ETV Bharat / state

ಪ್ರತಿಭಾ ಕಾರಂಜಿ ಭಾಷಣ ಸ್ಪರ್ಧೆಯಲ್ಲಿ ರಾಜ್ಯಕ್ಕೆ ಫಸ್ಟ್: ಈಟಿವಿ ಭಾರತದ ಮುಂದೆ UPSC ಕನಸು ಬಿಚ್ಚಿಟ್ಟ ರೈತನ ಮಗಳು

ಪ್ರತಿಭಾ ಕಾರಂಜಿ ಭಾಷಣ ಸ್ಪರ್ಧೆಯಲ್ಲಿ ಬೆಳಗಾವಿಯ ವಿದ್ಯಾರ್ಥಿನಿಯು ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿದ್ದು, ಈಟಿವಿ ಭಾರತದ ಮುಂದೆ ತನ್ನ ಭವಿಷ್ಯದ ಕನಸುಗಳ ಕುರಿತು ಮಾತನಾಡಿದ್ದಾಳೆ. ಸಿದ್ದನಗೌಡ ಎಸ್​ ಪಾಟೀಲ್​ ಅವರ ವಿಶೇಷ ವರದಿ ಇಲ್ಲಿದೆ.

Belagavi girl wins first place in Pratibha Karanji speech competition
ಐಶ್ವರ್ಯಾ ಸಾಧನೆಗೆ ಪ್ರಶಂಸೆ ವ್ಯಕ್ತಪಡಿಸಿದ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ (ETV Bharat)
author img

By ETV Bharat Karnataka Team

Published : September 2, 2026 at 1:38 PM IST

2 Min Read
Choose ETV Bharat

ಬೆಳಗಾವಿ: ಇತ್ತಿಚೆಗೆ ನಡೆದ ರಾಜ್ಯಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವದ ಭಾಷಣ ಸ್ಪರ್ಧೆಯಲ್ಲಿ, ಬೆಳಗಾವಿ ಜಿಲ್ಲೆಯ ವಿದ್ಯಾರ್ಥಿನಿ ರಾಜ್ಯಕ್ಕೆ ಪ್ರಥಮ ಬಂದಿದ್ದಾಳೆ. ಉತ್ತಮ ವಾಗ್ಮಿ ಮತ್ತು ಜಾಣೆ ಆಗಿರುವ ಈ ಬಾಲಕಿ ಯುಪಿಎಸ್ಸಿ ಪಾಸ್ ಆಗುವ ಗುರಿ ಇಟ್ಟುಕೊಂಡಿದ್ದು, ಈಟಿವಿ ಭಾರತ ಮುಂದೆ ತನ್ನ ಕನಸು ಬಿಚ್ಚಿಟ್ಟಿದ್ದಾಳೆ.

ಹುಕ್ಕೇರಿ ತಾಲೂಕಿನ ಹರಗಾಪುರಗಡ ಗ್ರಾಮದ ಐಶ್ವರ್ಯಾ ಮಾನೆ ಭಾಷಣ ಸ್ಪರ್ಧೆಯಲ್ಲಿ ರಾಜ್ಯವೇ ತಿರುಗಿ ನೋಡುವ ಸಾಧನೆ ಮಾಡಿದವಳು. ಸಂಕೇಶ್ವರದ ಎಸ್.ಡಿ.ವ್ಹಿ.ಎಸ್‌. ಸಂಘದ ಪದವಿ ಪೂರ್ವ ಕಾಲೇಜಿನ ಪಿಯು ಮೊದಲ ವರ್ಷದ ಸೈನ್ಸ್ ಓದುತ್ತಿದ್ದಾಳೆ. ಐಶ್ವರ್ಯಾ ಎಸ್ಎಸ್ಎಲ್​ಸಿ ಪರೀಕ್ಷೆಯಲ್ಲಿ ಶೇ.88ರಷ್ಟು ಅಂಕ ಪಡೆದು, ಊರಿಗೆ ಕೀರ್ತಿ ತಂದಿದ್ದಳು.

ಭಾಷಣ ಸ್ಪರ್ಧೆ ವಿಜೇತೆ ಐಶ್ವರ್ಯಾ ಮಾನೆ ಹಾಗೂ ಸಮಾ ಜಸೇವಕ ಅಜರುದ್ದೀನ್ ಸೇಟಜಿ ಮಾತನಾಡುತ್ತಿರುವುದು. (ETV Bharat)

ಜೂನ್ ತಿಂಗಳಲ್ಲಿ ಚಿತ್ರದುರ್ಗದ ಶ್ರೀ ಮರುಘರಾಜೇಂದ್ರ ಬ್ರಹನ್ಮಠದ ಅನುಭವ ಮಂಟಪದಲ್ಲಿ ಪ್ರೌಢಶಾಲಾ ಹಾಗೂ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ರಾಜ್ಯಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮದಲ್ಲಿ ಮರಾಠಿ ವಿಭಾಗದ ಭಾಷಣ ಸ್ಪರ್ಧೆಯಲ್ಲಿ "ಇಂದಿನ ಕಾಲಘಟ್ಟದಲ್ಲಿ ನೈತಿಕ ಮೌಲ್ಯಗಳ ಪಾತ್ರ" ಎಂಬ ವಿಷಯ ಕುರಿತು ಭಾಷಣ ಸ್ಪರ್ಧೆ ಏರ್ಪಡಿಸಲಾಗಿತ್ತು. ಇದರಲ್ಲಿ ಎಲ್ಲ ವಿದ್ಯಾರ್ಥಿಗಳಿಗಿಂತ ಅತ್ಯುತ್ತಮ ರೀತಿಯಲ್ಲಿ ಭಾಷಣ ಮಾಡಿದ ಹಿನ್ನೆಲೆ ಐಶ್ವರ್ಯಾ ಪ್ರಥಮ ಸ್ಥಾನ ಪಡೆದಿದ್ದಾಳೆ.

ತಂದೆ ಅಶೋಕ ಮತ್ತು ತಾಯಿ ಸರಿತಾ ರೈತರಾಗಿದ್ದು, ಮನೆಯಲ್ಲಿ ಬಡತನ ಇದ್ದರೂ ಮಗಳಿಗೆ ಉತ್ತಮ ಶಿಕ್ಷಣ ಕೊಡಿಸುತ್ತಿದ್ದಾರೆ. ಓದಿನಲ್ಲಿ ಜಾಣೆ ಆಗಿರುವ ಐಶ್ವರ್ಯಾ, ಭಾಷಣ ಸೇರಿ ಪಠ್ಯೇತರ ಚಟುವಟಿಕೆಗಳಲ್ಲೂ ಮುಂದಿದ್ದಾಳೆ. ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಕೂಡ ಐಶ್ವರ್ಯಾ ಸಾಧನೆಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Belagavi girl wins first place in Pratibha Karanji speech competition
ಐಶ್ವರ್ಯಾ ಸಾಧನೆಗೆ ಪ್ರಶಂಸೆ ವ್ಯಕ್ತಪಡಿಸಿದ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ (ETV Bharat)

ಈಟಿವಿ ಭಾರತ ಜೊತೆಗೆ ಮಾತನಾಡಿದ ಭಾಷಣ ಸ್ಪರ್ಧೆ ವಿಜೇತೆ ಐಶ್ವರ್ಯಾ ಮಾನೆ, ''ರಾಜ್ಯದ ವಿವಿಧ ಜಿಲ್ಲೆಗಳಿಂದ 15 ವಿದ್ಯಾರ್ಥಿಗಳು ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಅದರಲ್ಲಿ ನನಗೆ ಪ್ರಥಮ ಸ್ಥಾನ ಬಂತು. 5 ಸಾವಿರ ನಗದು ಬಹುಮಾನ, ಪ್ರಮಾಣ ಪತ್ರ ಸಿಕ್ಕಿದೆ. ತುಂಬಾ ಖುಷಿ ಆಗುತ್ತಿದೆ. ನಾನು ಎಸ್ಎಸ್ಎಲ್​ಸಿಯಲ್ಲಿ ಇದ್ದಾಗಲೂ ಭಾಷಣ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆದುಕೊಂಡಿದ್ದೆ. ಜೊತೆಗೆ ಸತೀಶ ಶುಗರ್ಸ್ ಅವಾರ್ಡ್ಸ್​ನಲ್ಲೂ ಪ್ರಶಸ್ತಿ ಗಿಟ್ಟಿಸಿಕೊಂಡಿದ್ದೇನೆ. ಚಿಕ್ಕಂದಿನಿಂದಲೂ ಭಾಷಣ ಮಾಡುವುದು ನನ್ನ ಹವ್ಯಾಸ. ಯಾವುದೇ ವಿಷಯ ಕೊಟ್ಟರೂ, ಅದರ ಬಗ್ಗೆ ವಿಷಯ ಸಂಗ್ರಹಿಸಿ, ಪೂರ್ತಿ ಅಧ್ಯಯನ ಮಾಡಿಕೊಂಡು, ಭಾಷಣ ಪ್ರಸ್ತುತಪಡಿಸುತ್ತೇನೆ'' ಎಂದರು.

''ಮುಂದೆ ಕಠಿಣ ಪರಿಶ್ರಮದಿಂದ ಯುಪಿಎಸ್ಸಿ ಪರೀಕ್ಷೆ ಎದುರಿಸಿ, ಐಎಎಸ್ ಅಧಿಕಾರಿ ಆಗುವ ಗುರಿ ಇಟ್ಟುಕೊಂಡಿದ್ದೇನೆ. ಕರ್ನಾಟಕ ರಾಜ್ಯದಲ್ಲಿ ಒಳ್ಳೆಯ ಸೇವೆ ಸಲ್ಲಿಸುವ ಆಶಯ ನನ್ನದಾಗಿದೆ. ತಂದೆ-ತಾಯಿ, ಅಜ್ಜಿ, ಶಿಕ್ಷಕರು ನನಗೆ ಬಹಳಷ್ಟು ಪ್ರೋತ್ಸಾಹಿಸುತ್ತಾರೆ. ನನ್ನ ಗುರಿ ಮುಟ್ಟುವವರೆಗೆ ನಾನು ವಿರಮಿಸುವುದಿಲ್ಲ'' ಎಂಬುದು ಐಶ್ವರ್ಯಾ ಮಾನೆ ವಿಶ್ವಾಸದ ಮಾತು.

Belagavi girl wins first place in Pratibha Karanji speech competition
ಭಾಷಣ ಸ್ಪರ್ಧೆ ವಿಜೇತೆ ಐಶ್ವರ್ಯಾ ಮಾನೆ (ETV Bharat)

ಸಮಾಜ ಸೇವಕ ಅಜರುದ್ದೀನ್ ಸೇಟಜಿ ಮಾತನಾಡಿ, ''ಐಶ್ವರ್ಯಾ ಮಾನೆ ಪ್ರತಿಭಾನ್ವಿತ ವಿದ್ಯಾರ್ಥಿನಿ. ಆಕೆ ಓರ್ವ ಉತ್ತಮ ವಾಗ್ಮಿ. ಭಾಷಣ ಸ್ಪರ್ಧೆಯಲ್ಲಿ ರಾಜ್ಯಕ್ಕೆ ಫಸ್ಟ್ ಬರುವ ಮೂಲಕ ಬೆಳಗಾವಿ ಜಿಲ್ಲೆ ಮತ್ತು ನಮ್ಮ ಕಾಲೇಜಿಗೆ ಕೀರ್ತಿ ತಂದಿರುತ್ತಾಳೆ. ಭವಿಷ್ಯದಲ್ಲಿ ಆಕೆ ಮತ್ತಷ್ಟು ಸಾಧನೆ ಮಾಡಲಿ'' ಎಂದು ಶುಭ ಹಾರೈಸಿದರು.

ಇದನ್ನೂ ಓದಿ: ಶಿಕ್ಷಕರ ದಿನ ಸೆ.5 ರಂದು ಪ್ರಜಾ ಸೇವಾ ಇಲಾಖೆ ಆರಂಭ: ಹುಬ್ಬಳ್ಳಿಯಲ್ಲಿ ಸಿಎಂ ಡಿಕೆ ಶಿವಕುಮಾರ್​