ಹಾವೇರಿ: ಸೈಡ್ ಕೊಡಲಿಲ್ಲವೆಂದು KSRTC ಬಸ್ ಚಾಲಕನ ಮೇಲೆ ಹಲ್ಲೆ ನಡೆಸಿದ ಬೈಕ್ ಸವಾರರು, ದೂರು ದಾಖಲು
ಎದೆಗೆ, ತಲೆಗೆ ಹಾಗೂ ಹೊಟ್ಟೆಗೆ ಹಲ್ಲೆ ನಡೆಸಿರುವ ಆರೋಪಿಗಳು ಸಮವಸ್ತ್ರ ಹರಿದು ಕೆಲಸಕ್ಕೆ ಅಡ್ಡಿಪಡಿಸಿದ್ದಾರೆಂದು ಚಾಲಕ ದೂರು ನೀಡಿದ್ದಾರೆ.

Published : August 30, 2026 at 10:53 AM IST
ಹಾವೇರಿ: ಬೈಕ್ಗೆ ಸೈಡ್ ಕೊಡಲಿಲ್ಲ ಎನ್ನುವ ಕಾರಣಕ್ಕೆ ಬೈಕ್ ಸವಾರರು ಸಾರಿಗೆ ಇಲಾಖೆಯ ಚಾಲಕನಿಗೆ ಹಲ್ಲೆ ಮಾಡಿದ ಘಟನೆ ಹಾವೇರಿಯ ಜಿ.ಹೆಚ್. ಕಾಲೇಜ್ ಸ್ಟಾಪ್ ಬಳಿ ಘಟನೆ ನಡೆದಿದೆ.
ಗದಗನಿಂದ ಹಾವೇರಿಗೆ ಬರುತ್ತಿದ್ದ ವೇಳೆ ಜಿ. ಹೆಚ್. ಕಾಲೇಜ್ ಬಳಿ ಬಸ್ ನಿಲ್ಲಿಸಿದಾಗ ಸೈಡ್ ಕೊಡಲಿಲ್ಲ ಎಂದು ಬೈಕ್ ಸವಾರರು ಏಕಾಏಕಿ ಡ್ರೈವರ್ ಜೊತೆಗೆ ಜಗಳವಾಡಿ ಹಲ್ಲೆ ಮಾಡಿದ್ದಾರೆ. ಹಲ್ಲೆಗೆ ಒಳಗಾದ ಸಾರಿಗೆ ಇಲಾಖೆಯ ಚಾಲಕನನ್ನು 43 ವರ್ಷದ ಸುನೀಲ್ ಈಶ್ವರಪ್ಪ ಗದಗ ಎಂದು ಗುರುತಿಸಲಾಗಿದೆ. ಚಾಲಕನನ್ನು ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಆರೋಪಿತರನ್ನು 20 ವರ್ಷದ ಗಣೇಶ್ ಮತ್ತು 25 ವರ್ಷದ ಬಾಲಾಜಿ ಎಂದು ಗುರುತಿಸಲಾಗಿದೆ. ಆರೋಪಿಗಳು ಸವಣೂರು ತಾಲೂಕು ಹುರುಳಿಕೊಪ್ಪಿ ಗ್ರಾಮದವರು. ಹಾವೇರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಾಯಾಳು ಸುನೀಲ್ ಈಶ್ವರಪ್ಪ ಗದಗ ಅವರು ನೀಡಿರುವ ದೂರಿನಲ್ಲಿ, ಹಾವೇರಿಯ ಎನ್. ಡಬ್ಲೂ.ಕೆ.ಆರ್.ಟಿ.ಸಿ. ಡಿಪೋದಲ್ಲಿ ತಾನು ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ತಮಗೆ ಹಂಚಿಕೆ ಮಾಡಿದ ಬಸ್ನಲ್ಲಿ ಆಗಸ್ಟ್ 29ರಂದು ಸಂಜೆ 6:30ಕ್ಕೆ ಹೋಗುತ್ತಿದ್ದೆವು. ಈ ವೇಳೆ ಆರೋಪಿತರು ತಮ್ಮ ಬೈಕ್ನಲ್ಲಿ ಏಕಾಏಕಿ ಬಂದು ತಮಗೆ ಸೈಡ್ ಕೊಡಲಿಲ್ಲ ಅಂತಾ ಕರ್ತವ್ಯ ಮೇಲಿದ್ದ ನನ್ನ ಜತೆ ತಂಟೆ ತೆಗೆದು ಎದೆಗೆ, ತಲೆಗೆ ಹಾಗೂ ಹೊಟ್ಟೆಗೆ ಕೈಯಿಂದ ಹಲ್ಲೆ ನಡೆಸಿದ್ದು, ಸಮವಸ್ತ್ರ ಹರಿದು ಕೆಲಸಕ್ಕೆ ಅಡ್ಡಿಪಡಿಸಿ ಅವಾಚ್ಯ ಶಬ್ಧಗಳಿಂದ ಬೈದಾಡಿ ಜೀವ ಬೆದರಿಕೆ ಹಾಕಿ ಅಪರಾಧ ಎಸಗಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ಕೆಪಿಎಸ್ಸಿ ಅಕ್ರಮ: ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಸಿಐಡಿ ವಶಕ್ಕೆ

