ಗೃಹ ಸಚಿವರು ಹಿಂದೂ ಕಾರ್ಯಕರ್ತನ ಮನೆಗೆ ಕೆಲವರನ್ನು ಕಳಿಸಿ ಕೇಸ್ ವಾಪಸ್ ಪಡೆಯಲು ಬೆದರಿಕೆ ಹಾಕಿದ್ದಾರೆ: ಸಿ.ಟಿ. ರವಿ
ಕೇಸ್ ಹಾಕಿದ್ದ ಹಿಂದೂ ಕಾರ್ಯಕರ್ತನಿಗೆ ಗೃಹ ಸಚಿವರು ಕೆಲವರನ್ನು ಕಳುಹಿಸಿ ಬೆದರಿಕೆ ಹಾಕಿದ್ದಾರೆ ಎಂದು ಸಿ ಟಿ ರವಿ ಆರೋಪಿಸಿದ್ದಾರೆ.

Published : July 7, 2026 at 4:49 PM IST
ಬೆಂಗಳೂರು: ಹಿಂದೂ ಪರ ಕಾರ್ಯಕರ್ತ ತೇಜಸ್ ಗೌಡ ಗೃಹ ಸಚಿವರ ವಿರುದ್ಧ ಕೇಸ್ ಹಾಕಿದ್ದು, ಅಷ್ಟಕ್ಕೇ ಗೃಹ ಸಚಿವರು ಆತನ ಮನೆಗೆ ಕೆಲವರನ್ನು ಕಳಿಸಿ ಕೇಸ್ ವಾಪಸ್ ಪಡೆಯಲು ಬೆದರಿಕೆ ಹಾಕಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಆರೋಪಿಸಿದ್ದಾರೆ.
ವಿಧಾನಸೌಧದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಿಂದೂ ಪರ ಕಾರ್ಯಕರ್ತ ತೇಜಸ್ ಗೌಡ ಗೃಹ ಸಚಿವರ ಮೇಲೆ ಕೇಸ್ ಹಾಕಿದ್ದಾರೆ. ಅಷ್ಟಕ್ಕೇ ಗೃಹ ಸಚಿವರು ಮನೆಗೆ ಕೆಲವರನ್ನು ಕಳಿಸಿ ಕೇಸ್ ವಾಪಸ್ ಪಡೆಯಲು ಬೆದರಿಕೆ ಹಾಕಿದ್ದಾರೆ. ನಿಮಗ್ಯಾಕೆ ಭಯ?. ಪೊಲೀಸರನ್ನು ದುರ್ಬಳಕೆ ಮಾಡಿಕೊಂಡು ಬೆದರಿಕೆ ಯಾಕೆ ಹಾಕ್ತೀರಿ?. ಬೆದರಿಕೆಗೆಲ್ಲ ಹೆದರೋದಿಲ್ಲ, ಅದು ಶೋಭೆಯೂ ತರಲ್ಲ ಎಂದು ವಾಗ್ದಾಳಿ ನಡೆಸಿದರು.
ಸ್ಲಮ್ಗಳಿಗೆ ಬಿಎಲ್‌ಒಗಳು ಹೋಗದಿದ್ದಕ್ಕೆ ನಮ್ಮ ಬಿಎಲ್‌ಎಗಳು ಹೋಗಿದ್ದಾರೆ ಎಂಬ ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಬಿಎಲ್‌ಎಗಳ ಕೆಲಸ ಅವರೇ ಮಾಡಬೇಕು. ಬಿಎಲ್‌ಎಗಳಿಗೆ ಬಿಎಲ್‌ಒಗಳ ಕೆಲಸ ವಹಿಸಿಲ್ಲ. ನಿಮ್ಮ ಪಕ್ಷದ ಕಾರ್ಯಕರ್ತರ ಆಣತಿಯಂತೆ ಬಿಎಲ್‌ಒಗಳು ಕೇಳೋದೇ ಅಕ್ರಮ. ಬಿಎಲ್‌ಒಗಳು ಎಲ್ಲರ ಮನೆಗೂ ಹೋಗಬೇಕು, ಅದು ಅವರ ಕರ್ತವ್ಯ ಎಂದು ಹೇಳಿದರು.
ಎಸ್ಐಆರ್ ಕಾಲಕಾಲಕ್ಕೆ ನಡೆದಿದೆ. ರಾಜ್ಯದಲ್ಲಿ ಎಸ್ಐಆರ್ ದುರ್ಬಳಕೆ ಆಗ್ತಿದೆ. ಅಧಿಕಾರಿಗಳಿಗೆ ಮೌಖಿಕ ಸೂಚನೆ ಕೊಟ್ಟು ದುರ್ಬಳಕೆ ಮಾಡಲಾಗುತ್ತಿದೆ. ಬಿಜೆಪಿಗೆ ಬೆಂಬಲಿಸುವ ಮತದಾರರಿಗೆ ಅರ್ಜಿಯೇ ಕೊಡದಿರೋದು, ಕಾಂಗ್ರೆಸ್ ಬೆಂಬಲಿತ ಮತದಾರರನ್ನು ಉಳಿಸಿಕೊಳ್ಳೋದು ಆಗುತ್ತಿದೆ. ಮಸೀದಿಗಳಲ್ಲಿ ಸಾಮೂಹಿಕ ಎಸ್ಐಆರ್ ಆಗುತ್ತಿದೆ. ಯಾರು ಇಲ್ಲಿ ಹುಟ್ಟಿಲ್ಲವೋ ಅವರಿಗೂ ಬರ್ತ್ ಸರ್ಟಿಫಿಕೇಟ್ ಕೊಡಲಾಗುತ್ತಿದೆ. ಈಗಾಗಲೇ ರಾಜ್ಯದಲ್ಲೂ ದೂರು ಕೊಡಲಾಗಿದೆ, ಇಂದು ದೆಹಲಿಯಲ್ಲೂ ದೂರು ಕೊಡಲಾಗ್ತಿದೆ. ಯಾವ ರೀತಿ ರಾಜ್ಯದಲ್ಲಿ ಎಸ್ಐಆರ್ ಅಕ್ರಮ ನಡೀತಿದೆ ಅಂತ ಹೇಳ್ತೇವೆ ಎಂದರು.
ಅನುಮತಿ ಪಡೆದೇ ಆರ್ಎಸ್ಎಸ್ ಪಥ ಸಂಚಲನ ಮಾಡಬೇಕು ಎಂಬ ಗೃಹ ಸಚಿವರ ಹೇಳಿಕೆಗೆ ಪ್ರತಿಕ್ರಿಯಿಸಿ, ಜನ ಗೃಹ ಸಚಿವರನ್ನು ಮರೆಯಬಾರದು ಅಂತ ಆರ್ಎಸ್ಎಸ್ ವಿಚಾರ ಮಾತಾಡ್ತಿದ್ದಾರೆ ಪ್ರಿಯಾಂಕ್ ಖರ್ಗೆ. ತಮ್ಮ ಇರುವಿಕೆಯನ್ನು ಜನರಿಗೆ ನೆನಪಿಸಲು ಈಥರ ಪದೇ ಪದೆ ಮಾತಾಡ್ತಿದ್ದಾರೆ. ಆರ್ಎಸ್ಎಸ್ ಎಲ್ಲದಕ್ಕೂ ಅನುಮತಿ ಪಡೆದೇ ಪಥಸಂಚಲನ ಮಾಡೋದು. ಗೃಹ ಸಚಿವರಿಗೆ ಮಾಡಲು ಬೇಕಾದಷ್ಟು ಕೆಲಸ ಇದೆ. ಆ ಕಡೆ ಗಮನ ಹರಿಸಲಿ ಎಂದು ತಿರುಗೇಟು ನೀಡಿದರು.
ದೇವರಾಜು ಅರಸು ನಿಗಮದಲ್ಲಿ ಹೊಲಿಗೆ ಯಂತ್ರ ಖರೀದಿ ಅಕ್ರಮ ವಿಚಾರವಾಗಿ ಮಾತನಾಡಿ, ಸರ್ಕಾರದಲ್ಲಿ ಲೂಟಿ ನಡೀತಿದೆ. ಹೊಲಿಗೆ ಯಂತ್ರ ಮಾರ್ಕೆಟ್‌ನಲ್ಲಿ 10 ಸಾವಿರ ರೂ., ಅವರು ಕೋಟ್ ಮಾಡಿರೋದು 17 ಸಾವಿರ ರೂಪಾಯಿ. ಹೀಗೇ ಕಾರ್ಮಿಕ ಇಲಾಖೆ ಕಿಟ್‌ಗಳಲ್ಲೂ ಅಕ್ರಮ ನಡೆದಿದೆ. ಇದೇ ಹಗಲು ದರೋಡೆ. 10 ರೂ. ಲಂಚ ಸಹ ಪಡೀಬಾರದು ಅಂತ ಸಿಎಂ ಹೇಳಿದ್ದಾರೆ. ಆದ್ರೆ ನಡೀತಿರೋದು ಮಾತ್ರ ಹಗಲು ದರೋಡೆ ಎಂದು ಸಿ ಟಿ ರವಿ ಆರೋಪಿಸಿದರು.
ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ರಾಜ್ಯ ಬಿಜೆಪಿಗೆ ಡೆಪ್ಯುಟೇಷನ್ ಮೇಲೆ ಬಂದಿದ್ದಾರೆಂಬ ಲಕ್ಷ್ಮಣ್ ಸವದಿ ಹೇಳಿಕೆ ವಿಚಾರವಾಗಿ ಮಾತನಾಡಿ, ಸವದಿಯವರು ನಮ್ಮಲ್ಲಿದ್ದಾಗ ಹಲವು ಖಾತೆ ನಿರ್ವಹಿಸಿದರು, ಡಿಸಿಎಂ ಸಹ ಆಗಿದ್ರು. ಆದ್ರೆ ಈಗ ಕಾಂಗ್ರೆಸ್‌ಗೆ ಹೋಗಿ ಅಲ್ಲಿ ಸಚಿವ ಆಗಲು ಕ್ಯೂನಲ್ಲಿ ನಿಂತಿದ್ದಾರೆ. ಇದನ್ನು ನೋಡಿದ್ರೆ ನಮಗೆ ಬೇಸರ ಆಗುತ್ತೆ. ಇಲ್ಲಿ ರಾಜರ ತರಹ ಇದ್ರು, ಅಲ್ಲಿ ಬೇಡುವ ಸ್ಥಿತಿಗೆ ಬಂದಿದ್ದಾರೆ ಎಂದು ಗೇಲಿ ಮಾಡಿದರು.
ಸವದಿ ಬಿಜೆಪಿಗೆ ಬರ್ತಾರಾ ಎಂಬ ವಿಚಾರವಾಗಿ ಮಾತನಾಡಿ, ಅವರು ಬಿಜೆಪಿಗೆ ಬರೋ ವಿಚಾರ ಸೀಕ್ರೆಟ್. ಸೀಕ್ರೆಟ್ ಸೀಕ್ರೆಟ್ ಆಗಿಯೇ ಇರಬೇಕು ಅಂತ ಮಾರ್ಮಿಕವಾಗಿ ಹೇಳಿದರು.
ರಾಮಮಂದಿರ ಟ್ರಸ್ಟ್ ದೇಣಿಗೆ ಲೂಟಿ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಈಗಾಗಲೇ ಟ್ರಸ್ಟ್‌ನಲ್ಲಿ ಯಾರು ತಪ್ಪು ಮಾಡಿದ್ದಾರೆ ಅವರ ಮೇಲೆ ಕ್ರಮ ಆಗಿದೆ. SIT ತನಿಖೆ ಮಾಡುತ್ತಿದೆ. ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ, ಯಾರನ್ನೂ ಬಿಡುವ ಪ್ರಶ್ನೆ ಇಲ್ಲ ಅಂತ. ರಾಮನನ್ನು, ರಾಮನ ಭಕ್ತರನ್ನು ಪ್ರಶ್ನಿಸುವ ಪಾಖಂಡಿಗಳು ಇದ್ದಾರೆ. ಅಲ್ಲಿ ರಾವಣನ ಭಕ್ತರ ಸರ್ಕಾರ ಇಲ್ಲ. ಅಲ್ಲಿರೋದು ರಾಮನ ಭಕ್ತರ ಸರ್ಕಾರ. ಯಾರೇ ತಪ್ಪು ಮಾಡಿದ್ರೂ, ಬಿಡುವ ಪ್ರಶ್ನೆಯೇ ಇಲ್ಲ. ದೂರು ಕೊಟ್ಟಿರೋದು ಟ್ರಸ್ಟೇ, ತನಿಖೆ ಮಾಡ್ತಿರೋದು ಅಲ್ಲಿನ ಸರ್ಕಾರ. ಅಲ್ಲಿ ದೂರು ಬಂದ ತಕ್ಷಣ ಸ್ವತಃ ಟ್ರಸ್ಟ್ ದೂರು ಕೊಡ್ತು. ಸರ್ಕಾರ SIT ರಚನೆ ಮಾಡಿತು. ಇಲ್ಲಿ ವಕ್ಫ್ ವಿಚಾರವಾಗಿ ಅನ್ವರ್ ಮಾಣಿಪ್ಪಾಡಿ ವರದಿ ಇದೆ. ವರದಿ ಆಧಾರದ ಮೇಲೆ ಇಲ್ಲೂ ಸರ್ಕಾರ ಒಂದು SIT ಮಾಡಿ, ತನಿಖೆ ನಡೆಸಲಿ ಎಂದು ಸಿ ಟಿ ರವಿ ಆಗ್ರಹಿಸಿದರು.
ಇದನ್ನೂ ಓದಿ: ಆರ್ಎಸ್ಎಸ್ ಪಥಸಂಚಲನಕ್ಕೆ ಅನುಮತಿ ಕಡ್ಡಾಯ: ಗೃಹ ಸಚಿವ ಪ್ರಿಯಾಂಕ್ ಖರ್ಗೆ

