ಕೊಲೆ ಪ್ರಕರಣ ಭೇದಿಸಿದ ಬೆಳಗಾವಿ ಪೊಲೀಸರು: ಮಹಾರಾಷ್ಟ್ರದಲ್ಲಿ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳ ಬಂಧನ
ನಿಪ್ಪಾಣಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಕೊಲೆ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

Published : August 30, 2026 at 7:33 PM IST
ಚಿಕ್ಕೋಡಿ: ನಿಪ್ಪಾಣಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿ, ಮಹಾರಾಷ್ಟ್ರದ ಪುಣೆಯಲ್ಲಿ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಬೆಳಗಾವಿ ಎಸ್ಪಿ ರಾಮರಾಜನ ಮಾಹಿತಿ ನೀಡಿದರು.
ಬೆಳಗಾವಿ ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಎಸ್ಪಿ, ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಗಡಿಂಗ್ಲಜ್ ತಾಲೂಕಿನ ಹೊಳೆಹಿಟ್ಟಿ ಗ್ರಾಮದ ನಿವಾಸಿ ಮೊಹಮ್ಮದ್ ಶಮಶೇರ್ ಖಲೀಫ್ (52) ಕೊಲೆಯಾದ ವ್ಯಕ್ತಿ. ಪ್ರಕರಣಕ್ಕೆ ಸಂಬಂಧಿಸಿದಂತೆ ಯುವರಾಜ್ ವಿರೂಪಾಕ್ಷ ಮುನ್ನೋಳಿ (22) ಹಾಗೂ ಸ್ವಪ್ನಿಲ್ ಶಿವಾನಂದ ರಾಮಪುರ (21) ಎಂಬ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದರು.
ಆಗಸ್ಟ್ 25ರ ರಾತ್ರಿ 8.20ರಿಂದ ಆಗಸ್ಟ್ 26ರ ಬೆಳಗ್ಗೆ 6 ಗಂಟೆಯ ನಡುವಿನ ಅವಧಿಯಲ್ಲಿ ಅಪರಿಚಿತ ವ್ಯಕ್ತಿಗಳು ಮೊಹಮ್ಮದ್ ಶಮಶೇರ್ ಖಲೀಫ್ ಅವರನ್ನು ಮೋಟಾರ್ ಸೈಕಲ್‌ನಲ್ಲಿ ಕರೆದೊಯ್ದು ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ತವಂದಿ ಗ್ರಾಮದ ಗುಡ್ಡದಲ್ಲಿ ಕೊಲೆ ಮಾಡಿದ್ದರು. ಈ ಕುರಿತು ಮೃತರ ಪತ್ನಿ ನಸೀಮಾ ಮೊಹಮ್ಮದ್ ಖಲೀಫ್ ನೀಡಿದ ದೂರಿನ ಆಧಾರದ ಮೇಲೆ ನಿಪ್ಪಾಣಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಿಪ್ಪಾಣಿ ವೃತ್ತ ನಿರೀಕ್ಷಕರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಲಾಗಿತ್ತು. ತನಿಖೆ ವೇಳೆ ಆರೋಪಿಗಳು ಮಹಾರಾಷ್ಟ್ರದ ಪುಣೆಯಲ್ಲಿ ತಲೆಮರೆಸಿಕೊಂಡಿರುವ ಬಗ್ಗೆ ಖಚಿತ ಮಾಹಿತಿ ದೊರೆತಿದ್ದು, ಪೊಲೀಸರು ಪುಣೆಗೆ ತೆರಳಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಸುದೀರ್ಘ ವಿಚಾರಣೆ ನಡೆಸಿದಾಗ ಕೊಲೆಯ ಹಿಂದಿನ ಕಾರಣ ಬಯಲಾಗಿದೆ ಎಂದು ತಿಳಿಸಿದರು.
ಆರೋಪಿ ಯುವರಾಜ್ ಮುನ್ನೋಳಿ ಎಂಬಾತ ಮೊಹಮ್ಮದ್ ಶಮಶೇರ್ ಖಲೀಫ್ ಅವರ ಹಿರಿಯ ಮಗಳನ್ನು ಕಳೆದ 2-3 ವರ್ಷಗಳಿಂದ ಪ್ರೀತಿಸುತ್ತಿದ್ದ. ಈ ವಿಚಾರ ಮೃತರ ಕುಟುಂಬಕ್ಕೆ ತಿಳಿದುಬಂದ ಹಿನ್ನೆಲೆಯಲ್ಲಿ ಗ್ರಾಮದ ಹಿರಿಯರ ಸಮ್ಮುಖದಲ್ಲಿ ಪಂಚಾಯಿತಿ ನಡೆಸಿ ಪ್ರಕರಣವನ್ನು ಮುಕ್ತಾಯಗೊಳಿಸಲಾಗಿತ್ತು. ಆದರೆ ನಂತರ ಯುವರಾಜ್ ಹಾಗೂ ಖಲೀಫ್ ನಡುವೆ ವೈಷಮ್ಯ ಬೆಳೆದಿತ್ತು. ಇತ್ತೀಚೆಗೆ ಮೊಹಮ್ಮದ್ ಖಲೀಫ್ ಅವರು ಗ್ರಾಮದ ಹಿರಿಯರಾದ ರಾವಸಾಬ್ ಪಾಟೀಲ್ ಅವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. ಈ ಹಿಂದೆ ರಾವಸಾಬ್ ಪಾಟೀಲ್ ಅವರ ಬಳಿ ಕೆಲಸ ಮಾಡುತ್ತಿದ್ದ ಯುವರಾಜ್ ಇತ್ತೀಚೆಗೆ ಕೆಲಸ ಬಿಟ್ಟಿದ್ದ. ತನ್ನ ಸ್ನೇಹಿತ ಸ್ವಪ್ನಿಲ್‌ನೊಂದಿಗೆ ಸೇರಿ ಖಲೀಫ್ ಅವರನ್ನು ಯುವರಾಜ್ ತವಂದಿ ಗುಡ್ಡಕ್ಕೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಿದ್ದರು. ಈ ವೇಳೆ ವಾಗ್ವಾದ ನಡೆದಿದ್ದು, ಯುವರಾಜ್ ಮುನ್ನೋಳಿ ಹಾಗೂ ಸ್ವಪ್ನಿಲ್ ರಾಮಪುರ ಸೇರಿಕೊಂಡು ಮಾರಕಾಸ್ತ್ರದಿಂದ ಇರಿದು, ತಲೆಯ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾರೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಬಳಿಕ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು. ಇದೀಗ ಇಬ್ಬರು ಆರೋಪಿಗಳನ್ನು ಮಹಾರಾಷ್ಟ್ರ ಪುಣೆಯಲ್ಲಿ ಬಂಧಿಸಲಾಗಿದ್ದು, ನಿಪ್ಪಾಣಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಎಸ್ಪಿ ಮಾಹಿತಿ ನೀಡಿದರು.
ಇದನ್ನೂ ಓದಿ: ಚಿಕ್ಕೋಡಿ: ಬಾಲಕಿಯ ಕೊಲೆ ಪ್ರಕರಣ, ಅಪರಾಧಿಗೆ ಜೀವಾವಧಿ ಶಿಕ್ಷೆ

