ETV Bharat / state

ನಾಳೆಯಿಂದ ಬೆಂಗಳೂರು ಓಪನ್‌ ಟೆನ್ನಿಸ್ ಟೂರ್ನಿ: ಭಾರತದ ಅಗ್ರಮಾನ್ಯ ಆಟಗಾರ ಸುಮಿತ್ ನಾಗಲ್​ಗೆ ಪ್ರಜ್ವಲ್ ಡಿ.ಎಸ್ ಮೊದಲ ಎದುರಾಳಿ

ಸೋಮವಾರದಿಂದ ಬೆಂಗಳೂರು ಓಪನ್‌ ಟೆನ್ನಿಸ್ ಟೂರ್ನಿ ಆರಂಭವಾಗಲಿದೆ. ಈ ಟೂರ್ನಿಯ ಮೊದಲ ಪಂದ್ಯದಲ್ಲಿ ಖ್ಯಾತ ಟೆನ್ನಿಸ್​ ಪಟು ಸುಮಿತ್ ನಾಗಲ್​ ಅವರಿಗೆ ಪ್ರಜ್ವಲ್ ಡಿ.ಎಸ್ ಮೊದಲ ಎದುರಾಳಿಯಾಗಲಿದ್ದಾರೆ.

Bengaluru Open Tennis Tournament by January 5th
ಬೆಂಗಳೂರು ಓಪನ್‌ ಟೆನ್ನಿಸ್ ಟೂರ್ನಿಗೆ ಸಜ್ಜಾದ ಆಟಗಾರರು (Bengaluru Open -2026)
author img

By ETV Bharat Karnataka Team

Published : January 4, 2026 at 12:23 PM IST

2 Min Read
Choose ETV Bharat

ಬೆಂಗಳೂರು: ನಾಳೆಯಿಂದ (ಜನವರಿ 5) ಆರಂಭವಾಗುವ ಬೆಂಗಳೂರು ಬೆಂಗಳೂರು ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಭಾರತದ ಅಗ್ರಮಾನ್ಯ ಆಟಗಾರ ಸುಮಿತ್‌ ನಾಗಲ್‌ ಅವರು ಮತ್ತೋರ್ವ ಸ್ಥಳೀಯ ಆಟಗಾರ ಎಸ್‌.ಡಿ. ಪ್ರಜ್ವಲ್‌ ದೇವ್‌ ವಿರುದ್ಧ ಅಭಿಯಾನ ಆರಂಭಿಸಲಿದ್ದಾರೆ.

ಕರ್ನಾಟಕ ರಾಜ್ಯ ಲಾನ್ ಟೆನ್ನಿಸ್ ಸಂಸ್ಥೆಯ ಎಸ್‌.ಎಂ. ಕೃಷ್ಣ ಟೆನ್ನಿಸ್‌ ಕ್ರೀಡಾಂಗಣದಲ್ಲಿ 10ನೇ ಆವೃತ್ತಿಯ ಟೂರ್ನಿ ಆಯೋಜಿಸಲಾಗಿದ್ದು,‌‌ ಇದು ಎಟಿಪಿ ಚಾಲೆಂಜರ್‌ 125 ಹಂತದ ಟೂರ್ನಿಯಾಗಿದೆ. ಸಿಂಗಲ್ಸ್‌ ಮುಖ್ಯ ಸುತ್ತಿನಲ್ಲಿ ಭಾರತದ ಆರು ಮಂದಿ ಟೆನ್ನಿಸ್ ತಾರೆಯರು ಕಣದಲ್ಲಿರಲಿದ್ದಾರೆ. ಎಸ್.ಡಿ‌. ಪ್ರಜ್ವಲ್‌, ದಕ್ಷಿಣೇಶ್ವರ ಸುರೇಶ್‌, ಮಾನಸ್ ಧಾಮ್ನೆ ಅವರು ವೈಲ್ಡ್‌ಕಾರ್ಡ್‌ ಪ್ರವೇಶ ಪಡೆದಿದ್ದು, ಕರಣ್‌ ಸಿಂಗ್‌, ಆರ್ಯನ್‌ ಶಾ ಕಣದಲ್ಲಿರುವ ಇತರ ಭಾರತೀಯ ಆಟಗಾರರು. ಇವರೊಂದಿಗೆ ಒಟ್ಟು 19 ದೇಶಗಳ ವಿವಿಧ ಆಟಗಾರರು ಸಹ ಸ್ಪರ್ಧಿಸಲಿದ್ದಾರೆ.

"ರಾಜ್ಯ ಸರ್ಕಾರ ಮತ್ತು ಹಿರಿಯ ಅಧಿಕಾರಿಗಳ ನಿರಂತರ ಬೆಂಬಲದೊಂದಿಗೆ, ಈ ವರ್ಷ ಆಟಗಾರರ ಅನುಭವವನ್ನು ಹೆಚ್ಚಿಸುವುದು, ಸುಗಮ ಚಲನೆ ಮತ್ತು ಸೌಕರ್ಯವನ್ನು ಖಚಿತಪಡಿಸಿಕೊಳ್ಳುವುದರ ಮೇಲೆ ನಾವು ಗಮನಹರಿಸಿದ್ದೇವೆ. ವರ್ಷಗಳಲ್ಲಿ, ಪಂದ್ಯಾವಳಿಯು ಉತ್ತಮವಾಗಿ ಸಂಘಟಿತ, ಆಟಗಾರ ಸ್ನೇಹಿ ಎಟಿಪಿ ಚಾಲೆಂಜರ್ ಈವೆಂಟ್ ಎಂಬ ಬಲವಾದ ಖ್ಯಾತಿಯನ್ನು ಗಳಿಸಿದೆ" ಎಂದು ಕರ್ನಾಟಕ ರಾಜ್ಯ ಲಾನ್ ಟೆನ್ನಿಸ್ ಅಸೋಸಿಯೇಷನ್ ​​(ಕೆಎಸ್‌ಎಲ್‌ಟಿಎ) ಗೌರವ ಕಾರ್ಯದರ್ಶಿ ಮಹೇಶ್ವರ್ ರಾವ್, ಐಎಎಸ್ ತಿಳಿಸಿದರು.

Bengaluru Open Tennis Tournament by January 5th
ಬೆಂಗಳೂರು ಓಪನ್‌ ಟೆನ್ನಿಸ್ ಟೂರ್ನಿಗೆ ಸಜ್ಜಾದ ಆಟಗಾರರು (Bengaluru Open -2026)

"10ನೇ ಆವೃತ್ತಿಯ ಬೆಂಗಳೂರು ಓಪನ್‌ಅನ್ನು ಆಯೋಜಿಸುವುದು ಕೆಎಸ್ಎಲ್‌ಟಿಎಗೆ ಒಂದು ದೊಡ್ಡ ಸಾಧನೆಯಾಗಿದೆ. ಬೆಂಗಳೂರು ಓಪನ್ ಈಗ ಪ್ರತಿಷ್ಠಿತ ಎಟಿಪಿ ಚಾಲೆಂಜರ್ ಆಗಿದ್ದು, ವರ್ಷದ ಮೊದಲ ಟೂರ್ನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಭಾರತೀಯ ಆಟಗಾರರು ತಮ್ಮ ಅಭಿಯಾನವನ್ನು ಉತ್ತಮ ರೀತಿಯಲ್ಲಿ ಪ್ರಾರಂಭಿಸಲು ಬೆಂಗಳೂರು ಓಪನ್ ವೇದಿಕೆ ಒದಗಿಸುತ್ತದೆ ಎಂಬುದು ಹೆಮ್ಮೆಯ ವಿಷಯವಾಗಿದೆ" ಎಂದು ಕರ್ನಾಟಕ ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಯುಕ್ತ ಆರ್. ಚೇತನ್, ಐಪಿಎಸ್ ತಿಳಿಸಿದರು.

ಅಗ್ರ ಶ್ರೇಯಾಂಕ (92) ಪಡೆದಿರುವ ಸ್ಪೇನ್‌ನ ಪೆಡ್ರೊ ಮಾರ್ಟಿನೆಜ್ ಅವರು ಆರಂಭಿಕ ಸುತ್ತಿನಲ್ಲಿ ಕ್ವಾಲಿಫೈಯರ್‌ ಆಟಗಾರನನ್ನು ಎದುರಿಸಲಿದ್ದಾರೆ. ಎರಡನೇ ಶ್ರೇಯಾಂಕದಲ್ಲಿರುವ ಫ್ರಾನ್ಸ್‌ನ ಹೆರಾಲ್ಡ್ ಮೇಯೊಟ್ ಅವರು ರಷ್ಯಾದ ಪೀಟರ್ ಬಾರ್ ಬಿರ್ಯು ಕೋವ್ ವಿರುದ್ಧ ಸೆಣಸಲಿದ್ದಾರೆ. ಮೂರನೇ ಶ್ರೇಯಾಂಕದಲ್ಲಿರುವ ಬ್ರಿಟನ್‌ನ ಜೇ ಕ್ಲಾರ್ಕ್ ಅವರು ಫ್ರಾನ್ಸ್‌ನ ಮ್ಯಾಟಿಯೊ ಮಾರ್ಟಿನೊ ವಿರುದ್ಧ, ಹಾಗೂ ನಾಲ್ಕನೇ ಶ್ರೇಯಾಂಕದಲ್ಲಿರುವ ದಕ್ಷಿಣ ಆಫ್ರಿಕಾದ ಲಾಯ್ಡ್ ಹ್ಯಾರಿಸ್ ಅವರು ಜೆಕ್ ರಿಪಬ್ಲಿಕ್‌ನ ಫೋರ್ಜ್ಟೆಕ್ ಜೊನಾಸ್ ವಿರುದ್ಧ ಅಭಿಯಾನ ಆರಂಭಿಸಲಿದ್ದಾರೆ.

ಡಬಲ್ಸ್‌ ವಿಭಾಗದಲ್ಲಿ ಶ್ರೀರಾಮ್‌ ಬಾಲಾಜಿ - ನೀಲ್ ನೀಲ್ ಓಬರ್‌ಲೀಟ್ನರ್ (ಭಾರತ - ಆಸ್ಟ್ರಿಯಾ) ಜೋಡಿ ಮತ್ತು ಅನಿರುದ್ಧ್‌ ಚಂದ್ರಶೇಖರ್‌ - ಅರ್ಜುನ್ ಕೆ. (ಭಾರತ) ಜೋಡಿ ಕ್ರಮವಾಗಿ ಮೊದಲ ಎರಡು ಶ್ರೇಯಾಂಕದಲ್ಲಿದ್ದಾರೆ.

ಇದನ್ನೂ ಓದಿ: ಮುಸ್ತಾಫಿಜುರ್​ಗೆ ನೀಡಿದ ₹9.20 ಕೋಟಿ ರೂ. ಕೆಕೆಆರ್ ವಾಪಸ್​ ಪಡೆಯಲಿದೆಯೆ? ಐಪಿಎಲ್​ ನಿಯಮ ಹೇಳುವುದೇನು?