ETV Bharat / state

ಡ್ರಗ್ಸ್ ಫ್ಯಾಕ್ಟರಿಗಳ ಮೇಲೆ ಮಹಾರಾಷ್ಟ್ರ ಪೊಲೀಸ್​ ದಾಳಿ ಪ್ರಕರಣ: ಮೂವರು ಇನ್ಸ್​​ಪೆಕ್ಟರ್​ಗಳು ಸಸ್ಪೆಂಡ್​

ಕರ್ತವ್ಯಲೋಪ ಆರೋಪದ ಮೇಲೆ ಮೂವರು ಇನ್ಸ್​​ಪೆಕ್ಟರ್​ಗಳನ್ನು ಅಮಾನತುಗೊಳಿಸಿ ಬೆಂಗಳೂರು ನಗರ ಪೊಲೀಸ್ ಆಯುಕ್ತರು ಆದೇಶಿಸಿದ್ದಾರೆ.

bengaluru-city-police-commissioner-suspends-three-inspectors-on-charges-of-dereliction-of-duty
ಸಾಂದರ್ಭಿಕ ಚಿತ್ರ (ETV Bharat)
author img

By ETV Bharat Karnataka Team

Published : December 29, 2025 at 8:17 PM IST

1 Min Read
Choose ETV Bharat

ಬೆಂಗಳೂರು: ಮಹಾರಾಷ್ಟ್ರ ಪೊಲೀಸರು ನಗರದ ಮೂರು ಕಡೆಗಳಲ್ಲಿ ದಾಳಿ ನಡೆಸಿ ಕೋಟ್ಯಂತರ ರೂಪಾಯಿ ಮಾದಕವಸ್ತು ವಶಕ್ಕೆ ಪಡೆದ ಬೆನ್ನಲ್ಲೇ, ಕರ್ತವ್ಯಲೋಪ ಆರೋಪದಡಿ ಮೂವರು ಇನ್ಸ್​​ಪೆಕ್ಟರ್​ಗಳನ್ನು ಅಮಾನತು ಮಾಡಿ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಆದೇಶ ಹೊರಡಿಸಿದ್ದಾರೆ.

ಆವಲಹಳ್ಳಿ ಠಾಣೆ ಇನ್ಸ್​​ಪೆಕ್ಟರ್​ ರಾಮಕೃಷ್ಣ ರೆಡ್ಡಿ, ಕೊತ್ತನೂರು ಠಾಣೆ ಇನ್ಸ್​​ಪೆಕ್ಟರ್​ ಚೇತನ್ ಹಾಗೂ ಬಾಗಲೂರು ಠಾಣೆ ಇನ್ಸ್​​ಪೆಕ್ಟರ್​ ಶಬರೀಶ್ ಅವರನ್ನು ಕರ್ತವ್ಯಲೋಪ ಆರೋಪದ ಮೇಲೆ ಸಸ್ಪೆಂಡ್ ಮಾಡಲಾಗಿದೆ.

ಇದಕ್ಕೂ ಮುನ್ನ, ಮಾಧ್ಯಮಗಳೊಂದಿಗೆ ಮಾತನಾಡಿದ್ದ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ''ನಗರದಲ್ಲಿ ಮೂರು ಡ್ರಗ್ಸ್ ಫ್ಯಾಕ್ಟರಿಗಳ ಬಗ್ಗೆ ನಮಗೂ ಮಾಹಿತಿಯಿತ್ತು. ಮಹಾರಾಷ್ಟ್ರ ಪೊಲೀಸರು ಕೂಡ ಬಂದು ದಾಳಿ ನಡೆಸುವಾಗ ನಮಗೂ ಸಹ ಮಾಹಿತಿ ನೀಡಿದ್ದರು. ಅಪರಾಧ ಎಸಗುವುದಕ್ಕೆ ಸ್ಥಳದ ವ್ಯಾಪ್ತಿಯಿಲ್ಲ. ವಿವಿಧ ಪ್ರಕರಣಗಳಲ್ಲಿ ನಮ್ಮ ಪೊಲೀಸರು ಸಹ ಬೇರೆ ರಾಜ್ಯಗಳಿಗೆ ತೆರಳಿ ದಾಳಿ ನಡೆಸಿರುವ ಉದಾಹರಣೆಗಳಿವೆ. ಇದರಲ್ಲಿ ಯಾರಾದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವುದು ಕಂಡುಬಂದರೆ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ'' ಎಂದು ಹೇಳಿದ್ದರು.

''ಮಹಾರಾಷ್ಟ್ರದ ಎಎನ್​ಟಿಎಫ್ ಹಾಗೂ ಎನ್​ಸಿಬಿಯೊಂದಿಗೆ ಜಂಟಿ ಕಾರ್ಯಾಚರಣೆಯೊಂದಿಗೆ ನಗರ ಪೊಲೀಸರು ದಾಳಿ ನಡೆಸಿದಾಗ, ಆವಲಹಳ್ಳಿಯ ಠಾಣಾ ವ್ಯಾಪ್ತಿಯ ಯೆರಪ್ಪನಹಳ್ಳಿ ಗ್ರಾಮದ ಮನೆಯೊಂದರಲ್ಲಿ 4.2 ಕಿಲೋಗ್ರಾಂ ಮೆಫೆಡ್ರೋನ್ (ಎಂಡಿ), ದ್ರವ ರೂಪದಲ್ಲಿ 17 ಕಿಲೋ ಗ್ರಾಂ ಕಚ್ಚಾವಸ್ತುಗಳು, ಬ್ಯಾರೆಲ್, ಮಿಕ್ಸಲ್​ಗಳು ಹಾಗೂ ತಯಾರಿಕಾ ಉಪಕರಣಗಳು ಪತ್ತೆಯಾಗಿದ್ದವು. ಕೊತ್ತನೂರು ಠಾಣಾ ವ್ಯಾಪ್ತಿಯ ಎನ್.ಜಿ.ಗೊಲ್ಲಹಳ್ಳಿ ಬಳಿ ಮತ್ತೊಂದು ಮಿಕ್ಸರ್, ಬಾಗಲೂರು ಬಳಿ ಕನ್ನೂರು ಬಳಿ ಕಾರ್ಪೆಂಟರ್ ಶೆಡ್​​ನಲ್ಲಿ ಪತ್ತೆಯಾದ ಡ್ರಗ್ಸ್ ತಯಾರಿಸುವ ಕಚ್ಚಾವಸ್ತುಗಳನ್ನು ವಶಕ್ಕೆ ಪಡೆದು ಆರೋಪಿಗಳನ್ನ ಬಂಧಿಸಲಾಗಿತ್ತು'' ಎಂದು ನಗರ ಪೊಲೀಸ್​ ಆಯುಕ್ತರು ತಿಳಿಸಿದ್ದರು.

''4.2 ಕೆ.ಜಿ ಎಂಡಿ ಮೆಫೆಡ್ರೋನ್ ವಶಕ್ಕೆ ಪಡೆದುಕೊಂಡ ಮಹಾರಾಷ್ಟ್ರ ಪೊಲೀಸರು 55 ಕೋಟಿ ಮೌಲ್ಯದ ಮಾದಕವಸ್ತುಗಳನ್ನು ವಶಕ್ಕೆ ಪಡೆದುಕೊಂಡಿರುವುದಾಗಿ ಹೇಳಿಕೊಂಡಿದ್ದರು. ಎನ್​ಸಿಬಿ ಪ್ರಕಾರ 1 ಕಿಲೋಗ್ರಾಂ ಮೆಫೆಡ್ರೋನ್​ಗೆ 30 ಲಕ್ಷ ರೂ. ನಿಗದಿಪಡಿಲಾಗಿದೆ. ವಶಕ್ಕೆ ಪಡೆದುಕೊಂಡ ಒಟ್ಟು ಮೌಲ್ಯ ಅಂದಾಜು 1.2 ಕೋಟಿ ರೂ.ಗಳಷ್ಟಾಗಿದೆ. 55 ಕೋಟಿ ಡ್ರಗ್ಸ್​ ವಶಪಡಿಸಿಕೊಂಡ ಹೇಳಿಕೆ ಬಗ್ಗೆ ಮಹಾರಾಷ್ಟ್ರ ಪೊಲೀಸರಿಂದ ಸ್ಪಷ್ಟನೆ ಕೇಳಲಾಗಿದೆ'' ಎಂದು ಸೀಮಂತ್ ಕುಮಾರ್ ಸಿಂಗ್ ಪ್ರತಿಕ್ರಿಯಿಸಿದ್ದರು.

ಇದನ್ನೂ ಓದಿ: ಬೆಂಗಳೂರಲ್ಲಿ 55 ಕೋಟಿ ಮೌಲ್ಯದ ಡ್ರಗ್ಸ್​ ವಶ ಎನ್ನುವುದು ಸತ್ಯಕ್ಕೆ ದೂರ: ಸಚಿವ ಪರಮೇಶ್ವರ್