ETV Bharat / state

ಗಂಡನ ಚಿಕಿತ್ಸೆಗಾಗಿ ಮಾಲೀಕರ ಮನೆಯಲ್ಲಿ 12 ಕೆಜೆ ಬೆಳ್ಳಿ ಸಾಮಗ್ರಿ ಕದ್ದ ಮಹಿಳೆ ಅರೆಸ್ಟ್

ಗಂಡನ ಚಿಕಿತ್ಸೆಗಾಗಿ ಮಾಲೀಕರ ಮನೆಯಲ್ಲಿ 12 ಕೆಜೆ ಬೆಳ್ಳಿ ಸಾಮಗ್ರಿ ಕದ್ದ ಮಹಿಳೆ ಅರೆಸ್ಟ್ ಆಗಿದ್ದಾಳೆ.

THEFT AT OWNER HOUSE  BENGALURU  CRIME NEWS  ACCUSED ARREST BENGALURU THEFT CASE
ವಶಕ್ಕೆ ಪಡೆದ ಬೆಳ್ಳಿ ಸಾಮಗ್ರಿಗಳು (ETV Bharat)
author img

By ETV Bharat Karnataka Team

Published : February 27, 2026 at 12:27 PM IST

2 Min Read
Choose ETV Bharat

​ಬೆಂಗಳೂರು: ಕೆಲಸ ಮಾಡುತ್ತಿದ್ದ ಮನೆಯಲ್ಲೇ ಕಳ್ಳತನ ಮಾಡಿದ್ದ ಮಹಿಳೆಯೊಬ್ಬಳನ್ನ ಜೀವನ್ ಬಿಮಾ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ದಾವಣಗೆರೆ ಮೂಲದ ಚೈತ್ರಾ ಬಂಧಿತ ಆರೋಪಿ. ಕಳೆದ ಒಂದು ವರ್ಷದಿಂದ ಹಂತಹಂತವಾಗಿ ಕಳ್ಳತನ‌ ಮಾಡಿದ್ದ ಮಹಿಳೆಯಿಂದ ಸುಮಾರು 35 ಲಕ್ಷ ರೂಪಾಯಿ ಮೌಲ್ಯದ 12.5 ಕೆ.ಜಿ ಬೆಳ್ಳಿ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

​ನಗರದ ಪ್ರತಿಷ್ಠಿತ ಆಸ್ಪತ್ರೆಯೊಂದರ ಸರ್ಜನ್ ಒಬ್ಬರ ಮನೆಯಲ್ಲಿ ಕಳೆದ ಒಂದೂವರೆ ವರ್ಷದಿಂದ ಚೈತ್ರಾ ಮನೆ ಕೆಲಸ ಮಾಡಿಕೊಂಡಿದ್ದಳು. ಮಾಲೀಕರು ಮನೆಯ ಮಹಡಿಯ ಮೇಲಿದ್ದ ಕೊಠಡಿಯೊಂದರಲ್ಲಿ ಬೆಳ್ಳಿಯ ಪಾತ್ರೆ ಹಾಗೂ ಪೂಜಾ ಸಾಮಗ್ರಿಗಳನ್ನು ಸಂಗ್ರಹಿಸಿಟ್ಟಿದ್ದರು. ಆ ಸಾಮಗ್ರಿಗಳನ್ನು ಕೇವಲ ಹಬ್ಬದ ಸಂದರ್ಭಗಳಲ್ಲಿ ಮಾತ್ರ ಹೊರತೆಗೆಯಲಾಗುತ್ತಿತ್ತು. ಇದನ್ನೇ ಬಂಡವಾಳವಾಗಿಸಿಕೊಂಡಿದ್ದ ಚೈತ್ರಾ, ಮಾಲೀಕರಿಗೆ ತಿಳಿಯದಂತೆ ಮಹಡಿಯಲ್ಲಿದ್ದ ಬೆಳ್ಳಿ ಸಾಮಗ್ರಿಗಳನ್ನು ಒಂದೊಂದಾಗಿ ಕದಿಯಲು ಆರಂಭಿಸಿದ್ದಳು. ಕಳೆದ ಒಂದು ವರ್ಷದಿಂದ ಹಂತ ಹಂತವಾಗಿ ಒಟ್ಟು 12.5 ಕೆಜಿ ತೂಕದ ಬೆಳ್ಳಿ ಪಾತ್ರೆಗಳನ್ನು ಎಗರಿಸಿದ್ದಳು. ದೀಪಾವಳಿ ಹಬ್ಬಕ್ಕೂ ಕೆಲವು ದಿನಗಳ ಮೊದಲೇ ಚೈತ್ರಾ ಇದ್ದಕ್ಕಿದ್ದಂತೆ ಕೆಲಸ ಬಿಟ್ಟಿದ್ದಳು. ಹಬ್ಬದ ಪೂಜೆಗಾಗಿ ಮನೆಯವರು ಬೆಳ್ಳಿ ಪಾತ್ರೆಗಳಿದ್ದ ಚೀಲವನ್ನು ತೆರೆದಾಗ ಕಳ್ಳತನದ ಕೃತ್ಯ‌ ಬಯಲಾಗಿತ್ತು. ತಕ್ಷಣ ಮಾಲೀಕರು ಜೀವನ್ ಭಿಮಾ ನಗರ ಠಾಣೆಗೆ ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡ ಜೀವನ್ ಬಿಮಾ ನಗರ ಪೊಲೀಸರು ತನಿಖೆ ಕೈಗೊಂಡಾಗ, ಹಳೆಯ ಕೆಲಸದವರ ಮೇಲೆ ಅನುಮಾನ ವ್ಯಕ್ತವಾಗಿತ್ತು. ಚೈತ್ರಾಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅಸಲಿ ಸತ್ಯ ಹೊರಬಂದಿದೆ. ಪತಿ ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿದ್ದುದರಿಂದ ಚಿಕಿತ್ಸೆಗೆ ಹೆಚ್ಚಿನ ಹಣದ ಅವಶ್ಯಕತೆ ಇತ್ತು. ಆದ್ದರಿಂದ ಬೆಳ್ಳಿ ಸಾಮಗ್ರಿಗಳನ್ನ ಕದ್ದು ಅಡವಿಟ್ಟು ಹಣ ಪಡೆದಿರುವುದಾಗಿ ಒಪ್ಪಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತಳಿಂದ ಸದ್ಯ ಸುಮಾರು 35 ಲಕ್ಷ ರೂಪಾಯಿ ಮೌಲ್ಯದ 12.5 ಕೆಜಿ ಬೆಳ್ಳಿ ಸಾಮಗ್ರಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ: ಹುಣಸೂರು ಚಿನ್ನಾಭರಣ ದರೋಡೆ ಪ್ರಕರಣ: ಆಭರಣಗಳನ್ನ ನೇಪಾಳಕ್ಕೆ ಸಾಗಿಸಿರುವ ಶಂಕೆ

ಮಾಲೀಕನ ಹೆಸರಲ್ಲಿ ಚಿನ್ನದ ಸರ ಪಡೆದು ಪರಾರಿಯಾದ 6 ತಿಂಗಳ ಬಳಿಕ ಅಂದರ್ (ಪ್ರತ್ಯೇಕ ಸುದ್ದಿ):

ಚಿನ್ನದಂಗಡಿ ಮಾಲೀಕನ ಹೆಸರಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನದ ಸರಗಳೊಂದಿಗೆ ಪರಾರಿಯಾಗಿದ್ದ ಆರೋಪಿಯನ್ನು ಭಾರತೀನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ರಾಜಸ್ಥಾನ ಮೂಲದ ಧರ್ಮವೀರ್ ಸಿಂಗ್ ಬಂಧಿತ ಆರೋಪಿ. ಆತನಿಂದ 33 ಲಕ್ಷ ರೂಪಾಯಿ ಮೌಲ್ಯದ 239 ಗ್ರಾಂ ತೂಕದ 6 ಚಿನ್ನದ ಸರಗಳನ್ನು ವಶಕ್ಕೆ ಪಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

​ನಡೆದಿದ್ದೇನು? ​ಬೆಂಗಳೂರಿನ ಜ್ಯುವೆಲ್ಲರಿ ಶಾಪ್​ವೊಂದರಲ್ಲಿ ಕೆಲಸ ಮಾಡುತ್ತಿದ್ದ ಧರ್ಮವೀರ್ ಸಿಂಗ್, ಒಂದು ಅಂಗಡಿಯಿಂದ ಮತ್ತೊಂದು ಅಂಗಡಿಗೆ ಚಿನ್ನಾಭರಣಗಳನ್ನು ಸಾಗಿಸುವ ಮತ್ತು ಎಕ್ಸ್‌ಚೇಂಜ್ ಮಾಡುವ ವ್ಯವಹಾರದ ಬಗ್ಗೆ ಅರಿತಿದ್ದ.​ ಕೆಲಸದ ನಿಮಿತ್ತ ಅಂಗಡಿ ಮಾಲೀಕ ಹೈದರಾಬಾದ್‌ಗೆ ಹೋಗಿದ್ದನ್ನ ಬಳಸಿಕೊಂಡ ಧರ್ಮವೀರ್ ಸಿಂಗ್, ಮಾಲೀಕನ ಹೆಸರನ್ನ ಹೇಳಿ ಮಹಾವೀರ್ ಜ್ಯುವೆಲ್ಲರಿ ಶಾಪ್​​ನಿಂದ ಬರೋಬ್ಬರಿ 9 ಚಿನ್ನದ ಸರಗಳನ್ನ ಪಡೆದುಕೊಂಡಿದ್ದ. ಆಭರಣ ಕೈಗೆ ಸಿಗುತ್ತಿದ್ದಂತೆ ಕೆಲಸಕ್ಕೂ ಬಾರದೇ ರಾಜಸ್ಥಾನಕ್ಕೆ ಪರಾರಿಯಾಗಿದ್ದ. ಬಳಿಕ ಕೃತ್ಯದ ಕುರಿತು ಅರಿತ ಅಂಗಡಿ ಮಾಲೀಕ‌ ಭಾರತೀನಗರ ಠಾಣೆಗೆ ದೂರು ನೀಡಿದ್ದರು. ಆರೋಪಿ ಪತ್ತೆಗಾಗಿ ನಿರಂತರ ಕಾರ್ಯಾಚರಣೆ ನಡೆಸಿದ್ದ ಭಾರತೀನಗರ ಠಾಣೆ ಪೊಲೀಸರು ತಾಂತ್ರಿಕ ಸಾಕ್ಷ್ಯಗಳ ಆಧಾರದಲ್ಲಿ ಇತ್ತೀಚೆಗೆ ಆರೋಪಿಯನ್ನ ಬಂಧಿಸಿದ್ದಾರೆ. ಆತನಿಂದ ​33 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ 239 ಗ್ರಾಂ ತೂಕದ ಚಿನ್ನದ ಸರಗಳನ್ನು ವಶಕ್ಕೆ ಪಡೆಯಲಾಗಿದ್ದು, ಹೆಚ್ಚಿನ ವಿಚಾರಣೆ ಮುಂದುವರೆಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.