ETV Bharat / state

ರಾಜ್ಯ ಮೀನುಗಾರಿಕೆಯ ಅಭಿವೃದ್ಧಿಗೂ ಬೇಕು ಬಜೆಟ್‌ನಲ್ಲಿ ಅನುದಾನ: ಮತ್ಸ್ಯ ಕ್ಷಾಮಕ್ಕೆ ಬಿತ್ತನೆ, ಡೀಸೆಲ್ ಸಬ್ಸಿಡಿ ಹೆಚ್ಚಿಸುವಂತೆ ಆಗ್ರಹ

ಕರಾವಳಿ ಭಾಗದ ಮೀನುಗಾರರು ಹಾಗೂ ಬೋಟ್ ಮಾಲೀಕರು ರಾಜ್ಯ ಬಜೆಟ್​ನಲ್ಲಿ ಸ್ಪಷ್ಟ ಮತ್ತು ಕಾರ್ಯರೂಪಕ್ಕೆ ಬರುವ ಘೋಷಣೆಗಳ ನಿರೀಕ್ಷೆಯಲ್ಲಿದ್ದಾರೆ.

BUDGETARY GRANTS TO FISHERIES
ಮೀನುಗಾರಿಕೆಯ ಅಭಿವೃದ್ಧಿಗೆ ಬೇಕಿದೆ ಬಜೆಟ್‌ನಲ್ಲಿ ಅನುದಾನ (ETV Bharat)
author img

By ETV Bharat Karnataka Team

Published : March 2, 2026 at 3:47 PM IST

2 Min Read
Choose ETV Bharat

ವಿಶೇಷ ವರದಿ: ವಿನೋದ್ ಪುದು

ಮಂಗಳೂರು(ದಕ್ಷಿಣ ಕನ್ನಡ): ರಾಜ್ಯ ಬಜೆಟ್ ಮಂಡನೆಯಾಗಲಿರುವ ಹಿನ್ನೆಲೆಯಲ್ಲಿ ಕರಾವಳಿ ಭಾಗದ ಮೀನುಗಾರರು ಹಾಗೂ ಬೋಟ್ ಮಾಲೀಕರು ಸರ್ಕಾರದಿಂದ ಸ್ಪಷ್ಟ ಮತ್ತು ಕಾರ್ಯರೂಪಕ್ಕೆ ಬರುವ ಘೋಷಣೆಗಳ ನಿರೀಕ್ಷೆಯಲ್ಲಿದ್ದಾರೆ.

ಕರಾವಳಿ ತೀರ ಪ್ರದೇಶಗಳಲ್ಲಿ ಮೀನುಗಾರಿಕೆ ಪ್ರಮುಖ ಉದ್ಯಮವಾಗಿದ್ದು, ಸಾವಿರಾರು ಮಂದಿಗೆ ನೇರ ಹಾಗೂ ಪರೋಕ್ಷ ಉದ್ಯೋಗ ಒದಗಿಸುತ್ತಿದೆ. ಮೀನುಗಾರಿಕೆ ಕ್ಷೇತ್ರವು ಪೌಷ್ಟಿಕಾಂಶಯುತ ಆಹಾರ ಪೂರೈಕೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದರೂ, ಮೂಲಸೌಕರ್ಯ ಕೊರತೆ, ದಕ್ಕೆಯ ಅಸ್ವಚ್ಛತೆ, ಸಮರ್ಪಕ ಡ್ರೇಜಿಂಗ್ ಇಲ್ಲದಿರುವುದು, ಹವಾಮಾನ ವೈಪರೀತ್ಯ ಹಾಗೂ ಡೀಸೆಲ್​​ ವೆಚ್ಚ ಏರಿಕೆಗಳಿಂದಾಗಿ ಕ್ಷೇತ್ರ ಸಂಕಷ್ಟ ಅನುಭವಿಸುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ರಾಜ್ಯ ಮೀನುಗಾರಿಕೆಯ ಅಭಿವೃದ್ಧಿಗೂ ಬೇಕು ಬಜೆಟ್‌ನಲ್ಲಿ ಅನುದಾನ (ETV Bharat)

ಮಂಗಳೂರು ದಕ್ಕೆಯಲ್ಲಿ ಸುಮಾರು ಎರಡು ಸಾವಿರ ಬೋಟ್‌ಗಳು ಕಾರ್ಯನಿರ್ವಹಿಸುತ್ತಿದ್ದು, ಪ್ರತಿ ಬೋಟ್‌ನಲ್ಲಿ 30ರಷ್ಟು ಕಾರ್ಮಿಕರು ಕೆಲಸ ಮಾಡುತ್ತಾರೆ. ಕೆಲವೊಮ್ಮೆ 10 ಮಂದಿ ಸಿಬ್ಬಂದಿಯೊಂದಿಗೆ ಮೀನುಗಾರಿಕೆಗೆ ತೆರಳಲಾಗುತ್ತದೆ. ಹೀಗಾಗಿ ಈ ಕ್ಷೇತ್ರದ ಮೇಲೆ ಅನೇಕ ಕುಟುಂಬಗಳ ಜೀವನೋಪಾಯ ಅವಲಂಬಿತವಾಗಿದೆ.

ಡೀಸೆಲ್ ಸಬ್ಸಿಡಿ ಪ್ರಮಾಣವನ್ನು ಹೆಚ್ಚಿಸುವುದು ಪ್ರಮುಖ ಬೇಡಿಕೆಯಾಗಿದೆ. ಪ್ರಸ್ತುತ ಒಂದು ಬೋಟ್‌ಗೆ ತಿಂಗಳಿಗೆ 9 ಸಾವಿರ ಲೀಟರ್‌ಗಳಿಗೆ ಮಾತ್ರ ಸಬ್ಸಿಡಿ ದೊರೆಯುತ್ತಿದ್ದು, ವಾಸ್ತವದಲ್ಲಿ ಒಂದು ಟ್ರಿಪ್‌ಗೆ ಸರಾಸರಿ 6 ಸಾವಿರ ಲೀಟರ್ ಅಗತ್ಯವಿದೆ. ತಿಂಗಳಿಗೆ 18 ರಿಂದ 20 ಸಾವಿರ ಲೀಟರ್ ಡೀಸೆಲ್ ಬೇಕಾಗುವ ಸಂದರ್ಭಗಳಿವೆ ಎನ್ನುತ್ತಾರೆ ಬೋಟ್ ಮಾಲೀಕರು. ಹೀಗಾಗಿ ಪೂರ್ಣ ಪ್ರಮಾಣದ ಡೀಸೆಲ್ ಸಬ್ಸಿಡಿ ನೀಡಬೇಕು ಎನ್ನುವ ಆಗ್ರಹ ವ್ಯಕ್ತವಾಗಿದೆ.

ಇದಲ್ಲದೆ, ಬಡ್ಡಿರಹಿತ ಸಾಲ ಸೌಲಭ್ಯ, ಬೋಟ್ ನಿರ್ವಹಣೆಗೆ ವಿಶೇಷ ಯೋಜನೆ, ಮೀನುಗಾರರ ಕೆಲಸವಿಲ್ಲದ ಮಳೆಗಾಲ ಹಾಗೂ ಹವಾಮಾನ ವೈಪರೀತ್ಯದ ಅವಧಿಯಲ್ಲಿ ಆರ್ಥಿಕ ನೆರವು ನೀಡುವ ವ್ಯವಸ್ಥೆ ಅಗತ್ಯವಿದೆ. ಮೀನುಗಾರಿಕೆ ಮೂರು ತಿಂಗಳು ಉತ್ತಮವಾಗಿದ್ದರೆ, ನಂತರ ನಾಲ್ಕು ತಿಂಗಳು ನಷ್ಟದಲ್ಲೇ ನಡೆಯುವ ಪರಿಸ್ಥಿತಿ ಉಂಟಾಗುತ್ತದೆ ಎನ್ನಲಾಗಿದೆ. ಈ ಅಸ್ಥಿರತೆ ಗಮನದಲ್ಲಿಟ್ಟುಕೊಂಡು ಮೀನುಗಾರಿಕೆ ಅರೆಕಾಲಿಕ ವೃತ್ತಿ ಎಂದು ಪರಿಗಣಿಸಿ ವಿಶೇಷ ಯೋಜನೆ ರೂಪಿಸಬೇಕೆಂಬ ಬೇಡಿಕೆಯೂ ಕೇಳಿಬಂದಿದೆ.

ಬಂದರು ಪ್ರದೇಶಗಳಲ್ಲಿ ಸಮರ್ಪಕ ಡ್ರೇಜಿಂಗ್, ಸ್ವಚ್ಛತೆ ಹಾಗೂ ನೀರು ಸರಾಗವಾಗಿ ಹರಿಯುವ ವ್ಯವಸ್ಥೆ ಮಾಡಬೇಕಾಗಿದೆ. ಡ್ರೇಜಿಂಗ್ ಸಮಯಕ್ಕೆ ಸರಿಯಾಗಿ ನಡೆದರೆ ಬೋಟ್ ಅವಘಡಗಳನ್ನು ತಪ್ಪಿಸಬಹುದು ಎನ್ನಲಾಗಿದೆ.

ಈ ಕುರಿತು ಈಟಿವಿ ಭಾರತದೊಂದಿಗೆ ಬೋಟ್ ಮಾಲೀಕರಾದ ರಾಜರತ್ನ ಸನಿಲ್ ಮಾತನಾಡಿ, “ಕರಾವಳಿ ಭಾಗದಲ್ಲಿ ಮೀನುಗಾರಿಕೆ ಅತಿ ಹೆಚ್ಚು ಉದ್ಯೋಗ ನೀಡುವ ಉದ್ಯಮ. ಆದರೆ ಮೂಲಸೌಕರ್ಯ ಕೊರತೆ, ದಕ್ಕೆಯ ಅಸ್ವಚ್ಛತೆ, ಡೀಸೆಲ್ ವೆಚ್ಚ ಇವೆಲ್ಲದರಿಂದ ನಾವು ಸಂಕಷ್ಟದಲ್ಲಿದ್ದೇವೆ. ಒಂದು ಬೋಟ್‌ಗೆ ತಿಂಗಳಿಗೆ 9 ಸಾವಿರ ಲೀಟರ್‌ಗೆ ಮಾತ್ರ ಸಬ್ಸಿಡಿ ಸಿಗುತ್ತಿದೆ, ಆದರೆ ನಮಗೆ 18 ರಿಂದ 20 ಸಾವಿರ ಲೀಟರ್ ಬೇಕಾಗುತ್ತದೆ. ಪೂರ್ಣ ಪ್ರಮಾಣದ ಡೀಸೆಲ್ ಸಬ್ಸಿಡಿ, ಬಡ್ಡಿರಹಿತ ಸಾಲ, ಬೋಟ್ ನಿರ್ವಹಣೆಗೆ ಸಹಾಯ ಹಾಗೂ ಕೆಲಸವಿಲ್ಲದ ಅವಧಿಯಲ್ಲಿ ಕಾರ್ಮಿಕರಿಗೆ ನೆರವು ನೀಡಬೇಕು. ಘೋಷಣೆಗಳು ಪುಸ್ತಕದಲ್ಲೇ ಉಳಿಯದೆ ಕಾರ್ಯರೂಪಕ್ಕೆ ಬರಬೇಕು. ಮೀನುಗಾರಿಕೆ ಇಲಾಖೆಯ ಒಳನಾಡು ಬಿತ್ತನೆ ಮಾದರಿಯನ್ನು ಸಮುದ್ರಕ್ಕೂ ವಿಸ್ತರಿಸಿ, ಮೀನು ಮರಿ ಸಮುದ್ರಕ್ಕೆ ಬಿಡುವ ಯೋಜನೆಗಳಿಗೆ ಹೆಚ್ಚಿನ ಅನುದಾನ ನೀಡಬೇಕು” ಎಂದು ಒತ್ತಾಯಿಸಿದರು.

ಮೀನು ಮರಿ ಬಿತ್ತನೆ ಯೋಜನೆಗಳನ್ನು ಸಮುದ್ರ ಮಟ್ಟದಲ್ಲಿ ವಿಸ್ತರಿಸುವ ಮೂಲಕ ಮೀನು ಸಂಪತ್ತಿನ ಹೆಚ್ಚಳ ಸಾಧ್ಯವೆಂಬ ಅಭಿಪ್ರಾಯವೂ ವ್ಯಕ್ತವಾಗಿದೆ. ಒಳನಾಡು ಜಲಾಶಯಗಳಲ್ಲಿ ಜಾರಿಯಲ್ಲಿರುವ ಕ್ರಮಗಳನ್ನು ಸಮುದ್ರಕ್ಕೂ ಅನ್ವಯಿಸಿದರೆ, ದೀರ್ಘಕಾಲಿಕವಾಗಿ ಕ್ಷೇತ್ರಕ್ಕೆ ಲಾಭವಾಗಲಿದೆ.

ಒಟ್ಟಿನಲ್ಲಿ, ಈ ಬಾರಿಯ ರಾಜ್ಯ ಬಜೆಟ್‌ನಲ್ಲಿ ಮೀನುಗಾರಿಕೆ ಕ್ಷೇತ್ರಕ್ಕೆ ನ್ಯಾಯಯುತ ಅನುದಾನ ಘೋಷಿಸಿ, ಸಬ್ಸಿಡಿ ಮತ್ತು ಪರಿಹಾರ ಕ್ರಮಗಳನ್ನು ಜಾರಿಗೆ ತಂದಲ್ಲಿ ಕರಾವಳಿ ಭಾಗದ ಸಾವಿರಾರು ಕುಟುಂಬಗಳಿಗೆ ಅನುಕೂಲವಾಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.

ಇವುಗಳನ್ನೂ ಓದಿ: