ಬಳ್ಳಾರಿ ಬ್ಯಾನರ್ ಗಲಾಟೆ ಪ್ರಕರಣ: ಘಟನೆ ತನಿಖೆಯನ್ನು ಸಿಐಡಿಗೆ ವರ್ಗಾವಣೆ ಮಾಡಿದ ಸರ್ಕಾರ
ಕ್ರೈಮ್ ನಂಬರ್ 4ರಲ್ಲಿನ 25 ಬಂಧಿತ ಆರೋಪಿಗಳಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

Published : January 9, 2026 at 10:27 PM IST
ಬೆಂಗಳೂರು: ಬಳ್ಳಾರಿಯಲ್ಲಿ ನಡೆದಿದ್ದ ಬ್ಯಾನರ್ ಗಲಾಟೆ ವೇಳೆ ಗುಂಡಿನ ದಾಳಿಯಿಂದ ಓರ್ವ ಸಾವನ್ನಪ್ಪಿದ ಪ್ರಕರಣವು ರಾಜ್ಯಾದ್ಯಂತ ಭಾರಿ ಚರ್ಚೆಗೆ ಗ್ರಾಸವಾದ ಬೆನ್ನಲ್ಲೇ ಈ ಪ್ರಕರಣದ ಹೆಚ್ಚಿನ ತನಿಖೆಗಾಗಿ ರಾಜ್ಯ ಸರ್ಕಾರವು ಸಿಐಡಿಗೆ ವರ್ಗಾವಣೆ ಮಾಡಿದೆ.
ಪ್ರಕರಣದ ಕಾವು ಹೆಚ್ಚಾಗುತ್ತಿದ್ದಂತೆ ಪ್ರತಿ ಪಕ್ಷಗಳು ಕೇಂದ್ರ ತನಿಖಾ ಸಂಸ್ಥೆಗಳಿಗೆ ಪ್ರಕರಣ ವರ್ಗಾವಣೆ ಮಾಡುವಂತೆ ಒತ್ತಡ ಹಾಕಿದ್ದವು. ಇದರ ಬೆನ್ನಲ್ಲೇ ರಾಜ್ಯ ಸರ್ಕಾರವು ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡಿದೆ. ಬಳ್ಳಾರಿಯ ಬ್ರೂಸ್ ಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಲ್ಲ ಪ್ರಕರಣವನ್ನೂ ಸಿಐಡಿಗೆ ವರ್ಗಾಯಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಬಳ್ಳಾರಿಯಲ್ಲಿ ನಡೆದ ಬ್ಯಾನರ್ ಗಲಭೆ ಪ್ರಕರಣದಲ್ಲಿ ಗನ್ ಮ್ಯಾನ್ ಗುರುಚರಣ್ ಸಿಂಗ್ ಹೊರತುಪಡಿಸಿ ಉಳಿದ 25 ಆರೋಪಿಗಳಿಗೆ ಶುಕ್ರವಾರ ಬೆಂಗಳೂರಿನ 42ನೇ ಎಸಿಜೆಎಂ ನ್ಯಾಯಾಲಯವು ಜಾಮೀನು ಮಂಜೂರು ಮಾಡಿ ಆದೇಶಿಸಿದೆ. ಬಳ್ಳಾರಿ ಬ್ಯಾನರ್ ಗಲಾಟೆ ಪ್ರಕರಣದಲ್ಲಿ ಬಳ್ಳಾರಿಯ ಬ್ರೂಸ್‌ಪೇಟೆ ಠಾಣೆಯಲ್ಲಿ 6 ಪ್ರಕರಣ ದಾಖಲಾಗಿವೆ. ಗನ್‌ಮ್ಯಾನ್‌ಗಳಾದ ಗುರುಚರಣ್ ಸಿಂಗ್, ಬಲ್ಜಿತ್ ಸಿಂಗ್ ಹಾಗೂ ಮಹೇಂದ್ರ ಸಿಂಗ್ ಸೇರಿದಂತೆ ಕಾಂಗ್ರೆಸ್‌ನ 10, ಬಿಜೆಪಿಯ 11 ಕಾರ್ಯಕರ್ತರು ಸೇರಿದಂತೆ ಒಟ್ಟು 26 ಜನರನ್ನು ಪೊಲೀಸರು ಬಂಧಿಸಿದ್ದರು. ಈ ಪೈಕಿ ಕ್ರೈಮ್ ನಂಬರ್ 4ರಲ್ಲಿನ 25 ಬಂಧಿತ ಆರೋಪಿಗಳಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಪ್ರಮುಖ ಆರೋಪಿ ಖಾಸಗಿ ಗನ್ ಮ್ಯಾನ್ ಗುರುಚರಣ್ ಸಿಂಗ್ಗೆ ಸಂಬಂಧಿಸಿದ ಗನ್‌ನಿಂದಲೇ 12 ಎಂಎಂ ಬುಲೆಟ್ ಫೈರ್ ಆಗಿರುವ ಹಿನ್ನೆಲೆಯಲ್ಲಿ ಆತನಿಗೆ ನ್ಯಾಯಾಲಯವು ಜಾಮೀನು ನೀಡಿಲ್ಲ ಎಂದು ತಿಳಿದು ಬಂದಿದೆ.
ಏನಿದು ಪ್ರಕರಣ?: ಬಳ್ಳಾರಿನ ಗಲಭೆ ಕೇಸ್ ಸಂಬಂಧ ಜ.5ರಂದು ಪ್ರಮುಖ ಆರೋಪಿ ಗುರುಚರಣ್ ಸಿಂಗ್ ಸೇರಿ 26 ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿತ್ತು. ಇದರ ಬೆನ್ನಲ್ಲೇ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಆರೋಪಿಗಳನ್ನು ಪೊಲೀಸರು ಸ್ಥಳಾಂತರಿಸಿದ್ದರು.
ಇದನ್ನು ಓದಿ: ಬ್ಯಾನರ್ ಗಲಾಟೆ ಪ್ರಕರಣ - ಸರ್ಕಾರ ಕಠಿಣ ಕ್ರಮ ಕೈಗೊಳ್ಳುವ ವಿಶ್ವಾಸವಿತ್ತು: ಅದು ಹುಸಿಯಾಗಿದೆ ಎಂದ ಜನಾರ್ದನ ರೆಡ್ಡಿ
ಶಾಸಕರ ಬಂಧನಕ್ಕೆ ಜನಾರ್ದನ ರೆಡ್ಡಿ ಒತ್ತಾಯ: ಬಳ್ಳಾರಿ ನಗರದ ಅವರ ನಿವಾಸದ ಕಚೇರಿಯಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಚಿವ ಜನಾರ್ದನ ರೆಡ್ಡಿ, "ಮೃತ ರಾಜಶೇಖರನ ಶವ ಸಂಸ್ಕಾರ ವಿಚಾರದಲ್ಲಿ ನಡೆದ ಗೌಪ್ಯತೆಯ ಕುರಿತು ವಿಡಿಯೋ ರಿಲೀಸ್ ಮಾಡಿರುವೆ. ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಶಾಸಕ ಭರತ್ ರೆಡ್ಡಿ ಹಾಗೂ ಆತನ ಸಹಚರರನ್ನು ಕೂಡಲೇ ಬಂಧಿಸಬೇಕು" ಎಂದು ಅವರು ಒತ್ತಾಯಿಸಿದ್ದಾರೆ.
ಭರತ್ ರೆಡ್ಡಿ ಬೆಂಬಲಕ್ಕೆ ಸರ್ಕಾರ ನಿಂತಿದೆ. ಪೊಲೀಸರ ಹಾಗೂ ಸಿಐಡಿ ತನಿಖೆಯಲ್ಲಿ ನ್ಯಾಯ ಸಿಗುವ ಸಾಧ್ಯತೆಯಿಲ್ಲ. ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು" ಎಂದು ಇದೇ ವೇಳೆ ಒತ್ತಾಯಿಸಿದ್ದಾರೆ.

