ಬೆಳೆಯುತ್ತಿರುವ ಬೆಳಗಾವಿಗೆ ಬೇಕಿದೆ ಭರಪೂರ ಅನುದಾನ: ರಾಜ್ಯ ಬಜೆಟ್ ಮೇಲೆ ಜಿಲ್ಲೆಯ ಜನರ ನಿರೀಕ್ಷೆಗಳು
ಈ ಬಾರಿಯ ಬಜೆಟ್ನಲ್ಲಿ ಸಿಎಂ ಸಿದ್ದರಾಮಯ್ಯ ಅವರು ಹೆಚ್ಚಿನ ಅನುದಾನ, ಹೊಸ ಕಾರ್ಯಕ್ರಮಗಳನ್ನು ಘೋಷಿಸುತ್ತಾರೆ ಎಂದು ಬೆಳಗಾವಿಯ ಜನ ಆಸೆಗಣ್ಣಿನಿಂದ ಕಾಯುತ್ತಿದ್ದಾರೆ.

Published : February 27, 2026 at 3:57 PM IST
ಬೆಳಗಾವಿ: ಬೆಳೆಯುತ್ತಿರುವ ಬೆಳಗಾವಿ ಜಿಲ್ಲೆಗೆ ಮತ್ತಷ್ಟು ಶಕ್ತಿ ನೀಡುವ ನಿಟ್ಟಿನಲ್ಲಿ ಈ ಬಾರಿಯ ಬಜೆಟ್ ಬಗ್ಗೆ ಇಲ್ಲಿನ ಜನ ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ಹೆಚ್ಚಿನ ಅನುದಾನ, ಹೊಸ ಕಾರ್ಯಕ್ರಮಗಳನ್ನು ಘೋಷಿಸುತ್ತಾರೆ ಅಂತಾ ಆಸೆಗಣ್ಣಿನಿಂದ ಕಾಯುತ್ತಿದ್ದಾರೆ.
ಪ್ರತಿ ಬಜೆಟ್ ಮಂಡನೆ ಸಂದರ್ಭದಲ್ಲೂ ಈ ಭಾಗದ ಜನರು ಜಿಲ್ಲಾ ವಿಭಜನೆ, ಬೆಳಗಾವಿ ಎರಡನೇ ರಾಜಧಾನಿ ಅಧಿಕೃತ ಘೋಷಣೆ, ಸುವರ್ಣ ವಿಧಾನಸೌಧಕ್ಕೆ ಕಚೇರಿಗಳ ಸ್ಥಳಾಂತರ, ಫೌಂಡ್ರಿ ಕ್ಲಸ್ಟರ್ ನಿರ್ಮಾಣ, ಮಂದಗತಿಯಲ್ಲಿ ಸಾಗುತ್ತಿರುವ ರೈಲ್ವೆ, ನೀರಾವರಿ ಯೋಜನೆಗಳಿಗೆ ವೇಗ ನೀಡುವುದೂ ಸೇರಿ ಹತ್ತು ಹಲವು ಬೇಡಿಕೆಗಳು ಈಡೇರುತ್ತವೆ ಅಂತಾ ಹಲವು ವರ್ಷಗಳಿಂದ ಕಾದು ಕುಳಿತಿರುತ್ತಾರೆ. ಆದರೆ, ಅವು ಕೇವಲ ಬೇಡಿಕೆ ಆಗಿಯೇ ಉಳಿದಿರುವುದು ವಿಪರ್ಯಾಸ.
ಈಗ ಮತ್ತೆ ಬಜೆಟ್ ಮಂಡನೆಗೆ ಸಿದ್ಧತೆ ನಡೆದಿದೆ. ಈ ಬಾರಿ ಆದರೂ ನಮ್ಮ ಬೇಡಿಕೆ ಈಡೇರಲಿ ಅಂತಾ ಆಗ್ರಹಿಸುತ್ತಿದ್ದಾರೆ. ಬರೀ ಬಾಯಿ ಮಾತಿಗೆ ಬೆಳಗಾವಿ ಎರಡನೇ ರಾಜಧಾನಿ ಅಂತಾ ಕರೆಯದೇ ಅಧಿಕೃತವಾಗಿ ಘೋಷಣೆ ಮಾಡಿ. ಎರಡನೇ ರಾಜಧಾನಿಗೆ ತಕ್ಕಹಾಗೆ, ಬೆಂಗಳೂರಿಗೆ ಸಮಾನವಾಗಿ ಬೆಳಗಾವಿ ಬೆಳೆಸಲು ಇಚ್ಛಾಶಕ್ತಿ ಪ್ರದರ್ಶಿಸಬೇಕಿದೆ. ಸುವರ್ಣ ವಿಧಾನಸೌಧ ಬರೀ ಚಳಿಗಾಲ ಅಧಿವೇಶನಕ್ಕೆ ಸಿಮೀತ ಮಾಡದೇ, ವರ್ಷಪೂರ್ತಿ ಕಾರ್ಯ ಚಟುವಟಿಕೆಯಿಂದ ಇರಲು ರಾಜ್ಯಮಟ್ಟದ ಕಚೇರಿಗಳನ್ನು ಸ್ಥಳಾಂತರ ಮಾಡುವ ಬಗ್ಗೆ ಈ ಸಲದ ಬಜೆಟ್ನಲ್ಲಿ ಸರ್ಕಾರ ಗಟ್ಟಿ ನಿರ್ಧಾರ ತೆಗೆದುಕೊಳ್ಳುವಂತೆ ಆಗ್ರಹ ಕೇಳಿ ಬಂದಿದೆ.

ರಿಂಗ್ ರೋಡ್, ಬೈಪಾಸ್ ಕಾಮಗಾರಿ ಪ್ರಗತಿಯಲ್ಲಿದ್ದು, ಆಮೆಗತಿಯಲ್ಲಿ ಸಾಗುತ್ತಿರುವುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ. ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿ ರೈತರಿಗೆ ಪರಿಹಾರದ ಮೊತ್ತ ನೀಡಿ, ಬೇಗನೇ ಮುಗಿಸಬೇಕಿದೆ. ಜೊತೆಗೆ ನಗರದ ಸಂಚಾರ ದಟ್ಟಣೆ ನಿಯಂತ್ರಿಸಲು ಯೋಜಿಸಿರುವ ಫ್ಲೈ ಓವರ್ಗೆ ಅಗತ್ಯ ಅನುದಾನ ಬಿಡುಗಡೆ ಮಾಡಿ, ಕಾಮಗಾರಿ ಶೀಘ್ರವೇ ಆರಂಭಿಸಬೇಕಿದೆ. ಬೆಳಗಾವಿ ಮಹಾನಗರ ಆದರೂ ಇಲ್ಲಿ ಈವರೆಗೆ ಶೇ.30ರಷ್ಟು ಮಾತ್ರ ಒಳಚರಂಡಿ ವ್ಯವಸ್ಥೆ ಇದೆ. ಪೂರ್ಣ ಪ್ರಮಾಣದಲ್ಲಿ ಒಳಚರಂಡಿ ಕಲ್ಪಿಸಬೇಕಿದೆ. ಮಳೆಗಾಲದಲ್ಲಿ ಪ್ರತಿವರ್ಷವೂ ಪ್ರವಾಹ ಸೃಷ್ಟಿಸುವ ಬಳ್ಳಾರಿ ನಾಲಾ ಹೂಳೆತ್ತುವ ಬಗ್ಗೆ ಬಜೆಟ್ನಲ್ಲಿ ಘೋಷಣೆ ಮಾಡಬೇಕಿದೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ಮತ್ತು ಅಪರಾಧ ತಡೆಗಟ್ಟಲು ಜಿಲ್ಲೆಯಲ್ಲಿ ಪೊಲೀಸ್ ಠಾಣೆಗಳನ್ನು ಹೆಚ್ಚಿಸಬೇಕಿದೆ.

ಆಗುತ್ತಾ ಜಿಲ್ಲಾ ವಿಭಜನೆ?: ಬೆಳಗಾವಿ ರಾಜ್ಯದಲ್ಲೆ ಅತೀ ದೊಡ್ಡ ಜಿಲ್ಲೆ. 15 ತಾಲೂಕು, 18 ವಿಧಾನಸಭೆ ಕ್ಷೇತ್ರಗಳು, 2 ಲೋಕಸಭೆ ಕ್ಷೇತ್ರಗಳನ್ನು ಹೊಂದಿದೆ. ಅಥಣಿ ತಾಲೂಕಿನ ಕೊನೆಯ ಗ್ರಾಮಗಳಿಂದ ಬೆಳಗಾವಿ ಸುಮಾರು 200 ಕಿ.ಮೀ. ದೂರದಲ್ಲಿದೆ. ತಮ್ಮ ಕೆಲಸಕ್ಕಾಗಿ ಅಲ್ಲಿನ ಜನರು ಬೆಳಗಾವಿಗೆ ಬಂದು ಹೋಗಲು ಇಡೀ ದಿನ ಪ್ರಯಾಣಿಸಬೇಕು. ಹೀಗೆ ಬಂದಾಗ ಸಂಬಂಧಿಸಿದ ಅಧಿಕಾರಿಗಳು ಇರದೇ ಹೋದರೆ ಇಲ್ಲಿಯೇ ಒಂದು ದಿನ ಕಳೆಯಬೇಕು. ಹಾಗಾಗಿ, ಜಿಲ್ಲಾ ವಿಭಜನೆ ಆಗಬೇಕು ಎಂಬುದು ಹಲವು ದಶಕಗಳ ಕೂಗು. ಬೆಳಗಾವಿ, ಚಿಕ್ಕೋಡಿ, ಬೈಲಹೊಂಗಲ-ಗೋಕಾಕ್-ಅಥಣಿ ಜಿಲ್ಲೆಗೆ ಆಗ್ರಹ ಹೆಚ್ಚಿದೆ. ಆದರೆ, ಜಿಲ್ಲಾ ವಿಭಜನೆಗೆ ಜಿಲ್ಲೆಯ ಶಾಸಕರ ನಡುವೆ ಒಮ್ಮತ ಮೂಡಿ ಬರುತ್ತಿಲ್ಲ. ಇದೇ ಕಾರಣಕ್ಕೆ ಹಿನ್ನಡೆ ಆಗುತ್ತಿದೆ. ಆಡಳಿತ ಸುಗಮವಾಗಿ ನಡೆಯಲು, ಅಭಿವೃದ್ಧಿ ದೃಷ್ಟಿಯಿಂದ ಈ ಬಾರಿ ಬಜೆಟ್ನಲ್ಲಿ ಸಿಎಂ ಸಿದ್ದರಾಮಯ್ಯ ಬೆಳಗಾವಿ ಜಿಲ್ಲೆ ವಿಭಜಿಸುವ ದಿಟ್ಟ ನಿರ್ಧಾರ ತೆಗೆದುಕೊಳ್ಳಬೇಕಿದೆ.

ನೀರಾವರಿ ಯೋಜನೆಗಳಿಗೆ ಬೇಕಿದೆ ಬಲ: ಬೆಳಗಾವಿ ಜಿಲ್ಲೆಯಲ್ಲಿ ಸಪ್ತನದಿಗಳು ಹರಿಯುತ್ತವೆ. ಆದರೂ ಸಮರ್ಪಕ ನೀರಾವರಿ ಕಲ್ಪಿಸಲು ಈವರೆಗೂ ಸಾಧ್ಯವಾಗಿಲ್ಲ. ಹಲವು ದಶಕಗಳಿಂದ ಏತ ನೀರಾವರಿ ಯೋಜನೆಗಳಿಗೆ ಬೇಡಿಕೆ ಇದೆ. ಪ್ರಮುಖವಾಗಿ ಅಥಣಿ ತಾಲೂಕಿನ ಖಿಳೇಗಾವ ಬಸವೇಶ್ವರ ಏತ ನೀರಾವರಿ ಯೋಜನೆಗೆ 2015ರಲ್ಲಿ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದ್ದರು. ಅದು ಇನ್ನೂ ಪೂರ್ಣಗೊಂಡಿಲ್ಲ. ಶೇ.90ರಷ್ಟು ಮಾತ್ರ ಕಾಮಗಾರಿ ಮುಗಿದಿದೆ. ಹೆಚ್ಚಿನ ಅನುದಾನ ಒದಗಿಸಿ ಶೀಘ್ರವೇ ಕಾಲುವೆಗಳಿಗೆ ನೀರು ಹರಿಸುವ ಕೆಲಸ ಮಾಡಬೇಕಿದೆ. ಅದೇ ರೀತಿ ಚಚಡಿ ಏತ ನೀರಾವರಿ, ಚನ್ನವೃಷಭೇಂದ್ರ ಏತ ನೀರಾವರಿ, ಕರಗಾಂವ ಏತ ನೀರಾವರಿ, ಮಹಾಲಕ್ಷ್ಮೀ ಏತ ನೀರಾವರಿ, ರಾಮೇಶ್ವರ ಏತ ನೀರಾವರಿ, ವೀರಭದ್ರೇಶ್ವರ ಏತ ನೀರಾವರಿ ಸೇರಿ ಮತ್ತಿತರ ನೀರಾವರಿ ಯೋಜನೆಗಳಿಗೆ ಈ ಬಾರಿಯ ಬಜೆಟ್ ನಲ್ಲಿ ಪೂರ್ಣ ಪ್ರಮಾಣದಲ್ಲಿ ಅನುದಾನ ಘೋಷಿಸುವಂತೆ ರೈತರು ಆಗ್ರಹಿಸುತ್ತಿದ್ದಾರೆ.
ಕರಿಸಿದ್ದೇಶ್ವರ, ಬೆಂಡವಾಡ ಹಾಗೂ ಹನುಮಾನ ಏತ ನೀರಾವರಿ ಯೋಜನೆಗಳು ನೆನೆಗುದಿಗೆ ಬಿದ್ದಿವೆ. ಇನ್ನು ಕಳಸಾ, ಬಂಡೂರಿ, ಮಹದಾಯಿ ಯೋಜನೆಗೆ ಬಜೆಟ್ ನಲ್ಲಿ ಬರೀ ಅನುದಾನ ಇಡುವುದೇ ಆಯಿತು. ಆದರೆ, ಕೆಲಸ ಮಾತ್ರ ಶುರು ಆಗಿಲ್ಲ. ಹಾಗಾಗಿ, ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಗಟ್ಟಿ ನಿರ್ಣಯ ತೆಗೆದುಕೊಳ್ಳಬೇಕಿದೆ.
ಕೈಗಾರಿಕೆಗಳಿಗೆ ಬೇಕಿದೆ ಭರಪೂರ ಅನುದಾನ: ಬೆಳಗಾವಿ ರಾಜ್ಯದಲ್ಲೆ ಎರಡನೇ ಅತೀ ಹೆಚ್ಚು ಜಿಎಸ್‌ಟಿ ಸಂಗ್ರಹವಾಗುವ ಜಿಲ್ಲೆ. ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ಮೂರು ರಾಜ್ಯಗಳಿಗೆ ಕೇಂದ್ರಸ್ಥಾನ ಆಗಿದೆ. ವಿಮಾನ, ರೈಲು ಸೇವೆ ಇದೆ. ಆದರೂ ಇಲ್ಲಿ ದೊಡ್ಡ ದೊಡ್ಡ ಕೈಗಾರಿಕೆಗಳನ್ನು ಸ್ಥಾಪಿಸಲು ರಾಜ್ಯ ಸರ್ಕಾರ ಮನಸ್ಸು ಮಾಡದೇ ಇರುವುದು ಇಲ್ಲಿನ ಕೈಗಾರಿಕೋದ್ಯಮಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ಫೌಂಡ್ರಿ ಕ್ಲಸ್ಟರ್, ಜವಳಿ ಪಾರ್ಕ್, ಐಟಿ ಪಾರ್ಕ್, ಶಾಹಪುರ ಸೀರೆ ಕ್ಲಸ್ಟರ್, ನಿಪ್ಪಾಣಿ ತಾಲೂಕಿನ ಮಾಂಗೂರ ಬೆಳ್ಳಿಪಾರ್ಕ್ ಬರೀ ಘೋಷಣೆಗೆ ಮಾತ್ರ ಸಿಮೀತ ಆಗಿವೆ. ಇವುಗಳನ್ನು ಅನುಷ್ಠಾನಕ್ಕೆ ತರುವ ಕೆಲಸ ಆಗಬೇಕಿದೆ.
ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ ಏನಾಯಿತು?: ಈ ಹಿಂದೆ ಬಜೆಟ್ನಲ್ಲಿ ಘೋಷಿಸಿದಂತೆ ಬೆಳಗಾವಿ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ನಿರ್ಮಾಣವಾಗಿ, ಸಾರ್ವಜನಿಕರ ಸೇವೆಗೆ ಮುಕ್ತವಾಗಿದೆ. ಆದರೆ, ವೈದ್ಯರ ಕೊರತೆಯಿಂದಾಗಿ ಕೆಎಲ್ಇ ಆಸ್ಪತ್ರೆ ವೈದ್ಯರೇ ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಾಗಾಗಿ, ಪೂರ್ಣ ಪ್ರಮಾಣದಲ್ಲಿ ವೈದ್ಯರನ್ನು ಸರ್ಕಾರ ನೇಮಕ ಮಾಡಬೇಕಿದೆ. ಇನ್ನು ಈ ಹಿಂದಿನ ಬಜೆಟ್ ನಲ್ಲಿ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ ಘೋಷಣೆ ಆಗಿತ್ತು. ಆದರೆ, ಅದಕ್ಕೆ ಇನ್ನೂ ಜಾಗವೇ ನಿಗದಿ ಆಗಿಲ್ಲ. ಆ ಬಗ್ಗೆಯೂ ಈ ಬಜೆಟ್ನಲ್ಲಿ ಸ್ಪಷ್ಟಪಡಿಸಬೇಕಿದೆ. ಜೊತೆಗೆ ಜಿಲ್ಲೆಯ ಕೆಲವು ತಾಲೂಕಾಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಉನ್ನತದರ್ಜೆಗೆ ಏರಿಸಬೇಕಿದೆ.
ರೈಲು ಯೋಜನೆಗಳಿಗೆ ಬೇಕಿದೆ ವೇಗ?: ಬೆಳಗಾವಿ-ಧಾರವಾಡ ಹೊಸ ರೈಲು ಮಾರ್ಗ ಯೋಜನೆ ಸಂಬಂಧ ಭೂಸ್ವಾಧೀನ ಪ್ರಕ್ರಿಯೆ ಶೀಘ್ರವೇ ಪೂರ್ಣಗೊಳಿಸಿ, ಕಾಮಗಾರಿ ಆರಂಭಿಸುವ ನಿಟ್ಟಿನಲ್ಲಿ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರವನ್ನು ವಿತರಿಸಲು ಬಜೆಟ್ನಲ್ಲಿ ಅಗತ್ಯ ಅನುದಾನ ಘೋಷಿಸಬೇಕಿದೆ. ಜೊತೆಗೆ ಲೋಕಾಪುರ-ರಾಮದುರ್ಗ-ಸವದತ್ತಿ ಹೊಸ ರೈಲು ಯೋಜನೆಗೂ ಭೂಮಿ ಒದಗಿಸುವ ಬಗ್ಗೆಯೂ ಜನರ ಬೇಡಿಕೆ ಇದೆ.
ಪ್ರವಾಸೋದ್ಯಮಕ್ಕೆ ಬೇಕಿದೆ ಒತ್ತು: ಬೆಳಗಾವಿ ಹಲವು ಪ್ರವಾಸಿತಾಣಗಳನ್ನು ಹೊಂದಿದೆ. ಅವುಗಳು ಅಭಿವೃದ್ಧಿಗೆ ಕಾದು ಕುಳಿತಿವೆ. ಭಾರತದ ನಯಾಗರ ಅಂತಾ ಕರೆಸಿಕೊಳ್ಳುವ ಗೋಕಾಕ್ ಫಾಲ್ಸ್ನಲ್ಲಿ ರೋಪ್ ವೇ ನಿರ್ಮಾಣ ಸೇರಿ ಮತ್ತಿತರ ಮೂಲಸೌಕರ್ಯ ಅಭಿವೃದ್ಧಿಪಡಿಸಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಸೆಳೆಯಬೇಕಿದೆ. ಅಲ್ಲದೇ ಗೊಡಚಿನಮಲ್ಕಿ ಫಾಲ್ಸ್ ಅನ್ನೂ ಅತ್ಯಾಕರ್ಷಕಗೊಳಿಸಬೇಕಿದೆ. ಅತೀ ಹೆಚ್ಚು ಭಕ್ತರನ್ನು ಹೊಂದಿರುವ ಸವದತ್ತಿ ಯಲ್ಲಮ್ಮದೇವಿ ದೇವಸ್ಥಾನ, ಗೊಡಚಿ ವೀರಭದ್ರೇಶ್ವರ ದೇವಸ್ಥಾನ, ಚಿಂಚಲಿ ಮಾಯಕ್ಕ ದೇವಿ ಮಂದಿರ, ಶಬರಿಕೊಳ್ಳ ಸೇರಿ ಮತ್ತಿತರ ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗೆ ಅನುದಾನ ಘೋಷಿಸುವ ನಿರೀಕ್ಷೆ ಇದೆ.
ನಮ್ಮ ನಿರೀಕ್ಷೆ ಹುಸಿ ಮಾಡದಿರಿ: ಈಟಿವಿ ಭಾರತ ಜೊತೆಗೆ ಮಾತನಾಡಿದ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಅಶೋಕ ಚಂದರಗಿ ಮಾತನಾಡಿ, ಸಿದ್ದರಾಮಯ್ಯ ಅವರು ಮಂಡಿಸುತ್ತಿರುವ ಬಜೆಟ್ ಬಗ್ಗೆ ಹಲವು ನಿರೀಕ್ಷೆ ಇಟ್ಟುಕೊಂಡಿದ್ದೇವೆ. ಆರ್ಥಿಕ ಮುಗ್ಗಟ್ಟಿನಿಂದ ನಿಂತು ಹೋಗಿರುವ ಏತ ನೀರಾವರಿ ಯೋಜನೆಗಳಿಗೆ ಅನುದಾನ ಒದಗಿಸಬೇಕಿದೆ. ರಿಂಗ್ ರೋಡ್, ಮೇಲ್ಸೇತುವೆಗೂ ಹೆಚ್ಚು ಒತ್ತು ಕೊಡಬೇಕಿದೆ. 3ನೇ ಹಂತದ ಕೃಷ್ಣಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸಲು ಸರ್ಕಾರ ದಿಟ್ಟ ನಿರ್ಣಯ ಕೈಗೊಳ್ಳಬೇಕು. ಅದೇ ರೀತಿ ಬೆಳಗಾವಿಯಿಂದ ಬೀದರ್ ವರೆಗೆ ಉತ್ತರ ಕರ್ನಾಟಕಕ್ಕೆ ಏನೆಲ್ಲಾ ಕೆಲಸ ಆಗಬೇಕು ಅಂತಾ ಈ ಭಾಗದ 96 ಶಾಸಕರು ಒಂದು ಸಮಗ್ರ ವರದಿಯನ್ನು ಸಿದ್ಧಪಡಿಸಿ ಮುಖ್ಯಮಂತ್ರಿಗಳಿಗೆ ಸಲ್ಲಿಸಬೇಕು. ಬಜೆಟ್ನಲ್ಲಿ ಸಿಂಹಪಾಲು ದಕ್ಷಿಣ ಕರ್ನಾಟಕಕ್ಕೆ ಹೋಗುತ್ತದೆ. ಈ ತಾರತಮ್ಯ ಮುಖ್ಯಮಂತ್ರಿಗಳು ನಿವಾರಿಸಬೇಕು ಎಂದು ಒತ್ತಾಯಿಸಿದರು.
ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷರು ಹೇಳುವುದೇನು?: ಬೆಳಗಾವಿ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀಸ್ ಅಧ್ಯಕ್ಷ ಪ್ರಭಾಕರ ನಾಗರಮುನ್ನೊಳಿ ಮಾತನಾಡಿ, ಇತ್ತಿಚೆಗೆ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ನಮ್ಮ ಹಲವು ಬೇಡಿಕೆಗಳನ್ನು ಅವರ ಮುಂದಿಟ್ಟಿದ್ದೇವೆ. ಬಾಕಿ ಉಳಿದಿರುವ 130 ಕೋಟಿ ರೂ. ಕೈಗಾರಿಕಾ ಸಹಾಯಧನವನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದರು.
ಬೆಳಗಾವಿ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿಗೆ 500 ಕೋಟಿ ಅನುದಾನ ಮೀಸಲಿಡಬೇಕು. ವಿದ್ಯುತ್ ಬಿಲ್ ಅಥವಾ ರಾಜ್ಯ ಜಿಎಸ್‌ಟಿ ವಿರುದ್ಧ ಸಹಾಯಧನ ಹೊಂದಾಣಿಕೆ ವ್ಯವಸ್ಥೆ ಕಲ್ಪಿಸಬೇಕು. ಕೈಗಾರಿಕಾ ವಲಯಗಳ ರಸ್ತೆ, ನೀರು ಹಾಗೂ ವಿದ್ಯುತ್ ವ್ಯವಸ್ಥೆ ಸುಧಾರಣೆ ಮಾಡಬೇಕು. ಪ್ರಿಸಿಷನ್ ಎಂಜಿನಿಯರಿಂಗ್ ಮತ್ತು ಏರೋಸ್ಪೇಸ್ ಘಟಕಗಳಿಗೆ ಹೊಸ ಕೈಗಾರಿಕಾ ಕ್ಲಸ್ಟರ್ ಸ್ಥಾಪಿಸಬೇಕು ಎಂದು ಆಗ್ರಹಿಸಿದರು.
ಪರೀಕ್ಷೆ, ಸಂಶೋಧನೆ ಮತ್ತು ಕೌಶಲ್ಯಾಭಿವೃದ್ಧಿಗೆ ಸಾಮಾನ್ಯ ಸೌಲಭ್ಯ ಕೇಂದ್ರ ನಿರ್ಮಿಸಬೇಕು. ಕೈಗಾರಿಕಾ ಪ್ರದೇಶಗಳ ನವೀಕರಣಕ್ಕೆ ವಿಶೇಷ ನಿಧಿ ಸ್ಥಾಪಿಸಬೇಕು. ಬೆಂಗಳೂರು ಇಂಟರ್ ನ್ಯಾಶನಲ್ ಎಕ್ಸಿಬೀಷನ್ ಸೆಂಟರ್ ಮಾದರಿಯ ವಿಶ್ವಮಟ್ಟದ ಪ್ರದರ್ಶನ ಮತ್ತು ಸಮಾವೇಶ ಕೇಂದ್ರವನ್ನು ಬೆಳಗಾವಿಯಲ್ಲಿ ಸ್ಥಾಪಿಸಬೇಕು. ಲಾಜಿಸ್ಟಿಕ್ಸ್ ಪಾರ್ಕ್‌ಗಳು, ಗೋದಾಮುಗಳು ಹಾಗೂ ಬೈಪಾಸ್ ಯೋಜನೆಗಳಿಗೆ ಹೆಚ್ಚುವರಿ ಅನುದಾನ ನೀಡಬೇಕು. ಕೈಗಾರಿಕಾ ಸಂಘಟನೆಗಳ ಜೊತೆಗೆ ಉನ್ನತ ಕೌಶಲ್ಯಾಭಿವೃದ್ಧಿ ಕೇಂದ್ರಗಳ ಸ್ಥಾಪನೆ ಮಾಡುವಂತೆ ಒತ್ತಾಯಿಸಿದರು.
ಇವುಗಳನ್ನೂ ಓದಿ:

