ETV Bharat / state

ಮಹಿಳೆ ವಿವಸ್ತ್ರ ಪ್ರಕರಣ: ಪ್ರತಿಭಟನಾಕಾರರು ವಶಕ್ಕೆ, ತಪ್ಪಿತಸ್ಥರ ಮೇಲೆ ಕ್ರಮ ಎಂದ ಕಮಿಷನರ್

ರಾತ್ರಿಯಾದರೂ ಪ್ರತಿಭಟನೆ ನಿಲ್ಲದ‌ ಕಾರಣ ಪ್ರತಿಭಟನಾನಿರತ ಹೋರಾಟಗಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Police take protesters into custody
ಪ್ರತಿಭಟನಾಕಾರರನ್ನು ವಶಕ್ಕೆ ಪಡೆದ ಪೊಲೀಸರು (ETV Bharat)
author img

By ETV Bharat Karnataka Team

Published : January 8, 2026 at 9:32 AM IST

2 Min Read
Choose ETV Bharat

ಹುಬ್ಬಳ್ಳಿ: ಬಿಜೆಪಿ ಕಾರ್ಯಕರ್ತೆ ವಿವಸ್ತ್ರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಅಮಾನತು ಮಾಡಬೇಕು ಎಂದು ಪ್ರತಿಭಟನೆ ನಡೆಸುತ್ತಿದ್ದ ಬಿಜೆಪಿ ಮಹಿಳಾ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕೇಶ್ವಾಪುರ ಪೊಲೀಸ್ ಠಾಣೆ ಎದುರು ಮಹಿಳಾ ಪೊಲೀಸರು ಹಾಗೂ ರಾಜ್ಯ ಸರ್ಕಾರದ ವಿರುದ್ದ ಬಿಜೆಪಿ ಮಹಿಳಾ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದರು. ರಾತ್ರಿಯಾದರೂ ಪ್ರತಿಭಟನೆ ನಿಲ್ಲದ‌ ಕಾರಣ ಪ್ರತಿಭಟನಾನಿರತ ಹೋರಾಟಗಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕಮಿಷನರ್​ ಶಶಿಕುಮಾರ್​ ಎನ್​ ಪ್ರತಿಕ್ರಿಯೆ (ETV Bharat)

ಇದಕ್ಕೂ‌ ಮುನ್ನ ಹು-ಧಾ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಮಾಧ್ಯಮಗಳಿಗೆ ಮಾಹಿತಿ ನೀಡಿ, ಪೊಲೀಸ್ ಸಿಬ್ಬಂದಿ ಲೋಪವಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ತನಿಖೆಯಾಗಬೇಕು. ತಪ್ಪಿತಸ್ಥ ‌ಅಧಿಕಾರಿಗಳ ಮೇಲೆ ಕ್ರಮವಾಗಬೇಕು ಎಂದು ಒತ್ತಾಯಿಸಿದ್ದಾರೆ. ಪ್ರತಿಭಟನಾಕಾರರು ದೂರು ಕೊಟ್ಟರೆ ಎಲ್ಲಾ ರೀತಿ ತನಿಖೆ ನಡೆಸಲಾಗುವುದು. ಅದಕ್ಕಾಗಿ ಕಾನೂನು ‌ಸುವ್ಯವಸ್ಥೆ ಡಿಸಿಪಿ ಮಹಾನಿಂಗ ನಂದಗಾವಿ ಅವರ ನೇತೃತ್ವದಲ್ಲಿ ತನಿಖೆಗೆ ಆದೇಶ ನೀಡಿದ್ದೇನೆ ಎಂದರು.

ಜ.1 ರಿಂದ 5ರವರೆಗೆ ನಡೆದ ಎಲ್ಲಾ ದಿನದ ಘಟನೆಗಳನ್ನು ಕೂಲಂಕುಷವಾಗಿ ಸಮಗ್ರ ವಿಚಾರಣೆ ಮಾಡಿ ವರದಿ ನೀಡಲು ಸೂಚನೆ ನೀಡಲಾಗಿದೆ. ಆ ವರದಿ ಆಧರಿಸಿ ಅಧಿಕಾರಿಗಳು ತಪ್ಪು ಮಾಡಿದ್ದು ಕಂಡು ಬಂದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.

Doddamani family members meet CM
ಸಿಎಂ ಭೇಟಿ ಮಾಡಿದ ದೊಡ್ಡಮನಿ ಕುಟುಂಬ ಸದಸ್ಯರು (ETV Bharat)

ಸಿಎಂ ಭೇಟಿ ಮಾಡಿದ ದೊಡ್ಡಮನಿ ಕುಟುಂಬ ಸದಸ್ಯರು: ಹಾವೇರಿ ಜಿಲ್ಲಾ ಪ್ರವಾಸ ನಿಮಿತ್ತ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​ ಅವರನ್ನು ದೌರ್ಜನ್ಯಕ್ಕೆ ಒಳಾಗಿರುವ ಇನಾಂವೀರಾಪುರ ಗ್ರಾಮದ ವಿವೇಕಾನಂದ ದೊಡ್ಡಮನಿ ಕುಟುಂಬ ಸದಸ್ಯರು ಭೇಟಿ ಮಾಡಿ, ಪ್ರಕರಣದಲ್ಲಿ ನ್ಯಾಯ ಕೊಡಿಸುವಂತೆ ಮತ್ತು ಪರಿಹಾರ, ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಸಲ್ಲಿಸಿದರು.

ಸರ್ಕಾರದ ವಿವಿಧ ಇಲಾಖೆಗಳು ಮತ್ತು ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಸಮಾಜ ಕಲ್ಯಾಣ ಇಲಾಖೆಯ ಸಕಾಲಿಕ ನೆರವು ಹಾಗೂ ರಕ್ಷಣೆ, ಪರಿಹಾರದ ಕುರಿತು ಮುಖ್ಯಮಂತ್ರಿಗಳಿಗೆ ವಿವರಿಸಿದರು.

ಈಗಾಗಲೇ ತಮ್ಮ ಬೇಡಿಕೆಗಳ ಕುರಿತು ಮತ್ತು ಪ್ರಕರಣದಲ್ಲಿ ನ್ಯಾಯ ಸಿಗುವಂತೆ ಕ್ರಮವಹಿಸಲು ಶಿಫಾರಸುಗಳೊಂದಿಗೆ ಜಿಲ್ಲಾಡಳಿತದಿಂದ ಜಿಲ್ಲಾಧಿಕಾರಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಅದರಂತೆ ತ್ವರಿತ ನ್ಯಾಯಾಲಯ, ವಿಶೇಷ ಅಭಿಯೋಜಕರ ನೇಮಕ ಸೇರಿದಂತೆ ಅಗತ್ಯ ಕ್ರಮಕೈಗೊಳ್ಳಲು ತಾವು ನಿರ್ದೇಶನ ನೀಡಿರುವುದಾಗಿ ಸಿಎಂ ತಿಳಿಸಿದರು.

ತಮ್ಮ ಕುಟುಂಬಕ್ಕೆ ಅಗತ್ಯ ರಕ್ಷಣೆ, ಗ್ರಾಮದಲ್ಲಿ ಶಾಂತಿ, ಸೌಹಾರ್ದತೆ ಕಾಪಾಡಲು ಜಿಲ್ಲಾಡಳಿತ, ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಗಿದೆ. ತಾವು ಭಯಮುಕ್ತರಾಗಿ ಇರಿ ಎಂದು ದೊಡ್ಡಮನಿ ಕುಟುಂಬ ಸದಸ್ಯರಿಗೆ ಧೈರ್ಯ ನೀಡಿದರು.

ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್​ ಎಸ್. ಲಾಡ್, ಜಿಲ್ಲಾಧಿಕಾರಿ ದಿವ್ಯ ಪ್ರಭು, ಜಿಲ್ಲಾ ಪಂಚಾಯತ್​ ಸಿಇಓ ಭುವನೇಶ್​ ಪಾಟೀಲ್​, ಎಸ್ಪಿ ಗುಂಜನ್ ಆರ್ಯ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಪ್ರಿಯದರ್ಶಿನಿ ಹಿರೇಮಠ, ವಿವೇಕಾನಂದ ದೊಡಮನಿ, ಸುಭಾಷ್​ ದೊಡ್ಡಮನಿ, ವಿವೇಕಾನಂದ ಅವರ ಸಹೋದರಿ ಹೂವಮ್ಮ ಹಾಗೂ ಇತರರು ಇದ್ದರು.

ಇದನ್ನೂ ಓದಿ: ಬಿಜೆಪಿ ಕಾರ್ಯಕರ್ತೆ ವಿವಸ್ತ್ರಗೊಂಡ ಪ್ರಕರಣ: 'ಅರೆಸ್ಟ್ ಮಾಡಿದಾಗ ಪೊಲೀಸರಿಗೆ ಕಚ್ಚಿ ತಾನೇ ಬಟ್ಟೆ ಬಿಚ್ಚಿಕೊಂಡರು'- ಪೊಲೀಸ್ ಕಮಿಷನರ್