ETV Bharat / state

ಉದ್ಯೋಗ ನಿರೀಕ್ಷೆಯಲ್ಲಿ ಎಂ.ಕಾಂ ಪದವೀಧರೆ ದಿವ್ಯಾಂಗ ಯುವತಿ ಭಾಗ್ಯಶ್ರೀ ಕುಲಾಲ್

10 ವರ್ಷಗಳ ಕಾಲ ನಿರಂತರವಾಗಿ ಸಾಗಿದ ತಾಯಿಯ ಪ್ರೀತಿ, ತ್ಯಾಗ ಮತ್ತು ಸಂಕಲ್ಪಕ್ಕೆ ವಿಶೇಷಚೇತನ ಮಗಳು ಗಳಿಸಿದ ಪದವಿ, ಅಂಕಗಳೇ ಸಿಕ್ಕ ಫಲವಾಗಿದೆ.

Bhagyashree Kulal with mother
ತಾಯಿ ಜೊತೆ ಭಾಗ್ಯಶ್ರೀ ಕುಲಾಲ್ (ETV Bharat)
author img

By ETV Bharat Karnataka Team

Published : July 6, 2026 at 1:02 PM IST

2 Min Read
Choose ETV Bharat

ಬಂಟ್ವಾಳ (ದಕ್ಷಿಣ ಕನ್ನಡ): ಬಂಟ್ವಾಳ ತಾಲೂಕಿನ ಕುರಿಯಾಳ ಗ್ರಾಮದ ದುರ್ಗಾನಗರದ ಭಾಗ್ಯಶ್ರೀ ಕುಲಾಲ್ ಅವರ ಬದುಕು ಕೇವಲ ಒಬ್ಬ ವಿಕಲಚೇತನ ಯುವತಿಯ ವೈಯಕ್ತಿಕ ಕಥೆಯಲ್ಲ. ಅದು ತಾಯಿಯ ಅಚಲ ತ್ಯಾಗ, ಕುಟುಂಬದ ನಿರಂತರ ಹೋರಾಟ ಮತ್ತು ಶಿಕ್ಷಣದ ಮೇಲೆ ಇಟ್ಟ ಅಡಿಗಡಿಗೆಯ ನಂಬಿಕೆಯ ಜೀವಂತ ಸಾಕ್ಷಿಯಾಗಿದೆ.

ಹುಟ್ಟಿನಿಂದಲೇ ಸೊಂಟದ ಕೆಳಭಾಗ ಸಂಪೂರ್ಣ ನಿಶಕ್ತಗೊಂಡಿರುವ ಕಾರಣ ಅವರಿಗೆ ಸ್ವತಂತ್ರವಾಗಿ ನಡೆಯಲು ಸಾಧ್ಯವಿಲ್ಲ. ದೈನಂದಿನ ಸಣ್ಣ ಕೆಲಸಕ್ಕೂ ಮತ್ತೊಬ್ಬರ ನೆರವು ಅನಿವಾರ್ಯವಾಗಿದ್ದರೂ, ಅವರ ಕನಸುಗಳು ಎಂದಿಗೂ ಕುಗ್ಗಲಿಲ್ಲ.

ಜೀವನದ ಒತ್ತಡಗಳ ನಡುವೆಯೂ ಮಗಳಿಗಾಗಿ ನಿಂತ ತಾಯಿ: ಭಾಗ್ಯಶ್ರೀ ಅವರ ತಂದೆ ಕೇಶವ ಕುಲಾಲ್ ಅವರೂ ವಿಕಲಚೇತನರು. ಊರಿನ ಪುಟ್ಟ ಅಂಗಡಿಯ ಅಲ್ಪ ಆದಾಯವೇ ಕುಟುಂಬದ ಜೀವನಾಧಾರ. ತಾಯಿ ರಾಜೀವಿ ದಿನವಿಡೀ ಬೀಡಿ ಕಟ್ಟಿ ಮನೆ ನಡೆಸಲು ಸಹಾಯ ಮಾಡುತ್ತಾರೆ. ಬಡತನ, ಅಂಗವೈಕಲ್ಯ ಮತ್ತು ಜೀವನದ ಒತ್ತಡಗಳ ನಡುವೆಯೂ ಮಗಳ ಶಿಕ್ಷಣವನ್ನು ನಿಲ್ಲಿಸದೆ ಮುಂದುವರಿಸುವುದು ಅವರ ಬದುಕಿನ ಏಕೈಕ ಗುರಿಯಾಗಿತ್ತು.

ಬಂಟ್ವಾಳದ ಲೊರೆಟ್ಟೋ ಪ್ರಾಥಮಿಕ ಮತ್ತು ಪ್ರೌಢ ಪ್ರೌಢಶಾಲೆಯವರೆಗೆ ಸುಮಾರು 10 ವರ್ಷಗಳ ಕಾಲ ಪ್ರತಿದಿನ ಬೆಳಗ್ಗೆ ತಾಯಿ ರಾಜೀವಿ ಮಗಳನ್ನು ತನ್ನ ಸೊಂಟದಲ್ಲಿ ಎತ್ತಿಕೊಂಡು ಬಾಡಿಗೆ ರಿಕ್ಷಾದಲ್ಲಿ ಕರೆದುಕೊಂಡು ಹೋಗುತ್ತಿದ್ದರು. ಶಾಲೆಯಲ್ಲಿ ಭಾಗ್ಯಶ್ರೀ ಪಾಠ ಕೇಳುತ್ತಿದ್ದರೆ, ತಾಯಿ ಶಾಲೆಯ ಆವರಣದಲ್ಲಿ ಕುಳಿತು ಬೀಡಿ ಕಟ್ಟುತ್ತಿದ್ದರು. ಸಂಜೆ ಮತ್ತೆ ಅದೇ ಕೈಗಳಲ್ಲಿ ಮಗಳನ್ನು ಮನೆಗೆ ಕರೆತರುತ್ತಿದ್ದರು. ಇದು ಒಂದೆರಡು ದಿನಗಳ ತ್ಯಾಗವಲ್ಲ 10 ವರ್ಷಗಳ ಕಾಲ ನಿರಂತರವಾಗಿ ಸಾಗಿದ ತಾಯಿಯ ಪ್ರೀತಿ, ತ್ಯಾಗ ಮತ್ತು ಸಂಕಲ್ಪದ ಪಯಣ. ಆ ತ್ಯಾಗಕ್ಕೆ ಫಲವೂ ದೊರೆಯಿತು. ಭಾಗ್ಯಶ್ರೀ ಎಸ್‌ಎಸ್‌ಎಲ್‌ಸಿಯಲ್ಲಿ ಶೇ. 75 ಅಂಕ ಗಳಿಸಿದ್ದರು.

ತಾಯಿಯ ತ್ಯಾಗಕ್ಕೆ ಸಿಕ್ಕ ಫಲ: ನಂತರ ಸಂಘ-ಸಂಸ್ಥೆಗಳ ಸಹಕಾರದಿಂದ ಅವರ ಶಿಕ್ಷಣ ಮುಂದುವರಿಯಿತು. ಬಂಟ್ವಾಳ ಎಸ್‌ವಿಎಸ್ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣವನ್ನು ಶೇ.78 ಅಂಕ ಮತ್ತು ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನ, ಪದವಿ ಶಿಕ್ಷಣದಲ್ಲಿ ಶೇಕಡಾ 80 ಅಂಕಗಳೊಂದಿಗೆ ಪೂರ್ಣಗೊಳಿಸಿದರು. ಎಂಆರ್‌ಪಿಎಲ್ ಸಂಸ್ಥೆಯ ಅಮೂಲ್ಯ ವಿದ್ಯಾರ್ಥಿವೇತನದ ಸಹಕಾರದೊಂದಿಗೆ ಬಳಿಕ ವಾಮದಪದವು ಸರ್ಕಾರಿ ಕಾಲೇಜಿನಲ್ಲಿ ಎಂ.ಕಾಂ. ಪದವಿಯನ್ನು ಶೇ.70 ಅಂಕಗಳೊಂದಿಗೆ ಯಶಸ್ವಿಯಾಗಿ ಪೂರ್ಣಗೊಳಿಸಿದರು. ಬಂಟ್ವಾಳ ತಾಲೂಕು ಕುಲಾಲ ಸಂಘ, ದೃತಿ ವಿದ್ಯಾರ್ಥಿವೇತನ, ಪಂಚಮುಖಿ ಕಂಬೈನ್ಸ್ ಬಿ.ಸಿ. ರೋಡ್ ಹೀಗೆ ಹಲವಾರು ಸ್ಥಳೀಯ ಸಂಘಟನೆಗಳ ನೆರವಿನಿಂದ ಈಕೆ ಉನ್ನತ ಶಿಕ್ಷಣ ಪಡೆಯುವಂತಾಯಿತು.

ಈ ಕುಟುಂಬದಲ್ಲಿ ಭಾಗ್ಯಶ್ರೀ ಅವರ ಅಕ್ಕ ವಿದ್ಯಾಶ್ರೀ ಕೂಡ ಉನ್ನತ ವಿದ್ಯಾರ್ಹತೆ ಹೊಂದಿದ್ದಾರೆ. ಪಿಯುಸಿ, ಪದವಿ ಹಾಗೂ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರುವ ಅವರು ಕೆ-ಸೆಟ್ ಮತ್ತು ನೆಟ್ ಪರೀಕ್ಷೆಗಳಲ್ಲೂ ಉತ್ತೀರ್ಣರಾಗಿದ್ದಾರೆ. ಆದರೆ ಅವರಿಗೂ ಸ್ಥಿರ ಉದ್ಯೋಗ ದೊರೆತಿಲ್ಲ. ಒಂದೇ ಮನೆಯ ಇಬ್ಬರು ಪ್ರತಿಭಾವಂತ ಯುವತಿಯರು ಇಂದು ತಮ್ಮ ಅರ್ಹತೆಗೆ ತಕ್ಕ ಉದ್ಯೋಗಕ್ಕಾಗಿ ನಿರೀಕ್ಷೆಯಲ್ಲಿದ್ದಾರೆ.

ಇಷ್ಟೊಂದು ಸಾಧನೆ ಮಾಡಿದರೂ ಭಾಗ್ಯಶ್ರೀ ಇಂದು ಮನೆಯ ನಾಲ್ಕು ಗೋಡೆಗಳ ನಡುವೆ ಉದ್ಯೋಗಕ್ಕಾಗಿ ಕಾಯುತ್ತಿದ್ದಾರೆ. ಉತ್ತಮ ಅಂಕಗಳು, ಉನ್ನತ ವಿದ್ಯಾರ್ಹತೆ ಮತ್ತು ದುಡಿಯುವ ಮನಸ್ಸು ಇದ್ದರೂ ಅವಕಾಶ ಮಾತ್ರ ದೊರೆತಿಲ್ಲ. ಅಂಗವೈಕಲ್ಯವು ಅವರ ಸಾಮರ್ಥ್ಯವನ್ನು ಕಡಿಮೆ ಮಾಡಿಲ್ಲ. ಆದರೆ ಉದ್ಯೋಗಾವಕಾಶಗಳ ಕೊರತೆ ಅವರ ಬದುಕಿನ ಹಾದಿಗೆ ಅಡ್ಡಿಯಾಗುತ್ತಿದೆ.

ಭಾಗ್ಯಶ್ರೀ ಅವರ ಬದುಕು ಒಬ್ಬರ ವೈಯಕ್ತಿಕ ಹೋರಾಟವಲ್ಲ; ಅದು ಶಿಕ್ಷಣದ ಮೇಲೆ ನಂಬಿಕೆ ಇಟ್ಟು ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸುತ್ತಿರುವ ನೂರಾರು ವಿಕಲಚೇತನ ಯುವತಿಯರ ಪ್ರತಿನಿಧಿ. ಪ್ರತಿಭೆ, ಪರಿಶ್ರಮ ಮತ್ತು ವಿದ್ಯಾರ್ಹತೆ ಇದ್ದರೂ ಅವಕಾಶಗಳ ಕೊರತೆಯಿಂದ ಅವರ ಕನಸುಗಳು ನಿಂತುಹೋಗುತ್ತಿರುವುದು ಇಂದಿನ ಸಮಾಜದ ಕಠಿಣ ವಾಸ್ತವವಾಗಿದೆ.

"ನಮ್ಮಂತಹ ವಿಕಲಚೇತನರಿಗೆ ದಯೆ ಬೇಡ. ನಮ್ಮ ವಿದ್ಯಾರ್ಹತೆ ಮತ್ತು ಸಾಮರ್ಥ್ಯಕ್ಕೆ ತಕ್ಕ ಉದ್ಯೋಗ ಸಾಕು. ನಾವು ಯಾರಿಗೂ ಹೊರೆಯಾಗದೆ ಸ್ವಾಭಿಮಾನದಿಂದ ಬದುಕಲು ಬಯಸುತ್ತೇವೆ" ಎನ್ನುತ್ತಾರೆ ಭಾಗ್ಯಶ್ರೀ ಕುಲಾಲ್.

ಇದನ್ನೂ ಓದಿ: ಅಪ್ಪನ ಹೆಗಲೇ ಮಗಳ ಸಾಧನೆಗೆ ಮೆಟ್ಟಿಲು: 1ನೇ ತರಗತಿಯಿಂದ ಪದವಿವರೆಗೂ ಮಗಳ ಹೊತ್ತು ಓದಿಸಿದ ತಂದೆ