ಚಿಕ್ಕಮಗಳೂರು: ವಿಷಯ ಮುಚ್ಚಿಟ್ಟ ಆರೋಪ; ಮದುವೆ ನಿಲ್ಲಿಸಿ ಮಂಟಪದಿಂದ ಹೊರಬಂದ ವಧು
ಕಲ್ಯಾಣ ಮಂಟಪದಲ್ಲೇ ಮದುವೆ ನಿಂತು ಹೋದ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.

Published : February 27, 2026 at 9:15 PM IST
ಚಿಕ್ಕಮಗಳೂರು: ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು ಎಂಬ ಗಾದೆ ಮಾತಿದೆ. ಆದರೆ ವಧುವಿನ ಬಳಿ ವರ ವಿಷಯ ಮುಚ್ಚಿಟ್ಟ ಆರೋಪದ ಹಿನ್ನೆಲೆಯಲ್ಲಿ ಕಲ್ಯಾಣ ಮಂಟಪದಲ್ಲೇ ಮದುವೆ ನಿಂತು ಹೋದ ಘಟನೆ ಜಿಲ್ಲೆಯ ಶೃಂಗೇರಿ ನಗರದಲ್ಲಿ ಶುಕ್ರವಾರ ನಡೆಯಿತು.
ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ವಧು ಇಂದು ಹೊಸ ಜೀವನಕ್ಕೆ ಕಾಲಿಡಬೇಕಿತ್ತು. ಆದರೆ, ಹಸೆಮಣೆ ಏರುವ ಮುನ್ನ ಬಂದ ಒಂದು ಅನಾಮಧೇಯ ಪತ್ರ ಮದುವೆಯೇ ನಿಲ್ಲುವಂತೆ ಮಾಡಿದೆ. ಮದುವೆ ಶಾಸ್ತ್ರಗಳು ನಡೆಯುತ್ತಿದ್ದಾಗಲೇ ಸಿನಿಮಾ ಶೈಲಿಯಲ್ಲಿ ವಧು ಈ "ಮದುವೆ ನನಗೆ ಬೇಡ" ಎಂದು ಮಂಟಪದಿಂದ ಹೊರ ನಡೆದಿದ್ದಾರೆ.
ಶೃಂಗೇರಿ ನಗರದಲ್ಲಿ ಈ ವಿವಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ವರನಿಗೆ ಇದು ಮೊದಲ ಮದುವೆಯಾಗಿದ್ದರೆ, ವಧುವಿಗೆ ಎರಡನೇ ಮದುವೆಯಾಗಿತ್ತು. ಈಗಾಗಲೇ ವಧುವಿಗೆ 9 ವರ್ಷದ ಮಗನೂ ಇದ್ದಾನೆ. ತನ್ನ ಮಗನಿಗೆ ಅಪ್ಪನ ಸ್ಥಾನ ನೀಡುವ, ತನಗೆ ಆಸರೆಯಾಗುವ ವ್ಯಕ್ತಿ ಎಂದು ನಂಬಿ ಮಹಿಳೆ ಈ ಸಂಬಂಧಕ್ಕೆ ಒಪ್ಪಿದ್ದರಂತೆ.
ಮದುವೆ ಸಂಭ್ರಮದಲ್ಲಿದ್ದ ಮಹಿಳೆಗೆ ಅಪರಿಚಿತ ವ್ಯಕ್ತಿಗಳಿಂದ ಬಂದ 5 ಪುಟಗಳ ದೂರು ಪತ್ರವೊಂದು ಕೈ ಸೇರಿತ್ತು. ಇದನ್ನು ಓದಿದ ವಧು ವರನ ಕಡೆಯವರನ್ನು ಪ್ರಶ್ನಿಸಿದಾಗ, ಏನೇ ಕೇಳಿದರೂ ಆಮೇಲೆ ಹೇಳುತ್ತೇನೆ ಎಂದು ಹೇಳುತ್ತಾ ಮುಂದೂಡಿಕೆ ಮಾಡುತ್ತಾ ಬಂದಿದ್ದರಂತೆ. ವಿಷಯಗಳನ್ನು ಮುಚ್ಚಿಡಲಾಗಿದೆ ಎಂದು ಆರೋಪಿಸಿರುವ ವಧು, ಮದುವೆ ನಿಲ್ಲಿಸಲು ನಿರ್ಧರಿಸಿ, ಮಂಟಪದಿಂದಲೇ ಹೊರಬಂದಿದ್ದಾರೆ.
ವಧುವಿನ ಆರೋಪದ ಪ್ರಕಾರ, ಯುವಕ ಮೊದಲನೆಯದಾಗಿ ತನ್ನ ವಯಸ್ಸಿನ ಬಗ್ಗೆ ಸುಳ್ಳು ಹೇಳಿದ್ದ. ಎರಡನೇಯದಾಗಿ ಆತನ ಮೇಲೆ ಈಗಾಗಲೇ ಪೊಲೀಸ್ ಪ್ರಕರಣ ದಾಖಲಾಗಿದ್ದು, ಆ ವಿಷಯವನ್ನೂ ಮುಚ್ಚಿಡಲಾಗಿತ್ತು. ಜೊತೆಗೆ, ಮನೆಯಲ್ಲಿ ಯುವಕನ ತಾಯಿಯ ಆರೋಗ್ಯವೂ ಸರಿಯಿಲ್ಲ ಎಂಬ ಸತ್ಯವನ್ನು ಮದುವೆಗೂ ಮುನ್ನ ಹೇಳಿರಲಿಲ್ಲ. ಈ ಬಗ್ಗೆ ತಾನು ಆತನ ಬಳಿ ಈ ಹಿಂದೆ ಕೇಳಿದಾಗಲೆಲ್ಲಾ ಯುವಕ, ಮದುವೆ ಆಗಲಿ, ಆಮೇಲೆ ಎಲ್ಲವನ್ನೂ ಹೇಳುತ್ತೇನೆ ಎಂದು ಹಾರಿಕೆ ಉತ್ತರ ನೀಡುತ್ತಿದ್ದ ಎಂದು ಶೃಂಗೇರಿಯ ಪೊಲೀಸರ ಬಳಿ ಮಹಿಳೆ ಹೇಳಿದ್ದಾರೆ ಎಂದು ಈಟಿವಿ ಭಾರತಕ್ಕೆ ಶೃಂಗೇರಿ ಪೊಲೀಸ್ ಠಾಣಾಧಿಕಾರಿ ತಿಳಿಸಿದ್ದಾರೆ.
ಮದುವೆ ಮಂಟಪದಲ್ಲಿ ಹೈಡ್ರಾಮಾ ಶುರುವಾಗುತ್ತಿದ್ದಂತೆ ಸ್ಥಳಕ್ಕೆ ಸಿಡಿಪಿಒ ಅಧಿಕಾರಿಗಳು ಹಾಗೂ ಶೃಂಗೇರಿ ಪೊಲೀಸರು ಭೇಟಿ ನೀಡಿದರು. ಸಂಧಾನದ ಮೂಲಕ ಎಷ್ಟೇ ತಿಳಿಹೇಳಲು ಪ್ರಯತ್ನಿಸಿದರಾದರೂ ಮದುವೆ ಆಗಲು ಸಿದ್ದವಿಲ್ಲವೆಂದು ಮಹಿಳೆ ಖಡಕ್ಕಾಗಿ ಹೇಳಿ ಮಂಟಪದಿಂದ ಹೊರ ನಡೆದಿದ್ದಾರೆ.
ಇದನ್ನೂ ಓದಿ: ಮಗುವಿನ ಉಪನಾಮದಲ್ಲಿ ತಾಯಿ ಹೆಸರು ಸೇರಿಸಿದ್ದಲ್ಲಿ ತಂದೆಯ ಹಕ್ಕುಗಳನ್ನು ಕಸಿದುಕೊಳ್ಳುವುದಿಲ್ಲ: ಹೈಕೋರ್ಟ್ ಮಹತ್ವದ ತೀರ್ಪು

