ETV Bharat / state

ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಬರದ ಛಾಯೆ: ಜಲಾಶಯದಲ್ಲಿ ನೀರಿಲ್ಲ, ಬೆಳೆ ಉಳಿಯುವ ಗ್ಯಾರಂಟಿಯಿಲ್ಲ!

ಚಾಮರಾಜನಗರ‌ ಜಿಲ್ಲೆಯಲ್ಲಿ ಮುಂಗಾರು ಮಳೆ ಕೊರತೆ ಉಂಟಾಗಿದ್ದು, ರೈತರು ಕಂಗಾಲಾಗಿದ್ದಾರೆ. ವಿಶೇಷ ವರದಿ - ಸುರೇಂದ್ರ ಎಸ್​.

DROUGHT LIKE CONDITION
ಚಾಮರಾಜನಗರದಲ್ಲಿ ಬರದ ಛಾಯೆ (ETV Bharat)
author img

By ETV Bharat Karnataka Team

Published : July 4, 2026 at 3:52 PM IST

3 Min Read
Choose ETV Bharat

ಚಾಮರಾಜನಗರ: ಮಳೆಯೂ ಇಲ್ಲ, ಡ್ಯಾಂಗಳಲ್ಲಿ ನೀರು ಇಲ್ಲ. ಬೆಳೆಗಳು ಉಳಿಯುವ ಗ್ಯಾರಂಟಿಯೂ ಇಲ್ಲದಂತೆ‌ ಬರದ ಛಾಯೆ ಚಾಮರಾಜನಗರಕ್ಕೆ ಆವರಿಸಿದೆ. ಜಿಲ್ಲೆಯ ಅವಳಿ‌ ಜಲಾಶಯಗಳೆಂದು ಕರೆಯುವ ಸುವರ್ಣಾವತಿ ಜಲಾಶಯದಲ್ಲಿ 55 ಅಡಿಗೆ 32 ಅಡಿ ನೀರು, ಚಿಕ್ಕಹೊಳೆ ಡ್ಯಾಂನಲ್ಲಿ 75 ಅಡಿಗೆ 52 ಅಡಿ ನೀರು ಸಂಗ್ರಹವಾಗಿದೆ. ‌ನಾಲೆಗಳಿಗೆ ನೀರು ಹರಿಸಲಾಗದ ಡೆಡ್ ಸ್ಟೋರೇಜ್ ಹಂತದಲ್ಲಿ ನೀರಿದೆ.

ಜಿಲ್ಲೆಯಲ್ಲಿ ಮುಂಗಾರು ಮಳೆ ಕೊರತೆ ಉಂಟಾಗಿ ರೈತರಿಗೆ ಬಿತ್ತಿದ ಬೆಳೆಗಳನ್ನು ರಕ್ಷಣೆ ಮಾಡಿಕೊಳ್ಳಬೇಕಾದ ಸವಾಲು ರೈತರಿಗೆ ಎದುರಾಗಿದೆ. ಚಾಮರಾಜನಗರ, ಗುಂಡ್ಲುಪೇಟೆ, ಯಳಂದೂರು, ಹನೂರು, ಕೊಳ್ಳೇಗಾಲ ತಾಲೂಕುಗಳಲ್ಲಿ ಒಂದೊಂದು ತಿಂಗಳು ಮಳೆ ಕೊರತೆ, ಮತ್ತೊಂದು ತಿಂಗಳು ಮಳೆ ಹೆಚ್ಚಳವಾಗಿದೆ. ಈ ವ್ಯತ್ಯಾಸದಿಂದಾಗಿ ಬಿದ್ದ ಮಳೆ ಕೃಷಿಗೆ ಪೂರಕವಾಗಿಲ್ಲ. ಮಳೆಯನ್ನು ನಂಬಿಕೊಂಡು ಬಿತ್ತನೆ ಮಾಡಿದ ರೈತರು ತಲೆಮೇಲೆ ಕೈಹೊತ್ತು ಕೂರುವಂತಾಗಿದೆ.

ಚಾಮರಾಜನಗರದಲ್ಲಿ ಬರದ ಛಾಯೆ (ETV Bharat)

ಕೃಷಿ ಇಲಾಖೆ ನೀಡಿರುವ ಮಳೆ ಮಾಹಿತಿ ಪ್ರಕಾರ, ಚಾಮರಾಜನಗರ ತಾಲೂಕಿನಲ್ಲಿ ಎಪ್ರಿಲ್‌ನಲ್ಲಿ ಶೇ.86.7, ಕೊಳ್ಳೇಗಾಲದಲ್ಲಿ ಶೇ.82.8, ಹನೂರಿನಲ್ಲಿ ಶೇ.86.4, ಯಳಂದೂರಿನಲ್ಲಿ ಶೇ.92.9ರಷ್ಟು ಮಳೆ ಕೊರತೆಯಾಗಿದೆ. ಮೇನಲ್ಲಿ ಚಾಮರಾಜನಗರದಲ್ಲಿ ಶೇ.7.6, ಕೊಳ್ಳೇಗಾಲದಲ್ಲಿ ಶೇ.5.2, ಹನೂರಿನಲ್ಲಿ 31.3ರಷ್ಟು ಹೆಚ್ಚುವರಿ ಮಳೆ ಬಿದ್ದಿದೆ. ಆದರೆ ಗುಂಡ್ಲುಪೇಟೆಯಲ್ಲಿ ಶೇ.23.4, ಯಳಂದೂರಿನಲ್ಲಿ ಶೇ.1.6ರಷ್ಟು ಮಳೆ ಕೊರತೆಯಾಗಿದೆ.

drought like condition
ಒಣಗುತ್ತಿರುವ ಬೆಳೆ (ETV Bharat)

ಜೂನ್ ಮಳೆ ಪ್ರಮಾಣವನ್ನು ಗಮನಿಸುವುದಾದರೆ, ಹನೂರಿನಲ್ಲಿ ಉತ್ತಮ ಮಳೆಯಾದ ಪರಿಣಾಮ ಶೇ.9.3ರಷ್ಟು ಹೆಚ್ಚುವರಿಯಾಗಿದೆ. ಚಾಮರಾಜನಗರದಲ್ಲಿ ಶೇ. 37.4, ಗುಂಡ್ಲುಪೇಟೆಯಲ್ಲಿ ಶೇ.36.4, ಕೊಳ್ಳೇಗಾಲದಲ್ಲಿ ಶೇ.43.7, ಯಳಂದೂರಿನಲ್ಲಿ ಶೇ.64.7ರಷ್ಟು ಮಳೆ ಕೊರತೆಯಾಗಿದೆ. ಇಷ್ಟೂ ತಾಲೂಕುಗಳಲ್ಲಿ ಗುಂಡ್ಲುಪೇಟೆ ಅಧಿಕ ಪ್ರಮಾಣದಲ್ಲಿ ಮಳೆ ಕೊರತೆಯನ್ನು ಎದುರಿಸುತ್ತಿದೆ. ಕೇರಳದಿಂದ ಮುಂಗಾರು ಪ್ರವೇಶ ಪಡೆದುಕೊಳ್ಳುತ್ತದೆ. ಈ ರಾಜ್ಯದ ಪಕ್ಕದಲ್ಲೇ ಇರುವ ಗುಂಡ್ಲುಪೇಟೆ ಮಳೆಯ ಅಭಾವ ಎದುರಿಸುತ್ತಿದೆ.

drought like condition
ಬರಿದಾಗುತ್ತಿರುವ ಜಲಾಶಯ (ETV Bharat)

ಜಿಲ್ಲೆಯಲ್ಲಿ 2026-27ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಏಕದಳ, ದ್ವಿದಳ, ಆಹಾರ ಧಾನ್ಯ, ಎಣ್ಣೆಕಾಳು ಸೇರಿ ಒಟ್ಟು 95,779 ಹೆಕ್ಟೇರ್ ಬಿತ್ತನೆಯ ಗುರಿಯನ್ನು ಹೊಂದಲಾಗಿದ್ದು, 25,951 ಹೆಕ್ಟೇರ್ ಬಿತ್ತನೆಯಾಗಿದೆ. ಮಳೆಯ ಅಭಾವ ಉಂಟಾಗಿರುವ ಗುಂಡ್ಲುಪೇಟೆ ತಾಲೂಕಿನಲ್ಲೇ ಅಧಿಕ ಪ್ರಮಾಣದಲ್ಲಿ ಬಿತ್ತನೆಯಾಗಿದೆ. ಈ ತಾಲೂಕಿನಲ್ಲಿ ರಾಗಿ 6,800 ಹೆಕ್ಟೇರ್, ಮುಸುಕಿನ ಜೋಳ 730 ಹೆಕ್ಟೇರ್, ಅಲಸಂದೆ 1,195 ಹೆಕ್ಟೇರ್, ಸೂರ್ಯಕಾಂತಿ 9,950 ಹೆಕ್ಟೇರ್, ಹತ್ತಿ 535 ಹೆಕ್ಟೇರ್ ಸೇರಿ ಒಟ್ಟು 19,270 ಹೆಕ್ಟೇರ್ ಬೆಳೆ ಬೆಳೆಯಲಾಗಿದೆ. ಮುಂಗಾರು ಮಳೆಯ ಸರಿಯಾಗಿ ಬೀಳದ ಹಿನ್ನೆಲೆಯಲ್ಲಿ ಬಿತ್ತನೆಯಾಗಿರುವ ಬೆಳೆ ಚಿಗುರುವ ಲಕ್ಷಣ ಕಾಣುತ್ತಿಲ್ಲ. ರೈತರು ಮಳೆಯತ್ತ ಚಿತ್ತನ ನೆಟ್ಟಿದ್ದಾರೆ. ಮಳೆಯಾಗದೆ ಇದ್ದರೆ ನಷ್ಟಕ್ಕೆ ಸಿಲುಕುತ್ತಾರೆ. ಗುಂಡ್ಲುಪೇಟೆ ತಾಲೂಕು ಸೂರ್ಯಕಾಂತಿ ಕೃಷಿಗೆ ಪ್ರಸಿದ್ಧಿಯಾಗಿದೆ. ಮಳೆಯ ಅಭಾವ ಸೂರ್ಯಕಾಂತಿ ಕೃಷಿಗೆ ಹೊಡೆತ ಕೊಡಲಿದೆ.

10 ಸಾವಿರ ರೈತರಿಂದ ಬೆಳೆ ವಿಮೆಗೆ ನೋಂದಣಿ: 2026-27 ಸಾಲಿನ ಪೂರ್ವ ಮುಂಗಾರು ಹಂಗಾಮಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಅನುಷ್ಠಾನ ಮಾಡಲಾಗುತ್ತಿದ್ದು, ಈವರೆಗೆ 10,595 ಮಂದಿ ರೈತರು ನೋಂದಣಿ ಮಾಡಿಕೊಂಡಿದ್ದಾರೆಂದು ಚಾಮರಾಜನಗರ‌ ಜಿಲ್ಲೆ ಜಂಟಿ ಕೃಷಿ ನಿರ್ದೇಶಕ ಡಾ. ಭಾನುಪ್ರಕಾಶ್ ತಿಳಿಸಿದ್ದಾರೆ.

ಈಟಿವಿ ಭಾರತ ಜೊತೆ ಮಾತನಾಡಿದ ಅವರು, ಗುಂಡ್ಲುಪೇಟೆ ಭಾಗದಲ್ಲಿ ಸೂರ್ಯಕಾಂತಿ ಬೆಳೆಗಾರರು ಅತಿ ಹೆಚ್ಚು ನೋಂದಣಿ ಮಾಡಿಕೊಂಡಿದ್ದು ಜುಲೈ 15ರ ವರೆಗೆ ಹಲಸಂದೆ, ನೆಲಗಡಲೆ, ಆಲೂಗೆಡ್ಡೆ, ಮುಸುಕಿನ ಜೋಳ, ಟೊಮೆಟೊ ಬೆಳೆಗಳಿಗೆ ಬೆಳೆ ವಿಮೆ ಮಾಡಿಸಬಹುದಾಗಿದೆ‌.‌ ಜು. 30ರ ವರೆಗೆ ಹತ್ತಿ, ಭತ್ತ, ರಾಗಿ, ಅರಿಶಿಣ ಬೆಳಗೆ ನೋಂದಣಿ ಮಾಡಬಹುದಾಗಿದ್ದು, ರೈತರು ಇದರ ಉಪಯೋಗ ಪಡೆಯಬೇಕು ಎಂದು ಮನವಿ ಮಾಡಿದ್ದಾರೆ.

ಮಳೆ ಕೊರತೆಯಿಂದ ಬೆಳೆ ನಷ್ಟವಾದರೆ ರೈತರಿಗೆ ವಿಮಾ ಹಣ ಪಾವತಿಯಾಗುತ್ತದೆ. ಪ್ರಸ್ತುತ ಬೆಳೆ ವಿಮೆಗೆ ಪ್ರಕ್ರಿಯೆಯು ಮುಂದುವರೆದಿದೆ. ಜಿಲ್ಲೆಯಲ್ಲಿ ಗುಂಡ್ಲುಪೇಟೆ ತಾಲೂಕಿನಲ್ಲಿ ಅಧಿಕ ಪ್ರಮಾಣದಲ್ಲಿ ಮಳೆ ಕೊರತೆ ಉಂಟಾಗಿದೆ. ರೈತರು ಬೆಳೆ ವಿಮೆ ಮಾಡಿಸಿಕೊಳ್ಳಲು ಕೃಷಿ ಇಲಾಖೆಯಿಂದ ವ್ಯಾಪಕ ಪ್ರಚಾರ ಮಾಡಲಾಗುತ್ತಿದೆ. ಗುಂಡ್ಲುಪೇಟೆ ತಾಲೂಕಿನ 16 ಸಾವಿರ ರೈತರಿಗೆ ಗ್ರೂಪ್ ಕಾಲ್ ಮಾಡಿ ಖುದ್ದಾಗಿ ತಿಳಿಸಲಾಗಿದೆ. ಕರಪತ್ರಗಳನ್ನು ವಿತರಣೆ ಮಾಡಲಾಗುತ್ತಿದೆ. ಇನ್ಶೂರೆನ್ಸ್ ಕಂಪನಿಯವರು ಗ್ರಾಮಗಳಿಗೆ ಭೇಟಿ ನೀಡುತ್ತಿದ್ದಾರೆ. ಕೃಷಿ ಸಂಜೀವಿನ ವಾಹನಗಳ ಮೂಲಕವೂ ಪ್ರಚಾರ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ನೀರು‌ ಹರಿಸಲಾಗಲ್ಲ: ಚಿಕ್ಕಹೊಳೆ ಮತ್ತು ಸುವರ್ಣಾವತಿ‌ ಜಲಾಶಯಗಳ ಗೇಟ್ ಆಪರೇಟರ್ ಆಗಿರುವ ರೆಹಮಾನ್ ಈಟಿವಿ ಭಾರತ ಜೊತೆ ಮಾತನಾಡಿ, ಎರಡು ಜಲಾಶಯಗಳು ತುಂಬಿ ಮೂರು ವರ್ಷಗಳಾಗಿದೆ, ತದನಂತರ ತುಂಬಿಲ್ಲ. ಈಗ ಸಂಗ್ರಹವಾಗಿರುವ ನೀರು ಡೆಡ್ ಸ್ಟೋರೇಜ್ ಆಗಿದ್ದು ದೊಡ್ಡ ಪ್ರಮಾಣದಲ್ಲಿ ನೀರನ್ನು ಕಾಲುವೆಗೆ ಹರಿಸಲಾಗಲ್ಲ ಎಂದು ತಿಳಿಸಿದರು.

ಇವುಗಳನ್ನೂ ಓದಿ: