ETV Bharat / state

ಮಹಿಳೆ ವಿವಸ್ತ್ರ ಪ್ರಕರಣ: ರಾಜ್ಯ ಸರ್ಕಾರದ ವಿರುದ್ದ ಪ್ರತಿಭಟನೆ ನಡೆಸಿದ ಬಿಜೆಪಿ; ಸಿಎಂ ಪ್ರತಿಕೃತಿ ದಹಿಸಿ ಆಕ್ರೋಶ

ಮಹಿಳೆ ವಿವಸ್ತ್ರ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿಯವರು ಪ್ರತಿಭಟನೆ ನಡೆಸಿದ್ದಾರೆ.

bjp-protest-against-the-state-govt-regarding-the-woman-undressing-case
ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿಯವರು ಪ್ರತಿಭಟನೆ ನಡೆಸಿದರು (ETV Bharat)
author img

By ETV Bharat Karnataka Team

Published : January 9, 2026 at 8:16 PM IST

4 Min Read
Choose ETV Bharat

ಹುಬ್ಬಳ್ಳಿ: ಮಹಿಳೆ ವಿವಸ್ತ್ರ ಪ್ರಕರಣ ಖಂಡಿಸಿ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ನಗರದ ಅಂಬೇಡ್ಕರ್ ಸರ್ಕಲ್​​ನಿಂದ ತಹಶೀಲ್ದಾರ್​​ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ದ ಘೋಷಣೆ ಕೂಗಿ, ಸಿಎಂ ಸಿದ್ದರಾಮಯ್ಯ ಅವರ ಪ್ರತಿಕೃತಿಯನ್ನು ಸಂಗೊಳ್ಳಿ ರಾಯಣ್ಣ ಸರ್ಕಲ್​ನಲ್ಲಿ ದಹಿಸಿ ಆಕ್ರೋಶ ಹೊರಹಾಕಿದ್ದಾರೆ.

ಇದಕ್ಕೂ ಮುನ್ನ ಮಾತನಾಡಿದ ವಿರೋಧ ಪಕ್ಷದ ನಾಯಕ ಆರ್. ಅಶೋಕ್ , 'ಈ ಘಟನೆ ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡಿದೆ. ಪೊಲೀಸರಿಗಿಂತ ಸರ್ಕಾರ ಮುಂದೆ ಬಂದು ಏನೂ ಆಗಿಲ್ಲ ಎಂದು ಸ್ಪಷ್ಟಪಡಿಸಿದೆ. ಬೆಳಗಾವಿಯಲ್ಲಿ ದಲಿತ ಮಹಿಳೆಯನ್ನು ಬಟ್ಟೆ ಬಿಚ್ಚಿ ಕಂಬಕ್ಕೆ ಕಟ್ಟಿ ಹಾಕಿ ಹೊಡೆದಿದ್ದರು. ಹಾವೇರಿಯಲ್ಲಿ ಮುಸ್ಲಿಂ ಮಹಿಳೆಯನ್ನು 5 ಜನ ರೇಪ್ ಮಾಡಿದ್ದರು. ಇವೆಲ್ಲ ಸುಳ್ಳಾ..? ಕಾಂಗ್ರೆಸ್​ನವರೇ ಹೇಳಿ. ಮಾಧ್ಯಮದಲ್ಲಿ ಮಹಿಳೆ ಬಟ್ಟೆ ಬಿಚ್ಚಿಕೊಂಡಳು ಎಂದು ಸುದ್ದಿ ಬರುತ್ತಿದೆ. ಪೊಲೀಸರು ಸುಮ್ಮನೆ ಇದ್ದಾರೆ. ಆ ಯಮ್ಮ ಬಟ್ಟೆಬಿಚ್ಚಿಕೊಂಡಿದ್ದು ಅಂತ ಮುಖ್ಯಮಂತ್ರಿಗಳು ಅಲ್ಲೇ ಹೇಳಿದರು. ನೀವು ಯಾವ ಆಧಾರದ ಮೇಲೆ ಹೇಳಿದಿರಿ. ಮಹಿಳೆಯ ಬಗ್ಗೆ ಕಟ್ಟು ಕತೆಗಳು ಬರುತ್ತಿವೆ. ಹೋದ ಜನ್ಮದಲ್ಲಿ ಏನಾಗಿದ್ದೆ ಎಂದು ನಮಗೆ ಬೇಡ. ಹಿಂದೆ ಏನಾಗಿದೆ ಅದರ ಬಗ್ಗೆ ಕ್ರಮ ಕೈಗೊಳ್ಳಿ. ಒಬ್ಬ ಮಹಿಳೆ ಬಟ್ಟೆ ಬಿಚ್ಚಿಕೊಳ್ಳುತ್ತಿದ್ದಾಳೆ ಎಂದರೆ ನೀವು ಏನು ಮಾಡುತ್ತಿದ್ದೀರಿ' ಎಂದು ಪ್ರಶ್ನಿಸಿದ್ದಾರೆ.

ಮಹಿಳೆ ವಿವಸ್ತ್ರ ಪ್ರಕರಣದ ಕುರಿತು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಆಕ್ರೋಶ ವ್ಯಕ್ತಪಡಿಸಿದರು (ETV Bharat)

ಮಹಿಳೆ ಬಂಧನಕ್ಕೆ 40 ಜನ: 'ಟೆರರಿಸ್ಟ್ ಬಂಧನಕ್ಕೆ 40 ಜನ ಹೋಗೋದಿಲ್ಲ. ಆದ್ರೆ ಮಹಿಳೆ ಬಂಧನಕ್ಕೆ 40 ಜನ ಹೋಗಿದ್ದಾರೆ. ದೂರು ಕೊಟ್ಟ ಕೂಡಲೇ ಹೋಗಿ ಅರೆಸ್ಟ್ ಮಾಡಿದ್ರು. ಕಾರ್ಪೊರೇಟರ್ ಮೇಲೆ ದೂರು ಬಂದ ಕೂಡಲೇ ಪಾರ್ಚುನರ್ ಕಾರ್​ನಲ್ಲಿ ಕರೆದುಕೊಂಡು ಬಂದ್ರಿ. ಮಹಿಳೆಯನ್ನ ಹೊಡೆದು ಬಡಿದು ಆಸ್ಪತ್ರೆಗೆ ದಾಖಲು ಮಾಡಿಲ್ಲ. ಕಾರ್ಪೊರೇಟರ್​​ಗೆ ಆಸ್ಪತ್ರೆ ಭಾಗ್ಯ. ಹೊಡೆಸಿಕೊಂಡರವರಿಗೆ ಆಸ್ಪತ್ರೆ ಭಾಗ್ಯವಿಲ್ಲ. ಸಿದ್ದರಾಮಯ್ಯ ಹೋಗಿ ನಿದ್ದೆರಾಮಯ್ಯ ಆಗಿದ್ದಾರೆ. ರಾಜ್ಯದಲ್ಲಿ ಡ್ರಗ್ ಮಾಫಿಯಾ ಆಗಿದೆ. ಡ್ರಗ್ ಕೇಸ್​​ನಲ್ಲಿ ಪೊಲೀಸರು ಅರೆಸ್ಟ್ ಆಗಿದ್ದಾರೆ. ಮನೆ ಹೊತ್ತಿ ಉರಿಯೋ ಪರಿಸ್ಥಿತಿಯಾಗಿದೆ. ಮಾತು ಕೇಳಿಲ್ಲ ಅಂದರೆ ಟ್ರಾನ್ಸ್​ಫರ್ ಭಾಗ್ಯ ಮಾಡುತ್ತಾರೆ. ಮಹಿಳೆ ಮೇಲೆ ಹಲ್ಲೆ ಮಾಡಿದ ಪೊಲೀಸ್ ಸಿಬ್ಬಂದಿಯನ್ನು ಟ್ರಾನ್​ಫರ್ ಮಾಡಬೇಕು. ಇನ್ಸ್​ಪೆಕ್ಟರ್​ ಸಸ್ಪೆಂಡ್​ ಮಾಡಬೇಕು' ಎಂದು ಒತ್ತಾಯಿಸಿದ್ದಾರೆ.

ಪರಿಷತ್ ವಿರೋಧ ಪಕ್ಷದ ‌ನಾಯಕ ಛಲವಾದಿ ನಾರಾಯಣ ಸ್ವಾಮಿ ಮಾತನಾಡಿ, 'ಕಾಂಗ್ರೆಸ್​​ನಲ್ಲಿರುವ ಕಾರ್ಯಕರ್ತರು ನಾಟ್ ಸೇಫ್. ನಿಮ್ಮ ವಿಡಿಯೋಗಳನ್ನು ಮಾಡಿಕೊಂಡು ನೀವು ಪಕ್ಷ ಬದಲಿಸಿದಾಗ ಅವುಗಳನ್ನು ಹರಿ ಬಿಡುತ್ತಾರೆ. ಹುಬ್ಬಳ್ಳಿಯ ಮಹಿಳೆ ವಿಡಿಯೋ ಈಗ ವೈರಲ್ ಮಾಡುತ್ತಿದ್ದಾರೆ' ಎಂದು ಗುಡುಗಿದ್ದಾರೆ.

'ಮಹಿಳೆ ವಿವಸ್ತ್ರಗೊಳಿಸಿ ಬಂಧಿಸಿರುವ ವಿಡಿಯೋ ದೇಶದಲ್ಲೇ ಹರಿದಾಡುತ್ತಿದೆ. ಈ ಕ್ರಮಕ್ಕೆ ಸಾರ್ವಜನಿಕರು ಚೀ..ತೂ ಅಂತಿದ್ದಾರೆ. ಮಹಿಳೆ ಬಿಜೆಪಿ ಪಕ್ಷಕ್ಕೆ ಬಂದು 1 ರಿಂದ 2 ವರ್ಷವಾಗಿದೆ. ಈ ಹಿಂದೆ ಮಹಿಳೆ ಕಾಂಗ್ರೆಸ್ ಕಾರ್ಯಕರ್ತೆಯಾಗಿದ್ದರು. ಆ ಪಕ್ಷದಲ್ಲಿದಾಗ ಮಾಡಿಟ್ಟುಕೊಂಡ ವಿಡಿಯೋ ಈಗ ಬಿಡುತ್ತಿದ್ದಾರೆ. ಇಲ್ಲಿನ ಕಾಂಗ್ರೆಸ್ ಮುಖಂಡರು ಮಹಿಳೆಯನ್ನು ತಮಗೆ ಬೇಕಾದಂತೆ ನಡೆಸಿಕೊಂಡಿದ್ದಾರೆ. ಈಗ ಅವರು ಬಿಜೆಪಿಗೆ ಬಂದ ಮೇಲೆ ವಿವಸ್ತ್ರಗೊಳಿಸಿ ಬಂಧಿಸಿದ ನಂತರ ಹಳೇ ವಿಡಿಯೋವನ್ನು ಕಾಂಗ್ರೆಸ್​​ನವರು ಬಿಡುತ್ತಿದ್ದಾರೆ. ಅವರ ಈ ನಡೆಯೇ ಇಲ್ಲಿ ತೋರಿಸುತ್ತದೆ. ಕಾಂಗ್ರೆಸ್ ಕಾರ್ಯಕರ್ತರು ಕೈ ಪಕ್ಷದಲ್ಲಿ ಸೇಫ್ ಇಲ್ಲ. ಎಚ್ಚರವಾಗಿರಿ. ನಿಮ್ಮ ಕಡೆಯಿಂದ ಏನೇನೂ ಕೆಲಸ ಮಾಡಿಸಿಕೊಂಡು ವಿಡಿಯೋ ಇಟ್ಕೊಂಡಿದ್ದಾರೆ ನೋಡಿ' ಎಂದಿದ್ದಾರೆ.

ಆ ಪಕ್ಷದಲ್ಲಿ ಇದ್ದಾಗಲೇ ವಿಡಿಯೋ ಬಿಡಬೇಕಾಗಿತ್ತು: 'ಮಹಿಳೆ ಆ ಪಕ್ಷದಲ್ಲಿದ್ದಾಗಲೇ ಅವರ ವಿಡಿಯೋ ಬಿಡಬೇಕಾಗಿತ್ತು. ಈಗ ಅವರ ವಿರುದ್ಧ ಮಾತಾಡಿದ್ದಾರೆ ಅಂತಾ ಹಳೇ ವಿಡಿಯೋ ಇಟ್ಕೊಂಡು ಈಗ ವೈರಲ್ ಮಾಡುತ್ತಿದ್ದಾರೆ. ಇವರ ಈ ನಡೆಗಳೇ ಕಾಂಗ್ರೆಸ್ ಪಕ್ಷದ ಮುಖವಾಡ ಎತ್ತಿ ತೋರಿಸುತ್ತದೆ. ಮೂರು ನಾಲ್ಕು ದಿನದಲ್ಲಿ ಆ ಮಹಿಳೆ ಮೇಲೆ ನಾಲ್ಕೈದು ಎಫ್​​ಐಆರ್ ಆಗಿವೆ. ಕಾಂಗ್ರೆಸ್ ಮಹಿಳಾ ಕಾರ್ಯಕರ್ತರು ಎಚ್ಚರಿಕೆಯಿಂದ ಇರಿ. ನಿಮ್ಮ ಯಾವ ಸಮಯದಲ್ಲಿನ ವಿಡಿಯೋ ಇಟ್ಕೊಂಡಿದ್ದಾರೆಯೋ ಗೊತ್ತಿಲ್ಲ. ಅವರಿಗೆ ಬೇಕಾದಾಗ ಮಹಿಳೆಯ ವಿಡಿಯೋ ಹರಿಬಿಟ್ಟ ಹಾಗೆ ಬಿಡುತ್ತಾರೆ. ಕೇಶ್ವಾಪುರ ಠಾಣೆಯ ಇನ್ಸ್​ಪೆಕ್ಟರ್​ ಮಾಡಿರುವ ಅನಾಹುತ ಇವು. ಆ ಮಹಿಳೆ ಅವರ ಮೇಲೆ ಇರುವ ದೂರಿನ ಬಗ್ಗೆ ತನಿಖೆ ಮಾಡಿ. ಆದರೆ, ಕೇಶ್ವಾಪುರ ಠಾಣೆಯ ಇನ್ಸ್​ಪೆಕ್ಟರ್​ ಅವರನ್ನ ಸಸ್ಪೆಂಡ್ ಮಾಡಬೇಕು. ವರ್ಗಾವಣೆ ಮಾಡಿ ಕೈ ತೊಳೆದುಕೊಂಡರೆ ನಡೆಯುವುದಿಲ್ಲ' ಎಂದು ಹೇಳಿದ್ದಾರೆ.

ನಾವು ಇದನ್ನ ಟೂಲ್ ಕಿಟ್ ಆಗಿ ಬಳಸಿಕೊಳ್ಳುತ್ತಿಲ್ಲ; ಮಹೇಶ ಟೆಂಗಿನಕಾಯಿ: ಹುಬ್ಬಳ್ಳಿಯ ಮಹಿಳೆಯ ವಿಡಿಯೋವನ್ನು ಕಾಂಗ್ರೆಸ್‌ನವರು ಬಿಡುಗಡೆ ಮಾಡಿದ್ದು, ಈ ಮಹಿಳೆ ಕಾಂಗ್ರೆಸ್ ಪಕ್ಷದಲ್ಲಿದ್ದಾಗಿನ ಹಳೆಯ ವಿಡಿಯೋ ಆಗಿದೆ ಎಂದು ಶಾಸಕ ಮಹೇಶ್ ಟೆಂಗಿನಕಾಯಿ ಆರೋಪಿಸಿದ್ದಾರೆ.

ಮಹಿಳೆ ವಿವಸ್ತ್ರ ಪ್ರಕರಣದ ಕುರಿತು ಶಾಸಕ ಮಹೇಶ್ ಟೆಂಗಿನಕಾಯಿ ಅವರು ಪ್ರತಿಕ್ರಿಯಿಸಿದ್ದಾರೆ (ETV Bharat)

ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 'ನಮ್ಮ ಹೋರಾಟ ವಿವಸ್ತ್ರಗೊಳಿಸಿದ ವಿಚಾರ ಅಷ್ಟೇ. ಬಿಜೆಪಿ ಪಕ್ಷದವರು ಓರ್ವ ಮಹಿಳೆ ಮೇಲೆ ನಡೆದ ದೌರ್ಜನ್ಯ ‌ಖಂಡಿಸಿ ಪ್ರತಿಭಟನೆ ಮಾಡುತ್ತಿದ್ದೇವೆ. ಪೊಲೀಸ್ ಕಮಿಷನರ್ ಆ ಮಹಿಳೆ ಮೇಲೆ ಎಂಟು ಕೇಸ್ ಇವೆ ಎಂದು ಹೇಳಿದ್ದಾರೆ. ತನಿಖೆಯಾಗಿ ಶಿಕ್ಷೆಯಾಗಲಿ. ನಮ್ಮ ಹೋರಾಟ ಮೊನ್ನೆ ನಡೆದ ಘಟನೆಯ ವಿರುದ್ದ. ಪಾಲಿಕೆ ಸದಸ್ಯೆ ಈ ಪ್ರಕರಣದಲ್ಲಿ ದೋಷಿ ಆಗಿದ್ದಾರೆ. ಅವರ ಬಗ್ಗೆ ಏಕೆ ಮಾತನಾಡುತ್ತಿಲ್ಲ?' ಎಂದು ಪ್ರಶ್ನಿಸಿದ್ದಾರೆ.

'ಒಂದು ನಾಣ್ಯಕ್ಕೆ ಎರಡು ಮುಖ ಇರುತ್ತೆ. ನಾವು ಇದನ್ನ ಟೂಲ್ ಕಿಟ್ ಆಗಿ ಬಳಸಿಕೊಳ್ಳುತ್ತಿಲ್ಲ. ಮಹೇಶ್ ಟೆಂಗಿನಕಾಯಿ ಇಂತಹ ಘಟನೆಗಳಿಗೆ ಸಪೋರ್ಟ್​ ಮಾಡಲ್ಲ. ನಿಮ್ಮ ಸರ್ಕಾರ ಇದೆ ಎಂದು ಈ ರೀತಿ ಮಾಡುತ್ತಿದ್ದೀರಿ. ಬಿಎಲ್​​ಓಗಳಿಗೆ ಧಮ್ಕಿ ಕೊಡ್ತಾರೆ. ಕಾಂಗ್ರೆಸ್ ಪಕ್ಷದ ನಾಯಕರು ವಿಡಿಯೋ ರಿಲಿಸ್ ಮಾಡ್ತಾ ಇದಾರೆ. ನಮಗೆ ಮತದಾರರು ಇದ್ದಾರೆ.

ನಮ್ಮಲ್ಲಿ ಎಲ್ಲವೂ ಸರಿ ಇದೆ. ನಮ್ಮ ತಟ್ಟೆಯಲ್ಲಿ ಇರೋದು ನಾವು ನೋಡಿಕೊಳ್ಳುತ್ತೇವೆ‌. ನಿಮ್ಮ ತಟ್ಟೆಯಲ್ಲಿ ಏನು ಇದೆ ಅದನ್ನ ನೋಡಿಕೊಳ್ಳಿ. ಸದ್ಯ ಕೇಶ್ವಾಪೂರ ಪಿಐ ಅವರನ್ನ ವರ್ಗಾವಣೆ ಮಾಡಿದ್ದಾರೆ. ಒಂದು ವಾರದಲ್ಲಿ ಯಾರ ಕುಮ್ಮಕ್ಕಿನಿಂದ ನಾಲ್ಕು ಎಫ್​​ಐಆರ್ ದಾಖಲಾಗಿದೆ. ಬಿಜೆಪಿ ರಾಜ್ಯಾದ್ಯಂತ ಹೋರಾಟ ಮಾಡಿದ ಮೇಲೆ ಕ್ರಮ ಕೈಗೊಳ್ತಾರೆ ಎಂದು ಹರಿಹಾಯ್ದರು.

ಇದನ್ನೂ ಓದಿ : ಮಹಿಳೆ ವಿವಸ್ತ್ರ ‌ಪ್ರಕರಣ: ಇದು ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ ಟೂಲ್‌ಕಿಟ್ ಎಂದ ಕಾಂಗ್ರೆಸ್