ETV Bharat / state

ಸಾವಿನ‌ ಸುದ್ದಿ‌ ಬಿತ್ತರಿಸುವಲ್ಲಿ‌ ಭಾವೈಕ್ಯತೆ ಮೆರೆಯುತ್ತಿರುವ ವೈದ್ಯ ದಂಪತಿ: ಮನೆ ಟೆರೆಸ್ ಮೇಲೆ ಮೈಕ್ ಮೂಲಕ ಘೋಷಣೆ

ಈ ವೈದ್ಯ ದಂಪತಿ ಯಾವುದೇ ಹಣ ತೆಗೆದುಕೊಳ್ಳದೆ ಉಚಿತವಾಗಿ ಮೃತರ ಹೆಸರನ್ನು ಅವರ ಮನೆ ಮೇಲೆ ಮೈಕ್​ನಲ್ಲಿ ಅನೌನ್ಸ್ ಮಾಡುತ್ತಾರೆ.

Doctor Couple Social Service
ವೈದ್ಯ ದಂಪತಿ ಸಮಾಜಸೇವೆ (ETV Bharat)
author img

By ETV Bharat Karnataka Team

Published : January 7, 2026 at 10:06 AM IST

5 Min Read
Choose ETV Bharat

ವಿಶೇಷ ವರದಿ: ಸಿದ್ದನಗೌಡ ಪಾಟೀಲ್​

ಬೆಳಗಾವಿ: ಮೊದಲೆಲ್ಲ ಸಾಮಾನ್ಯವಾಗಿ ಊರಲ್ಲಿ ಯಾರಾದರೂ‌ ನಿಧನರಾದರೆ ಮನೆ ಮನೆಗಳಿಗೆ ತೆರಳಿ ವಿಷಯ ಮುಟ್ಟಿಸಲಾಗುತ್ತಿತ್ತು. ಈಗ ಯಾರಿಗೂ ಮನೆಗಳಿಗೆ ಹೋಗುವಷ್ಟು ಸಮಯವಿಲ್ಲ. ಹಾಗಾಗಿ, ಬಹುತೇಕರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಾರೆ.

ಇದರ ನಡುವೆ ತಮ್ಮ ಮನೆ ಟೆರೆಸ್ ಮೇಲೆ ಲೌಡ್ ಸ್ಪೀಕರ್ ಮೂಲಕ ಸಾವಿನ ಸುದ್ದಿಯನ್ನು ಇಲ್ಲೊಂದು ವೈದ್ಯ ದಂಪತಿ ಬಿತ್ತರಿಸುವ ಅಪರೂಪದ ಕಾಯಕ ಮಾಡುತ್ತಿದ್ದಾರೆ. ಸರ್ವಧರ್ಮೀಯರ ಸಾವಿನ ಸುದ್ದಿ ಅನೌನ್ಸ್ ಮಾಡುವ ಮೂಲಕ ಭಾವೈಕ್ಯತೆ ಮೆರೆಯುತ್ತಿದ್ದಾರೆ. ಇವರ ಪವಿತ್ರ ಕಾಯಕ ಮೆಚ್ಚುಗೆ ಗಳಿಸಿದೆ.

ವೈದ್ಯ ದಂಪತಿಯ ಸಮಾಜಸೇವೆ (ETV Bharat)

ಅನಾದಿ ಕಾಲದಿಂದ ಹೆಚ್ಚಾಗಿ ಗ್ರಾಮೀಣ ಪ್ರದೇಶಗಳಲ್ಲಿ ಮನೆ ಮನೆಗೆ ಬಿಲ್ವ ಪತ್ರೆ ಹಂಚುವ ಮೂಲಕ ಹೂಗಾರ ಸಮುದಾಯ ಆ ಕಾಯಕದಲ್ಲಿ ತೊಡಗಿತ್ತು. ಆಯಾ ಪ್ರದೇಶಕ್ಕೆ ಅನುಸಾರವಾಗಿ ಬೇರೆ ಬೇರೆ ಸಮುದಾಯದವರು ಈ ಸುದ್ದಿ ಮುಟ್ಟಿಸುತ್ತಿದ್ದರು. ಕಾಲ ಬದಲಾದಂತೆ ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗೆ ಮೃತರ ಕುರಿತು ಪೋಸ್ಟ್ ಮಾಡಿ ಜನರಿಗೆ ಮಾಹಿತಿ ಕೊಡಲಾಗುತ್ತಿದೆ.

ಇಂಥ ಸಂದರ್ಭದಲ್ಲಿ ಬೈಲಹೊಂಗಲ ನಗರದಲ್ಲಿ ಕಳೆದ 8 ವರ್ಷಗಳಿಂದ ವೈದ್ಯ ದಂಪತಿ ಡಾ.‌ಮಹಾಂತೇಶ ರಾಮಣ್ಣವರ ಮತ್ತು ಅವರ ಪತ್ನಿ ಡಾ.ಸುರೇಖಾ ರಾಮಣ್ಣವರ ಅವರು ತಮ್ಮ ಮನೆ‌ಯ ಮೂರನೇ ಮಹಡಿಯಲ್ಲಿ ನಿಧನವಾರ್ತೆ ಸುದ್ದಿ ಮನೆ ಮಾಡಿ, ಈ ಪವಿತ್ರ ಕಾರ್ಯಕ್ಕೆ ಮುನ್ನುಡಿ ಬರೆದಿದ್ದಾರೆ.

Mike on the terrace
ಟೆರಸ್​ ಮೇಲೆ ಮೈಕ್​​ (ETV Bharat)

ದೇಹದಾನ ಜಾಗೃತಿಗಾಗಿ ತಂದೆಯ ಮೃತದೇಹ ಛೇದಿಸಿ ವಿಶ್ವದಾಖಲೆ ನಿರ್ಮಿಸಿದ ಭಾರತದ ಪ್ರಥಮ ವೈದ್ಯ ಎಂಬ ಖ್ಯಾತಿಗೆ ಪಾತ್ರರಾಗಿರುವ ಡಾ.ಮಹಾಂತೇಶ ರಾಮಣ್ಣವರ, ಡಾ.ರಾಮಣ್ಣವರ ಚಾರಿಟೇಬಲ್ ಟ್ರಸ್ಟ್ ಮೂಲಕ ದೇಹದಾನ, ಅಂಗಾಂಗ, ನೇತ್ರ ಮತ್ತು ರಕ್ತದಾನದ ಕುರಿತು ಸಮಾಜದಲ್ಲಿ ಅರಿವು ಮೂಡಿಸುವ ಕಾರ್ಯ ನಿರಂತರವಾಗಿ ಮುಂದುವರಿಸಿದ್ದಾರೆ. ಇಷ್ಟೇ ಅಲ್ಲದೇ "ಸಾವು ಕೆಟ್ಟದ್ದಲ್ಲ, ಸಾವಿನ‌ ಭಯ ಕೆಟ್ಟದ್ದು" ಎನ್ನುವ ಸಂದೇಶ ಸಾರುವ ನಿಟ್ಟಿನಲ್ಲಿ ಮೃತಪಟ್ಟವರ ಹೆಸರನ್ನು ತಮ್ಮ‌ ಮನೆಯ ಮೇಲೆ ಅನೌನ್ಸ್ ಮಾಡಿಸುತ್ತಿರುವುದು ವಿಶೇಷ.

ಕೆಎಲ್ಇ ಬಿ.ಎಂ.ಕೆ.ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ಶರೀರ ರಚನಾ ವಿಭಾಗದ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರಾಗಿ ಡಾ.ಮಹಾಂತೇಶ ರಾಮಣ್ಣವರ ಸೇವೆ ಸಲ್ಲಿಸುತ್ತಿದ್ದರೆ, ಪತ್ನಿ ಡಾ.ಸುರೇಖಾ ಅವರು ದಂತವೈದ್ಯೆ. ಬೈಲಹೊಂಗಲ ನಗರದ ಸಂಗೊಳ್ಳಿ ರಾಯಣ್ಣ ವೃತ್ತದ ಬಳಿ ಇರುವ ತಮ್ಮ ಮನೆಯಲ್ಲೇ ಹಲ್ಲಿನ ಆಸ್ಪತ್ರೆ ನಡೆಸುತ್ತಾರೆ. ಡಾ.ಮಹಾಂತೇಶ ಅವರು ಬೆಳಗ್ಗೆ 8ಕ್ಕೆ ಬೆಳಗಾವಿಗೆ ತೆರಳಿದರೆ, ವಾಪಸ್ಸು ಮನೆಗೆ ಬರುವುದು ಸಾಯಂಕಾಲ 6ಕ್ಕೆ. ಇನ್ನು ಪತ್ನಿ ದಿನವಿಡೀ ರೋಗಿಗಳ ಆರೈಕೆಯಲ್ಲೇ ತೊಡಗಿರುತ್ತಾರೆ.‌ ಇದರ ಮಧ್ಯೆ ಒಂದೆರಡು ನಿಮಿಷ ಸಮಯ ವಾಟ್ಸ್‌ಆ್ಯಪ್​ನಲ್ಲಿ ಮೃತರ ಕುರಿತು ವಾಯ್ಸ್ ಕೊಡುತ್ತಾರೆ. ಅದನ್ನು ಅವರದ್ದೇ ಕಟ್ಟಡದಲ್ಲಿರುವ ಮೆಡಿಕಲ್ ಅಂಗಡಿಯ ಮಹಾಂತೇಶ ಹಿಟ್ಟಣಗಿ ಅವರು ಎಂಪ್ಲಿಪಾಯರ್​ನಲ್ಲಿ ಪ್ಲೇ ಮಾಡುತ್ತಾರೆ. ಓಂ ನಮಃ‌ ಶಿವಾಯದೊಂದಿಗೆ ಆರಂಭವಾಗಿ, ಮೃತರ ಪೂರ್ತಿ ಹೆಸರು, ವಯಸ್ಸು, ಊರು, ಗಲ್ಲಿ, ಅಂತ್ಯಕ್ರಿಯೆ ಸಮಯ ಮತ್ತು ಸ್ಥಳದ ಕುರಿತು ಮಾಹಿತಿ ನೀಡುತ್ತಾರೆ. ಮೃತಪಟ್ಟ ಒಬ್ಬರ ಬಗ್ಗೆ ಮೂರು ಬಾರಿ ಅನೌನ್ಸ್ ಆಗುತ್ತದೆ. ಇದನ್ನು ಜನರು ಕಿವಿಗೊಟ್ಟು ಆಲಿಸುತ್ತಾರೆ. ಇದರಿಂದ ಊರಲ್ಲಿ ಮೃತಪಟ್ಟವರ ಸುದ್ದಿ ತಿಳಿಯಲು ಮತ್ತು ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಸಾರ್ವಜನಿಕರಿಗೆ ತುಂಬಾ ಅನುಕೂಲ ಆಗಿದೆ.

ವೈದ್ಯ ದಂಪತಿಯ ಸಮಾಜಸೇವೆಗೆ ಸಾರ್ವಜನಿಕರ ಮೆಚ್ಚುಗೆ (ETV Bharat)

ಈಟಿವಿ ಭಾರತ ಜೊತೆಗೆ ಮಾತನಾಡಿದ ಡಾ.ಮಹಾಂತೇಶ ರಾಮಣ್ಣವರ, "ಮುಸ್ಲಿಂ ಸಮಾಜದವರು ಯಾರಾದರೂ ಮೃತಪಟ್ಟರೆ ಮಸೀದಿಯಲ್ಲಿ ಅನೌನ್ಸ್ ಮಾಡುವುದನ್ನು ನಾನು ಬೆಳಗ್ಗೆ ವಾಕಿಂಗ್ ಹೋಗಿದ್ದಾಗ ಅನೇಕ ಬಾರಿ ಕೇಳಿದ್ದೆ. ಇದರಿಂದ ಪ್ರೇರೇಪಿತನಾಗಿ ಪೊಲೀಸ್ ಇಲಾಖೆ ಅನುಮತಿ ಪಡೆದುಕೊಂಡು 2017ರಲ್ಲಿ ನಮ್ಮ ಟ್ರಸ್ಟ್ ವತಿಯಿಂದ ಅನೌನ್ಸ್ ಮಾಡಿಸಲು ಶುರು ಮಾಡಿದೆ. ಆಮೇಲೆ ನನಗೆ ಬಹಳಷ್ಟು ಕಿರಿಕಿರಿ ಅನಿಸಿತು. ಆದರೆ, ಇದರ ಅವಶ್ಯಕತೆ ಅರಿತು ಮುಂದುವರಿಸಿದೆ. ಆರಂಭದಲ್ಲಿ ಬಾಬಣ್ಣ ಯಡಹಳ್ಳಿ ಎಂಬವರು ಬಂದು ಯಾವುದೇ ಹಣ ಪಡೆಯದೇ ನಿಸ್ವಾರ್ಥದಿಂದ ಮೈಕ್ ಮೂಲಕ ಅನೌನ್ಸ್ ಮಾಡಿ ಹೋಗುತ್ತಿದ್ದರು. ಅವರಿಗೆ ಅನಾನುಕೂಲ ಉಂಟಾದಾಗ ನನ್ನ ಪತ್ನಿ ಡಾ.ಸುರೇಖಾ ಅವರು ಅದನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ" ಎಂದು ಹೇಳಿದರು.

ಭಾವೈಕ್ಯತೆ ಬೆಳೆದಿದೆ: "ಸಾವಿಗೆ ಯಾವುದೇ ಧರ್ಮ ಇಲ್ಲ. ಹುಟ್ಟಿದ ಪ್ರತಿಯೊಬ್ಬರು ಸಾಯಲೇಬೇಕು. ಹಾಗಾಗಿ, ಇಡೀ ಮನುಕುಲಕ್ಕೆ ಅನುಕೂಲ ಆಗುವ ನಿಟ್ಟಿನಲ್ಲಿ ಎಲ್ಲ ಧರ್ಮೀಯರ ಸಾವಿನ ಸುದ್ದಿಯನ್ನು, ಯಾವುದೇ ರೀತಿ ಶುಲ್ಕ ಪಡೆಯದೆ ಉಚಿತವಾಗಿ ಅನೌನ್ಸ್ ಮಾಡುತ್ತೇವೆ. ಇತ್ತೀಚೆಗೆ ಮಸೀದಿಯಲ್ಲೂ ಬೇರೆ ಧರ್ಮೀಯರ ಸಾವಿನ ಸುದ್ದಿಯನ್ನು ಅನೌನ್ಸ್ ಮಾಡುತ್ತಿರುವುದು ಬೈಲಹೊಂಗಲದಲ್ಲಿ ಭಾವೈಕ್ಯತೆ ಬೆಳೆಯಲು ಸಹಕಾರಿಯಾಗಿದೆ" ಎನ್ನುತ್ತಾರೆ ಡಾ.ಮಹಾಂತೇಶ ರಾಮಣ್ಣವರ.

Doctor couple
ವೈದ್ಯ ದಂಪತಿ (ETV Bharat)

ಐದು ಶ್ರದ್ಧಾಂಜಲಿ ವಾಟ್ಸ್‌ಆ್ಯಪ್ ಗ್ರೂಪ್: "ಡಾ.ರಾಮಣ್ಣವರ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಐದು ಶ್ರದ್ಧಾಂಜಲಿ ವಾಟ್ಸ್‌ಆ್ಯಪ್ ಗ್ರೂಪ್​ಗಳನ್ನು ರಚನೆ ಮಾಡಲಾಗಿದೆ. ಇದರಲ್ಲಿ ಸುಮಾರು ಐದು ಸಾವಿರ ಸದಸ್ಯರಿದ್ದು, ದೇಶ-ವಿದೇಶಗಳಲ್ಲಿ ನೆಲೆಸಿರುವ ಈ ಭಾಗದ ಜನರಿಗೂ ಇಲ್ಲಿ ಮೃತಪಟ್ಟವರ ಮಾಹಿತಿ ತಿಳಿಯಲು ಸುಲಭವಾಗಿದೆ. ಇಲ್ಲಿಯವರೆಗೆ ಸುಮಾರು 2500 ಜನರ ಸಾವಿನ ಕುರಿತು ಸುದ್ದಿ ಬಿತ್ತರಿಸಲಾಗಿದೆ. ಜನರು ನಿಮ್ಮ ಈ ಸೇವೆಯಿಂದ ನಮಗೆ ತುಂಬಾ ಅನುಕೂಲ ಆಗಿದೆ ಎಂದು ಡಾ.ಮಹಾಂತೇಶ ರಾಮಣ್ಣವರ ತಿಳಿಸಿದರು.

ಸೇವೆಯಲ್ಲಿ ಸಂತೃಪ್ತಿ ಇದೆ: ನಿಧನವಾರ್ತೆ ಅನೌನ್ಸ್ ಮಾಡುವ ಡಾ.ಸುರೇಖಾ ರಾಮಣ್ಣವರ ಮಾತನಾಡಿ, "ನಮ್ಮ ಮನೆಯ ಮೂರನೇ ಮಹಡಿಯಲ್ಲಿ ನಿಧನವಾರ್ತೆ ಸುದ್ದಿ ಮನೆ ಮಾಡಿದ್ದೇವೆ. ‌ಶ್ರದ್ಧಾಂಜಲಿ ವಾಟ್ಸ್‌ಆ್ಯಪ್ ಗ್ರೂಪ್​ನಲ್ಲಿ ಬಂದ ನಿಧನವಾರ್ತೆಯನ್ನು ಮಕರಜ್ಯೋತಿ ಔಷಧಿ ಅಂಗಡಿ‌ ಮಾಲೀಕ‌ ಮಹಾಂತೇಶ ಹಿಟ್ಟಣಗಿ ಅವರು ನನಗೆ ವಾಟ್ಸ್​ ಆ್ಯಪ್​ನಲ್ಲಿ ಕಳಿಸುತ್ತಾರೆ. ಅದನ್ನು ನಾನು ವಾಯ್ಸ್ ರೆಕಾರ್ಡ್ ಮಾಡಿ ಅವರಿಗೆ ಕಳಿಸುತ್ತೇನೆ. ಅವರು ಮೇಲೆ ಹೋಗಿ ಅದನ್ನು ಪ್ಲೇ ಮಾಡುತ್ತಾರೆ. ಬೆಳಗ್ಗೆ 11 ಗಂಟೆಯಿಂದ ರಾತ್ರಿ 8 ಗಂಟೆವರೆಗೆ ನಿರಂತರವಾಗಿ ಆಸ್ಪತ್ರೆಯಲ್ಲಿ ರೋಗಿಗಳು ಇರುತ್ತಾರೆ. ಅವರಿಗೆ ಚಿಕಿತ್ಸೆ ನೀಡುವಾಗಲೇ ಇದಕ್ಕಾಗಿ ನಾನು ಮೂರು ನಿಮಿಷ ಸಮಯ ತೆಗೆದುಕೊಂಡು ರೆಸ್ಟ್ ರೂಮ್​ಗೆ ತೆರಳಿ ವಾಯ್ಸ್​ ಕೊಡುತ್ತೇನೆ. ಇದು ನನಗೇನೂ ಕಷ್ಟ ಆಗುವುದಿಲ್ಲ. ನಮ್ಮ ಯಜಮಾನರು ಸಮಾಜಕ್ಕೆ ದೊಡ್ಡ ಸೇವೆ ಸಲ್ಲಿಸುತ್ತಿದ್ದಾರೆ. ಅವರಷ್ಟು ನನಗೆ ಆಗದಿದ್ದರೂ ಈ ರೀತಿ ಆದರೂ ಸೇವೆ ಸಲ್ಲಿಸುತ್ತಿದ್ದೇನೆ ಎನ್ನುವ ಖುಷಿ ಮತ್ತು ಸಂತೃಪ್ತಿ ನನಗಿದೆ" ಎಂದರು.

Trust poster
ಟ್ರಸ್ಟ್​ ಪೋಸ್ಟರ್​ (ETV Bharat)

ಕೋವಿಡ್ ಸಮಯದಲ್ಲೂ ಅನುಕೂಲ: "ಮಹಾಮಾರಿ ಕೊರೊನಾ ಸೋಂಕು ಹರಡಿದ ವೇಳೆ ಸಾವಿನ‌ ಸುದ್ದಿಗಳನ್ನು ಅನೌನ್ಸ್ ಮಾಡುವುದನ್ನು ಸ್ಥಗಿತಗೊಳಿಸಲಾಗಿತ್ತು. ಆಗ ಸ್ಪೀಕರ್ ಅನ್ನು ಕೊರೊನಾ ವಿರುದ್ಧ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಪೊಲೀಸ್ ಮತ್ತು ಆರೋಗ್ಯ ಇಲಾಖೆಗೆ ಬಳಸಲು ನೀಡಲಾಗಿತ್ತು. ನಮ್ಮ ಮನೆಗೆ ಬಂದು ಸಿಬ್ಬಂದಿ ಅನೌನ್ಸ್ ಮಾಡಿ ಹೋಗುತ್ತಿದ್ದರು" ಎಂದು ಡಾ.ಮಹಾಂತೇಶ ರಾಮಣ್ಣವರ ನೆನಪಿಸಿಕೊಂಡರು.

ಮುಸ್ಲಿಂ ಸಮುದಾಯಕ್ಕೂ ಮಾದರಿ: ನಗರ, ಪಟ್ಟಣ, ಹಳ್ಳಿಗಳಲ್ಲಿ ವಿದ್ಯುತ್ ಸಂಪರ್ಕ ಬಂದಾಗಿನಿಂದ ಮುಸ್ಲಿಂ ಸಮುದಾಯ ಮೃತರ ಹೆಸರುಗಳನ್ನು ತಮ್ಮ‌ ಮಸೀದಿ ಮೇಲೆ ಅನೌನ್ಸ್ ಮಾಡುವುದು ವಾಡಿಕೆ. ಆದರೆ, ಮುಸ್ಲಿಂ ಸಮುದಾಯ ತಮ್ಮ ಸಮುದಾಯಕ್ಕೆ‌ ಮಾತ್ರ ಸಿಮೀತ ಆಗಿದ್ದರೆ, ಈ ವೈದ್ಯ ದಂಪತಿ ಜಾತಿ, ಮತ, ಪಂಥ ಬೇಧಭಾವ ಇಲ್ಲದೇ ಸಾವಿನ ಸುದ್ದಿ ನೀಡುತ್ತಿರುವುದು ವಿಶೇಷ. ಇದು ಈಗ ಬೈಲಹೊಂಗಲದಲ್ಲಿ ಮುಸ್ಲಿಮರಿಗೆ ಮಾದರಿ ಆಗಿದ್ದು, ಅವರು ಕೂಡ ಹಿಂದೂ ಸೇರಿ ಅನ್ಯ ಧರ್ಮೀಯರ ಸಾವಿನ ಸುದ್ದಿಗಳನ್ನು ತಮ್ಮ ಮಸೀದಿಯಲ್ಲಿ ಅನೌನ್ಸ್ ಮಾಡುವ ಮೂಲಕ ಕೋಮು ಸೌಹಾರ್ದತೆ ಮೆರೆಯುತ್ತಿದ್ದಾರೆ.

ಇದು ಪುಣ್ಯದ ಕೆಲಸ: ವೇದಮೂರ್ತಿ ವೀರಯ್ಯ ಹಿರೇಮಠ ಮಾತನಾಡಿ, "ಸಮಾಜಕ್ಕೆ ಡಾ.ಮಹಾಂತೇಶ ರಾಮಣ್ಣವರ ಸೇವೆ ಅಗ್ರಗಣ್ಯವಾಗಿದೆ. ಯಾವುದೇ ರೀತಿ ಹಣ ತೆಗೆದುಕೊಳ್ಳದೆ ಉಚಿತವಾಗಿ ಮೃತರ ಹೆಸರನ್ನು ಅವರ ಮನೆ ಮೇಲೆ ಅನೌನ್ಸ್ ಮಾಡುತ್ತಾರೆ. ಇದು ಅತ್ಯಂತ ಪುಣ್ಯದ ಕೆಲಸ. ಅವರಿಗೆ ದೇವರು ಇನ್ನಷ್ಟು ಹೆಚ್ಚು ಸೇವೆ ಮಾಡುವ ಸೌಭಾಗ್ಯ ಕರುಣಿಸಲಿ ಎಂದು ನಾನು ಪ್ರಾರ್ಥಿಸುತ್ತೇನೆ" ಎಂದರು.

Dr. Surekha
ಡಾ.ಸುರೇಖಾ (ETV Bharat)

ಇದರಿಂದ ಎಲ್ಲ ಧರ್ಮೀಯರಿಗೂ ಅನುಕೂಲ: "ಜಾತಿ, ಮತ, ಧರ್ಮಗಳ ಬೇಧ ಇಲ್ಲದೇ, ನಮ್ಮೂರಲ್ಲಿ ಯಾರೇ ತೀರಿಕೊಂಡರೂ ಆ ಸುದ್ದಿಯನ್ನು ಡಾ.ಮಹಾಂತೇಶ ರಾಮಣ್ಣವರ ಮನೆ ಮೇಲೆ ಅನೌನ್ಸ್ ಮಾಡಿಸುತ್ತಾರೆ. ನಮ್ಮ ಮುಸ್ಲಿ ಸಮಾಜದವರು ಮೃತಪಟ್ಟರು ಅವರ ಹೆಸರನ್ನು ಬಿತ್ತರಿಸುತ್ತಾರೆ. ಇದರಿಂದ ಬಹಳಷ್ಟು ಉಪಯೋಗ ಆಗಿದೆ.‌ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿದೆ" ಎನ್ನುತ್ತಾರೆ ಗೃಹಿಣಿ ಜಬೀನಾ ಮೊಮಿನ್.

ಮೊದಲು ತಡವಾಗಿ ಗೊತ್ತಾಗುತ್ತಿತ್ತು: ಯುವಕ ನಾಗರಾಜ ತಲ್ಲೂರ ಮಾತನಾಡಿ, "ಮೊದಲೆಲ್ಲಾ ನಾಲ್ಕೈದು ದಿನಗಳ ಬಳಿಕ ಯಾರಾದರು ಮೃತಪಟ್ಟರೆ ಗೊತ್ತಾಗುತ್ತಿತ್ತು. ಮೈಕ್​ನಲ್ಲಿ ಅನೌನ್ಸ್ ಮಾಡುವಾಗಿಂದ ಬಹಳ ಬೇಗನೇ ವಿಷಯ ತಿಳಿಯುತ್ತಿದೆ. ಅಲ್ಲದೇ ಶ್ರದ್ಧಾಂಜಲಿ ವಾಟ್ಸ್‌ಆ್ಯಪ್ ಗ್ರೂಪ್ ಕೂಡ ತುಂಬಾ ಅನುಕೂಲ ಆಗಿದೆ. ಮೃತಪಟ್ಟವರು ಮತ್ತು ದೇಹದಾನ ಮಾಡಿದವರ ಹೆಸರನ್ನು ಹೇಳಿ ಡಾ.ಸುರೇಖಾ ರಾಮಣ್ಣವರ ಮೇಡಂ ಅನೌನ್ಸ್ ಮಾಡುತ್ತಾರೆ. ಸುತ್ತಲಿನ ಐದಾರು ಕಿ‌.ಮೀ. ಅಂತರದ ಗ್ರಾಮಗಳಿಗೂ ಇದು ಕೇಳಿಸುತ್ತದೆ" ಎಂದು ಹೇಳಿದರು‌.

ಇದನ್ನೂ ಓದಿ: ಕಂಬಳಿ ನೇಯ್ಗೆ ಉದ್ಯಮಕ್ಕಿರುವ ಸಮಸ್ಯೆ ಒಂದೆರೆಡಲ್ಲ: ಸರ್ಕಾರದ ಪ್ರೋತ್ಸಾಹವೂ ಇಲ್ಲ; ನೇಯ್ಗೆಯಿಂದಲೇ ವಿಮುಖರಾಗುತ್ತಿದ್ದಾರೆ ಕಾರ್ಮಿಕರು