ETV Bharat / state

ಮಂಜೂರಾದ 100 ಎಲೆಕ್ಟ್ರಿಕ್ ಬಸ್​ಗಳಿಗೆ ಕಾಯುತ್ತಿದೆ ಬೆಳಗಾವಿ: ದೌಡ ಬಸ್ ಬಿಡ್ರಿ ಅಂತಿದಾರೆ ಜನ..!

ಪಿಎಂ-ಇ ಬಸ್ ಸೇವಾ ಯೋಜನೆಯಲ್ಲಿ 100 ವಿದ್ಯುತ್ ಚಾಲಿತ ಬಸ್​​ಗಳು ಬೆಳಗಾವಿ ನಗರ ಸಾರಿಗೆಗೆ ಮಂಜೂರು ಆಗಿದ್ದು, ಇವುಗಳಿಗಾಗಿ ಜಿಲ್ಲೆಯ ಜನರು ಕಾಯುತ್ತಿದ್ದಾರೆ.

BELAGAVI  EV BUS FOR BELAGAVI  ಬೆಳಗಾವಿಗೆ ಎಲೆಕ್ಟ್ರಿಕ್ ಬಸ್​ PM E BUS SEVA  ELECTRIC BUSES
ಬೆಳಗಾವಿ ನಗರ ಸಾರಿಗೆ ಬಸ್ ನಿಲ್ದಾಣ (ETV Bharat)
author img

By ETV Bharat Karnataka Team

Published : February 12, 2026 at 6:05 PM IST

3 Min Read
Choose ETV Bharat

ಬೆಳಗಾವಿ: ಉತ್ತರ ಕರ್ನಾಟಕದ ಪ್ರಮುಖ ಮಹಾನಗರಗಳಾದ ಬೆಳಗಾವಿ ಮತ್ತು ಹುಬ್ಬಳ್ಳಿಗೆ ತಲಾ 100 ವಿದ್ಯುತ್ ಚಾಲಿತ ಬಸ್ ಘೋಷಣೆ ಆಗಿದ್ದು, ಕೇಂದ್ರ ಸರ್ಕಾರದಿಂದ ಮಂಜೂರಾತಿ ಕೂಡ ಸಿಕ್ಕಿದೆ. ಆದರೆ, ಆ ಬಸ್​​ಗಳು ಬರುವುದು, ಅವುಗಳ ನಿಲುಗಡೆಗೆ ಇ-ಘಟಕ ನಿರ್ಮಾಣ ವಿಳಂಬ ಆಗಿರುವುದಕ್ಕೆ ಈ ಭಾಗದ ಜನರು ತೀವ್ರ ಅಸಮಾಧಾನಗೊಂಡಿದ್ದಾರೆ.

ಹೌದು, ಉ.ಕ. ಭಾಗದ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಬಸ್​​ಗಳು ಅಲ್ಲಲ್ಲಿ ಕೆಟ್ಟು ನಿಲ್ಲುವುದು ಸಾಮಾನ್ಯ. ಅಲ್ಲದೇ ಹೊಸ ಬಸ್ ಕೊಡುವುದು ಅಪರೂಪ. ಪದೇ ಪದೆ ಇಲ್ಲಿನ ಜನರು ಈ ತಾರತಮ್ಯದ ವಿರುದ್ಧ ಧ್ವನಿ ಎತ್ತುತ್ತಲೇ ಇರುತ್ತಾರೆ. ಇದರ ನಡುವೆ ಬೆಳಗಾವಿ ಮತ್ತು ಹುಬ್ಬಳ್ಳಿ ನಗರಗಳಿಗೆ 100 ಎಲೆಕ್ಟ್ರಿಕ್ ಬಸ್ ಬಿಡುವ ವಿಚಾರ ಸಂತಸಕ್ಕೆ ಕಾರಣವಾಗಿತ್ತು. ಆದರೆ, ಇ-ಬಸ್​​ಗಳು ಈವರೆಗೂ‌ ಬಾರದೇ ಇರುವುದು ಬೇಸರ ತರಿಸಿದೆ.

ಮಂಜೂರಾದ 100 ಎಲೆಕ್ಟ್ರಿಕ್ ಬಸ್​ಗಳಿಗೆ ಕಾಯುತ್ತಿದೆ ಬೆಳಗಾವಿ: ದೌಡ ಬಸ್ ಬಿಡ್ರಿ ಅಂತಿದಾರೆ ಜನ (ETV Bharat)

ಪಿಎಂ-ಇ ಬಸ್ ಸೇವಾ ಯೋಜನೆಯಲ್ಲಿ 100 ವಿದ್ಯುತ್ ಚಾಲಿತ ಬಸ್​​ಗಳು ಬೆಳಗಾವಿ ನಗರ ಸಾರಿಗೆಗೆ ಮಂಜೂರು ಆಗಿವೆ. ಇವುಗಳನ್ನು ನಗರ ಮತ್ತು ಉಪನಗರಗಳಿಗೆ ಬಿಡಲಾಗುತ್ತದೆ. ಈ ಎಲ್ಲ ಬಸ್‌ಗಳನ್ನು ಗ್ರಾಸ್‌ ಕಾಸ್ಟ್‌ ಕಾಂಟ್ರ್ಯಾಕ್ಟ್‌ (ಜಿಸಿಸಿ) ಅಡಿ ಪಡೆಯಲಾಗುತ್ತದೆ. ಅದರಂತೆ ಎಲ್ಲ ಎಲೆಕ್ಟ್ರಿಕ್‌ ಬಸ್‌ಗಳನ್ನು ಗುತ್ತಿಗೆ ಆಧಾರದಲ್ಲಿ ಖಾಸಗಿ ಸಂಸ್ಥೆ ಪೂರೈಸಲಿದ್ದು, ಅದರ ನಿರ್ವಹಣೆಯನ್ನೂ ಖಾಸಗಿ ಸಂಸ್ಥೆ ಮಾಡಲಿದೆ. ಕಂಡಕ್ಟರ್‌ಗಳನ್ನು ವಾಕರಸಾ ಸಂಸ್ಥೆ ಒದಗಿಸಲಿದೆ.

ಇ-ಘಟಕ ನಿರ್ಮಾಣ: ಸದ್ಯ ನಗರ ಸಾರಿಗೆಯ ಎರಡನೇ ಘಟಕವನ್ನೇ ಇ-ಘಟಕ ನಿರ್ಮಾಣಕ್ಕೆ ಗುರುತಿಸಲಾಗಿದೆ. ಐದೂವರೇ ಎಕರೆ ಪ್ರದೇಶದಲ್ಲಿ 100 ಇ-ಬಸ್ ನಿಲುಗಡೆ ಜಾಗ, ದುರಸ್ತಿ ಕಾರ್ಯಕ್ಕೆ ಸುಸಜ್ಜಿತ ವರ್ಕಶಾಪ್, ಆಡಳಿತ ಕಚೇರಿ, ಬಿಡಿ ಭಾಗಗಳ ಸಂಗ್ರಹಣೆಗೆ ಉಗ್ರಾಣ, ಹೈಟೆಕ್ ಚಾರ್ಜಿಂಗ್ ಪಾಯಿಂಟ್​​ಗಳು ಸೇರಿದಂತೆ ಮೂಲ ಸೌಕರ್ಯಗಳನ್ನು 6.85 ಕೋಟಿ ಅನುದಾನದಲ್ಲಿ ಅಭಿವೃದ್ಧಿ ಪಡಿಸಲು ಯೋಜನೆ ರೂಪಿಸಲಾಗಿದೆ. ಟೆಂಡರ್ ಪ್ರಕ್ರಿಯೆ ಮಾತ್ರ ಬಾಕಿ ಇದ್ದು, ಶೀಘ್ರವೇ ಕೆಲಸ ಶುರುವಾಗಲಿದೆ ಎಂದು ಕೇಂದ್ರ ಸಚಿವ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ರಾಜ್ಯ ಸಚಿವ ತೋಖನ್ ಸಾಹು ಅವರು ಇತ್ತೀಚೆಗೆ ಸಂಸತ್ತ ಬಜೆಟ್ ಅಧಿವೇಶನ ವೇಳೆ ರಾಜ್ಯಸಭೆಯಲ್ಲಿ ತಿಳಿಸಿದ್ದಾರೆ.

ಈ ಸಂಬಂಧ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಪ್ರಶ್ನಿಸಿದ್ದರು. ಇದಕ್ಕೆ ಲಿಖಿತ ಉತ್ತರದಲ್ಲಿ ಮಾಹಿತಿ ನೀಡಿದ್ದ ಕೇಂದ್ರ ಸಚಿವರು, ಪಿಎಂ-ಇ ಬಸ್ ಸೇವಾ ಯೋಜನೆಯಡಿ ಬೆಳಗಾವಿ ನಗರದ ಸಾರಿಗೆ ವ್ಯವಸ್ಥೆಯನ್ನು ಆಧುನೀಕರಿಸಲು ಹಾಗೂ ಪರಿಸರ ಮಾಲಿನ್ಯ ತಡೆಗಟ್ಟಲು ಕೇಂದ್ರ ಸರ್ಕಾರವು 100 ಎಲೆಕ್ಟ್ರಿಕ್ ಬಸ್‌ಗಳನ್ನು ಮಂಜೂರು ಮಾಡಿದೆ. ಅದೇ ರೀತಿ ಕರ್ನಾಟಕದ ಒಟ್ಟು 10 ನಗರಗಳಿಗೆ 750 ಎಲೆಕ್ಟ್ರಿಕ್ ಬಸ್‌ಗಳು ಹಾಗೂ ಡಿಪೋ ಮೂಲಸೌಕರ್ಯ ಅಭಿವೃದ್ಧಿಗಾಗಿ ₹77.05 ಕೋಟಿಗಳ ಸಿವಿಲ್ ಕಾಮಗಾರಿ ಮೊತ್ತವನ್ನು ಮಂಜೂರು ಮಾಡಲಾಗಿದೆ ಎಂದಿದ್ದರು.

BELAGAVI  EV BUS FOR BELAGAVI  ಬೆಳಗಾವಿಗೆ ಎಲೆಕ್ಟ್ರಿಕ್ ಬಸ್​ PM E BUS SEVA  ELECTRIC BUSES
ಬೆಳಗಾವಿ ನಗರ ಸಾರಿಗೆ ಬಸ್ ನಿಲ್ದಾಣ (ETV Bharat)

ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿ ಕೆ.ಎಲ್. ಗುಡನ್ನವರ ಅವರನ್ನು ಈಟಿವಿ ಭಾರತ ಪ್ರತಿನಿಧಿ ಸಂಪರ್ಕಿಸಿದಾಗ, ನೂರು ಎಲೆಕ್ಟ್ರಿಕ್ ಬಸ್​ಗಳು ಬರುವುದರಿಂದ ನಗರದಲ್ಲಿ ಬಸ್​ಗಳ ಕೊರತೆ ನೀಗಲಿದೆ. ಬಸ್‌ ಸಂಚಾರ ಸೇವೆ, ಡ್ರೈವರ್‌ಗಳು, ಚಾರ್ಜಿಂಗ್‌ ಸ್ಟೇಷನ್‌ಗಳನ್ನು ಗುತ್ತಿಗೆ ಕಂಪನಿಯೇ ನಿರ್ವಹಿಸಲಿದೆ. ವಿದ್ಯುತ್‌ ಸಂಪರ್ಕ ಮತ್ತು ಜಾಗವನ್ನು ವಾಕರಸಾ ಸಂಸ್ಥೆ ಒದಗಿಸಲಿದೆ. ಕಂಡಕ್ಟರ್ ನಮ್ಮವರೇ ಇರುತ್ತಾರೆ‌ ಇ-ಘಟಕ ನಿರ್ಮಾಣಕ್ಕೆ ಈಗಾಗಲೇ ನಗರ ಸಾರಿಗೆ ಎರಡನೇ ಘಟಕದ ಜಾಗವನ್ನು ಗುರುತಿಸಲಾಗಿದೆ. ಇನ್ನೇನು ಟೆಂಡರ್ ಪ್ರಕ್ರಿಯೆ ಆಗಲಿದ್ದು, ಆದಷ್ಟು ಬೇಗನೇ ಇ-ಬಸ್​ಗಳು ಓಡಾಡಲಿವೆ ಎಂದರು.

ಬೆಳಗಾವಿ ನಾಗರಿಕ ಮೆಹಬೂಬ್ ಮಕಾನದಾರ್ ಮಾತನಾಡಿ, ಬೆಂಗಳೂರಿನಲ್ಲಿ‌ ಓಡಿಸಿ ಬಿಟ್ಟ ಡಕೋಟಾ ಬಸ್​ಗಳಿಗೆ ಹೊಸ ಸ್ಟಿಕ್ಕರ್ ಅಂಟಿಸಿ ನಮ್ಮ ಉತ್ತರ ಕರ್ನಾಟಕ ಭಾಗಕ್ಕೆ ಕಳಿಸುತ್ತಾರೆ. ನಾವು ಮನುಷ್ಯರೇ, ಕರ್ನಾಟಕ ರಾಜ್ಯದವರೇ. ಮಳೆಗಾಲ ಶುರುವಾಯಿತು ಅಂದರೆ ನೀರಿನಿಂದ ಸೋರುವ ಬಸ್​ಗಳು ಇಲ್ಲಿ ಓಡಾಡುತ್ತವೆ. ಎಲ್ಲೆಂದರಲ್ಲಿ ಕೆಟ್ಟು ನಿಲ್ಲುತ್ತವೆ. ಅಂತಹ ಬಸ್​ಗಳಲ್ಲಿ ಜನರು ಪ್ರಯಾಣಿಸುತ್ತಾರೆ. ಈಗ ನೂರು ಎಲೆಕ್ಟ್ರಿಕ್ ಬಸ್ ಬಿಡುತ್ತೇವೆ ಅಂತಾ ಸುದ್ದಿ ಆಗಿ ಒಂದು ವರ್ಷ ಆಗುತ್ತಾ ಬಂದಿದೆ. ಅಂಗೈಯಲ್ಲಿ ಅರಮನೆ ತೋರಿಸುವ ಕೆಲಸ ಮಾಡದೇ ಆದಷ್ಟು ಬೇಗನೇ ಆ ಬಸ್ ಗಳನ್ನು ಬಿಡುವಂತೆ ಒತ್ತಾಯಿಸಿದರು.

ಇದನ್ನೂ ಓದಿ: