ದಾವಣಗೆರೆ: ಕಾರಿನಲ್ಲೇ ಬೆಂಕಿ ಹಚ್ಚಿಕೊಂಡು ಬಿಜೆಪಿ ಮುಖಂಡ ಆತ್ಮಹತ್ಯೆ
ಬಿಜೆಪಿ ಮುಖಂಡರೊಬ್ಬರು ಕಾರಿನಲ್ಲೇ ಕುಳಿತು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.

Published : January 11, 2026 at 1:07 PM IST
ದಾವಣಗೆರೆ: ಕೌಟುಂಬಿಕ ಕಲಹದಿಂದ ಮನನೊಂದು ಬಿಜೆಪಿ ಮುಖಂಡರೊಬ್ಬರು ಕಾರಿನಲ್ಲೇ ಕುಳಿತು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಾವಣಗೆರೆ ತಾಲೂಕಿನ ನಾಗನೂರು ಬಳಿಯ ತೋಟದಲ್ಲಿ ಇಂದು ಬೆಳಕಿಗೆ ಬಂದಿದೆ. ಮಾಜಿ ಮಹಾನಗರ ಪಾಲಿಕೆ ಸದಸ್ಯ ಚಂದ್ರಶೇಖರ್ ಸಂಕೋಲ್ ಸಾವನ್ನಪ್ಪಿದ್ದಾರೆ.
ಶನಿವಾರ ಮನೆಯಲ್ಲಿ ಗಲಾಟೆ ನಡೆದಿದೆ ಎನ್ನಲಾಗುತ್ತಿದೆ. ಈ ವೇಳೆ ತಮ್ಮ ಇಬ್ಬರು ಮಕ್ಕಳು ಆತ್ಮಹತ್ಯೆಗೆ ಯತ್ನಿಸಿರುವ ಮಾಹಿತಿ ದೊರೆತಿದೆ. ಈ ಬೆಳವಣಿಗೆಯಿಂದ ಬೇಸರಗೊಂಡ ಚಂದ್ರಶೇಖರ್ ಸಂಕೋಲ್ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
ಇದೀಗ ಅಸ್ವಸ್ಥಗೊಂಡ ಮಕ್ಕಳನ್ನು ದಾವಣಗೆರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡಿದ್ದರಿಂದ ಇಡೀ ದೇಹ ಸುಟ್ಟು ಕರಕಲಾಗಿದೆ. ಹದಡಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ಆರಂಭಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಮಾತನಾಡಿ, "ವ್ಯಕ್ತಿಯೊಬ್ಬರು ಕಾರಿನಲ್ಲೇ ಬೆಂಕಿ ಹಚ್ಚಿಕೊಂಡು ಸಾವನ್ನಪ್ಪಿರುವುದಾಗಿ ಮಾಹಿತಿ ಬಂದ ಮೇರೆಗೆ ಬಂದು ಪರಿಶೀಲನೆ ಮಾಡಿದಾಗ ವಿದ್ಯಾನಗರದ ಮಾಜಿ ಮಹಾನಗರ ಪಾಲಿಕೆ ಸದಸ್ಯ ಚಂದ್ರಶೇಖರ್ ಎಂದು ಗೊತ್ತಾಗಿದೆ. ವಿದ್ಯಾನಗರದಲ್ಲಿ ವಿಚಾರಣೆ ಮಾಡಿದಾಗ ಮಕ್ಕಳು ನಿನ್ನೆ ರಾತ್ರಿ ನಿಮ್ಮ ಜೊತೆ ಮಾತನಾಡಬೇಕು, ಬೇಗ ಬನ್ನಿ ಎಂದು ಚಂದ್ರಶೇಖರ್ಗೆ ಫೋನ್ ಮಾಡಿದ್ದರಂತೆ. ಚಂದ್ರಶೇಖರ್ ಬರ್ತೀನಿ ಇರಿ ಎಂದು ಹೇಳಿದಾಗ, ಇವರು ಯಾವಾಗಲೂ ಹೀಗೆ ಮಾಡುತ್ತಾರೆ, ಬಂದಿಲ್ಲ ಎಂದು ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತಕ್ಷಣ ಮನೆಯಲ್ಲಿದ್ದವರು ಆಸ್ಪತ್ರೆಗೆ ಸಾಗಿಸಿದ್ದಾರೆ. ಇದೀಗ ಇಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ" ಎಂದರು.
"ಈ ಘಟನೆಯ ಸಂಬಂಧ ಸಂಬಂಧಿಕರು ಬಂದು ದೂರು ಕೊಡಬೇಕಿದೆ. ನಂತರ ದೂರು ದಾಖಲು ಮಾಡಿಕೊಳ್ಳುತ್ತೇವೆ. ಘಟನಾ ಸ್ಥಳ ಪರಿಶೀಲನೆಗೆ ಎಫ್ಎಸ್ಎಲ್ ತಂಡವನ್ನು ಕರೆಸುತ್ತಿದ್ದೇವೆ. ಸೋಕೋ ತಂಡವರು ಬಂದಿದ್ದಾರೆ. ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ತಿಳಿಯಲು ತನಿಖೆ ಮಾಡುತ್ತೇವೆ" ಎಂದು ತಿಳಿಸಿದರು.
ಪ್ರಕಾಶಕಿ ಆಶಾ ರಘು ಆತ್ಮಹತ್ಯೆ(ಪ್ರತ್ಯೇಕ ಘಟನೆ): ಪ್ರಸಿದ್ಧ ಕಾದಂಬರಿಕಾರ್ತಿ ಹಾಗು ಪ್ರಕಾಶಕಿಯಾಗಿದ್ದ ಆಶಾ ರಘು (48) ಅವರು ಬೆಂಗಳೂರಿನ ಮಲ್ಲೇಶ್ವರಂನ ತಮ್ಮ ನಿವಾಸದಲ್ಲಿ ಶುಕ್ರವಾರ ರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು. ಇವರ ಪತಿ, ಆಹಾರ ತಜ್ಞರಾಗಿದ್ದ ಕೆ.ಸಿ.ರಘು ಎರಡು ವರ್ಷಗಳ ಹಿಂದೆ ಅನಾರೋಗ್ಯದಿಂದ ಮೃತಪಟ್ಟಿದ್ದರು. ಅಂದಿನಿಂದ ಆಶಾ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಪದವಿ ವ್ಯಾಸಂಗ ಮಾಡುತ್ತಿರುವ ಪುತ್ರಿ ಮತ್ತು ಮಹಿಳಾ ಕೇರ್ ಟೇಕರ್ ಆಶಾ ಅವರನ್ನು ನೋಡಿಕೊಳ್ಳುತ್ತಿದ್ದರು. ಒಂದೂವರೆ ವರ್ಷದಿಂದ ಚಿಕಿತ್ಸೆಯ ಜತೆಗೆ ಆಪ್ತ ಸಮಾಲೋಚಕರಿಂದ ಕೌನ್ಸಿಲಿಂಗ್ ಮಾಡಿಸಲಾಗುತ್ತಿತ್ತು. ಹೀಗಿದ್ದೂ ಕಳೆದ ಕೆಲವು ತಿಂಗಳಿಂದ ಬಹಳ ಖಿನ್ನತೆಗೆ ಒಳಗಾಗಿದ್ದರು ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಬೆಳಗಾವಿ: ಪತ್ನಿಯನ್ನು ಕೊಂದು ಪತಿ ಆತ್ಮಹತ್ಯೆ

