ಬಿ.ನಾಗೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ; ರಾಜ್ಯ ಬಿಜೆಪಿ ನಾಯಕರು ಹೇಳಿದ್ದೇನು?
ಸಚಿವ ಸ್ಥಾನಕ್ಕೆ ನಾಗೇಂದ್ರ ರಾಜೀನಾಮೆ ನೀಡಿರುವುದಕ್ಕೆ ರಾಜ್ಯ ಬಿಜೆಪಿ ನಾಯಕರು ನಮ್ಮ ಹೋರಾಟಕ್ಕೆ ಸಂದ ಜಯ ಎಂದಿದ್ದಾರೆ.

Published : August 28, 2026 at 10:26 PM IST
ಬೆಂಗಳೂರು: ಬಿ.ನಾಗೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಕ್ಕೆ ರಾಜ್ಯ ಬಿಜೆಪಿ ನಾಯಕರು ನಮ್ಮ ಹೋರಾಟಕ್ಕೆ ಸಂದ ಜಯ ಎಂದು ಹೇಳಿಕೊಂಡಿದ್ದು, ಹಗರಣದ ತಿಮಿಂಗಿಲಗಳ ಸತ್ಯ ಬಯಲಾಗಬೇಕು ಎಂದು ಒತ್ತಾಯಿಸಿದ್ದಾರೆ.
ವಿಪಕ್ಷ ನಾಯಕ ಆರ್.ಅಶೋಕ ಈ ಸಂಬಂಧ ಎಕ್ಸ್ ಪೋಸ್ಟ್ ಮಾಡಿ, ಜನಾಕ್ರೋಶದ ಮುಂದೆ ಭ್ರಷ್ಟ ಕಾಂಗ್ರಸ್ ಸರ್ಕಾರ ಮಂಡಿಯೂರಿ ಶರಣಾಗಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಪರಿಶಿಷ್ಟ ವರ್ಗಕ್ಕೆ ಸೇರಿದ 187 ಕೋಟಿ ಹಣವನ್ನು ಲೂಟಿ ಮಾಡಿದ ಬಿ.ನಾಗೇಂದ್ರ ಅವರನ್ನು ರಕ್ಷಿಸಲು ವಿಧಾನಮಂಡಲ ಅಧಿವೇಶನವನ್ನೇ ರದ್ದು ಮಾಡಿದ ಕಾಂಗ್ರೆಸ್ ಸರ್ಕಾರ, ಕೊನೆಗೂ ನಮ್ಮ ಹೋರಾಟಕ್ಕೆ ಮಣಿದು ರಾಜೀನಾಮೆ ಪಡೆದಿದೆ. ಬಿಜೆಪಿಯಿಂದ ಪಾದಯಾತ್ರೆ ಘೋಷಣೆ ಮಾಡಿದ ಕೂಡಲೇ ಬೆವರಿ ಬೆದರಿದ ಕಾಂಗ್ರೆಸ್ ಕೂಡಲೇ ರಾಜೀನಾಮೆ ಪಡೆದು ಅಲ್ಪ ಸ್ವಲ್ಪ ಮಾನ ಉಳಿಸಿಕೊಂಡಿದೆ. ಮಾತು ಮಾತಿಗೂ ಬಾಬಾ ಸಾಹೇಬ್ ಅಂಬೇಡ್ಕರರ ಹೆಸರು ಹೇಳಿಕೊಂಡು ದಲಿತರನ್ನು ತುಳಿದ ಕಾಂಗ್ರೆಸ್‌ಗೆ ದಲಿತರ ಆಕ್ರೋಶದ ಬಿಸಿ ತಟ್ಟಿದೆ. ಕರ್ನಾಟಕದ ರಾಜಕೀಯದಲ್ಲಿ ಭ್ರಷ್ಟರನ್ನು ಸಚಿವರಾಗಿಟ್ಟುಕೊಂಡು ಆಡಳಿತ ನಡೆಸಲು ಸಾಧ್ಯವೇ ಇಲ್ಲ ಎಂಬ ಸಂದೇಶ ರವಾನೆಯಾಗಿದೆ ಎಂದಿದ್ದಾರೆ.
ಇದು ಕೇವಲ ರಾಜೀನಾಮೆಯಲ್ಲ, ಇದು ಕಾಂಗ್ರೆಸ್ ಸರ್ಕಾರದ ಅಹಂಕಾರದ ಮೇಲೆ ಬಿದ್ದ ಬಲವಾದ ಹೊಡೆತ! ಇದು ಕೋಟ್ಯಂತರ ದಲಿತರಿಗೆ ಸಿಕ್ಕಿರುವ ದಿಗ್ವಿಜಯ. ದಲಿತರ ಕಲ್ಯಾಣಕ್ಕಾಗಿ ಮೀಸಲಿಟ್ಟ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿ ಲೂಟಿ ಮಾಡಿದ ಆರೋಪದ ವಿರುದ್ಧ ಬಿಜೆಪಿ-ಜೆಡಿಎಸ್ ಸದನದ ಒಳಗೆ ಹಾಗೂ ಹೊರಗೆ ನಿರಂತರವಾಗಿ ಹೋರಾಟ ಮಾಡಿತ್ತು. ನಾವು ಪ್ರಶ್ನೆ ಕೇಳಿದಾಗ - ಸದನದಿಂದ ಪಲಾಯನ. ನಾವು ಉತ್ತರ ಕೇಳಿದಾಗ - ಅಧಿವೇಶನ ಮೊಟಕು. ನಾವು ಸತ್ಯ ಬಯಲು ಮಾಡಿದಾಗ - ಆರೋಪಿಗಳನ್ನು ರಕ್ಷಿಸುವ ಸರ್ಕಸ್. ಆದರೆ ಮುಖ್ಯಮಂತ್ರಿ ಡಿಕೆಶಿ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಒಂದು ವಿಷಯ ಅರ್ಥ ಮಾಡಿಕೊಳ್ಳಬೇಕು. ಸದನ ಮುಂದೂಡಬಹುದು. ಚರ್ಚೆ ತಪ್ಪಿಸಿಕೊಳ್ಳಬಹುದು. ಸತ್ಯವನ್ನು ಮಾತ್ರ ಮುಚ್ಚಿಡಲು ಸಾಧ್ಯವಿಲ್ಲ ಎಂದಿದ್ದಾರೆ.
ನಮ್ಮ ನಿರಂತರ ಹೋರಾಟ, ಜನಾಕ್ರೋಶ ಮತ್ತು ನಮ್ಮ ಪಾದಯಾತ್ರೆಯ ಘೋಷಣೆಯ ಬೆನ್ನಲ್ಲೇ ಸಚಿವ ನಾಗೇಂದ್ರ ಅವರು ರಾಜೀನಾಮೆ ನೀಡಿದ್ದಾರೆ. ಇದು ಭ್ರಷ್ಟರ ವಿರುದ್ಧ ನಮ್ಮ ಹೋರಾಟದ ಗೆಲುವು. ಇದು ದಲಿತರ ಹಣಕ್ಕೆ ನ್ಯಾಯ ಬೇಕೆಂಬ ಆಗ್ರಹಕ್ಕೆ ಸಿಕ್ಕ ಜಯ. ಆದರೆ, ಒಬ್ಬ ಸಚಿವನ ರಾಜೀನಾಮೆ ಕೊಡಿಸಿದರೆ ದಲಿತರಿಗೆ ನ್ಯಾಯ ಸಿಕ್ಕಂತೆ ಆಗುವುದಿಲ್ಲ. ನಾಗೇಂದ್ರ ರಾಜೀನಾಮೆ ಕೊಟ್ಟ ಮಾತ್ರಕ್ಕೆ ಕಾಂಗ್ರೆಸ್ ಪಾಪದ ಕೊಡ ಖಾಲಿಯಾಗುವುದಿಲ್ಲ. ಈ ಹಗರಣದ ಮೂಲ ಸೂತ್ರದಾರರು ಯಾರು?. ಯಾರ ಆದೇಶದ ಮೇರೆಗೆ ಹಣ ವರ್ಗಾವಣೆಯಾಯಿತು?. ಯಾರ ಕಚೇರಿಯಿಂದ ನಿರ್ದೇಶನಗಳು ಬಂದವು?. ಯಾರಿಗೆ ಈ ಹಣದ ಲೂಟಿಯಲ್ಲಿ ಲಾಭವಾಯಿತು?. ಯಾರು ಆರೋಪಿಗಳನ್ನು ರಕ್ಷಿಸಿದರು?. ಪ್ರತಿಯೊಂದು ಪ್ರಶ್ನೆಗೂ ಉತ್ತರ ಬೇಕು. ದಲಿತರ ಹಣಕ್ಕೆ ಕೈ ಹಾಕಿದ ಪ್ರತಿಯೊಬ್ಬರೂ, ಹಗರಣಕ್ಕೆ ಸಹಕರಿಸಿದ ಪ್ರತಿಯೊಬ್ಬರೂ, ಆರೋಪಿಗಳನ್ನು ರಕ್ಷಿಸಿದ ಪ್ರತಿಯೊಬ್ಬರೂ ಕಾನೂನಿನ ಮುಂದೆ ನಿಲ್ಲಲೇಬೇಕು ಎಂದು ಆಗ್ರಹಿಸಿದ್ದಾರೆ.
ನಾಗೇಂದ್ರ ಅವರ ರಾಜೀನಾಮೆ ಅಂತ್ಯವಲ್ಲ, ಇದು ಸತ್ಯ ತನಿಖೆಯ ಆರಂಭ. ಕಾಂಗ್ರೆಸ್ ಸರ್ಕಾರದ ಮುಖವಾಡ ಕಳಚಿದೆ. ಈಗ ಸತ್ಯ ಹೊರಬರಬೇಕು, ಲೂಟಿಯ ಸಂಪೂರ್ಣ ಲೆಕ್ಕ ಹೊರಬರಬೇಕು, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಅಧಿಕಾರಿ ಪಿ.ಚಂದ್ರಶೇಖರನ್ ಆತ್ಮಕ್ಕೆ ಶಾಂತಿ ದೊರೆಯಬೇಕು. ಜನರ ಹಣಕ್ಕೆ ನ್ಯಾಯ ಸಿಗುವವರೆಗೂ, ಹಗರಣದ ಸಂಪೂರ್ಣ ಸತ್ಯ ಬಯಲಾಗುವವರೆಗೂ, ತಪ್ಪಿತಸ್ಥರು ಕಾನೂನಿನ ಮುಂದೆ ನಿಲ್ಲುವವರೆಗೂ ಬಿಜೆಪಿಯ ಹೋರಾಟ ನಿಲ್ಲುವುದಿಲ್ಲ. ಇದು ಕೇವಲ ರಾಜೀನಾಮೆಯ ಗೆಲುವಲ್ಲ. ಇದು ಸತ್ಯದ ಗೆಲುವಿನ ಆರಂಭ ಎಂದಿದ್ದಾರೆ.
ತಿಮಿಂಗಿಲಗಳ ಸತ್ಯ ಬಹಿರಂಗವಾಗಬೇಕು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರತಿಕ್ರಿಯಿಸುತ್ತಾ, ವಾಲ್ಮೀಕಿ ಅಭಿವೃದ್ಧಿ ನಿಗಮದ ₹185 ಕೋಟಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನಮ್ಮ ಹೋರಾಟ ಕೇವಲ ಸಚಿವ ನಾಗೇಂದ್ರ ಅವರ ರಾಜೀನಾಮೆಗೆ ಸೀಮಿತವಾಗಿಲ್ಲ. ಶೋಷಿತ ಸಮುದಾಯಗಳ ಅಭಿವೃದ್ಧಿಗಾಗಿ ಮೀಸಲಿಟ್ಟಿದ್ದ ಹಣ ಸಂಪೂರ್ಣವಾಗಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಖಾತೆಗೆ ವಾಪಸ್ ಜಮೆಯಾಗಬೇಕು. ಈ ಅಕ್ರಮದ ಹಿಂದೆ ಇರುವ ದೊಡ್ಡ ದೊಡ್ಡ ‘ತಿಮಿಂಗಿಲ’ಗಳ ಮುಖವಾಡ ಕಳಚಿ, ಸತ್ಯ ಸಂಪೂರ್ಣವಾಗಿ ಬಹಿರಂಗವಾಗಬೇಕು ಎಂದು ಆಗ್ರಹಿಸಿದ್ದಾರೆ.
ಈ ಪ್ರಕರಣದಲ್ಲಿ ದೊಡ್ಡ ದೊಡ್ಡ ತಿಮಿಂಗಿಲಗಳು ಭಾಗಿಯಾಗಿವೆ ಎಂದು ನಾವು ಹಿಂದೆಯೇ ಹೇಳಿದ್ದೇವೆ. ಕಾಂಗ್ರೆಸ್ ಹೈಕಮಾಂಡ್‌ಗೂ ಕಪ್ಪ ಕಾಣಿಕೆ ಸಲ್ಲಿಕೆಯಾಗಿದೆ ಎಂಬ ವಿಚಾರವೂ ವ್ಯಾಪಕವಾಗಿ ಚರ್ಚೆಯಾಗುತ್ತಿದೆ. ಈ ಆರೋಪಗಳ ಸತ್ಯಾಸತ್ಯತೆ ತನಿಖೆಯಿಂದ ಹೊರಬರಬೇಕು. ಯಾರು ಎಷ್ಟೇ ಪ್ರಭಾವಶಾಲಿಗಳಾಗಿದ್ದರೂ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಗೆ ತತ್ತರಿಸಿ ರಾಜೀನಾಮೆ: ಮೇಲ್ಮನೆ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಪ್ರತಿಕ್ರಿಯಿಸುತ್ತಾ, ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಸದನದ ಹೊರಗೆ ಮತ್ತು ಒಳಗೆ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ಹೋರಾಟ ಮಾಡಿದ್ದೇವು. ಇದರಿಂದ ತತ್ತರಿಸಿದ್ದ ಕಾಂಗ್ರೆಸ್ ಬೇರೆ ಮಾರ್ಗವೇ ಇಲ್ಲದೆ ರಾಜೀನಾಮೆ ಪಡೆದಿದೆ. ಪರಿಶಿಷ್ಟ ವರ್ಗದವರ ಕಲ್ಯಾಣಕ್ಕೆ ಮೀಸಲಾದ ಹಣವನ್ನು ಕಾಂಗ್ರೆಸ್ ಪಕ್ಷ ಒಬ್ಬ ದಲಿತ ಮುಖಂಡನ ಮೂಲಕ ಲೂಟಿ ಮಾಡಿಸಿತ್ತು ಎಂದು ಆರೋಪಿಸಿದ್ದಾರೆ.
ಹಗರಣ ಬೆಳಕಿಗೆ ಬಂದು ಪ್ರಕರಣ ದಾಖಲಾಗಿ ಸಚಿವರಾಗಿದ್ದ ನಾಗೇಂದ್ರ ಜೈಲಿಗೆ ಹೋಗಿದ್ದರು. ಅವರು ಸಚಿವ ಸ್ಥಾನಕ್ಕೆ ರಾಜೀನಾಮೆಯನ್ನೂ ನೀಡಿದ್ದರು. ಮೇಲ್ನೋಟಕ್ಕೆ ಇವರು ದಲಿತರ ಹಣ ದರೋಡೆ ಮಾಡಿದ್ದು ಸಾಬೀತಾಗಿತ್ತು. ಜಾಮೀನಿನ ಮೇಲೆ ಹೊರಗೆ ಬಂದ ನಾಗೇಂದ್ರ ಅವರನ್ನು ಕ್ಲೀನ್ ಚಿಟ್ ಸಿಗದೇ ಇದ್ದರೂ ಪ್ರಕರಣ ಬಾಕಿ ಇರುವಾಗ ಮತ್ತೆ ಮಂತ್ರಿ ಮಾಡಿತ್ತು. ಇದನ್ನು ವಿರೋಧಿಸಿ ಬಿಜೆಪಿ ಪ್ರತಿಭಟನೆ ನಡೆಸಿತ್ತು ಎಂದು ಹೇಳಿದ್ದಾರೆ.
ಹೋರಾಟಕ್ಕೆ ಸರ್ಕಾರ ಮಣಿದಿದೆ: ಈ ಬಗ್ಗೆ ಪ್ರತಿಕ್ರಿಯಿಸಿರುವ ಸುನಿಲ್ ಕುಮಾರ್, ಬಿ.ನಾಗೇಂದ್ರ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕೆಂದು ಭಾರತೀಯ ಜನತಾ ಪಕ್ಷ ಸದನದಲ್ಲಿ ನಡೆಸಿದ ನಿರಂತರ ಹೋರಾಟಕ್ಕೆ ಕೊನೆಗೂ ಸರ್ಕಾರ ಮಣಿದಿದೆ. ಭ್ರಷ್ಟಾಚಾರದ ಬಗ್ಗೆ ‘ಶೂನ್ಯ ಸಹಿಷ್ಣುತೆ’ ಎಂದ ಸಿಎಂ ಡಿ.ಕೆ.ಶಿವಕುಮಾರ್ ಅವರು, ಭ್ರಷ್ಟ ನಾಗೇಂದ್ರನನ್ನು ಸಂಪುಟಕ್ಕೆ ಸೇರಿಸಿಕೊಂಡಿದ್ದೇ ಇನ್ನೊಂದು ದೊಡ್ಡ ಭ್ರಷ್ಟಾಚಾರವಾಗಿತ್ತು. ಜನರ ಹಣಕ್ಕೆ ಲೆಕ್ಕ ಕೇಳುವ ಬದಲು, ಆರೋಪ ಹೊತ್ತವರಿಗೇ ಅಧಿಕಾರದ ರಕ್ಷಾಕವಚ ನೀಡುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ರಾಜ್ಯದ ಜನತೆ ತಕ್ಕ ಉತ್ತರ ನೀಡಲಿದ್ದಾರೆ ಎಂಬುದು ಅರಿವಾಗುತ್ತದ್ದಂತೆ ನಾಗೇಂದ್ರ ರಾಜೀನಾಮೆ ಪಡೆದು ಕಾಂಗ್ರೆಸ್ ಮುಖ ಉಳಿಸಿಕೊಳ್ಳುವ ಪ್ರಯತ್ನ ನಡೆಸಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಹಗರಣದಲ್ಲಿ ಕಟ್ಟಿಕೊಂಡವರ, ಇಟ್ಟುಕೊಂಡವರ ಖಾತೆಗೆ ಎಷ್ಟು ಹೋಗಿದೆ ಎಂದು ಇಡಿ ಹೇಳುತ್ತದೆ: ವಾಲ್ಮೀಕಿ ಹಗರಣದಲ್ಲಿ ಹಣ ಕಟ್ಟಿಕೊಂಡವರ ಹಾಗೂ ಇಟ್ಟುಕೊಂಡವರ ಖಾತೆಗೆ ಎಷ್ಟು ಹೋಗಿದೆ ಎಂದು ಇಡಿ ತನಿಖೆಯಲ್ಲಿ ಹೇಳುತ್ತದೆ ಎಂದು ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರು ಶಿವಮೊಗ್ಗದಲ್ಲಿ ತಿಳಿಸಿದರು.
ಭ್ರಷ್ಟಾಚಾರ ಆರೋಪ ಹೊತ್ತಿದ್ದ ನಾಗೇಂದ್ರನನ್ನು ಮತ್ತೆ ಮಂತ್ರಿ ಮಾಡಿದ್ದೇಕೆ?. ಸಾಯುವವನು ಸುಳ್ಳು ಹೇಳುವುದಿಲ್ಲ. ಮೃತ ಚಂದ್ರಶೇಖರ್ ಡೆತ್ ನೋಟ್ ಉಲ್ಲೇಖ ಸುಳ್ಳಾ ಎಂದರು.
ಇದನ್ನೂ ಓದಿ: ಸಚಿವ ಸ್ಥಾನಕ್ಕೆ ನಾಗೇಂದ್ರ ರಾಜೀನಾಮೆ ಘೋಷಣೆ: ಜನತಾ ನ್ಯಾಯಾಲಕ್ಕೆ ಬರುವಂತೆ ಪ್ರತಿಪಕ್ಷಗಳಿಗೆ ಸವಾಲು

