ETV Bharat / state

ಬೆಳಗಾವಿ ಎಪಿಎಂಸಿಯಲ್ಲಿ ಈರುಳ್ಳಿಗೆ ಉತ್ತಮ ಬೆಲೆ: ಕ್ವಿಂಟಾಲ್​ಗೆ 4500 ರೂ!: ರೈತರ ಮೊಗದಲ್ಲಿ ಮಂದಹಾಸ

ಕಳೆದ ಎರಡು ವರ್ಷ ಒಳ್ಳೆಯ ದರ ಸಿಗದೇ ಬೆಳಗಾವಿ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಈರುಳ್ಳಿ ಬೆಳೆಗಾರರು ಕಣ್ಣೀರು ಸುರಿಸಿದ್ದರು. ಆದರೆ, ಈ ಬಾರಿ ಒಳ್ಳೆಯ ದರ ಸಿಕ್ಕಿದ್ದಕ್ಕೆ ಸಂತಸಗೊಂಡಿದ್ದಾರೆ. ವರದಿ: ಸಿದ್ದನಗೌಡ ಪಾಟೀಲ್

belagavi  Belgaum APMC  ಈರುಳ್ಳಿ ಬೆಲೆ onion Prize
ಬೆಳಗಾವಿ ಎಪಿಎಂಸಿಯಲ್ಲಿ ಈರುಳ್ಳಿಗೆ ಉತ್ತಮ ಬೆಲೆ (ETV Bharat)
author img

By ETV Bharat Karnataka Team

Published : August 31, 2026 at 7:44 PM IST

2 Min Read
Choose ETV Bharat

ಬೆಳಗಾವಿ: ಎರಡು ವರ್ಷಗಳ ಬಳಿಕ ಬೆಳಗಾವಿ ಎಪಿಎಂಸಿಯಲ್ಲಿ ಈರುಳ್ಳಿಗೆ ಉತ್ತಮ ದರ ಸಿಕ್ಕಿದ್ದು, ಕ್ವಿಂಟಾಲ್​ಗೆ 4,500 ರೂ.ವರೆಗೆ ಮಾರಾಟ ಆಗುತ್ತಿದೆ. ಇದರಿಂದ ರೈತರ ಮೊಗದಲ್ಲಿ ಸಂತಸ ಮೂಡಿದೆ. ಆದರೆ, ಈ ದರ ಖಾಯಂ ಆಗಿ ಸಿಗುವಂತಾಗಬೇಕು. ಈರುಳ್ಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿ ಪಡಿಸುವಂತೆ ರೈತರು ಒತ್ತಾಯಿಸಿದ್ದಾರೆ.

ಕಳೆದ ಎರಡು ವರ್ಷ ಒಳ್ಳೆಯ ದರ ಸಿಗದೇ ಬೆಳಗಾವಿ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಈರುಳ್ಳಿ ಬೆಳೆಗಾರರು ಕಣ್ಣೀರು ಸುರಿಸಿದ್ದರು. ಆದರೆ, ಈ ಬಾರಿ ಒಳ್ಳೆಯ ದರ ಸಿಕ್ಕಿದ್ದಕ್ಕೆ ಸಂತಸಗೊಂಡಿದ್ದಾರೆ.

ಮಳೆ ಕೊರತೆಯಿಂದ ನಿರೀಕ್ಷಿತ ಪ್ರಮಾಣದಲ್ಲಿ ಮಾರುಕಟ್ಟೆಗೆ ಈರುಳ್ಳಿ ಬಾರದ ಹಿನ್ನೆಲೆಯಲ್ಲಿ ದರದಲ್ಲಿ ಏರಿಕೆ ಕಂಡು ಬಂದಿದೆ. ಹೀಗಾಗಿ, ಸದ್ಯ ಕ್ವಿಂಟಾಲ್​ಗೆ 3,500 ರೂಪಾಯಿಂದ 4,500 ರೂ. ವರೆಗೆ ಮಾರಾಟ ಆಗುತ್ತಿದೆ. ಕಳೆದ 15 ದಿನಗಳ ಹಿಂದೆ ಪ್ರತಿ ಕ್ವಿಂಟಾಲ್​ಗೆ 2000 - 2500 ರೂ. ದರವಿತ್ತು. ಇನ್ನು ಹೋದ ವರ್ಷ ಇದೇ ಸಮಯಕ್ಕೆ 1000-1500 ರೂ.ವರೆಗೆ ರೈತರು ಈರುಳ್ಳಿ ಮಾರಾಟ ಮಾಡಿದ್ದರು.

ಈರುಳ್ಳಿಗೆ ಉತ್ತಮ ಬೆಲೆ: ರೈತರಲ್ಲಿ ಸಂತಸ (ETV Bharat)

ಬೆಳಗಾವಿಯಿಂದ ಬೇರೆ ರಾಜ್ಯಗಳಿಗೆ ರಫ್ತು: ಬೆಳಗಾವಿ ಎಪಿಎಂಸಿಗೆ ವಿಜಯಪುರ, ಬಾಗಲಕೋಟೆ ಜಿಲ್ಲೆಯ ಮುಧೋಳ, ಲೋಕಾಪುರ ಸೇರಿದಂತೆ ಮಹಾರಾಷ್ಟ್ರ ರಾಜ್ಯದ ವಿವಿಧ ಭಾಗಗಳಿಂದ ರೈತರು ಈರುಳ್ಳಿ ಮಾರಾಟಕ್ಕೆ ಬರುತ್ತಾರೆ. ಇಲ್ಲಿಂದ ಗೋವಾ, ಪಶ್ಚಿಮ ಬಂಗಾಳ, ಅಸ್ಸಾಂ, ತೆಲಂಗಾಣ, ಆಂಧ್ರಪ್ರದೇಶ ಸೇರಿ ಮತ್ತಿತರ ಪ್ರದೇಶಗಳಿಗೆ ಈರುಳ್ಳಿ ರಫ್ತಾಗುತ್ತದೆ.

ಈಟಿವಿ ಭಾರತ ಜೊತೆಗೆ ಮಾತನಾಡಿದ ಮುಧೋಳ ತಾಲೂಕಿನ ಮಂಟೂರ ಗ್ರಾಮದ ರೈತ ಕಲಮೇಶ ಉಳ್ಳಾಗಡ್ಡಿ, ಈ ಹಿಂದೆ 25 ಕ್ವಿಂಟಲ್ ಈರುಳ್ಳಿಗೆ ಕೇವಲ 10 ಸಾವಿರ ರೂ. ಮಾತ್ರ ಬಂದಿತ್ತು. ಈ ಸಲ 15 ಕ್ವಿಂಟಲ್ ತೆಗೆದುಕೊಂಡು ಬಂದು, 60 ಸಾವಿರ ರೂ. ಒಯ್ಯುತ್ತಿದ್ದೇವೆ. ಹಿಂದೆ ಬಹಳಷ್ಟು ನಷ್ಟ ಅನುಭವಿಸಿದ್ದೇವು. ಈ ಬಾರಿ ದರ ಒಳ್ಳೆಯ ದರ ಸಿಕ್ಕಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಅದೇ ಮಂಟೂರ ಗ್ರಾಮದ ರೈತ ದಯಾನಂದ ಕಣಬೂರ ಮಾತನಾಡಿ, ಪ್ರತಿ ವರ್ಷವೂ ನಾವು ಈರುಳ್ಳಿ ಬೆಳೆಯುತ್ತೇವೆ. 2019ರಲ್ಲಿ ನಮಗೆ ಒಳ್ಳೆಯ ದರ ಸಿಕ್ಕಿತ್ತು. ಆಮೇಲೆ ಹೇಳಿಕೊಳ್ಳುವಂತ ಬೆಲೆ ಸಿಕ್ಕಿಲ್ಲ. 100 ರೂ. ಕ್ವಿಂಟಾಲ್ ಮಾರಿದ್ದೂ ಇದೆ. ಇದರಿಂದ ಈರುಳ್ಳಿ ತುಂಬಿದ್ದ ಚೀಲದ ಹಣವೂ ವಾಪಸ್​ ಬಂದಿರಲಿಲ್ಲ. ಈ ಸಲ ಏನೋ ದರ 3 ಸಾವಿರ ರೂಪಾಯಿಂದ 4500 ರೂ.ವರೆಗೆ ಇದೆ. ಇದರಿಂದ ನಾವು ಸ್ವಲ್ಪ ನಿಟ್ಟುಸಿರು ಬಿಟ್ಟಿದ್ದೇವೆ ಎಂದರು.

belagavi  Belgaum APMC  ಈರುಳ್ಳಿ ಬೆಲೆ onion Prize
ಬೆಳಗಾವಿ ಎಪಿಎಂಸಿಯಲ್ಲಿ ಈರುಳ್ಳಿಗೆ ಉತ್ತಮ ಬೆಲೆ (ETV Bharat)

ಈರುಳ್ಳಿಗೆ ಬೆಲೆ ನಿಗದಿಗೆ ಒತ್ತಾಯ: ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ನಾವು ಕೇಳಿಕೊಳ್ಳುವುದು ಏನೆಂದರೆ, ನಿಮ್ಮಿಂದ ನಮಗೆ ಸಾಲಮನ್ನಾ ಮಾಡುವುದು ಬೇಡ. ಯಾವುದೇ ರೀತಿ ಬಿಟ್ಟಿ ಭಾಗ್ಯ ಕೊಡುವುದೂ ಬೇಡ. ಎಲ್ಲ ವಸ್ತುಗಳಿಗೆ ಎಂಆರ್​ಪಿ ಫಿಕ್ಸ್ ಮಾಡಿದಂತೆ, ನಮ್ಮ ಈರುಳ್ಳಿ ಸೇರಿ ರೈತರ ಎಲ್ಲ ಬೆಳೆಗಳಿಗೆ ಎಂಆರ್​ಪಿ ನಿಗದಿಪಡಿಸಿ. ಇಷ್ಟು ಮಾಡಿದರೆ ಸಾಕು, ನಾವು ಆರಾಮವಾಗಿ ಕೃಷಿ ಮಾಡುತ್ತಾ ಬದುಕುತ್ತೇವೆ ಎಂದು ದಯಾನಂದ ಕಣಬೂರ ಮನವಿ ಮಾಡಿಕೊಂಡರು.

ವ್ಯಾಪಾರಿ ಮನೋಜಕುಮಾರ ಮತ್ತಿಕೊಪ್ಪ ಮಾತನಾಡಿ, ಬೆಳಗಾವಿ ಮಾರುಕಟ್ಟೆಯಲ್ಲಿ ಪ್ರತಿ ಶನಿವಾರ ಮತ್ತು ಬುಧವಾರ ಮುಕ್ತ ಹರಾಜು ಆಗುತ್ತದೆ. ಶನಿವಾರ 10 ಸಾವಿರ ಚೀಲದ ಆವಕ ಇತ್ತು. 3500 - 4500 ರೂ.ವರೆಗೆ ಕ್ವಿಂಟಲ್ ಈರುಳ್ಳಿ ಮಾರಾಟ ಆಗಿದೆ. ಹೋದ ವರ್ಷ ಇದೇ ಸಮಯಕ್ಕೆ 1000 - 1500 ರೂಪಾಯಿ ದರ ಇತ್ತು. ಹಾಗಾಗಿ, ಇದು ಒಳ್ಳೆಯ ದರ. ಹಾಗಾಗಿ, ಈರುಳ್ಳಿ ಬೆಳೆಗಾರರು ಖುಷಿ ಇದ್ದಾರೆ. ನಮ್ಮ ಬಳಿ ವಿಜಯಪುರ, ಬಾಗಲಕೋಟೆ, ಮಹಾರಾಷ್ಟ್ರದಿಂದ ಈರುಳ್ಳಿ ಮಾರಾಟಕ್ಕೆ ಬರುತ್ತದೆ. ನಮ್ಮ ರಾಜ್ಯಕ್ಕಿಂತ ಮಹಾರಾಷ್ಟ್ರ ಈರುಳ್ಳಿ ಒಳ್ಳೆಯ ಗುಣಮಟ್ಟ ಇರುತ್ತವೆ. ಹಾಗಾಗಿ, ಅಲ್ಲಿನ ಈರುಳ್ಳಿಗೆ ಸ್ವಲ್ಪ ದರ ಹೆಚ್ಚಿರುತ್ತದೆ ಎಂದು ಹೇಳಿದರು.

ಇದನ್ನೂ ಓದಿ: ದಿಢೀರ್ ಏರಿದ ಈರುಳ್ಳಿ ದರ: ಕರ್ನಾಟಕ ರೈತರ ಕಣ್ಣಲ್ಲಿ‌ ನೀರು, ಮಹಾರಾಷ್ಟ್ರ ರೈತರಿಗೆ ಬಂಪರ್​ ರೇಟ್​!