ಶೃಂಗೇರಿ ಶಾರದಾಂಬೆ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ಬಿಜೆಪಿ ಶಾಸಕ ಡಿ.ಎನ್. ಜೀವರಾಜ್
ನೂತನ ಶಾಸಕರಾಗಿ ಡಿ.ಎನ್. ಜೀವರಾಜ್ ಅವರು ಇಂದು ಪ್ರಮಾಣವಚನ ಸ್ವೀಕರಿಸಿದ್ಧಾರೆ.

Published : May 6, 2026 at 9:32 PM IST
ಬೆಂಗಳೂರು: ಶೃಂಗೇರಿ ವಿಧಾನಸಭಾಕ್ಷೇತ್ರದ ಅಂಚೆ ಮತಗಳ ಮರು ಎಣಿಕೆಯಲ್ಲಿ ಜಯ ಸಾಧಿಸಿದ್ದ ಶಾಸಕ ಡಿ.ಎನ್.ಜೀವರಾಜ್ ಅವರು ಪ್ರಮಾಣವಚನ ಸ್ವೀಕರಿಸಿದರು. ವಿಧಾನಸಭೆ ಸ್ವೀಕರ್ ಯು.ಟಿ.ಖಾದರ್ ಅವರ ಕಚೇರಿಯಲ್ಲಿ ಜೀವರಾಜ್ ಅವರು ಶೃಂಗೇರಿ ಶಾರದಾಂಬೆ ಹೆಸರಿನಲ್ಲಿ ಇಂದು ಪ್ರಮಾಣ ವಚನ ಸ್ವೀಕರಿಸಿದರು. ನ್ಯಾಯಾಲಯದಲ್ಲಿ ಹೋರಾಟ ನಡೆಸಿದ ಮೂರು ವರ್ಷಗಳ ಬಳಿಕ ಶಾಸಕರಾಗಿದ್ದಾರೆ.
ಈ ಬಗ್ಗೆ ಮಾತನಾಡಿದ ಬಿಜೆಪಿ ಶಾಸಕ ಜೀವರಾಜ್, ನಾನು 4ನೇ ಬಾರಿ ಶಾಸಕನಾಗಿ ಪ್ರಮಾಣ ವಚನ ಸ್ವೀಕರಿಸಿದ್ದೇನೆ. 3 ವರ್ಷಗಳ ಕಾಲ ನ್ಯಾಯಲಯದಲ್ಲಿ ನಡೆದ ಹೋರಾಟದಿಂದ ಇಂದು ಶಾಸಕನಾಗಿ ಆಯ್ಕೆಯಾಗಿ ಬಂದಿದ್ದೇನೆ. ಶೃಂಗೇರಿ ಕ್ಷೇತ್ರದ ಜನರ ಸೇವಕನಾಗಿ ಕೆಲಸ ಮಾಡಿಕೊಂಡು ಹೋಗುತ್ತೇನೆ. ನನಗೆ ಮತ ಹಾಕಿದ ಮತದಾರರಿಗೆ ನ್ಯಾಯ ಸಿಕ್ಕಿದೆ. ನನ್ನ ಕ್ಷೇತ್ರದ ಜನರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹರ್ಷ ವ್ಯಕ್ತಪಡಿಸಿದರು.
ಚುನಾವಣಾ ಆಯೋಗವು ಅಧಿಕೃತವಾಗಿ ಪ್ರಮಾಣಪತ್ರ ನೀಡಿದರೂ ಪ್ರಮಾಣವಚನಕ್ಕೆ ಅವಕಾಶ ನೀಡುವಂತೆ ಜೀವರಾಜ್ ಅವರು ಸ್ಪೀಕರ್ ಅವರಿಗೆ ಪತ್ರ ಬರೆದಿದ್ದರು. ವಿಳಂಬ ಆರೋಪ ಹಿನ್ನೆಲೆಯಲ್ಲಿ ಲೋಕಭವನಕ್ಕೆ ಹೋಗಿ ದೂರು ನೀಡಿತ್ತು. ಈ ಬಗ್ಗೆ ರಾಜ್ಯಪಾಲರು ಯು.ಟಿ.ಖಾದರ್ ಅವರಿಗೆ ಪರಿಶೀಲಿಸುವಂತೆ ಪತ್ರ ಬರೆದಿದ್ದರು. ಕಾರ್ಯಕ್ರಮ ನಿಮಿತ್ತ ಮಂಗಳೂರಿನಲ್ಲಿದ್ದು, ಇಂದು ಪ್ರಮಾಣವಚನ ಸಮಯ ನಿಗದಿಪಡಿಸುವುದಾಗಿ ಹೇಳಿದ್ದರು. ಇದರಂತೆ ಬುಧವಾರ ನೂತನ ಶಾಸಕರಾಗಿ ಜೀವರಾಜ್ ಅವರು ಪ್ರಮಾಣ ವಚನ ಸ್ವೀಕರಿಸಿದ್ಧಾರೆ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸ್ಪೀಕರ್ ಯು.ಟಿ.ಖಾದರ್, ಪ್ರಮಾಣವಚನ ಸಂಬಂಧ ಮಂಗಳವಾರ ಬೆಳಗ್ಗೆ ಅರ್ಜಿ ಕೊಟ್ಟು ಸಂಜೆ ರಾಜ್ಯಪಾಲರಿಗೆ ಬಿಜೆಪಿ ನಿಯೋಗ ಮನವಿ ಪತ್ರ ಕೊಟ್ಟಿತ್ತು. ನನ್ನ ಮೇಲೆ ಆರೋಪ ಬರಬಾರದು ಎಂದು ನನ್ನೆಲ್ಲಾ ಕೆಲಸ ಕಾರ್ಯ ಬಿಟ್ಟು ಪ್ರಮಾಣವಚನ ಬೋಧಿಸಿದ್ದೇನೆ. ರಾಜ್ಯಪಾಲರ ನಿರ್ದೇಶನದಂತೆ ಮಾಡದೆ ತನಗೆ ಬರೆದಿದ್ದ ಮನವಿ ಪತ್ರ ಕೊಟ್ಟಿದ್ದನ್ನ ಪಾಲಿಸಿದ್ದೇನೆ. ವಿಳಂಬವಾಗಿರುವ ಬಗ್ಗೆ ರಾಜ್ಯಪಾಲರಿಗೆ ಪತ್ರದ ಮುಖೇನ ತಿಳಿಸಿದ್ದೇನೆ ಎಂದರು.
ಫಲಿತಾಂಶ ಘೋಷಣೆಗೆ ಒಂದು ದಿನ ತಡ ಬಗ್ಗೆ ಸಿಬಿಐ ತನಿಖೆಯಾಗಲಿ: ಡಿ.ಎನ್.ಜೀವರಾಜ್ ಅವರ ಶಾಸಕ ಸ್ಥಾನದ ಫಲಿತಾಂಶ ಬಂದ ನಂತರವೂ ಚುನಾವಣಾಧಿಕಾರಿಗಳು ಫಲಿತಾಂಶ ಘೋಷಿಸಲು ಒಂದು ದಿನ ತಡ ಮಾಡಿದ್ದಾರೆ. ಅಧಿಕಾರಿಗಳ ಮೇಲೆ ಒತ್ತಡ ಹಾಕಿದವರು ಯಾರೆಂದು ತಿಳಿಯಲು ಸಿಬಿಐ ತನಿಖೆ ಮಾಡಬೇಕಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಆಗ್ರಹಿಸಿದರು.
ಪ್ರಮಾಣವಚನ ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶೃಂಗೇರಿ ಶಾಸಕರಾದ ಡಿ.ಎನ್.ಜೀವರಾಜ್ ಅಧಿಕೃತವಾಗಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ನಾಯಕರು ವೋಟ್ ಚೋರಿ ಬಗ್ಗೆ ಮಾತಾಡುತ್ತಾರೆ. ಶೃಂಗೇರಿಯಲ್ಲಿ ಕೊನೆಯಲ್ಲಿ ಅಂಚೆ ಮತಗಳನ್ನು ಎಣಿಸಲಾಗಿದೆ. ಇಲ್ಲಿ ಚುನಾವಣಾಧಿಕಾರಿಗಳಿಗೆ ಫೋನ್ ಕರೆ ಮಾಡಿ ಒತ್ತಡ ಹಾಕಿದವರು ಯಾರು ಎಂಬುದು ಸಿಬಿಐ ತನಿಖೆಯಿಂದ ಬಯಲಾಗಬೇಕಿದೆ. ಮರು ಎಣಿಕೆಯಲ್ಲಿ ಫಲಿತಾಂಶ ಗೊತ್ತಾದ ಕೂಡಲೇ ಚುನಾವಣಾ ಆಯೋಗದಿಂದ ಪ್ರಮಾಣಪತ್ರ ನೀಡಬೇಕೆಂದು ಕೋರ್ಟ್ ಆದೇಶದಲ್ಲಿ ತಿಳಿಸಲಾಗಿದೆ. ಆದರೂ ಒಂದು ದಿನ ತಡವಾಗಿ ಪ್ರಮಾಣಪತ್ರ ನೀಡಲಾಗಿದೆ. ಇಲ್ಲಿ ಅಧಿಕಾರಿಗಳ ಮೇಲೆ ಒತ್ತಡ ಹಾಕಿದವರು ಯಾರೆಂದು ಗೊತ್ತಾಗಬೇಕಿದೆ ಎಂದರು.
ಇದನ್ನೂ ಓದಿ: ಡಿಎಂಕೆ ಬೆನ್ನಿಗೆ ಚೂರಿ ಹಾಕಿದ ಕಾಂಗ್ರೆಸ್ ಗೆದ್ದಿತ್ತಿನ ಬಾಲ ಹಿಡಿಯುವ ಚಾಳಿ: ಆರ್. ಅಶೋಕ್

