ಬೆಂಗಳೂರು: ಸ್ನೇಹಿತನಿಗೆ ಮೆಸೇಜ್ ಕಳಿಸಿ ಸ್ಯಾಂಕಿ ಕೆರೆಗೆ ಹಾರಿ ವಿದ್ಯಾರ್ಥಿನಿ ಆತ್ಮಹತ್ಯೆ
20 ವರ್ಷದ ಯುವತಿ ಸದಾಶಿವನಗರದ ಸ್ಯಾಂಕಿ ಕೆರೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

Published : July 7, 2026 at 11:29 AM IST
ಬೆಂಗಳೂರು: ಸ್ಯಾಂಕಿ ಕೆರೆಯಲ್ಲಿ ವಿದ್ಯಾರ್ಥಿನಿಯೊಬ್ಬಳ ಮೃತದೇಹ ಪತ್ತೆಯಾಗಿರುವ ಘಟನೆ ಇಂದು ಬೆಳಗ್ಗೆ ವರದಿಯಾಗಿದೆ. ಮೃತಳನ್ನು ತೇಜಸ್ವಿನಿ ರಾಜ್.ಪಿ (20) ಎಂದು ಗುರುತಿಸಲಾಗಿದ್ದು, ಮೇಲ್ನೋಟಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಚಿಕ್ಕಬಾಣವಾರದ ನಿವಾಸಿಯಾಗಿದ್ದ ತೇಜಸ್ವಿನಿ ಸೋಮವಾರ (ಜುಲೈ 6) ಸ್ನೇಹಿತನಿಗೆ ಮೆಸೇಜ್ ಮಾಡಿ ಆತ್ಮಹತ್ಯೆಗೆ ಶರಣಾಗಿರುವುದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ಸದಾಶಿವನಗರ ಠಾಣೆ ಪೊಲೀಸರು ತಿಳಿಸಿದ್ದಾರೆ.
ಚಿಕ್ಕಬಾಣಾವರ ಸಮೀಪದ ಖಾಸಗಿ ಕಾಲೇಜಿನಲ್ಲಿ ಅಂತಿಮ ವರ್ಷದ ಡಿಗ್ರಿ ವ್ಯಾಸಂಗ ಮಾಡುತ್ತಿದ್ದ ತೇಜಸ್ವಿನಿ ನಿನ್ನೆ ಮಧ್ಯಾಹ್ನ ಕಾಲೇಜಿನಿಂದ ಹೊರಟಿದ್ದಳು. ತಾನು ಸದಾಶಿವನಗರದ ಸ್ಯಾಂಕಿ ಕೆರೆ ಬಳಿ ಹೋಗುತ್ತಿದ್ದು, ಸಾಯುವುದಾಗಿ ಸ್ನೇಹಿತನಿಗೆ ಮೆಸೇಜ್ ಮಾಡಿದ್ದಳು. ಆತ ತೇಜಸ್ವಿನಿಯ ತಾಯಿಗೆ ಮೆಸೇಜ್ ಫಾರ್ವರ್ಡ್ ಮಾಡಿ ವಿಷಯ ತಿಳಿಸಿದ್ದಾನೆ. ಕೂಡಲೇ ತಾಯಿ ಸದಾಶಿವನಗರ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಹಾಗೂ ಕುಟುಂಬಸ್ಥರು ತಡರಾತ್ರಿಯವರೆಗೆ ಹುಡುಕಾಟ ನಡೆಸಿದ್ದರು.
ಆದರೆ ಇಂದು ಬೆಳಗ್ಗೆ ಸ್ಯಾಂಕಿ ಕೆರೆಯಲ್ಲಿ ತೇಜಸ್ವಿನಿಯ ಮೃತದೇಹ ಪತ್ತೆಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ ಸೋಮವಾರ ಸಂಜೆ 4 ರಿಂದ 6 ಗಂಟೆಯವರೆಗೆ ಕೆರೆ ಆವರಣದಲ್ಲಿ ಓಡಾಡಿಕೊಂಡಿದ್ದ ತೇಜಸ್ವಿನಿ ತಡರಾತ್ರಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದು ಪತ್ತೆಯಾಗಿದೆ. ಅಸಹಜ ಸಾವಿನ ಪ್ರಕರಣ ದಾಖಲಿಸಿಕೊಂಡಿರುವ ಸದಾಶಿವನಗರ ಠಾಣೆ ಪೊಲೀಸರು ತನಿಖೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.
"ಮಕ್ಕಳನ್ನು ಕಷ್ಟಪಟ್ಟು ಸಾಕಿರುತ್ತೇವೆ, ಆದರೆ ಕೊನೆ ಒಂದು ನಿಮಿಷದ ತಪ್ಪು ನಿರ್ಧಾರದಿಂದ ಜೀವನವನ್ನೇ ಕಳೆದುಕೊಳ್ಳುತ್ತಾರೆ. ನಾವು ಪಟ್ಟ ಕಷ್ಟವೆಲ್ಲಾ ವ್ಯರ್ಥವಾಯಿತು" ಎಂದು ಯುವತಿಯ ಮಾವ ಸುನೀಲ್ ಕಣ್ಣೀರಿಟ್ಟಿದ್ದಾರೆ. ಅಲ್ಲದೆ ಸ್ಯಾಂಕಿ ಕೆರೆಯಲ್ಲಿ ಭದ್ರತೆ ಲೋಪವಿದ್ದು, ಸೆಕ್ಯೂರಿಟಿ ಬಿಗಿಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಮೂವರು ಅಪ್ರಾಪ್ತ ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ

