ETV Bharat / state

ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ವಿರುದ್ಧ ಅವಮಾನಕಾರಿ ಸಂದೇಶ: ಬಂಟ್ವಾಳ ಪೊಲೀಸ್ ಠಾಣೆಗೆ ಬಿಜೆಪಿ ದೂರು

ಫೇಸ್​ಬುಕ್ ನಲ್ಲಿ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ವಿರುದ್ಧ ಅವಹೇಳನಕಾರಿ ಸಂದೇಶವನ್ನು ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರರ್ಜಿ ನೀಡಲಾಗಿದೆ.

Etv Bharat
ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ (ETV Bharat ( file photo))
author img

By ETV Bharat Karnataka Team

Published : January 7, 2026 at 9:56 PM IST

3 Min Read
Choose ETV Bharat

ಬಂಟ್ವಾಳ (ದಕ್ಷಿಣ ಕನ್ನಡ): ಸುಳ್ಯ ಬಿಜೆಪಿ ಶಾಸಕಿ ಭಾಗೀರಥಿ ಮುರುಳ್ಯ ವಿರುದ್ಧ ಶ್ರದ್ಧಾಂಜಲಿ ಎಂದು ಅವಮಾನಕಾರಿ ಸಂದೇಶ ಹಾಕಿದ ವಿಚಾರವೀಗ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಬಂಟ್ವಾಳದಲ್ಲಿ ಪ.ಜಾತಿ, ಪ.ಪಂಗಡ ಅಲೆಮಾರಿ ಅಭಿವೃದ್ಧಿ ನಿಗಮ ಅಧ್ಯಕ್ಷೆ ಪಲ್ಲವಿ ಜಿ. ಅವರ ನೇತೃತ್ವದ ಸಮುದಾಯದ ಕುಂದು ಕೊರತೆ ಸಭೆಯಲ್ಲೂ ಇದು ಪ್ರಸ್ತಾಪವಾಯಿತು. ಇದೀಗ ಬಂಟ್ವಾಳ ಬಿಜೆಪಿ ಕಾರ್ಯಕರ್ತರೊಬ್ಬರು ಈ ಕುರಿತು ದೂರರ್ಜಿ ನೀಡಿದ್ದಾರೆ.

ಫೇಸ್​ಬುಕ್ ನಲ್ಲಿ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ವಿರುದ್ಧ ಅವಹೇಳನಕಾರಿ ಸಂದೇಶವನ್ನು ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರರ್ಜಿ ನೀಡಲಾಗಿದೆ. ನ್ಯಾಯಾಲಯದ ಅನುಮತಿ ಪಡೆದು ಪ್ರಕರಣ ದಾಖಲು ಮಾಡುವುದಾಗಿ ಪೊಲೀಸರು ತಿಳಿಸಿದ್ದಾರೆ.

ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆಯನ್ನು ಸಾಮಾಜಿಕ ಜಾಲತಾಣದಲ್ಲಿ ಬರೆದು ಪ್ರಸಾರ ಮಾಡಿದ ವ್ಯಕ್ತಿಯನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಬಂಟ್ವಾಳ ಬಿಜೆಪಿ ಪರವಾಗಿ ಕಾರ್ಯಕರ್ತ ಸದಾನಂದ ನಾವೂರ ಅವರು ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಗೆ ದೂರರ್ಜಿ ನೀಡಿದ್ದಾರೆ.

ದೂರಿನಲ್ಲಿ ಇರುವುದೇನು?: ಬಿಲ್ಲವ ಸಂದೇಶ ಎಂಬ ಫೇಸ್​ ಬುಕ್ ಖಾತೆಯಲ್ಲಿ ಸುಳ್ಯ ಶಾಸಕಿಗೆ ಬಗ್ಗೆ ಅತ್ಯಂತ ಕೀಳು ಪದದ ಮೂಲಕ ನಿಂದಿಸಿ ಸಂದೇಶವನ್ನು ಟ್ಯಾಗ್ ಮಾಡಿ ಅವರ ಭಾವಚಿತ್ರದ ಜೊತೆಗೆ ಮುದ್ರಿಸಿ ಎಡಿಟ್ ಮಾಡಿ ಹರಿಯಬಿಟ್ಟಿರುತ್ತಾರೆ. ಈ ರೀತಿ ಪಕ್ಷದ ಗೌರವಾನ್ವಿತ ಶಾಸಕಿಯಾಗಿರುವ ಭಾಗೀರಥಿ ಮುರುಳ್ಯ ಅವರ ವಿರುದ್ಧ ಅವಹೇಳನ ರೀತಿಯ, ಸುಳ್ಳು ಅಪಪ್ರಚಾರವನ್ನು ಸಾಮಾಜಿಕ ಜಾಲತಾಣವಾದ ಫೇಸ್ ಬುಕ್ಕಿನಲ್ಲಿ ಮಾಡಿರುವುದು ನಮ್ಮ ಪಕ್ಷದ ಮತ್ತು ದಲಿತ ಶಾಸಕಿಯರಾಗಿರುವ ಭಾಗೀರಥಿ ಮುರುಳ್ಯ ಅವರ ಘನತೆ ಗೌರವಕ್ಕೆ ಚ್ಯುತಿ ಹಾಗೂ ಅಪಮಾನ ಉಂಟಾಗಿರುವುದಲ್ಲದೇ ಸಾರ್ವಜನಿಕವಾಗಿ ದಲಿತ ಸಮುದಾಯದಕ್ಕೆ ಸೇರಿದ ಭಾಗೀರಥಿ ಮುರುಳ್ಯ ಅವರ ಬಗ್ಗೆ ಈ ರೀತಿ ಸಂದೇಶಗಳನ್ನು ರವಾನೆ ಮಾಡುತ್ತಿರುವುದರಿಂದ ಜಾತಿನಿಂದನೆ ಕೂಡಾ ಆಗಿರುವುದಾಗಿದೆ. ಆದ್ದರಿಂದ ನಿಂದನೆ ಪದಗಳ ಮೂಲಕ ಸಂದೇಶ ಬಿತ್ತರಿಸಿದ ವ್ಯಕ್ತಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ಕೇಸು ದಾಖಲಿಸಬೇಕು ಎಂದು ಒತ್ತಾಯ ಮಾಡಿದ್ದಾರೆ.

ಗ್ರಾಮಾಂತರ ಪೋಲೀಸರು ಈ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈಗಾಗಲೇ ಸಂಸದ ಬೃಜೇಶ್ ಚೌಟ, ಶಾಸಕ ರಾಜೇಶ್ ನಾಯ್ಕ್ ಸಹಿತ ಪಕ್ಷದ ಪ್ರಮುಖರು, ಶಾಸಕರು ಈ ಕೃತ್ಯ ಖಂಡಿಸಿದ್ದು, ಸೂಕ್ತ ಕ್ರಮಕ್ಕಾಗಿ ಒತ್ತಾಯಿಸಿದ್ದಾರೆ.

ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದ ಶಾಸಕಿ: ತಮ್ಮ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ‘ಶ್ರದ್ಧಾಂಜಲಿ’ ಎಂಬ ಶೀರ್ಷಿಕೆಯಲ್ಲಿ ಅಪಮಾನಕಾರಿ ಪೋಸ್ಟ್ ಪ್ರಕಟವಾದ ಘಟನೆಗೆ ಸಂಬಂಧಿಸಿದಂತೆ, ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರಳ್ಯ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಈ ರೀತಿಯ ವಿಕೃತ ಮತ್ತು ದುರುದ್ದೇಶಪೂರಿತ ಪೋಸ್ಟ್ ಮಾಡಿದ ವ್ಯಕ್ತಿಯ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ತಿಳಿಸಿದ್ದಾರೆ. ಈ ವ್ಯಕ್ತಿಯು ಯಾವ ಉದ್ದೇಶದಿಂದ ಈ ರೀತಿಯ ಪೋಸ್ಟ್ ಮಾಡಿದ್ದಾರೆ ಎಂಬುದು ನನಗೆ ತಿಳಿದಿಲ್ಲ. ಆದರೆ ನನ್ನ ಪ್ರತಿಯೊಬ್ಬ ಮತದಾರರಿಗೂ ನನ್ನ ಬಗ್ಗೆ ಸಂಪೂರ್ಣ ಅರಿವು ಇದೆ. ನಾನು ಇಲ್ಲಿಯವರೆಗೆ ಯಾವುದೇ ಪ್ರತಿಕೂಲ ಅಥವಾ ತಪ್ಪಾದ ಕೆಲಸ ಮಾಡಿಲ್ಲ, ಎಂದು ಶಾಸಕಿ ಭಾಗೀರಥಿ ಮುರಳ್ಯ ಹೇಳಿದ್ದಾರೆ.

ಇಂತಹವರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು: ಇಂತಹ ಕೃತ್ಯಗಳು ರಾಜಕೀಯ ಸಂಸ್ಕೃತಿಗೆ ವಿರುದ್ಧವಾಗಿದ್ದು, ಸಾರ್ವಜನಿಕ ಜೀವನದಲ್ಲಿರುವ ವ್ಯಕ್ತಿಯ ಗೌರವಕ್ಕೆ ಧಕ್ಕೆ ತರುವ ಪ್ರಯತ್ನವಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ರೀತಿಯ ವಿಕೃತ ಪೋಸ್ಟ್‌ಗಳನ್ನು ಮಾಡುವುದು ಮತ್ತು ಹಂಚಿಕೊಳ್ಳುವುದು ಸರಿಯಲ್ಲ. ಸರ್ಕಾರ ತಕ್ಷಣವೇ ಈ ಪೋಸ್ಟ್ ಮಾಡಿದ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಜೊತೆಗೆ ಅದನ್ನು ಹಂಚಿಕೊಂಡವರ ಮೇಲೂ ಮಾನನಷ್ಟ ಮೊಕದ್ದಮೆ ಹೂಡಬೇಕು, ಎಂದು ಅವರು ಒತ್ತಾಯಿಸಿದ್ದಾರೆ.

ಈ ಘಟನೆ ಬಳಿಕ ಜಿಲ್ಲೆ ಹಾಗೂ ರಾಜ್ಯದ ಹಲವು ನಾಯಕರು ದೂರವಾಣಿ ಕರೆಗಳ ಮೂಲಕ ತಮ್ಮೊಂದಿಗೆ ಸಂಪರ್ಕ ಸಾಧಿಸಿ ಧೈರ್ಯ ತುಂಬುತ್ತಿರುವುದಾಗಿ ಮತ್ತು ಕಾರ್ಯಕರ್ತರು ನಾಳೆ ಹಲವು ಕಡೆಗಳಲ್ಲಿ ದೂರು ದಾಖಲು ಮಾಡುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ. ನನ್ನ ಮೇಲಿನ ನಂಬಿಕೆ ಮತ್ತು ಬೆಂಬಲ ನನಗೆ ಇನ್ನಷ್ಟು ಶಕ್ತಿ ನೀಡಿದೆ, ಎಂದು ಶಾಸಕಿ ಹೇಳಿದರು.

ಇವುಗಳನ್ನು ಓದಿ: ದೇವರಾಜ ಅರಸು ಅವರೊಂದಿಗೆ ಸಿದ್ದರಾಮಯ್ಯ ಅವರನ್ನು ಹೋಲಿಸಲಾಗದು: ಬಿ.ಎಸ್. ಯಡಿಯೂರಪ್ಪ
GBA ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆ ಮಾರ್ಚ್‌ 11ಕ್ಕೆ ನಿಗದಿ ಪಡಿಸಿದ ಹೈಕೋರ್ಟ್

ಯೋಗೇಶ್​ ಗೌಡ ಕೊಲೆ ಪ್ರಕರಣ: ವಿನಯ್ ಕುಲಕರ್ಣಿ ವಿರುದ್ಧದ ಸಾಕ್ಷ್ಯಗಳ ವಿಚಾರಣೆ ಬಾಕಿ ಕುರಿತು ವಿವರಣೆ ನೀಡಲು ಸೂಚಿಸಿದ ಹೈಕೋರ್ಟ್​