ETV Bharat / state

ರಾಯಚೂರು: ಬಿಜೆಪಿಯ 'ಬಳ್ಳಾರಿ ಚಲೋ' ಪಾದಯಾತ್ರೆಗೆ ಚಾಲನೆ

ಕಹಳೆ ಊದುವ ಮೂಲಕ ಲಿಂಗಸೂಗೂರಿನಲ್ಲಿ 'ಬಳ್ಳಾರಿ ಚಲೋ' ಪಾದಯಾತ್ರೆಗೆ ಬಿಜೆಪಿ ಚಾಲನೆ ನೀಡಿತು.

BJP'S BALLARI CHALO PADAYATRA STARTS FROM LINGSUGUR
ಬಿಜೆಪಿಯ 'ಬಳ್ಳಾರಿ ಚಲೋ' ಪಾದಯಾತ್ರೆಗೆ ಚಾಲನೆ (ETV Bharat)
author img

By ETV Bharat Karnataka Team

Published : September 1, 2026 at 2:02 PM IST

2 Min Read
Choose ETV Bharat

ರಾಯಚೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ, ಬರ, ಕೆಪಿಎಸ್​ಸಿ ಹಗರಣ ಸೇರಿದಂತೆ ರಾಜ್ಯ ಸರ್ಕಾರದ ವೈಫಲ್ಯ ಖಂಡಿಸಿ ರಾಜ್ಯ ಬಿಜೆಪಿ ಹಮ್ಮಿಕೊಂಡಿರುವ ಬಳ್ಳಾರಿ ಚಲೋ ಪಾದಯಾತ್ರೆಗೆ ಕಹಳೆ ಊದುವ ಮೂಲಕ ಇಂದು ಚಾಲನೆ ದೊರೆಯಿತು.

10 ದಿನಗಳ ಈ ಪಾದಯಾತ್ರೆಗೆ ಲಿಂಗಸೂಗೂರಿನಲ್ಲಿ ಇಂದು ಚಾಲನೆಗೆ ಸಿಕ್ಕಿದೆ. ಸುಮಾರು 190 ರಿಂದ 200 ಕಿಲೋಮೀಟರ್ ವ್ಯಾಪ್ತಿಯಲ್ಲಿ 9 ದಿನ ಪಾದಯಾತ್ರೆ ನಡೆಯಲಿದ್ದು, ಸೆ.10ಕ್ಕೆ ಬಳ್ಳಾರಿಯಲ್ಲಿ ಕೊನೆಗೊಳ್ಳಲಿದೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಪ್ರತಿಕ್ರಿಯೆ (ETV Bharat)

ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್​.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಜಗದೀಶ್ ಶೆಟ್ಟರ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್, ಬಸವರಾಜ ಮತ್ತಿಮಾಡು ಸೇರಿದಂತೆ ಹಲವು ಬಿಜೆಪಿ ಮುಖಂಡರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದಾರೆ.

ಪಾದಯಾತ್ರೆ ಆರಂಭಕ್ಕೂ ಮುನ್ನ ಬಿ.ವೈ.ವಿಜಯೇಂದ್ರ ಅವರು ಗುರುಗುಂಟಾ ಶ್ರೀ ಅಮರೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದರು. ಅವರಿಗೆ ಪಕ್ಷದ ಮುಖಂಡರು ಸಾಥ್ ನೀಡಿದರು.

ಈ ವೇಳೆ ಮಾತನಾಡಿದ ಬಿ.ವೈ.ವಿಜಯೇಂದ್ರ, ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಭ್ರಷ್ಟಾಚಾರ ಖಂಡಿಸಿ ಐತಿಹಾಸಿಕ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರವು ಜನವಿರೋಧಿ ಹಾಗೂ ದಲಿತ ವಿರೋಧಿ ಸರ್ಕಾರವಾಗಿದೆ. ಈ ಸರ್ಕಾರವನ್ನು ತೊಲಗಿಸಲು ರಾಜ್ಯದ ಜನರು ನಿರ್ಧರಿಸಿದ್ದಾರೆ ಎಂದು ಹೇಳಿದರು.

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ರಾಜ್ಯದ ಅಭಿವೃದ್ಧಿಗಿಂತ ರಿಯಲ್ ಎಸ್ಟೇಟ್ ಬಗ್ಗೆ ಹೆಚ್ಚಿನ ಆಸಕ್ತಿ ಇದೆ. ಕಲ್ಯಾಣ ಕರ್ನಾಟಕ ಹಾಗೂ ಕಿತ್ತೂರು ಕರ್ನಾಟಕ ಭಾಗಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಅಭಿವೃದ್ಧಿ ಆಗದಿರುವುದು ಇದಕ್ಕೆ ಸಾಕ್ಷಿ. ರಾಜ್ಯದಲ್ಲಿ ಬರ ಪರಿಸ್ಥಿತಿ ಎದುರಾಗಿದ್ದರೂ ಸರ್ಕಾರ ಬರ ನಿರ್ವಹಣೆಯಲ್ಲಿ ವಿಫಲವಾಗಿದೆ. ಸುಮಾರು 2.5 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇದ್ದರೂ ಭರ್ತಿ ಮಾಡುತ್ತಿಲ್ಲ ಎಂದು ಕಿಡಿಕಾರಿದರು.

ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿಯೂ ಭ್ರಷ್ಟಾಚಾರ ನಡೆಸಿ ಹಣ ಲೂಟಿ ಮಾಡಲಾಗಿದೆ ಎಂದು ಆರೋಪಿಸಿದ ವಿಜಯೇಂದ್ರ, ಕಾಂಗ್ರೆಸ್ ಸರ್ಕಾರದ ಹಲವು ವೈಫಲ್ಯಗಳನ್ನು ಜನರ ಮುಂದಿಡುವ ಉದ್ದೇಶದಿಂದ ಈ ಪಾದಯಾತ್ರೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಇದನ್ನೂ ಓದಿ: ಇಂದಿನಿಂದ ಬಿಜೆಪಿ ಬಳ್ಳಾರಿ ಚಲೋ ಪಾದಯಾತ್ರೆ

ಕಳೆದ ಎರಡು ದಿನಗಳ ಹಿಂದೆ ಬೆಂಗಳೂರಿನ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಪಾದಯಾತ್ರೆ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಪಾದಯಾತ್ರೆ ಸಂಬಂಧ ಸ್ವತಃ ನಾನೇ ಹೆಚ್.ಡಿ.ಕುಮಾರಸ್ವಾಮಿ ಅವರ ಜೊತೆ ಮಾತನಾಡಿದ್ದೇನೆ. ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರು ಇದ್ದಾಗ ಒಟ್ಟಾಗಿ ಮಾತನಾಡಿದ್ದೇವೆ. ಪಾದಯಾತ್ರೆ ವಿಷಯದಲ್ಲಿ ಗೊಂದಲ ಇಲ್ಲ. ನಾಗೇಂದ್ರರು ರಾಜೀನಾಮೆ ಕೊಟ್ಟಿದ್ದಾರೆ. ಮತ್ಯಾಕೆ ಪಾದಯಾತ್ರೆ ಅಂತ ನಮ್ಮ ಹಲವು ಮುಖಂಡರು ಸೇರಿ ಕೆಲವರಲ್ಲಿ ಗೊಂದಲ ಇತ್ತು. ನಾನು ನಮ್ಮ ರಾಷ್ಟ್ರೀಯ ನಾಯಕರ ಜೊತೆ ಚರ್ಚೆ ಮಾಡಿದ್ದೇನೆ. ಅವರ ಅನುಮತಿಯನ್ನೂ ಪಡೆದುಕೊಂಡಿದ್ದೇನೆ ಎಂದು ತಿಳಿಸಿದ್ದರು.