ETV Bharat / state

ಹುಬ್ಬಳ್ಳಿ ಮಹಿಳೆ ವಿವಸ್ತ್ರ ಕೇಸ್: ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡ ಮಹಿಳಾ ಆಯೋಗ, ಕೈ ಪಾಲಿಕೆ ಸದಸ್ಯೆ ವಶಕ್ಕೆ

ಬಿಜೆಪಿ ಕಾರ್ಯಕರ್ತೆಯ ವಿವಸ್ತ್ರ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಮಹಿಳಾ ಆಯೋಗ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದೆ. ಇನ್ನೊಂದೆಡೆ, ಪೊಲೀಸರು ಕಾಂಗ್ರೆಸ್ ಪಾಲಿಕೆ ಸದಸ್ಯೆಯೊಬ್ಬರನ್ನು ವಶಕ್ಕೆ ಪಡೆದಿದ್ದಾರೆ.

WOMAN STRIPPED CASE
ಪ್ರತಿಭಟನಾನಿರತ ಬಿಜೆಪಿ ಮಹಿಳಾ ಕಾರ್ಯಕರ್ತರು (ETV Bharat)
author img

By ETV Bharat Karnataka Team

Published : January 8, 2026 at 6:02 PM IST

2 Min Read
Choose ETV Bharat

ಹುಬ್ಬಳ್ಳಿ: ಮಹಿಳೆ ವಿವಸ್ತ್ರ ಪ್ರಕರಣಕ್ಕೆ ಸಂಬಂಧಿಸಿ ರಾಷ್ಟ್ರೀಯ ಮಹಿಳಾ ಆಯೋಗವು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದೆ. ಈ ಕುರಿತು ಆಯೋಗ ಅಧಿಕೃತ ಪ್ರಕಟಣೆ ಹೊರಡಿಸಿದ್ದು, ಘಟನೆಯನ್ನು ತೀವ್ರವಾಗಿ ಖಂಡಿಸಿದೆ.

ಮಹಿಳಾ ಕಾರ್ಯಕರ್ತೆಯ ಮೇಲೆ ಹಲ್ಲೆ ನಡೆಸಿರುವುದು ಹಾಗೂ ಪೊಲೀಸ್ ಸಿಬ್ಬಂದಿ ಬಂಧಿಸುವ ವೇಳೆ ಆಕೆಯ ಬಟ್ಟೆ ಹರಿದಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿರುವ ಹಿನ್ನೆಲೆಯಲ್ಲಿ ಸ್ವಯಂಪ್ರೇರಿತವಾಗಿ ದೂರು ದಾಖಲಿಸಲಾಗಿದೆ. ಈ ಪ್ರಕರಣವು ಮಹಿಳೆಯ ಘನತೆ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಮೇಲೆ ಗಂಭೀರವಾದ ದಾಳಿ ಎಂದು ಆಯೋಗ ಅಭಿಪ್ರಾಯಪಟ್ಟಿದೆ.

ಆಯೋಗದ ಅಧ್ಯಕ್ಷೆ ವಿಜಯ ರಾಹತ್ಕರ್ ಅವರು ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು, ಇಂತಹ ಘಟನೆಗಳು ಮಹಿಳೆಯ ಘನತೆ, ವೈಯಕ್ತಿಕ ಸ್ವಾತಂತ್ರ್ಯ ಮತ್ತು ಲಿಂಗಾಧಾರಿತ ಹಿಂಸೆಯಿಂದ ರಕ್ಷಿಸುವ ಮೂಲಭೂತ ಹಕ್ಕುಗಳ ಉಲ್ಲಂಘನೆ ಎಂದು ತಿಳಿಸಿದ್ದಾರೆ.

ಡಿಜಿಪಿಗೆ ಪತ್ರ: ಪ್ರಕರಣಕ್ಕೆ ಸಂಬಂಧಿಸಿ ಆಯೋಗವು ಕರ್ನಾಟಕ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ (ಡಿಜಿಪಿ) ಪತ್ರ ಬರೆದಿದ್ದು, ಕೆಳಗಿನ ಕ್ರಮಗಳನ್ನು ತಕ್ಷಣ ಕೈಗೊಳ್ಳುವಂತೆ ಸೂಚಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಾಗಿರದಿದ್ದಲ್ಲಿ ಕೂಡಲೇ ದಾಖಲಿಸಬೇಕು. ಲಭ್ಯವಿರುವ ವಿಡಿಯೋ ಸಾಕ್ಷ್ಯಗಳ ಪರಿಶೀಲನೆ ಸೇರಿದಂತೆ ನ್ಯಾಯಯುತ, ನಿಷ್ಪಕ್ಷಪಾತ ಮತ್ತು ಕಾಲಮಿತಿಯ ತನಿಖೆ ನಡೆಸಬೇಕು. ದುಷ್ಕೃತ್ಯ ನಡೆದಿರುವುದು ಸಾಬೀತಾದಲ್ಲಿ, ಸಂಬಂಧಿಸಿದ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಇಲಾಖಾ ಮತ್ತು ಕ್ರಿಮಿನಲ್ ಕ್ರಮ ಕೈಗೊಳ್ಳಬೇಕು ಹಾಗೂ ಸಂತ್ರಸ್ತೆಗೆ ವೈದ್ಯಕೀಯ ನೆರವು, ಮಾನಸಿಕ ಬೆಂಬಲ, ಪುನರ್ವಸತಿ ಹಾಗೂ ಕಾನೂನಿನ ಪ್ರಕಾರ ಪರಿಹಾರ ದೊರಕುವಂತೆ ಖಚಿತಪಡಿಸಬೇಕು ಎಂದಿದೆ.

ಐದು ದಿನಗಳಲ್ಲಿ ವರದಿ ಸಲ್ಲಿಸಲು ಸೂಚನೆ: ಪ್ರಕರಣದ ಕುರಿತು ಕೈಗೊಳ್ಳಲಾದ ಕ್ರಮಗಳ ಬಗ್ಗೆ ಐದು ದಿನಗಳೊಳಗೆ ವಿವರವಾದ ವರದಿ ಸಲ್ಲಿಸುವಂತೆಯೂ ರಾಷ್ಟ್ರೀಯ ಮಹಿಳಾ ಆಯೋಗವು ಕರ್ನಾಟಕ ಸರ್ಕಾರ ಮತ್ತು ಪೊಲೀಸ್ ಇಲಾಖೆಗೆ ಸೂಚನೆ ನೀಡಿದೆ.

ಕಾಂಗ್ರೆಸ್ ಕಾರ್ಪೊರೇಟ‌ರ್ ವಶಕ್ಕೆ: ಮತ್ತೊಂದೆಡೆ, ಬಿಜೆಪಿ ಕಾರ್ಯಕರ್ತೆಯ ವಿವಸ್ತ್ರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯ ಕುಟುಂಬದವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾದ ಬೆನ್ನಲ್ಲೇ ಕಾರ್ಪೊರೇಟ‌ರ್ ಸುವರ್ಣ ಕಲಕುಂಟ ಅವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಮೂಲಕಗಳು ತಿಳಿಸಿವೆ. ಅನಾರೋಗ್ಯದ ಹಿನ್ನೆಲೆ ಕಾರ್ಪೊರೇಟ‌ರ್ ಸುವರ್ಣ ಕಲಕುಂಟ್ಲ ಅವರನ್ನು ಕಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿದ್ದು, ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ.

ಇದಕ್ಕೂ ಮುನ್ನ ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಸಿ.ಮಂಜುಳಾ ನೇತೃತ್ವದ ನಿಯೋಗವು ಮಹಿಳೆಯ ನಿವಾಸಕ್ಕೆ ತೆರಳಿ ಮಾಹಿತಿ ಪಡೆಯಿತು. ಕುಟುಂಬಸ್ಥರ ಜೊತೆ ಮಾತುಕತೆ ನಡೆಸಿದ ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷರು, ಧೈರ್ಯ ತುಂಬಿದೆ.

ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಮಹಿಳೆಯರಿಗೆ ರಕ್ಷಣೆ ಇಲ್ಲದಿರುವುದು ಮತ್ತೊಮ್ಮೆ ಸಾಬೀತಾಗಿದೆ. ಪೊಲೀಸ್ ಠಾಣೆಯಿಂದ ಮಹಿಳಾ ದೌರ್ಜನ್ಯಕ್ಕೆ ಇದು ಸಾಕ್ಷಿ. ಪಾಲಿಕೆ ಸದಸ್ಯೆ ಸುವರ್ಣ ಕಲಕುಂಟ್ಲ ಮತ್ತು ಅವರ ಹಿಂದಿನ ಗೂಂಡಾಪಡೆ ಈ ಮಹಿಳೆಯ ಮನೆ ಕಬಳಿಸಲು‌ ನಡೆಸಿದ ಹುನ್ನಾರ ಇದಾಗಿದೆ. ಸಿಎಂ ಸಿದ್ದರಾಮಯ್ಯ ಅತಿ ಹೆಚ್ಚು ಅವಧಿಯ ಸಿಎಂ ಆಗಿ ಸಂಭ್ರಮಾಚರಣೆ ಮಾಡಿಕೊಂಡಿದ್ದಾರೆ. ಅವರು ಕೂಡ ಈ ಪ್ರಕರಣ ಖಂಡಿಸುವ ಮನಸ್ಸು ಮಾಡದಿರುವುದು ದುರಾದುಷ್ಟಕರ. ಸಿಪಿಐ ಹಟ್ಟಿ ಅವರು ಮಹಿಳೆಯ ಮೇಲೆ ಕೈ ಇಟ್ಟಿದ್ದಾರೆಂದು ಮಹಿಳೆಯ ಕುಟುಂಬಸ್ಥರು ಆರೋಪಿಸಿದ್ದಾರೆ. ಸಿಪಿಐ ಮೇಲೆ ಕ್ರಮ ಆಗಬೇಕು.‌ ಸಾಮಾನ್ಯ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ. ಡಾ.ಅಂಬೇಡ್ಕರ್ ಉತ್ತರಾಧಿಕಾರಿ ಎಂದು ಬಡಾಯಿ ಕೊಚ್ಚಿಕೊಳ್ಳುವ ಸಿಎಂ ಮಹಿಳಾ ‌ದೌರ್ಜನ್ಯದ ಬಗ್ಗೆ ಏನೂ ಮಾತನಾಡುತ್ತಿಲ್ಲ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಹ ಈ ಬಗ್ಗೆ ಮಾತನಾಡುತ್ತಿಲ್ಲ. ಜನರು ಕಾನೂನು ಸುವ್ಯವಸ್ಥೆ ಕೈಗೆ ತೆಗೆದುಕೊಳ್ಳುವ ಮುಂಚೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು. ರಾಜ್ಯಾದ್ಯಂತ ಈ ಬಗ್ಗೆ ಹೋರಾಟ ‌ನಡೆಸಲಾಗುವುದು" ಎಂದು ಒತ್ತಾಯಿಸಿದರು.

ಇದನ್ನೂ ಓದಿ: ಮಹಿಳೆ ವಿವಸ್ತ್ರ ಪ್ರಕರಣ: ಪ್ರತಿಭಟನಾಕಾರರು ವಶಕ್ಕೆ, ತಪ್ಪಿತಸ್ಥರ ಮೇಲೆ ಕ್ರಮ ಎಂದ ಕಮಿಷನರ್