ETV Bharat / state

ಒಳ ಮೀಸಲಾತಿ ವಿಳಂಬ ಸಂಬಂಧ ರಾಜ್ಯಪಾಲರ ಭೇಟಿಯಾದ ಬಿಜೆಪಿ ನಿಯೋಗ; ಮೀಸಲಾತಿ ಗೊಂದಲ ಸೃಷ್ಟಿಸಿ ನೇಮಕಾತಿ ಮುಂದೂಡಿಕೆ: ಗೋವಿಂದ ಕಾರಜೋಳ

ಎಸ್‍ಇಪಿ, ಟಿಎಸ್‍ಪಿಯ 39 ಸಾವಿರ ಕೋಟಿ ಮೊತ್ತವನ್ನು ಸಿದ್ದರಾಮಯ್ಯ ಸರ್ಕಾರ ಬೇರೆ ಉದ್ದೇಶಕ್ಕೆ ಬಳಸಿದೆ ಎಂದು ಗೋವಿಂದ ಕಾರಜೋಳ ಅವರು ಟೀಕಿಸಿದ್ದಾರೆ.

BJP DELEGATION  GOVERNOR  BENGALURU  GOVINDA KARAJOL  INTERNAL RESERVATION
ಗೋವಿಂದ ಕಾರಜೋಳ (ETV Bharat)
author img

By ETV Bharat Karnataka Team

Published : February 24, 2026 at 8:12 AM IST

3 Min Read
Choose ETV Bharat

ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರ್ಕಾರ ಆರ್ಥಿಕವಾಗಿ ದಿವಾಳಿ ಆಗಿದೆ. ರಾಜ್ಯ ಸರ್ಕಾರದಲ್ಲಿ 2.85 ಲಕ್ಷ ಹುದ್ದೆಗಳು ಖಾಲಿ ಇವೆ. ಹಣ ಇಲ್ಲದ್ದಕ್ಕಾಗಿ, ಖಜಾನೆ ಖಾಲಿ ಆದ ಹಿನ್ನೆಲೆ ಮೀಸಲಾತಿಯ ಗೊಂದಲ ಸೃಷ್ಟಿಸಿ ನೇಮಕಾತಿ ಮುಂದೂಡುತ್ತಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಮತ್ತು ಸಂಸದ ಗೋವಿಂದ ಕಾರಜೋಳ ಆರೋಪಿಸಿದ್ದಾರೆ.

ಕರ್ನಾಟಕದಲ್ಲಿ ಇನ್ನೂ ಒಳ ಮೀಸಲಾತಿ ಜಾರಿಯಾಗಿಲ್ಲ ಎಂದು ಬಿಜೆಪಿ ನಿಯೋಗವು ಸೋಮವಾರ ರಾಜ್ಯಪಾಲರನ್ನು ಭೇಟಿ ಮಾಡಿ ಗಮನ ಸೆಳೆಯಿತು. ಬಳಿಕ ಗೋವಿಂದ ಕಾರಜೋಳ ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು. ನೇಮಕಾತಿ ಇಲ್ಲದೇ ವಿದ್ಯಾವಂತ ಯುವಜನತೆ ನಿರಾಶರಾಗಿದ್ದಾರೆ. ಅವರು ಹತಾಶರಾಗಿದ್ದು, ಅವರನ್ನು ನಿರಾಶರಾಗಲು, ಹತಾಶರಾಗಲು ಬಿಡಬಾರದು. ನಾವು ನೇಮಕಾತಿಯ ಪರವಾಗಿದ್ದೇವೆ. ಒಳ ಮೀಸಲಾತಿ ಕುರಿತ ಸುಪ್ರೀಂ ಕೋರ್ಟಿನ ಆದೇಶ ಪಾಲಿಸಬೇಕು. ವರದಿಗಳನ್ನು ಗಮನದಲ್ಲಿ ಇಟ್ಟುಕೊಂಡು ಒಳ ಮೀಸಲಾತಿ ಮಾಡಬೇಕಿತ್ತು. ತರಾತುರಿಯಲ್ಲಿ ಸಂಜೆ 6 ಗಂಟೆಗೆ ಒಳ ಮೀಸಲಾತಿ ಬಿಲ್ ಮಂಡಿಸಿ, ಚರ್ಚೆ ಇಲ್ಲದೇ ಮಂಜೂರು ಮಾಡಿಕೊಂಡು ಓಡಿ ಹೋದದ್ದನ್ನು ಖಂಡಿಸುವುದಾಗಿ ತಿಳಿಸಿದರು.

ಎಸ್‍ಇಪಿ, ಟಿಎಸ್‍ಪಿ ಹಣ ಅನ್ಯ ಉದ್ದೇಶಕ್ಕೆ ಬಳಸಿದರೆ ಹೋರಾಟ: ಎಸ್‍ಇಪಿ, ಟಿಎಸ್‍ಪಿಯ 39 ಸಾವಿರ ಕೋಟಿ ಮೊತ್ತವನ್ನು ಸಿದ್ದರಾಮಯ್ಯನವರ ಸರ್ಕಾರ ಬೇರೆ ಉದ್ದೇಶಕ್ಕೆ ಬಳಸಿದೆ ಎಂದು ಟೀಕಿಸಿದ ಅವರು, ಹೊಸ ಬಜೆಟ್‍ನಲ್ಲಿ ನೀಡುವ 42 ಸಾವಿರ ಕೋಟಿ ಮೊತ್ತವನ್ನು ಗ್ಯಾರಂಟಿಗಳು, ಅನ್ಯ ಉದ್ದೇಶಕ್ಕೆ ಬಳಸಬಾರದು. ಅದು ಕೇವಲ ಎಸ್‍ಸಿ, ಎಸ್‍ಟಿ ಜನಾಂಗದ ಮಕ್ಕಳ ಉದ್ಯೋಗ, ಶಿಕ್ಷಣ, ಭೂ ಒಡೆತನ, ಗಂಗಾ ಕಲ್ಯಾಣ ಸೇರಿ ಅವರ ಅಭಿವೃದ್ಧಿಗೆ ಬಳಸಬೇಕು ಎಂದು ಆಗ್ರಹಿಸಿದರು. ಗ್ಯಾರಂಟಿಗಳು, ಅನ್ಯ ಉದ್ದೇಶಕ್ಕೆ ಈ ಹಣ ಬಳಸಿದರೆ ಸರಕಾರದ ವಿರುದ್ಧ ಹೋರಾಟ ಮಾಡುವುದಾಗಿ ಎಚ್ಚರಿಸಿದರು.

ರಾಜ್ಯದಲ್ಲಿ ಎಸ್‍ಸಿ ಪಟ್ಟಿಯಲ್ಲಿ ಬರುವ 101 ಜಾತಿಗೆ ಸಮರ್ಪಕವಾಗಿ ಮೀಸಲಾತಿ ಸೌಲಭ್ಯ ದೊರಕುತ್ತಿಲ್ಲ. ಮಾದಿಗರ ಸಮುದಾಯದವರು ಹಲವು ದಶಕಗಳಿಂದ ಒಳ ಮೀಸಲಾತಿಗಾಗಿ ಹೋರಾಟ ಮಾಡುತ್ತಿದ್ದರು. ಕೇಂದ್ರದ ನರೇಂದ್ರ ಮೋದಿಜೀ ಅವರ ಸರ್ಕಾರವು ಸುಪ್ರೀಂ ಕೋರ್ಟಿನಲ್ಲಿ ಅಫಿಡವಿಟ್ ಹಾಕಿಸಿ, ಸಾಲಿಸಿಟರ್ ಜನರಲ್, ಅಟಾರ್ನಿ ಜನರಲ್ ಅವರು ಸ್ವತಃ ಕೋರ್ಟ್ ಮುಂದೆ ಹಾಜರಾಗಿ ವಾದ ಮಂಡಿಸಿದ್ದರು. ಮೋದಿಜೀ ಅವರ ಸರ್ಕಾರವು ಸಾಮಾಜಿಕ ನ್ಯಾಯಕ್ಕೆ ಬದ್ಧವಾಗಿದೆ. ಒಳ ಮೀಸಲಾತಿ ಕೊಡಲು ಒಪ್ಪಿಗೆ ಇದೆ. ಸುಪ್ರೀಂ ಕೋರ್ಟ್ ಆಗಸ್ಟ್ 1, 2024 ರಂದು ಆದೇಶ ಮಾಡಿದೆ. ಒಳ ಮೀಸಲಾತಿ ಕೊಡಲು ರಾಜ್ಯ ಸರಕಾರಕ್ಕೆ ಅಧಿಕಾರ ಇದೆ ಎಂದು ತಿಳಿಸಿದೆ ಎಂದರು.

ಸರ್ವ ಪಕ್ಷಗಳ ಅಭಿಪ್ರಾಯ ಪಡೆದಿಲ್ಲ: ಸಿದ್ದರಾಮಯ್ಯ ಸರ್ಕಾರವು ಬಿಲ್ ಮಂಡಿಸುವ ಮೊದಲು ಸರ್ವ ಪಕ್ಷಗಳ ಅಭಿಪ್ರಾಯ ಪಡೆಯಲಿದೆ ಎಂಬ ನಿರೀಕ್ಷೆ ನಮ್ಮದಾಗಿತ್ತು. ಸಿದ್ದರಾಮಯ್ಯನವರ ಸರ್ಕಾರವು ಏಕಪಕ್ಷೀಯವಾಗಿ ನಿರ್ಣಯ ಮಾಡಿತು. ಯಾವುದನ್ನೂ ಶಾಸನಬದ್ಧವಾಗಿ, ಸಂವಿಧಾನದ ಆಶಯಕ್ಕೆ ಅನುಗುಣವಾಗಿ, ಮಾಧುಸ್ವಾಮಿ ಅವರ ವರದಿಯಂತೆಯೂ ಮಾಡಿಲ್ಲ. ನ್ಯಾಯಮೂರ್ತಿ ನಾಗಮೋಹನದಾಸ್ ವರದಿಯಂತೆಯೂ ಮಾಡಿಲ್ಲ ಎಂದು ಟೀಕಿಸಿದರು.

ನ್ಯಾಯಮೂರ್ತಿ ನಾಗಮೋಹನದಾಸ್ ವರದಿಯನ್ನು ಗಾಳಿಗೆ ತೂರಿ, 3 ಕ್ಯಾಟಗರಿ ಮಾಡಿ, ಖಾಜಿ ನ್ಯಾಯ ಮಾಡಿದ್ದಾರೆ. ಇದರಡಿ ಅಲೆಮಾರಿ ಜನಾಂಗಕ್ಕೆ ದೊಡ್ಡ ಅನ್ಯಾಯ ಮಾಡಿದ್ದಾರೆ. ಯಾವುದೇ ಕಾರಣಕ್ಕೂ ನೇಮಕಾತಿ ನಿಲ್ಲಬಾರದು. ಬಡ್ತಿಯಲ್ಲಿ ಮೀಸಲಾತಿ ಸಿಗಬೇಕು ಎಂದು ಮಾನ್ಯ ರಾಜ್ಯಪಾಲರಿಗೆ ಮನವಿ ಮಾಡಿದ್ದಾಗಿ ಹೇಳಿದರು.

ಮಾದಿಗ ಉಪ ಜಾತಿಗಳಿಗೆ ಅನ್ಯಾಯ: ಕೇಂದ್ರದ ಮಾಜಿ ಸಚಿವ ಎ. ನಾರಾಯಣಸ್ವಾಮಿ ಅವರು ಮಾತನಾಡಿ, ಶೋಷಿತರಲ್ಲಿ ಶೋಷಿತರಾಗಿರುವ, 78 ವರ್ಷಗಳಲ್ಲಿ ರಾಜ್ಯ, ಕೇಂದ್ರದ ಯೋಜನೆಗಳು ಲಭ್ಯವಿಲ್ಲದೇ, ಸೊರಗಿದ ಸಮಾಜಗಳಿಗೆ ವಿಶೇಷ ಮೀಸಲಾತಿ ನೀಡುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ರಾಜ್ಯದಲ್ಲಿ ಸರ್ಕಾರವು ನ್ಯಾ.ನಾಗಮೋಹನ್‍ದಾಸ್ ವರದಿಯನ್ನು ಜಾರಿ ಮಾಡಬೇಕಿತ್ತು. ಅದನ್ನು ತಿರಸ್ಕರಿಸಿ ರಾಜಕೀಯ ತೀರ್ಮಾನ ತೆಗೆದುಕೊಂಡ ರಾಜ್ಯ ಸರಕಾರವು ಈ ರಾಜ್ಯದ ಮಾದಿಗ ಉಪ ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಗ್ಯಾರಂಟಿಗೆ ಎಸ್‍ಸಿ, ಎಸ್‍ಟಿ ಹಣ ಬಳಸುತ್ತಿದ್ದಾರೆ. ರಾಜ್ಯದ ಎಲ್ಲ ನಿಗಮಗಳೂ ಸೊರಗಿದ್ದು, ಅವುಗಳಿಗೆ ಬಾಗಿಲು ಹಾಕಿದ್ದಾರೆ; ನಿಗಮಗಳಿಗೆ ಬೀಗ ಹಾಕಿದ್ದಾರೆ. ಕೇವಲ ಶಿಕ್ಷಣ, ಉದ್ಯೋಗವಲ್ಲ.‌ ರೋಸ್ಟರನ್ನೂ ಜಾರಿ ಮಾಡಿ ಎಂದು ಮುಖ್ಯಮಂತ್ರಿಗಳನ್ನು ಒತ್ತಾಯಿಸುವುದಾಗಿ ಹೇಳಿದರು.

ರಾಜ್ಯಪಾಲರಿಗೆ ಮನವಿ ಸಲ್ಲಿಸಿದ ನಿಯೋಗದಲ್ಲಿ ಮಾಜಿ ಉಪಮುಖ್ಯಮಂತ್ರಿ ಮತ್ತು ಸಂಸದ ಗೋವಿಂದ ಕಾರಜೋಳ, ಕೇಂದ್ರದ ಮಾಜಿ ಸಚಿವ ಎ. ನಾರಾಯಣಸ್ವಾಮಿ, ಶಾಸಕ ದುರ್ಯೋಧನ ಐಹೊಳೆ, ಎಸ್‍ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಹೂಡಿ ಮಂಜುನಾಥ್, ನಿವೃತ್ತ ಐಎಎಸ್ ಅಧಿಕಾರಿ ಲಕ್ಷ್ಮೀನಾರಾಯಣ್ ಅವರು ಉಪಸ್ಥಿತರಿದ್ದರು.

ಇದನ್ನೂ ಓದಿ: ರೈತ ಸಂಘಟನೆಗಳ ಜೊತೆ ಸಿಎಂ ಸಭೆ: ರೈತರನ್ನ ವಿವಾಹವಾಗುವವರಿಗೆ 10 ಲಕ್ಷ ರೂ. ಠೇವಣಿ, ಸರ್ಕಾರಿ ಕೆಲಸದಲ್ಲಿ ಶೇ 20ರಷ್ಟು ಮೀಸಲಾತಿಗೆ ಮನವಿ