ETV Bharat / state

ಪಿಎಂಎಫ್ಎಂಇ ಯೋಜನೆ ಬಲ, ಉದ್ಯಮಿಯಾಗಿ ಹೊರಹೊಮ್ಮಿದ ಬೆಳಗಾವಿ ರೈತ: ಸಾವಯವ, ಸಮಗ್ರ ಕೃಷಿಯಿಂದ ಲಕ್ಷ ಲಕ್ಷ ಆದಾಯ!

ಆರಂಭದಲ್ಲಿ ರಮೇಶ ಸಾವಯವ, ರಾಸಾಯನಿಕ ಎರಡನ್ನೂ ಸಮನಾಗಿ ಬಳಸಿದರು. ಹಂತ-ಹಂತವಾಗಿ ರಾಸಾಯನಿಕ ಕಡಿಮೆ ಮಾಡುತ್ತಾ, ಐದು ವರ್ಷಗಳಿಂದ ಸಂಪೂರ್ಣ ಸಾವಯವ ಕೃಷಿಯ ಮೂಲಕ ಇತರೆ ರೈತರಿಗೂ ಮಾದರಿಯಾಗಿದ್ದಾರೆ. ವರದಿ: ಸಿದ್ದನಗೌಡ ಎಸ್​.ಪಾಟೀಲ್

belagavi-farmer-emerges-as-entrepreneur-from-pmfme-scheme-income-of-lakhs-through-organic-farming-integrated-farming
ಉದ್ಯಮಿಯಾಗಿ ಹೊರಹೊಮ್ಮಿದ ಬೆಳಗಾವಿ ರೈತ (ETV Bharat)
author img

By ETV Bharat Karnataka Team

Published : October 11, 2026 at 9:03 PM IST

6 Min Read
Choose ETV Bharat

ಬೆಳಗಾವಿ: ಕೃಷಿ ಎಂದರೆ ನಷ್ಟ, ರೈತ ಎಂದರೆ ಸಾಲಗಾರ ಎನ್ನುವ ಮಾತು ಕೇಳಿರುತ್ತೀರಿ. ಆದರೆ, ಇಲ್ಲೊಬ್ಬ ಯುವ ರೈತ ಸಮಗ್ರ, ಸಾವಯವ ಕೃಷಿ, ಬೆಳೆಗಳ ಮೌಲ್ಯವರ್ಧನೆ, ಸ್ವಂತ ಮಾರಾಟದ ಮೂಲಕ ಲಕ್ಷ ಲಕ್ಷ ಆದಾಯ ಗಳಿಸುತ್ತಿದ್ದಾರೆ. ಪಿಎಂಎಫ್ಎಂಇ(Pradhan Mantri Formalisation of Micro Food Processing Enterprises) ಯೋಜನೆಯಿಂದ ರೈತ ಕೇವಲ ರೈತ ಅಷ್ಟೇ ಅಲ್ಲ, ಓರ್ವ ಉದ್ಯಮಿ ಕೂಡ ಆಗಬಹುದು ಎಂಬುದನ್ನು ಸಾಧಿಸಿ ತೋರಿಸಿದ್ದಾರೆ. ಜೊತೆಗೆ ದೇಶ, ವಿದೇಶಗಳ ರೈತರು ಕೂಡ ಇವರ ರೈತೋದ್ಯಮಕ್ಕೆ ಫಿದಾ ಆಗಿದ್ದಾರೆ.

ಗೋಕಾಕ್ ತಾಲೂಕಿನ ಕಲ್ಲೋಳಿ ಗ್ರಾಮದ ರಮೇಶ ಬಸಪ್ಪ ಖಾನಗೌಡ್ರ ಕೃಷಿಯಲ್ಲಿ ಕ್ರಾಂತಿ ಮಾಡಿದ ಜಾಣ ರೈತ. ತಮ್ಮ ಜಮೀನಿನಲ್ಲಿ ಬೆಳೆಯುವ ಕಬ್ಬು ಕಾರ್ಖಾನೆ ಬದಲು ಆಲೆಮನೆಯಲ್ಲಿ ಬೆಲ್ಲ ಮಾಡಿಸುತ್ತಾರೆ.‌ ತಮ್ಮದೇ ಯಂತ್ರದಲ್ಲಿ ಅರಿಶಿಣ ಪುಡಿ ಮಾಡುತ್ತಾರೆ. ಬೇರೆ ರೈತರಿಂದ ಕಾಳು ಖರೀದಿಸಿ, ಎಣ್ಣೆ ತೆಗೆಯುತ್ತಾರೆ. ದೇಶಿ ಆಕಳುಗಳ ಹಾಲನ್ನು ಮಾರಾಟ ಮಾಡದೇ ತುಪ್ಪ ಉತ್ಪಾದಿಸುತ್ತಾರೆ. ಕೋಳಿ, ಆಡು ಸಾಕಾಣಿಕೆ ಕೂಡ ಮಾಡುತ್ತಾರೆ. ಹೀಗೆ ತಾವು ಬೆಳೆದ ಬೆಳೆಗಳ ಮೌಲ್ಯವರ್ಧನೆ ಮಾಡಿ 'ಕೃಷಿ ಸಂಜೀವಿನಿ' ಎಂಬ ಹೆಸರಿನಲ್ಲಿ ಮಾರಾಟ ಮಾಡುವ ಮೂಲಕ ವರ್ಷಕ್ಕೆ ಸುಮಾರು 25 ಲಕ್ಷ ರೂ. ಆದಾಯ ಪಡೆಯುತ್ತಿದ್ದಾರೆ. ಸಾವಯವ ಪದ್ಧತಿಯಿಂದ ನಮ್ಮದು ಸುಖಿ ಕುಟುಂಬವಾಗಿದೆ ಎನ್ನುತ್ತಿದ್ದಾರೆ.

ಪಿಎಂಎಫ್ಎಂಇ ಯೋಜನೆ ಬಲ, ಉದ್ಯಮಿಯಾಗಿ ಹೊರಹೊಮ್ಮಿದ ಬೆಳಗಾವಿ ರೈತ: ಸಾವಯವ, ಸಮಗ್ರ ಕೃಷಿಯಿಂದ ಲಕ್ಷ ಲಕ್ಷ ಆದಾಯ! (ETV Bharat)

ಬಿಎ ಮುಗಿಸಿರುವ ರಮೇಶ, ಎಲ್ಲ ಯುವಕರಂತೆ ಯಾವುದಾದರೂ ಕೆಲಸ ಸಿಕ್ಕರೆ ಸಾಕು ಎಂಬ ಮನಸ್ಥಿತಿಯಲ್ಲಿದ್ದರು. ಅದರಂತೆ ವ್ಹೇ ಬ್ರಿಡ್ಜ್​​ವೊಂದರಲ್ಲಿ ಕಂಪ್ಯೂಟರ್ ಆಪರೇಟರ್ ಕೆಲಸಕ್ಕೆ ಸೇರಿಕೊಂಡರು. ಆಗ ಅವರಿಗೆ ತಿಂಗಳಿಗೆ 4 ಸಾವಿರ ರೂ.‌ ಸಂಬಳ.‌ ತಮ್ಮ ಕುಟುಂಬಕ್ಕೆ ಸೇರಿದ 10 ಎಕರೆಯಲ್ಲಿ ಅವರ ಅಣ್ಣ ಮಲ್ಲಿಕಾರ್ಜುನ ಸಾಂಪ್ರದಾಯಿಕ ಕೃಷಿ ಮಾಡುತ್ತಿದ್ದರು. ಹೀಗೆ ಒಂದು ದಿನ‌ ಅರಭಾಂವಿ ಕೃಷಿ ತರಬೇತಿ ಕೇಂದ್ರದಲ್ಲಿ ರಮೇಶ ಸಾವಯವ, ಸಮಗ್ರ ಕೃಷಿ ತರಬೇತಿಯಲ್ಲಿ ಪಾಲ್ಗೊಂಡರು. ಅಲ್ಲಿಂದ ಅವರಲ್ಲಿ ಸಾವಯವ ಕೃಷಿಯ ಕನಸು ಚಿಗುರೊಡೆಯಿತು. ರಮೇಶ ಒಮ್ಮೆಲೆ ರಾಸಾಯನಿಕ ಪದ್ಧತಿ ಕೈ ಬಿಡಲಿಲ್ಲ. ಆರಂಭದಲ್ಲಿ ಸಾವಯವ-ರಾಸಾಯನಿಕ ಎರಡನ್ನೂ ಸಮನಾಗಿ ಬಳಸಿದರು. ಹಂತ-ಹಂತವಾಗಿ ರಾಸಾಯನಿಕ ಕಡಿಮೆ ಮಾಡುತ್ತಾ ಬಂದರು. ಈಗ ಐದು ವರ್ಷಗಳಿಂದ ಇವರದ್ದು ಸಂಪೂರ್ಣ ಸಾವಯವ ಕೃಷಿ. ಈ ಮೂಲಕ ಇತರೆ ರೈತರಿಗೂ ಮಾದರಿ ಆಗಿದ್ದಾರೆ.

ತಮ್ಮ 10 ಎಕರೆ ಜಮೀನಿನಲ್ಲಿ ಮುಖ್ಯ ಬೆಳೆಗಳಾಗಿ ಕಬ್ಬು, ಅರಿಶಿಣ, ಗೋವಿನಜೋಳ ಬೆಳೆಯುತ್ತಾರೆ. ಇನ್ನುಳಿದಂತೆ ವಿವಿಧ ಹಣ್ಣಿನ ಗಿಡಗಳು, ಜಾನುವಾರುಗಳಿಗೆ ಮೇವು ಬೆಳೆದಿದ್ದಾರೆ. ಇದಷ್ಟೇ ಆಗಿದ್ದರೆ ಇವರು ಸಾಮಾನ್ಯ ರೈತರಾಗುತ್ತಿದ್ದರು. ಆದರೆ, ಅರಿಶಿಣದಲ್ಲಿ ಅಂತರ ಬೆಳೆಗಳಾಗಿ ಮೆಣಸಿನಕಾಯಿ, ಶೇಂಗಾ, ಮೂಲಂಗಿ, ಬಿಟ್ರೂಟ್, ಗೋವಿನಜೋಳ ತೆಗೆಯುತ್ತಾರೆ. ಕಬ್ಬು ನಾಟಿ ಮಾಡಿದ ಮೂರು ತಿಂಗಳಲ್ಲಿ ಟೊಮೆಟೊ, ಗೋವಿನಜೋಳ, ಶೇಂಗಾ, ಸೌತೆಕಾಯಿ ಸೇರಿ ಮತ್ತಿತರ ತರಕಾರಿ ಬೆಳೆಗಳನ್ನು ಬೆಳೆದು, ಅವುಗಳಿಂದಲೂ‌ ಆದಾಯದ ಮೂಲ ಕಂಡುಕೊಂಡಿದ್ದಾರೆ. ಆಡು, ಕೋಳಿ ಸಾಕಾಣಿಕೆಯೂ ಲಾಭ ತಂದು ಕೊಟ್ಟಿದೆ. ಗೋಬರ್ ಗ್ಯಾಸ್ ವ್ಯವಸ್ಥೆ ಇದ್ದು, ಸಿಲಿಂಡರ್ ಅವಶ್ಯಕತೆ ಇವರಿಗಿಲ್ಲ.

Belagavi farmer emerges as entrepreneur from PMFME scheme Income of lakhs through organic farming, integrated farming
ಜನರಿಗೆ ಕೃಷಿ ಮಾಹಿತಿ ನೀಡುತ್ತಿರುವ ರೈತ ರಮೇಶ ಬಸಪ್ಪ ಖಾನಗೌಡ್ರ (ETV Bharat)

'ಈಟಿವಿ ಭಾರತ' ಜೊತೆಗೆ ಮಾತನಾಡಿದ ರಮೇಶ ಖಾನಗೌಡ್ರ, ''ರಾಸಾಯನಿಕ ಪದ್ಧತಿಯಿಂದ ನಮ್ಮ ಭೂಮಿ ತಾಯಿ ವಿಷವಾಗಿದ್ದಾಳೆ. ಆಕೆಯನ್ನು ಕಾಪಾಡುವುದು ಮಣ್ಣಿನ ಮಕ್ಕಳಾದ ನಮ್ಮ ಜವಾಬ್ದಾರಿ. ಹಾಗಾಗಿ, ನಾನು ಆ ನಿಟ್ಟಿನಲ್ಲಿ ಸಾಗುತ್ತಿದ್ದೇನೆ. ಕಳೆದ 8 ವರ್ಷಗಳಿಂದ ಸಾವಯವ, ಸಮಗ್ರ ಕೃಷಿ ಮಾಡುತ್ತಿದ್ದೇನೆ. ಇದರಿಂದ ಖರ್ಚು ಕಡಿಮೆ, ಅಧಿಕ ಇಳುವರಿ ಕೈ ಸೇರುತ್ತದೆ. ವರ್ಷಕ್ಕೆ ಏನಿಲ್ಲ ಅಂದರೂ 25 ಲಕ್ಷ ರೂ. ಆದಾಯ ಇದೆ. ಅಗತ್ಯ ಬೀಜ, ಗೊಬ್ಬರ ನಾವೇ ತಯಾರಿಸಿಕೊಳ್ಳುತ್ತೇವೆ. ಜಮೀನಿನಲ್ಲೆ ಒಂದು ಬಾವಿ ಇದ್ದು, ಹನಿ ನೀರಾವರಿ ವ್ಯವಸ್ಥೆ ಮಾಡಿಕೊಂಡಿದ್ದೇನೆ. ಇಲೆಕ್ಟ್ರಿಕ್ ಟ್ರ್ಯಾಕ್ಟರ್ ಕೂಡ ಇದ್ದು, ಡೀಸೆಲ್ ಖರ್ಚು ಕೂಡ ಉಳಿತಾಯ ಆಗುತ್ತದೆ'' ಎಂದರು.

Belagavi farmer emerges as entrepreneur from PMFME scheme Income of lakhs through organic farming, integrated farming
ಕೃಷಿ ಸಂಜೀವಿನಿ ಕೇಂದ್ರ (ETV Bharat)

ಎಫ್ಎಸ್ಎಸ್ಎಐ ಪ್ರಮಾಣಪತ್ರ: ''ಕಳೆದ ಮೂರು ವರ್ಷಗಳಿಂದ ಬೆಳೆಗಳ ಮೌಲ್ಯವರ್ಧನೆ ಮಾಡುತ್ತಿದ್ದೇನೆ. ಕೃಷಿ ಸಂಜೀವಿನಿ ಸಾವಯವ ಕೇಂದ್ರ ಸ್ಥಾಪಿಸಿದ್ದು, ಅದರಡಿಯಲ್ಲಿ ಮಾರಾಟ ಮಾಡಲಾಗುತ್ತಿದೆ. ಎಫ್ಎಸ್ಎಸ್ಎಐ ಪ್ರಮಾಣಪತ್ರ ಕೂಡ ಸಿಕ್ಕಿದೆ. ಬೆಲ್ಲ ಉತ್ಪಾದಿಸಿ ಮಾರಿದರೆ, 1 ಟನ್ ಕಬ್ಬಿಗೆ ಏನಿಲ್ಲ ಅಂದರೂ ಕಾರ್ಖಾನೆಗಿಂತ 500 ರೂ. ಹೆಚ್ಚಿಗೆ ಸಿಗುತ್ತದೆ. ಅದೇರೀತಿ ಅರಿಶಿಣ ಪುಡಿ ಮಾರುವುದರಿಂದ ಶೇ.30ರಷ್ಟು ಅಧಿಕ ಲಾಭ ಆಗುತ್ತದೆ. ಜೊತೆಗೆ, ಗಿರ್, ಕಾಂಕ್ರೇಜ್, ಕಿಲಾರಿ ಆಕಳುಗಳಿವೆ. ಅವುಗಳ ಹಾಲು ಮಾರಾಟ ಮಾಡುವುದಿಲ್ಲ. ಹಾಲಿನಿಂದ ತುಪ್ಪ ಉತ್ಪಾದಿಸಿ ಮಾರುತ್ತೇವೆ.‌ ಹಾಲಿಗಿಂತ ತುಪ್ಪ ಮಾರಾಟದಲ್ಲೆ ಹೆಚ್ಚು ಲಾಭ‌ ಸಿಗುತ್ತದೆ. ಆಡು, ಕೋಳಿ, ಪಾರಿವಾಳಗಳನ್ನು ಸಾಕಿದ್ದು, ಆಡಿನ ಮರಿ ಹಾಗೂ ಕೋಳಿ ಮೊಟ್ಟೆ ಮಾರಾಟದಿಂದಲೂ ಆದಾಯ ಬರುತ್ತದೆ. ಜಮೀನಿನ ಫಲವತ್ತತೆ ಹೆಚ್ಚಿಸುವ ಎರೆಹುಳು ಗೊಬ್ಬರ, ಘನ ಜೀವಾಮೃತ, ಜೀವಾಮೃತ, ಅಗ್ನಿಅಸ್ತ್ರ, ನಿಮಾಸ್ತ್ರ, ದಶಪರ್ನಿ ಕಸಾಯ, ಪಂಚಗವ್ಯ, ಗೋಕೃಪಾಮೃತ, ಎರೆಜಲವನ್ನು ನಮ್ಮಲ್ಲೆ ತಯಾರಿಸುತ್ತೇವೆ ಎಂದು ರಮೇಶ ಖಾನಗೌಡ್ರ ಹೇಳಿದರು.

ಕೈ ಹಿಡಿದ ಪಿಎಂಎಫ್ಎಂಇ: ಕೃಷಿ ಉದ್ಯಮಿಗಳಿಗೆ ಪಿಎಂಎಫ್ಎಂಇ ಕಾಮಧೇನು ಇದ್ದ ಹಾಗೆ. ಬೆಳೆಗಳ ಮೌಲ್ಯವರ್ಧನೆಗೆ ಅನುಕೂಲ ಇರಲಿಲ್ಲ. ಈ ಯೋಜನೆಯಡಿ ನನಗೆ 14 ಲಕ್ಷ ರೂ. ಸಾಲ ಸಿಕ್ಕಿತು. ಅದರಲ್ಲಿ ನಮಗೆ ಬೇಕಾದ ಅರಿಶಿಣ ಪುಡಿ ಮಾಡುವ, ಎಣ್ಣೆ ತೆಗೆಯುವ ಹಾಗೂ ಕಬ್ಬಿನ ಹಾಲಿನ ಯಂತ್ರಗಳನ್ನು ಖರೀದಿಸಿದೆ. ಇವು ಸೋಲಾರ್​​ನಿಂದಲೇ ಕಾರ್ಯನಿರ್ವಹಿಸುತ್ತವೆ. ಹಾಗಾಗಿ, ವಿದ್ಯುತ್ ಅವಶ್ಯಕತೆ ಇಲ್ಲ. 14 ಲಕ್ಷ ಸಾಲದಲ್ಲಿ 7 ಲಕ್ಷ ಸಬ್ಸಿಡಿ ಕೂಡ ಸಿಕ್ಕಿದೆ.‌ ಸಾಲದ ಕಂತು ತುಂಬಲು 3-5 ವರ್ಷಗಳ ಕಾಲಾವಕಾಶ ಇರುತ್ತದೆ. ಜೊತೆಗೆ ಪಿಎಂಎಫ್ಎಂಇ ಫಲಾನುಭವಿಗಳಿಗೆ ಬ್ರ್ಯಾಂಡಿಂಗ್ ಮಾಡಲು ಕೃಷಿ ಇಲಾಖೆ ಸಹಾಯ ಮಾಡುತ್ತಿದೆ.

Belagavi farmer emerges as entrepreneur from PMFME scheme Income of lakhs through organic farming, integrated farming
ರೈತ ರಮೇಶ ಬಸಪ್ಪ ಖಾನಗೌಡ್ರ ಕುಟುಂಬ (ETV Bharat)

ರೈತರಿಗೆ ಉಚಿತ ತರಬೇತಿ: ತಮ್ಮಲ್ಲಿನ ಕೃಷಿ ಜ್ಞಾನವನ್ನು ಹಂಚುವ ಕಾಯಕದಲ್ಲಿ ರಮೇಶ ಖಾನಗೌಡ್ರ ತೊಡಗಿದ್ದು, ತಮ್ಮ ಫಾರ್ಮ್​​ಗೆ ಬರುವ ರೈತರಿಗೆ ಉಚಿತವಾಗಿ ಸಾವಯವ, ಸಮಗ್ರ ಕೃಷಿ ಕುರಿತು ಪಾಠ ಮಾಡುತ್ತಿದ್ದಾರೆ. ಈವರೆಗೆ ನಮ್ಮ ರಾಜ್ಯದ ವಿವಿಧ ಜಿಲ್ಲೆ, ರಾಜ್ಯಗಳ ಸುಮಾರು 10 ಸಾವಿರ ರೈತರು ನಮ್ಮ ತೋಟಕ್ಕೆ ಭೇಟಿ ಕೊಟ್ಟಿದ್ದಾರೆ. ಆಸ್ಟ್ರೇಲಿಯಾ, ನ್ಯೂಜಿಲೆಂಡ್ ದೇಶಗಳ ಕೃಷಿ ತಜ್ಞರು, ರೈತರು ಬಂದಿದ್ದರು. ಮುಂದೆ ಮಣ್ಣು, ನೀರು ಪರೀಕ್ಷೆ ಸೇರಿ ನಮ್ಮ ತೋಟದಲ್ಲಿ ಒಂದು ಪ್ರಯೋಗಾಲಯ ಸ್ಥಾಪಿಸುವ ಗುರಿ ಹೊಂದಿದ್ದೇನೆ ಎಂದು ರಮೇಶ ಖಾನಗೌಡ್ರ ತಿಳಿಸಿದರು.

ಮಣ್ಣು, ನೀರು ಪರೀಕ್ಷಿಸಿ, ಸಾವಯವ ಕಡೆ ಮುಖ ಮಾಡಿ: ಸ್ವಂತ ಜಮೀನು ಇದ್ದರೂ 5 ಸಾವಿರ ರೂ. ಸಿಗುವ ಕೆಲಸಕ್ಕೆ ಹೋಗುತ್ತಿದ್ದಾರೆ. ಅದನ್ನು ಬಿಟ್ಟು ಜಮೀನಿನಲ್ಲಿ ಶ್ರಮ ವಹಿಸಿ ದುಡಿಯಬೇಕು. ಹೈನುಗಾರಿಕೆ, ಆಡು ಸಾಕಾಣಿಕೆ, ಕೋಳಿ ಸಾಕಾಣಿಕೆಗೆ ಒತ್ತು ಕೊಟ್ಟರೆ ಹೆಚ್ಚು ಲಾಭ ಗಳಿಸಿ, ಆರ್ಥಿಕವಾಗಿ ಮುಂದೆ ಬರಬಹುದು. ರೈತರಿಗೆ ರಾಸಾಯನಿಕ ಕೃಷಿ ಮಾಡಬೇಡಿ ಅಂತಾ ನಾನು ಹೇಳುವುದಿಲ್ಲ. ಆದರೆ, ಎಷ್ಟು ಪ್ರಮಾಣದಲ್ಲಿ ಬಳಸಬೇಕು ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು. ಮಣ್ಣು, ನೀರು ಪರೀಕ್ಷೆ ಮಾಡಿಸಬೇಕು. ಯಾವ ಪೋಷಕಾಂಶದ ಅವಶ್ಯಕತೆ ಇದೆ ಎಂಬುದನ್ನು ನೋಡಿಕೊಂಡು, ಅಗತ್ಯ ಪೋಷಕಾಂಶ ಕೊಟ್ಟರೆ ನೂರಕ್ಕೆ ನೂರು ಉತ್ತಮ ಇಳುವರಿ ತೆಗೆಯಬಹುದು. ಸಾವಯವ ಕೃಷಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಹಲವಾರು ಕಾರ್ಯಕ್ರಮಗಳಿವೆ. ಅವುಗಳನ್ನು ಬಳಸಿಕೊಂಡು, ಸಾವಯವ ಕೃಷಿ ಕಡೆ ಮುಖ ಮಾಡಬೇಕು ಎಂದು ರಮೇಶ ಸಲಹೆ ನೀಡಿದರು.

Belagavi farmer emerges as entrepreneur from PMFME scheme Income of lakhs through organic farming, integrated farming
ರೈತ ರಮೇಶ ಬಸಪ್ಪ ಖಾನಗೌಡ್ರ (ETV Bharat)

ರಮೇಶ ಬೆನ್ನಿಗೆ ನಿಂತ ಇಡೀ ಕುಟುಂಬ: ರಮೇಶ ಅವರ ಕೃಷಿ ಸಾಧನೆ ಗುರುತಿಸಿ ಧಾರವಾಡ ಕೃಷಿ ವಿಶ್ವವಿದ್ಯಾಲಯದಿಂದ ಅತ್ಯುತ್ತಮ ಕೃಷಿಕ ಪ್ರಶಸ್ತಿ, ಜಿಲ್ಲಾ ಮಟ್ಟದ ಕೃಷಿ ಪಂಡಿತ ಸೇರಿ ಹಲವು ಪ್ರಶಸ್ತಿಗಳು ನೀಡಿ ಗೌರವಿಸಲಾಗಿದೆ. ರಮೇಶ ಅವರಿಗೆ ಸಹೋದರ ಮಲ್ಲಿಕಾರ್ಜುನ, ತಾಯಿ ಬಾಳವ್ವ, ಪತ್ನಿ ಸವಿತಾ, ಅತ್ತಿಗೆ ಸುಜಾತಾ ಸಾಥ್ ಕೊಟ್ಟಿದ್ದಾರೆ. ಇಡೀ ಕುಟುಂಬ ಒಟ್ಟಾಗಿ ದುಡಿದು, ಸುಖಿ ಕುಟುಂಬವಾಗಿ ಹೊರ ಹೊಮ್ಮಿದೆ. ಅಲ್ಲದೆ, ಕೃಷಿ, ತೋಟಗಾರಿಕೆ ಇಲಾಖೆ, ಕೆವಿಕೆ ಅಧಿಕಾರಿಗಳ ಮಾರ್ಗದರ್ಶನ ಹಾಗೂ ಟೆಲ್ಕೋ ಫೌಂಡೇಶನ್ ಸಹಕಾರದಿಂದ ಈ ಹಂತಕ್ಕೆ ಬಂದಿದ್ದೇನೆ ಎನ್ನುತ್ತಾರೆ ರಮೇಶ.

Belagavi farmer emerges as entrepreneur from PMFME scheme Income of lakhs through organic farming, integrated farming
ರೈತ ರಮೇಶ ಬಸಪ್ಪ ಖಾನಗೌಡ್ರ (ETV Bharat)

ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ತಳುಗೇರಿ ಗ್ರಾಮದಿಂದ ಬಂದಿದ್ದ ಶಂಕರೆಮ್ಮ ಹಿರೇಮಠ ಮಾತನಾಡಿ, ಸಮಗ್ರ ಕೃಷಿ, ಮಿಶ್ರ ಬೆಳೆಗಳನ್ನು ಸಾವಯವ ಪದ್ಧತಿಯಿಂದ ಹೇಗೆ ಬೆಳೆಯಬೇಕು. ಬೆಳೆದ ಬೆಳೆ ಮೌಲ್ಯವರ್ಧನೆ ಮಾಡಿ, ಸ್ವಂತ ಮಾರಾಟ ಹೇಗೆ ಮಾಡಬೇಕು ಎನ್ನುವುದು ಸೇರಿ ಹಲವು ವಿಚಾರಗಳನ್ನು ತಿಳಿದುಕೊಂಡೆವು. ಇಲ್ಲಿ ಕಲಿತ ವಿಷಯಗಳನ್ನು ನಮ್ಮ ಜಮೀನಿನಲ್ಲಿ ಪ್ರಯೋಗ ಮಾಡುತ್ತೇವೆ ಎಂದರು.

ಧಾರವಾಡ ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆ ಸಹಾಯಕ ಪ್ರಾಧ್ಯಾಪಕ ಇಂದೂಧರ ಹಿರೇಮಠ ಮಾತನಾಡಿ, ರಮೇಶ ಖಾನಗೌಡ್ರ ಮಣ್ಣಿನ ಆರೋಗ್ಯ-ಫಲವತ್ತತೆ, ನೈಸರ್ಗಿಕ-ಸಾವಯವ ಕೃಷಿ, ಸಮಗ್ರ ಕೃಷಿಗೆ ಹೆಚ್ಚು ಒತ್ತು ಕೊಟ್ಟಿದ್ದಾರೆ. ಸತತವಾಗಿ ಆದಾಯ ತಂದು ಕೊಡುವ ಆಡು, ಕೋಳಿ ಸಾಕಾಣಿಕೆ ಮಾಡಿದ್ದಾರೆ. ತಾವು ಬೆಳೆದ ಬೆಳೆಗಳ ಮೌಲ್ಯವರ್ಧನೆ ಮಾಡಿ, ಓರ್ವ ರೈತ ಉದ್ಯಮಿ‌ ಆಗಿ ಬೆಳೆದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇವುಗಳನ್ನೂ ಓದಿ:

ಅಣಬೆ ಕೃಷಿಯಿಂದ ವಾರ್ಷಿಕ 10 ಲಕ್ಷ ಗಳಿಸುತ್ತಿರುವ ಮಹಿಳೆ; ಅವರ ಈ ಯಶಸ್ಸಿಗೆ ಕಾರಣವೇನು ಗೊತ್ತಾ?

ಹೈನುಗಾರಿಕೆಯಲ್ಲಿ ಸಕ್ಸಸ್: ಎರಡು ಎಮ್ಮೆಯಿಂದ ಆರಂಭಿಸಿ ಈಗ ಕೋಟಿ ಮೌಲ್ಯದ ಡೈರಿ ಉದ್ಯಮ ಕಟ್ಟಿದ ಯುವಕ!