ETV Bharat / state

ಧಾರವಾಡ ಹೈಕೋರ್ಟ್​ಗೆ ಬಾಂಬ್ ಇಟ್ಟಿರುವುದಾಗಿ ಇಮೇಲ್ ಬೆದರಿಕೆ

ಧಾರವಾಡ ಹೈಕೋರ್ಟ್​ಗೆ ಬಾಂಬ್ ಇಟ್ಟಿರುವುದಾಗಿ ಇಮೇಲ್ ಬೆದರಿಕೆ ಸಂದೇಶವೊಂದು ಬಂದಿದೆ.

Dharwad high court
ಧಾರವಾಡ ಹೈಕೋರ್ಟ್​ (ETV Bharat)
author img

By ETV Bharat Karnataka Team

Published : January 6, 2026 at 3:44 PM IST

|

Updated : January 6, 2026 at 3:53 PM IST

2 Min Read
Choose ETV Bharat

ಧಾರವಾಡ: ಧಾರವಾಡ ಹೈಕೋರ್ಟ್​ಗೆ ಬಾಂಬ್ ಇಟ್ಟಿರುವುದಾಗಿ ಅಡಿಷನಲ್ ಜನರಲ್ ಅವರ ಇಮೇಲ್​​ಗೆ ಬೆದರಿಕೆ ಸಂದೇಶ ಬಂದಿದೆ. ಈ ಹಿನ್ನೆಲೆಯಲ್ಲಿ ಆತಂಕ ಸೃಷ್ಟಿಯಾಗಿದೆ.

ಈ ಹಿನ್ನೆಲೆ ಅಲರ್ಟ್ ಆಗಿರುವ ಪೊಲೀಸರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ನೇತೃತ್ವದಲ್ಲಿ ತೀವ್ರ ತಪಾಸಣೆ ನಡೆಸಿದ್ದಾರೆ‌. ಕೋರ್ಟ್ ಹಾಲ್​ನಿಂದ ನ್ಯಾಯಮೂರ್ತಿಗಳು, ವಕೀಲರು, ಸಿಬ್ಬಂದಿ ಹಾಗೂ ಕಕ್ಷಿದಾರರನ್ನು ಹೊರಹಾಕಿ ಬಾಂಬ್ ನಿಷ್ಕ್ರೀಯ ದಳದಿಂದ ತಪಾಸಣೆ ನಡೆಸಿದ್ದಾರೆ.

ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ಮಾತನಾಡಿದ್ದು, ಇ - ಮೇಲ್ ಮುಖಾಂತರ ಮಾಹಿತಿ ಬಂದಿದೆ. ಕೂಡಲೇ ನಾವು ಕಾರ್ಯ ಪ್ರವೃತ್ತರಾಗಿದ್ದೇವೆ. ಹೈಕೋರ್ಟ್ ಅಂದರೆ ಸಹಜವಾಗಿ ಬಿಗಿ ಭದ್ರತೆ ಇರುತ್ತದೆ. ಮುಂಚೆಯಿಂದಲೂ ಸಾಕಷ್ಟು ಭದ್ರತೆ ಇರುತ್ತದೆ. ಇದೀಗ ಎಲ್ಲ ತಂಡಗಳು ಬಂದಿವೆ. ಎಲ್ಲರನ್ನೂ ನಾವು ಹೊರಗೆ ಕಳಿಸಿದ್ದೇವೆ. ಬೇರೆ ಯಾವುದೋ ವಿಷಯ ಡೈವರ್ಟ್ ಮಾಡಲು ಇಂತಹ ಸಂದೇಶ ಬಂದಿರಬಹುದು. ಬೇರೆ ರಾಜ್ಯದಿಂದ ಬಂದಿರೋ ಸಾಧ್ಯತೆ ಇದೆ. ತನಿಖೆಯಿಂದಷ್ಟೇ ಎಲ್ಲವೂ ಹೊರ ಬರಲಿದೆ. ಈಗಾಗಲೇ ನಾವು ತೀವ್ರ ತಪಾಸಣೆ ಮಾಡಿದ್ದೇವೆ' ಎಂದಿದ್ದಾರೆ.

ಈ ಕುರಿತು ಹೈಕೋರ್ಟ್ ವಕೀಲರ ಸಂಘದ ಅಧ್ಯಕ್ಷ ಬಿ. ಡಿ. ಹಿರೇಮಠ ಅವರು ಮಾತನಾಡಿದ್ದು, 'ನಾವು, ರಿಜಿಸ್ಟ್ರಾರ್, ಪೊಲೀಸ್ ಅಧಿಕಾರಿಗಳು ಚರ್ಚೆ ಮಾಡಿದೆವು. ಹೈಕೋರ್ಟ್​ಗೆ ಬಾಂಬ್ ಇಟ್ಟಿರೋದಾಗಿ ಮೇಲ್ ಬಂದಿರುವುದಾಗಿ ಹೇಳಿದರು. ಕೂಡಲೇ ಎಚ್ಚೆತ್ತುಕೊಂಡು ಪೊಲೀಸರು ಎಲ್ಲರನ್ನೂ ಹೊರಗೆ ಕಳುಹಿಸಿದರು. ಕಕ್ಷಿದಾರರು ಕೂಡ ಹೊರಗೆ ಹೋದರು. ಪೊಲೀಸರು ಮುತವರ್ಜಿಯಿಂದ ಕೆಲಸ ಮಾಡಿದರು' ಎಂದು ತಿಳಿಸಿದ್ದಾರೆ.

ಜನರು ಸಾವು ಎಂದಾಗ ಹೆದರುತ್ತಾರೆ. ಇಲ್ಲಿ ಹೆಚ್ಚಿನ ಪೊಲೀಸ್ ಸಿಬ್ಬಂದಿ ಅವಶ್ಯಕತೆ ಇದೆ. ಆದರೆ, ಅಷ್ಟು ಸಿಬ್ಬಂದಿ ಇಲ್ಲಿ ಇಲ್ಲ. ಸರ್ಕಾರ ಎಚ್ಚೆತ್ತುಕೊಳ್ಳಬೇಕು. ನಾವು ಸಿಎಂ, ಗೃಹಮಂತ್ರಿಗೆ ವಿನಂತಿ ಮಾಡಿಕೊಳ್ಳುತ್ತೇವೆ. ಹೆಚ್ಚಿನ ಸಿಬ್ಬಂದಿಯನ್ನು ಕೆಲಸಕ್ಕೆ ನಿಯೋಜಿಸಬೇಕು ಎಂದು ಒತ್ತಾಯಿಸಿದ್ದಾರೆ.

ಪೊಲೀಸರು ತಪಾಸಣೆ ನಡೆಸಿದ ಬಳಿಕ ಕೋರ್ಟ್​ ಆವರಣದಲ್ಲಿ ಯಾವುದೇ ಬಾಂಬ್ ಪತ್ತೆಯಾಗಿಲ್ಲ. ಹೀಗಾಗಿ, ನ್ಯಾಯಮೂರ್ತಿಗಳು, ವಕೀಲರು, ಸಿಬ್ಬಂದಿ ಹಾಗೂ ಕಕ್ಷಿದಾರರನ್ನು ಪರೀಕ್ಷಿಸಿ ಕೋರ್ಟ್​ ಒಳಗೆ ಬಿಟ್ಟಿದ್ದಾರೆ. ಇದೀಗ ಎಂದಿನಂತೆ ಕೋರ್ಟ್​ ಕಲಾಪ ಮುಂದುವರೆದಿದೆ.

ಮೈಸೂರು ಕೋರ್ಟ್​ಗೆ ಬಾಂಬ್ ಬೆದರಿಕೆ ಸಂದೇಶ : ಇದೇ ರೀತಿ ಮೈಸೂರಿನ ಕೋರ್ಟ್​ಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶ ಬಂದಿದ್ದು, ಆತಂಕಗೊಂಡ ವಕೀಲರು ಹಾಗೂ ಕಕ್ಷಿದಾರರು ನ್ಯಾಯಾಲಯದಿಂದ ಹೊರಬಂದ ಘಟನೆ ಇಂದು ನಡೆದಿದೆ.

ಜಿಲ್ಲಾ ಪಂಚಾಯಿತಿ ಬಳಿ ಇರುವ ಕೋರ್ಟ್​ಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದ್ದು, ಪರಿಶೀಲನೆ ನಡೆಸಿದ ನ್ಯಾಯಾಧೀಶರು ಈ ವಿಚಾರವನ್ನು ನಗರ ಪೊಲೀಸ್ ಕಮಿಷನರ್​ಗೆ ತಿಳಿಸಿದ್ದಾರೆ. ತಕ್ಷಣ ವಕೀಲರು ಹಾಗೂ ಕಕ್ಷಿದಾರರು ಕೋರ್ಟ್​ನಿಂದ ಹೊರ ಬಂದಿದ್ದಾರೆ. ಪೊಲೀಸರು ಹಾಗೂ ಬಾಂಬ್ ತಪಾಸಣೆ ತಂಡ ಕೋರ್ಟ್​ಗೆ ಆಗಮಿಸಿ ಪರಿಶೀಲನೆ ನಡೆಸಿದರು. ಬಳಿಕ ಇದೊಂದು ಹುಸಿ ಬಾಂಬ್ ಬೆದರಿಕೆ ಎಂಬುದು ದೃಢಪಟ್ಟಿದೆ.

ಇದನ್ನೂ ಓದಿ : ಮೈಸೂರು ಕೋರ್ಟ್​ಗೆ ಬಾಂಬ್ ಬೆದರಿಕೆ ಸಂದೇಶ

Last Updated : January 6, 2026 at 3:53 PM IST