ಅಕ್ರಮ ವಲಸಿಗರ ಪತ್ತೆ ಕಾರ್ಯಾಚರಣೆ: ನೈಜೀರಿಯಾ ಪ್ರಜೆ ಸೇರಿ 11 ಸಂಶಯಾಸ್ಪದ ಅಕ್ರಮ ನಿವಾಸಿಗಳು ಪತ್ತೆ
ಬೆಂಗಳೂರು ಪೂರ್ವ ವಿಭಾಗದ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದು, ತನಿಖೆ ವೇಳೆ ಓರ್ವ ನೈಜೀರಿಯಾ ಪ್ರಜೆ ಸೇರಿದಂತೆ 11 ಜನ ಸಂಶಯಾಸ್ಪದ ಅಕ್ರಮ ನಿವಾಸಿಗಳು ಪತ್ತೆಯಾಗಿದ್ದಾರೆ.

Published : February 26, 2026 at 2:12 PM IST
ಬೆಂಗಳೂರು: ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಬೆಂಗಳೂರು ಪೊಲೀಸರ ಕಾರ್ಯಾಚರಣೆ ಚುರುಕುಗೊಂಡಿದೆ. ನಗರದ ಪೂರ್ವ ವಿಭಾಗದ ರಾಮ ಮೂರ್ತಿನಗರ ಪೊಲೀಸ್ ಠಾಣೆ ವ್ಯಾಪ್ತಿಯ ಕೆ. ಚನ್ನಸಂದ್ರ ಹಾಗೂ ಕಲ್ಕೆರೆ ಪ್ರದೇಶದ ವಿವಿಧೆಡೆ ಪ್ಲೈವುಡ್ ಅಂಗಡಿ, ಗೋದಾಮು ಹಾಗೂ ಮನೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರನ್ನು ವಿವಿಧ ಸ್ತರಗಳಲ್ಲಿ ಪೊಲೀಸರು ತಪಾಸಣೆಗೊಳಪಡಿಸಿದ್ದಾರೆ.
ಈ ವೇಳೆ 1 ಸಾವಿರಕ್ಕೂ ಅಧಿಕ ಸಂಶಯಾಸ್ಪದ ವ್ಯಕ್ತಿಗಳ ಆಧಾರ್ ಕಾರ್ಡ್, ವಿದ್ಯಾಭ್ಯಾಸ ಮಾಡಿರುವ ಮೂಲ ಅಂಕಪಟ್ಟಿ, ಬ್ಯಾಂಕ್ ಖಾತೆ, ಪಾಸ್‌ಪೋರ್ಟ್ ವಿವಿಧ ದಾಖಲೆಗಳು ಹಾಗೂ ಫೋನ್ ಕರೆ ಮತ್ತು ಸಕ್ರಿಯರಾಗಿರುವ ವಾಟ್ಸ್ಆಪ್ ಗ್ರೂಪ್‌ಗಳನ್ನು ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಓರ್ವ ನೈಜೀರಿಯಾ ಪ್ರಜೆ ಸೇರಿದಂತೆ 11 ಜನ ಸಂಶಯಾಸ್ಪದ ಅಕ್ರಮ ನಿವಾಸಿಗಳು ಪತ್ತೆಯಾಗಿದ್ದು, ಆ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೋಲಿಸರು ತಿಳಿಸಿದರು.
ಕಾರ್ಯಾಚರಣೆಯನ್ನು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಅವರ ಮಾರ್ಗದರ್ಶನದಲ್ಲಿ ಉಪ ಪೊಲೀಸ್ ಆಯುಕ್ತ ಡಾ. ವಿಕ್ರಂ ಅಮಟೆ ಹಾಗೂ ಎಸಿಪಿ ಉಮಾಶಂಕರ್ ನೇತೃತ್ವದಲ್ಲಿ ನಡೆಸಲಾಗಿದೆ.
ಇದನ್ನೂ ಓದಿ: ಬೆಂಗಳೂರು: ವೀಸಾ ಗಡುವು ಮೀರಿ ಅಕ್ರಮವಾಗಿ ನೆಲೆಸಿದ್ದ 8 ವಿದೇಶಿಗರು ಪೊಲೀಸ್ ವಶಕ್ಕೆ
ಫೆ. 2ನೇ ವಾರದಲ್ಲಿ ವೀಸಾ ಅವಧಿ ಗಡುವು ಮೀರಿದರೂ ಅಕ್ರಮವಾಗಿ ಬೆಂಗಳೂರಿನಲ್ಲಿ ನೆಲೆಯೂರಿದ್ದ ಎಂಟು ಮಂದಿ ವಿದೇಶಿಯರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಮಹಿಳೆ ಸೇರಿ 8 ಮಂದಿ ವಿದೇಶಿ ಪ್ರಜೆಗಳನ್ನು ಸಂಜಯನಗರ ಠಾಣೆ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. ಇವರಲ್ಲಿ ಕ್ಯಾಮರೂನ್ನ ಐವರು ಹಾಗೂ ಸುಡಾನ್ನ ಮೂವರು ವಿದೇಶಿ ಪ್ರಜೆಗಳು. ವಿದ್ಯಾರ್ಥಿ ವೀಸಾದಡಿ ಬೆಂಗಳೂರಿಗೆ ಬಂದಿದ್ದರು. ಆದರೆ ವೀಸಾ ಅವಧಿ ಮುಕ್ತಾಯಗೊಂಡಿದ್ದರೂ ಬೆಂಗಳೂರಿನಲ್ಲೇ ವಾಸವಾಗಿದ್ದರು. ಬೆಂಗಳೂರಿನಲ್ಲಿ ಅಕ್ರಮ ವಾಸಿಗಳ ಬಗ್ಗೆ ವಿಶೇಷ ಕಾರ್ಯಾಚರಣೆ ನಡೆಯುತ್ತಿದೆ. ಈ ಹಿನ್ನೆಲೆ 8 ವಿದೇಶಿಗರು ಪತ್ತೆಯಾಗಿದ್ದರು.

