಡಿದು ಸಭೆ ಮೇಲೆ ಸಭೆ ಮಾಡ್ತಿದ್ದಾರೆ. ಮುಸ್ಲಿಂ ಸಮಾಜವನ್ನು ಶಾಂತ ಮಾಡುವ ಉದ್ದೇಶದಿಂದ ತಂಜೀಮುಲ್ ಮುಸ್ಲಿಮೀನ್ ಪಂಢ್ ಅಸೋಸಿಯೇಷನ್​ನ ಜಿಲ್ಲಾಧ್ಯಕ್ಷ ದಾದಪೀರ್ (ದಾದು ಸೇಠ್)ಗೆ ಟಿಕೆಟ್​ ಕೊಡಿಸಲು ತೆರೆ - ಮರೆಯಲ್ಲಿ ಪ್ರಯತ್ನ ನಡೆಯುತ್ತಿವೆ ಎಂದು ಕಾಂಗ್ರೆಸ್ ಪಾಳೆಯದಲ್ಲಿ ಚರ್ಚೆ ನಡೆಯುತ್ತಿವೆ.

ಟಿಕೆಟ್​ಗಾಗಿ ಮುಸ್ಲಿಂ ಸಮುದಾಯ ಪಟ್ಟು : ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್​ನ ಭದ್ರಕೋಟೆ. ಸತತ ಆರು ಬಾರಿ ಶಾಮನೂರು ಶಿವಶಂಕರಪ್ಪ ಅವರನ್ನು ಗೆಲ್ಲಿಸಿ ವಿಧಾನಸೌಧಕ್ಕೆ ಕಳುಹಿಸಿದ ಕ್ಷೇತ್ರ. ಅದರಲ್ಲೂ ಅಲ್ಪಸಂಖ್ಯಾತರೇ ಹೆಚ್ಚಿರುವ ಕ್ಷೇತ್ರವೂ ಕೂಡ ಹೌದು. ಈ ಕ್ಷೇತ್ರದಿಂದಲೇ ಶಾಮನೂರು ಶಿವಶಂಕರಪ್ಪ ಗೆದ್ದು ಬೀಗಿ ಸಚಿವರಾಗಿದ್ದರು. ಈ ಕ್ಷೇತ್ರದಲ್ಲಿ ಸೋಲಿಲ್ಲದ ಸರದಾರ ಎಂಬ ಬಿರುದಾಂಕಿತದಿಂದ ಶಾಮನೂರು ಶಿವಶಂಕರಪ್ಪ ಅವರು ಆಡಳಿತ ನಡೆಸಿದ ಮುತ್ಸದಿ ರಾಜಕಾರಣಿ‌. ಆದರೆ, ವಯೋಸಹಜ ಕಾಯಿಲೆಯಿಂದ ಶಾಮನೂರು ಡಿ. 14 ರಂದು ನಿಧನರಾಗಿದ್ದಾರೆ. ಈಗ ಅವರ ಅಗಲಿಕೆಯಿಂದ ತೆರವಾದ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ತನ್ನ ಪಾರುಪತ್ಯ ಮೆರೆಯಲು ಕಾಂಗ್ರೆಸ್ ಹಾಗೂ ಬಿಜೆಪಿ ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿವೆ.

ದಾವಣಗೆರೆ ದಕ್ಷಿಣ ಮತಕ್ಷೇತ್ರಕ್ಕೆ ಉಪ ಚುನಾವಣೆ ಕುರಿತು ರಾಜಕೀಯ ಮುಖಂಡರು ಪ್ರತಿಕ್ರಿಯಿಸಿದ್ದಾರೆ (ETV Bharat)

ಅಲ್ಪಸಂಖ್ಯಾತರೇ ಹೆಚ್ಚಿರುವ ಈ ಕ್ಷೇತ್ರದಲ್ಲಿ ಕಾಂಗ್ರೆಸ್​​ನಿಂದ ಯಾರು ನಿಂತರೂ ಕೂಡ ಅಹಿಂದ ಮತಗಳನ್ನು ಕೃಢೀಕರಿಸಿಕೊಂಡು ಗೆಲುವು ಸಾಧಿಸಬಹುದು ಎನ್ನುವ ಲೆಕ್ಕಚಾರ ಕೂಡ ಇದೆ. ಇದೀಗ ಮತ್ತೆ ಈ ಕ್ಷೇತ್ರದಲ್ಲಿ ಅಧಿಕವಾಗಿ ಅಲ್ಪಸಂಖ್ಯಾತರೇ ಹೆಚ್ಚಿರುವ ಕಾರಣ ಉಪ ಚುನಾವಣೆಯಲ್ಲಿ ಮುಸ್ಲಿಂ ನಾಯಕರಿಗೆ ಟಿಕೆಟ್ ನೀಡುವಂತೆ ಇಡೀ ಸಮುದಾಯ ಪಟ್ಟು ಹಿಡಿದಿದೆ. ಅಲ್ಲದೇ, ಅಲ್ಪಸಂಖ್ಯಾತ ಮುಸ್ಲಿಂ ಮುಖಂಡರು ಸಭೆ ಮೇಲೆ ಸಭೆ ಮಾಡುವ ಮುಖೇನ ಕಾಂಗ್ರೆಸ್ ಹೈಕಮಾಂಡ್​​ಗೆ ಸಂದೇಶ ರವಾನೆ ಮಾಡಿದೆ.‌ ಪ್ರತಿ ಬಾರಿ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡುವಂತೆ ಒತ್ತಾಯಗಳು ಕೇಳಿ ಬರುತ್ತಿದ್ದವು. ಆದರೆ, ಶಾಮನೂರು ಶಿವಶಂಕರಪ್ಪ ಅವರಿಗೆ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡುತ್ತಾ ಬಂದಿತ್ತು. ಆದ್ದರಿಂದ, ಈ ಬಾರಿ ಅನುಕಂಪದ ಆಧಾರದ ಮೇಲೆ ಶಾಮನೂರು ಕುಟುಂಬದಲ್ಲೇ ಟಿಕೆಟ್ ನೀಡುವಂತೆ ಕಾಂಗ್ರೆಸ್ ಕಾರ್ಯಕರ್ತರು ಒತ್ತಾಯಿಸುತ್ತಿದ್ದಾರೆ.

ಶಾಮನೂರು ಕುಟುಂಬದಿಂದ ಕೇಳಿ ಬರುತ್ತಿವೆ ಮೂರು ಜನರ ಹೆಸರುಗಳು : ಶಾಮನೂರು ಶಿವಶಂಕರಪ್ಪನವರ ಹಿರಿಯ ಪುತ್ರ ಬಕ್ಕೆಶ್, ಎರಡನೇ ಪುತ್ರ ಎಸ್. ಎಸ್.​​ ಗಣೇಶ್ ಹಾಗೂ ಸಚಿವ ಎಸ್. ಎಸ್.​​ ಮಲ್ಲಿಕಾರ್ಜುನ್ ಪುತ್ರ ಸಮರ್ಥ್ ಶಾಮನೂರು ಅವರ ಹೆಸರು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ.

S. S. Mallikarjuna
ಎಸ್. ಎಸ್. ಮಲ್ಲಿಕಾರ್ಜುನ್ (ETV Bharat)

ಇದರ ಮಧ್ಯೆ ಅಲ್ಪಸಂಖ್ಯಾತ ಮುಖಂಡರು ಸಭೆ ಮಾಡುವ ಮೂಲಕ ಶತಾಯಗತಾಯ ಮುಸ್ಲಿಂ ಸಮುದಾಯಕ್ಕೆ ಟಿಕೆಟ್​ ನೀಡುವಂತೆ ಒತ್ತಾಯಿಸಿದ್ದಾರೆ. ಇದೆಲ್ಲ ಹೈಕಮಾಂಡ್ ನೋಡಿಕೊಳ್ಳುತ್ತದೆ ಎಂದು ಶಾಮನೂರು ಸೊಸೆ ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಹೈಕಮಾಂಡ್ ಕಡೆ ಬೊಟ್ಟು ಮಾಡಿ ತೋರಿಸಿದ್ದಾರೆ. ಸಚಿವರಾದ ಎಸ್. ಎಸ್.​ ಮಲ್ಲಿಕಾರ್ಜುನ್ ಅವರು ಇನ್ನೂ ಚುನಾವಣೆಗೆ ಸಮಯ ಬಹಳ ಇದೆ ನೋಡೋಣ ಎಂದಿದ್ದಾರೆ.

ಬಿಜೆಪಿಯಲ್ಲೂ ಟಿಕೆಟ್​ಗಾಗಿ ಫೈಟ್ : ಇತ್ತ ಬಿಜೆಪಿಯಲ್ಲಿ ಕೂಡ ಟಿಕೆಟ್ ಫೈಟ್ ಜೋರಾಗಿದೆ. ಯಾರಿಗೆ ಬಿಜೆಪಿ ಮಣೆಹಾಕುತ್ತದೆ ಎನ್ನುವ ಕುತೂಹಲ ಮೂಡಿಸಿದೆ. ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ ಗೆದ್ದ ಇತಿಹಾಸವೇ ಇಲ್ಲದ ಕಾರಣ ಬಿಜೆಪಿ ಯಾರಿಗೆ ಮಣೆ ಹಾಕಲಿದೆ ಎಂಬ ಕುತೂಹಲ ಮೂಡಿಸಿದೆ. ಇದರ ಮಧ್ಯೆ ಸದ್ಯ ದಾವಣಗೆರೆ ಬಿಜೆಪಿಯಲ್ಲಿ ಲೋಕಸಭಾ ಚುನಾವಣೆಯ ಬಳಿಕ ಮನೆಯೊಂದು ಮೂರು ಬಾಗಿಲು ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

MP Prabha Mallikarjun
ಸಂಸದೆ ಪ್ರಭಾ ಮಲ್ಲಿಕಾರ್ಜುನ್ (ETV Bharat)

ಮಾಜಿ ಸಂಸದ ಜಿ. ಎಂ. ಸಿದ್ದೇಶ್ವರ್ ಬಣದಿಂದ ಮಾಜಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾದವ್, ಶ್ರೀನಿವಾಸ್ ದಾಸಕರಿಯಪ್ಪ ಸೇರಿದಂತೆ ಹಲವರ‌ ಹೆಸರು ಟಿಕೆಟ್​​ಗಾಗಿ ಕೇಳಿ ಬರುತ್ತಿದ್ದು, ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ ಬಣದಿಂದ ಕಳೆದ ಬಾರಿ ಪರಾಜಿತಗೊಂಡಿದ್ದ ಅಜಯ್ ಕುಮಾರ್​​ಗೆ ಟಿಕೆಟ್ ನೀಡುವ ಕೂಗು ಕೇಳಿ ಬರುತ್ತಿವೆ. ಅಲ್ಲದೇ, ಬಿಜೆಪಿ ವರಿಷ್ಠರ ನಿರ್ಣಯಕ್ಕೆ ಬದ್ದ ಎನ್ನುವ ಮಾತುಗಳನ್ನು ಬಿಜೆಪಿ ನಾಯಕರು ಹೇಳುತ್ತಿದ್ದಾರೆ.

ದಾವಣಗೆರೆ ದಕ್ಷಿಣ ಮತ‌ಕ್ಷೇತ್ರದಲ್ಲಿರುವ ಮತದಾರರೆಷ್ಟು? : ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 1,13,538 ಪುರುಷ, 1,17,479 ಮಹಿಳಾ ಮತದಾರರು ಹಾಗೂ 47 ಇತರ ಮತದಾರರು ಸೇರಿದಂತೆ ಒಟ್ಟು 2,31,062 ಮತದಾರಿದ್ದಾರೆ. ಒಟ್ಟು 217 ಮತಗಟ್ಟೆಗಳನ್ನೊಳಗೊಂಡಿದೆ. ಅಲ್ಲದೇ, 4,857 ಯುವ ಮತದಾರರಿದ್ದಾರೆ. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 2,497 ಪುರುಷ ಮತ್ತು 2360 ಮಹಿಳಾ ಯುವ ಮತದಾರರಿದ್ದಾರೆ. ಹಾಗೆಯೇ 1395 ಪುರುಷ, 1146 ಮಹಿಳಾ ವಿಶೇಷಚೇತನ ಮತದಾರರು ಸೇರಿದಂತೆ ಒಟ್ಟು 2,541 ವಿಶೇಷಚೇತನ ಮತದಾರರಿದ್ದಾರೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.

Ayub Pailwan
ದಕ್ಷಿಣ ಮತಕ್ಷೇತ್ರದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಯುಬ್ ಪೈಲ್ವಾನ್ (ETV Bharat)

ಮುಸ್ಲಿಂ ಸಭೆಯಲ್ಲಿ ಪಾಲ್ಗೊಂಡ ಅಯುಬ್ ಪೈಲ್ವಾನ್ ಹೇಳಿದ್ದಿಷ್ಟು : ಮಾಜಿ ದೂಡ ಅಧ್ಯಕ್ಷ ಹಾಗೂ ದಾವಣಗೆರೆ ದಕ್ಷಿಣ ಮತಕ್ಷೇತ್ರದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಯುಬ್ ಪೈಲ್ವಾನ್ ಮಾತನಾಡಿ, 'ಸಮಾಜದವರು ದಕ್ಷಿಣ ಮತಕ್ಷೇತ್ರದಲ್ಲಿ ಈ ಬಾರಿ ನಮಗೆ ಟಿಕೆಟ್ ಕೊಟ್ಟು ಒಂದು ಅವಕಾಶ ಮಾಡಿಕೊಡಿ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ನನಗೂ ಕರೆದು ಹೇಳಿದ್ದಾರೆ. ಸಚಿವರಾದ ಎಸ್. ಎಸ್.​ ಮಲ್ಲಿಕಾರ್ಜುನ್ ಹಾಗೂ ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಅವರು ಚರ್ಚೆ ಮಾಡಿ ಕೈಗೊಳ್ಳುವ ನಿರ್ಧಾರಕ್ಕೆ ಬದ್ಧ ಎಂದು ಹೇಳಿದ್ದೇನೆ. ಆ ಸಭೆಯಲ್ಲಿ ಭಾಗಿಯಾಗಿದ್ದೇ, ಪಕ್ಷಾತೀತವಾಗಿ ಚರ್ಚೆ ನಡೆದಿದ್ದು, ಇದು ಒಳ್ಳೆ ಬೆಳವಣಿಗೆ. ಆದರೆ, ಇದನ್ನು ಪಕ್ಷದ ಹೈಕಮಾಂಡ್ ತೀರ್ಮಾನ ಮಾಡ್ಬೇಕು. ಶಾಮನೂರು ಶಿವಶಂಕರಪ್ಪ ಅವರ ಕುಟುಂಬದೊಂದಿಗೆ ಯಾರು ನಿಷ್ಠೆಯಿಂದ ‌ಇದ್ದಾರೆ. ಪಕ್ಷಕ್ಕೆ ಯಾರು ಶಿಸ್ತಿನ ಸಿಪಾಯಿ ರೀತಿ ಇದ್ದಾರೆ. ಸಚಿವರು, ಸಂಸದರು ಯಾರಿಗೆ ಹೇಳ್ತಾರೋ ಅವರ ಪರ ಕೆಲಸ ಮಾಡ್ತೇವೆ' ಎಂದರು.

ಜನಸೇವೆ ಮಾಡಲು ಯಾರು ತಯಾರಿದ್ದಾರೆ ಅವರನ್ನು ಗೆಲ್ಲಿಸುತ್ತೇವೆ: ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಅವರು ಮಾತನಾಡಿ, 'ಸಮರ್ಥ್ ಅವರ ಆಲೋಚನೆ ನಮಗಿಲ್ಲ. ಚುನಾವಣೆಯಲ್ಲಿ ಅವರು ಪ್ರಚಾರ ಮಾಡಿದ್ದರು ಅಷ್ಟೇ. ಅದನ್ನೇ ಪ್ರಜಾಪ್ರಭುತ್ವ ಅಂತ‌ ಹೇಳುವುದು. ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಹೈಕಮಾಂಡ್​​ಗೆ ಕಳುಹಿಸುತ್ತೇವೆ. ಜನಸೇವೆ ಮಾಡಲು ಯಾರು ತಯಾರಿದ್ದಾರೆ ಅವರನ್ನು ಗೆಲ್ಲಿಸುತ್ತೇವೆ. ಅವರಿಗೆ ಆಶೀರ್ವಾದ ಮಾಡಿ ಗೆಲ್ಲಿಸಿ ಎಂದು ಮತದಾರರಿಗೆ ಕೇಳುತ್ತೇವೆ' ಎಂದು ಹೇಳಿದ್ದಾರೆ.

ದುಗ್ಗಮ್ಮನ ಹಬ್ಬ ಆದ ಬಳಿಕ ಯೋಚನೆ ಮಾಡೋಣ: 'ನಾವು ಅದರ ಬಗ್ಗೆ ಏನೂ ನಿರ್ಧಾರ ಮಾಡಿಲ್ಲ. ಯೋಚನೆ ಮಾಡಿಲ್ಲ. ಏನೂ ಚರ್ಚೆ ಮಾಡಿಲ್ಲ. ನಾವು ನಮ್ಮ ಅಪ್ಪರ ಯೋಚನೆಯಲ್ಲೇ ಮುಳುಗಿದ್ದೇವೆ. ಮತದಾರರ ಪಟ್ಟಿ ಮಾಡಿದ್ದಾರೆ, ಮಾಡಲಿ. ದುಗ್ಗಮ್ಮನ ಹಬ್ಬ ಆದ ಬಳಿಕ ಯೋಚನೆ ಮಾಡೋಣ' ಎಂದು ಸಚಿವರಾದ ಎಸ್. ಎಸ್. ಮಲ್ಲಿಕಾರ್ಜುನ್ ಅವರು ತಿಳಿಸಿದ್ದಾರೆ.

Former Minister M. P. Renukacharya
ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ (ETV Bharat)

ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ ಅವರು ಮಾತನಾಡಿ, 'ಬಿಜೆಪಿ ಬಲಿಷ್ಠವಾಗಿದೆ. ಪಕ್ಷ ಸಂಘಟನೆ ಬಲಿಷ್ಠವಾಗಿದೆ. ದಕ್ಷಿಣದಿಂದ ಬಿ. ಜಿ. ಅಜಯ್ ಕುಮಾರ್ ನಿಂತು ಪರಾಭವಗೊಂಡಿದ್ದರು. ಟಿಕೆಟ್ ಬಗ್ಗೆ ನಮ್ಮ ರಾಷ್ಟ್ರೀಯ, ರಾಜ್ಯ ನಾಯಕರು ತೀರ್ಮಾನ ಮಾಡಲಿದ್ದಾರೆ. ಸಹಜವಾಗಿ ಪರಾಭವಗೊಂಡ‌ ಅಭ್ಯರ್ಥಿಗೆ ಟಿಕೆಟ್ ಕೊಡಲಾಗುತ್ತದೆ. ಅವರಿಗೆ ಕೊಡಬಹುದೆಂಬ ವಿಶ್ವಾಸ ನನಗೆ ಇದೆ. ಅದನ್ನು ವರಿಷ್ಠರು ನಿರ್ಧಾರ ಮಾಡಲಿದ್ದಾರೆ. ಅಜಯ್ ಕುಮಾರ್ ಅವರಿಗೆ ಅವಕಾಶ ಇದೆ. ಹಿರಿಯರಾಗಿದ್ದ ಶಾಮನೂರು ಶಿವಶಂಕರಪ್ಪ ಅವರನ್ನು ಇಷ್ಟು ದಿನಗಳ ಕಾಲ ಆಯ್ಕೆ ಮಾಡಿಕೊಂಡು ಬಂದಿದ್ದಾರೆ. ನಮ್ಮ ಅಭಿಪ್ರಾಯ ನಾವು ಮುಕ್ತವಾಗಿ ಹೇಳುವ ಅವಕಾಶ ಇದೆ ಎಂದಿದ್ದಾರೆ.

ಇದನ್ನೂ ಓದಿ : ಶಾಮನೂರು ಶಿವಶಂಕರಪ್ಪ ಅವರಿಗೆ ಮರಣೋತ್ತರ 'ಕರ್ನಾಟಕ ರತ್ನ ಪ್ರಶಸ್ತಿ' ನೀಡಬೇಕು: ರಂಭಾಪುರಿ ಶ್ರೀ

Last Updated : January 5, 2026 at 7:01 PM IST