ಗೃಹ ಜ್ಯೋತಿ ಪರಿಶೀಲನೆ ವೇಳೆ ಫಲಾನುಭವಿಗಳ ಪ್ರವರ್ಗ ಮಾಹಿತಿ ಕಡ್ಡಾಯವಲ್ಲ: ಬೆಸ್ಕಾಂ ಸ್ಪಷ್ಟನೆ
ಫಲಾನುಭವಿಯ ಪ್ರವರ್ಗದ (ಜಾತಿ ಪ್ರಮಾಣಪತ್ರ) ಸಂಬಂಧಿಸಿದ ಮಾಹಿತಿ ನೀಡುವುದು ಕೇವಲ ಐಚ್ಛಿಕವಾಗಿದೆ ಎಂದು ಬೆಸ್ಕಾಂ ತಿಳಿಸಿದೆ.

Published : July 3, 2026 at 3:17 PM IST
|Updated : July 3, 2026 at 3:35 PM IST
ಬೆಂಗಳೂರು: ರಾಜ್ಯಾದ್ಯಂತ ಜುಲೈ 1 ರಿಂದ ಆರಂಭಗೊಂಡಿರುವ ಗೃಹ ಜ್ಯೋತಿ ಯೋಜನೆಯ ಮಾಹಿತಿ ಸಂಗ್ರಹಕ್ಕೆ ಸಂಬಂಧಿಸಿದಂತೆ ಫಲಾನುಭವಿಯ ಪ್ರವರ್ಗ ಕುರಿತು ಕೇಳಿರುವ ಮಾಹಿತಿ ಕಡ್ಡಾಯವಲ್ಲ ಎಂದು ಬೆಸ್ಕಾಂ ಸ್ಪಷ್ಟಪಡಿಸಿದೆ.
ಬೆಸ್ಕಾಂನ ಸಿಬ್ಬಂದಿ ಹಾಗೂ ಮೀಟರ್ ರೀಡರ್ ಗಳು ಸೇವಾ ಸಿಂಧು ಮೊಬೈಲ್ ಅಪ್ಲಿಕೇಷನ್ ಹಾಗೂ ಮುದ್ರಿತ ಘೋಷಣಾ ಪತ್ರದ ಮೂಲಕ ಮಾಹಿತಿಯನ್ನು ಗೃಹ ಫಲಾನುಭವಿಗಳ ಮನೆಗೆ ತೆರಳಿ ಕಲೆ ಹಾಕುತ್ತಿದ್ದಾರೆ, ಫಲಾನುಭವಿಯ ಪ್ರವರ್ಗದ (ಜಾತಿ ಪ್ರಮಾಣಪತ್ರ) ಸಂಬಂಧಿಸಿದ ಮಾಹಿತಿ ನೀಡುವುದು ಕೇವಲ ಐಚ್ಛಿಕವಾಗಿದೆ ಎಂದು ಬೆಸ್ಕಾಂ ತಿಳಿಸಿದೆ. ಫಲಾನುಭವಿಗಳ ಜಾತಿ ಪ್ರಮಾಣಪತ್ರಕ್ಕೆ ಸಂಬಂಧಿಸಿದಂತೆ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಬಂದಿರುವ ಪ್ರಶ್ನೆಗೆ ಸಂಬಂಧಿಸಿದಂತೆ ಬೆಸ್ಕಾಂ ಈ ಸ್ಪಷ್ಟನೆ ನೀಡಿದೆ.
ಫಲಾನುಭವಿಗಳಿಗೆ ಜಾತಿ ಮಾಹಿತಿ ನೀಡಲು ಇಷ್ಟವಿಲ್ಲದಿದ್ದರೆ ಮೊಬೈಲ್ ಅಪ್ಲಿಕೇಷನ್ ನಲ್ಲಿರುವ ʼಮಾಹಿತಿ ನೀಡಲು ನಿರಾಕರಣೆʼ ಎಂಬ ಆಯ್ಕೆಯನ್ನು ನಮೂದಿಸಲು ಸಿಬ್ಬಂದಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಎಂದು ಬೆಸ್ಕಾಂ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನು ಓದಿ:
ಜುಲೈ 1 ರಿಂದ ಆರಂಭವಾಗಿದೆ ಮನೆ ಮನೆ ಪರಿಶೀಲನೆ: ರಾಜ್ಯ ಸರ್ಕಾರದ ಮಹಾತ್ವಕಾಂಕ್ಷಿ ಯೋಜನೆಗಳಲ್ಲೊಂದಾದ ಗೃಹ ಜ್ಯೋತಿ (GJY) ಯೋಜನೆಯ ಫಲಾನುಭವಿಗಳ ಮನೆ-ಮನೆ ಪರಿಶೀಲನೆ ಕಾರ್ಯವನ್ನು ಎಲ್ಲಾ ಎಸ್ಕಾಂಗಳ ಸಿಬ್ಬಂದಿ ಜುಲೈ 1ರಿಂದಲೇ ಕೈಗೊಂಡಿದ್ದಾರೆ.
2023ರ ಜುಲೈ ತಿಂಗಳಲ್ಲಿ ಜಾರಿಗೆ ಬಂದಿರುವ ಗೃಹ ಜ್ಯೋತಿ ಯೋಜನೆಯ ಪುನರ್ ಪರಿಶೀಲನಾ ಕಾರ್ಯ ನಡೆದಿದ್ದು, ಎಸ್ಕಾಂಗಳ ಮೀಟರ್ ರೀಡರ್ ಗಳು ಹಾಗೂ ಎಸ್ಕಾಂ ಸಿಬ್ಬಂದಿಗಳು ಗ್ರಾಹಕರ ಮನೆಗಳಿಗೆ ಭೇಟಿ ನೀಡಿ, ಫಲಾನುಭವಿಗಳ ದಾಖಲೆ ಪರಿಶೀಲನೆ ನಡೆಸಿ ಅವರ ಮಾಹಿತಿ ಸಂಗ್ರಹಿಸಿ, ಮೊಬೈಲ್ ಆಪ್ ಹಾಗೂ ಘೋಷಣಾ ಪತ್ರ ಮೂಲಕ ಅರ್ಜಿ ಭರ್ತಿ ಪ್ರಕ್ರಿಯೆನ್ನು ಪೂರ್ಣಗೊಳಿಸುತ್ತಿದ್ದಾರೆ.
ಯಾವೆಲ್ಲಾ ದಾಖಲೆಗಳನ್ನು ತೋರಿಸಬೇಕು: ಎಸ್ಕಾಂ ಸಿಬ್ಬಂದಿ ಮನೆ-ಮನೆ ಭೇಟಿ ಸಂದರ್ಭದಲ್ಲಿ ಈ ಕೆಳಗಿನ ದಾಖಲೆಗಳನ್ನು ಸಿಬ್ಬಂದಿಗೆ ತೋರಿಸಲು ಎಸ್ಕಾಂ ವಿನಂತಿಸಿದೆ. ಆಧಾರ್ ಕಾರ್ಡ್, ಫಲಾನುಭವಿಯ ಪಾಸ್ ಪೋರ್ಟ್ ಅಳತೆಯ ಭಾವಚಿತ್ರ, ಮತದಾರರ ಗುರುತಿನ ಚೀಟಿ (ವೋಟರ್ ಐಡಿ), ಪ್ಯಾನ್ ಕಾರ್ಡ್, ಬಾಡಿಗೆ ಒಪ್ಪಂದದ ಪತ್ರಗಳು (ಅನ್ವಯಿಸುವಲ್ಲಿ ಮಾತ್ರ), ರೇಷನ್ ಕಾರ್ಡ್ ಹಾಗೂ ಜಾತಿ ಪ್ರಮಾಣ ಪತ್ರವನ್ನು ತೋರಿಸಲು ಕೋರಲಾಗಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಇಲಾಖೆ ಈಗ ಸ್ಪಷ್ಟನೆಯನ್ನು ನೀಡಿದೆ.
ಮೀಟರ್ ರೀಡರ್ಗಳಿಗೆ ಸಹಕಾರ ನೀಡಲು ಮನವಿ: ಈ ಪ್ರಕ್ರಿಯೆಗೆ ಮೀಟರ್ ರೀಡರ್ ಮೂಲಕ ಸ್ಥಳದಲ್ಲೇ ಪರಿಶೀಲನೆ ಮಾಡುವುದು ಏಕೈಕ ಮಾರ್ಗವಾಗಿದ್ದು, ಗ್ರಾಹಕರು ಮತ್ತು ಫಲಾನುಭವಿಗಳು ಮೀಟರ್ ರೀಡರ್ಗಳಿಗೆ ಸಂಪೂರ್ಣ ಸಹಕಾರ ನೀಡಿ, ಪರಿಶೀಲನೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಇಂಧನ ಇಲಾಖೆ ಮನವಿ ಕೂಡಾ ಮಾಡಿಕೊಂಡಿತ್ತು. ರಾಜ್ಯದ ಐದು ಎಸ್ಕಾಂಗಳಾದ ಬೆಸ್ಕಾಂ, ಹೆಸ್ಕಾಂ, ಮೆಸ್ಕಾಂ, ಜೆಸ್ಕಾಂ ಹಾಗೂ ಸೆಸ್ಕ್ ಗಳ ವ್ಯಾಪ್ತಿಯಲ್ಲಿ ಪರಿಶೀಲನಾ ಕಾರ್ಯ ನಡೆಯುತ್ತಿದೆ.

