
ರಾಜ್ಯ ರಾಜಕಾರಣದಲ್ಲಿ ಸುದ್ದಿ ಮಾಡುತ್ತಿರುವ ಬೆಳಗಾವಿ ಡಿಸಿಸಿ ಬ್ಯಾಂಕ್ ಬೆಳೆದು ಬಂದ ಹಾದಿ
ಬೆಳಗಾವಿ ಜಿಲ್ಲೆಯ ರೈತರ ಜೀವನಾಡಿಯಾಗಿರುವ ಡಿಸಿಸಿ ಬ್ಯಾಂಕ್ ಬೆಳೆದು ಬಂದ ಹಾದಿಯ ಕುರಿತೊಂದು ವಿಶೇಷ ವರದಿ.

Published : October 15, 2025 at 9:35 PM IST
|Updated : October 15, 2025 at 10:06 PM IST
ವಿಶೇಷ ವರದಿ: ಸಿದ್ದನಗೌಡ ಎಸ್.ಪಾಟೀಲ್
ಬೆಳಗಾವಿ: ಲೇವಾದೇವಿದಾರರ ಕಪಿಮುಷ್ಠಿಯಿಂದ ಜಿಲ್ಲೆಯ ರೈತರನ್ನು ಮುಕ್ತಗೊಳಿಸಲು 106 ವರ್ಷಗಳ ಹಿಂದೆ ಜಿಲ್ಲೆಯ ಸಹಕಾರಿ ಧುರೀಣರು ಸೇರಿಕೊಂಡು ಬೆಳಗಾವಿ ಡಿಸಿಸಿ ಬ್ಯಾಂಕ್ ಹುಟ್ಟುಹಾಕಿದ್ದರು. ಈಗ ಅದು ಹೆಮ್ಮರವಾಗಿ ಬೆಳೆದು ನಿಂತಿದ್ದು, ಪ್ರತ್ಯಕ್ಷ ಮತ್ತು ಪರೋಕ್ಷವಾಗಿ 50 ಲಕ್ಷ ಮಂದಿಗೆ ನೆರವಾಗಿದೆ.
ಬೆಳಗಾವಿ ಕೇಂದ್ರ ಸಹಕಾರಿ (ಡಿಸಿಸಿ) ಬ್ಯಾಂಕ್ ನಿರ್ದೇಶಕರ ಆಯ್ಕೆಗೆ ಇದೇ ಅ.19ರಂದು ನಡೆಯಲಿರುವ ಚುನಾವಣೆ ಇಲ್ಲಿನ ಪ್ರಬಲ ರಾಜಕೀಯ ಕುಟುಂಬಗಳ ಜಿದ್ದಾಜಿದ್ದಿನಿಂದ ಇಡೀ ರಾಜ್ಯದ ಗಮನ ಸೆಳೆದಿದ್ದು, ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ಸ್ಥಾಪನೆಗೊಂಡ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಪ್ರಯತ್ನವಿದು.
19ನೇ ಶತಮಾನದ ಆರಂಭದಲ್ಲಿ ಶುರುವಾದ ಸಹಕಾರಿ ಚಳುವಳಿ ಬೆಳಗಾವಿ ಜಿಲ್ಲೆಗೂ ಕಾಲಿಟ್ಟಿತ್ತು. 1918ರ ಸುಮಾರಿಗೆ ಜಿಲ್ಲೆಯಲ್ಲಿ 103 ಸಹಕಾರಿ ಸಂಘಗಳು ನೋಂದಾಯಿಸಲ್ಪಟ್ಟಿದ್ದು, ಇದೇ ಹೊತ್ತಿಗೆ ಈ ಭಾಗದ ವಿಭಾಗೀಯ ಗೌರವ ಸಂಘಟಕರಾಗಿದ್ದ ದಿ.ರಾವಬಹದ್ದೂರ ಆರ್.ಜಿ.ನಾಯಿಕ ಅವರು ಬೆಳಗಾವಿ ಜಿಲ್ಲೆಯಲ್ಲೂ ಒಂದು ಮಧ್ಯವರ್ತಿ ಸಹಕಾರಿ ಬ್ಯಾಂಕ್ ಸ್ಥಾಪಿಸಬೇಕೆಂಬ ಮಹದಾಸೆ ಹೊಂದಿದ್ದರು. ಅಂದಿನ ಹಿರಿಯ ಸಹಕಾರಿ ಧುರೀಣರ ಮುಂದೆ ಅವರು ಈ ವಿಚಾರವನ್ನು ಪ್ರಸ್ತಾಪಿಸಿದಾಗ ಒಮ್ಮತದ ನಿರ್ಧಾರ ಕೈಗೊಂಡರು. ಆ ವೇಳೆ ಲೇವಾದೇವಿದಾರರು, ಬಡ್ಡಿ ದಂಧೆಕೋರರ ಶೋಷಣೆ ಅಧಿಕವಾಗಿತ್ತು. ಇದಕ್ಕೆಲ್ಲ ಇತಿಶ್ರೀ ಹಾಡಲು ಆಗಿನ ಸಹಕಾರಿಗಳು ಮುಂದಾದರು.
ಆರ್.ಜಿ.ನಾಯಿಕ ಅವರೊಂದಿಗೆ ಸಹಕಾರಿಗಳಾದ ಚಿಕ್ಕೋಡಿಯ ಆರ್.ಬಿ.ಕುಲಕರ್ಣಿ, ಕಲ್ಲೋಳದ ಎ.ಬಿ. ಕುಲಕರ್ಣಿ, ಠಾಕಳಿಯ ಆರ್.ಎಂ.ಪಾಟೀಲ, ಅಕ್ಕಿವಾಟದ ಎ.ಬಿ.ಪಾಟೀಲ ಸೇರಿದಂತೆ ಮತ್ತಿತರರು ಬ್ಯಾಂಕ್ ಸ್ಥಾಪನೆಗೆ ನಿರ್ಧರಿಸಿ ಮುಂಬೈ ಪ್ರಾಂತದ ರಿಜಿಸ್ಟ್ರಾರ್ ಅವರಿಗೆ ಪ್ರಸ್ತಾವನೆ ಸಲ್ಲಿಸಿದರು. ಅಲ್ಲಿ ಅಂಗೀಕಾರಗೊಂಡ ಹಿನ್ನೆಲೆಯಲ್ಲಿ ಡಿಸೆಂಬರ್ 17, 1918ರಂದು ದಿ ಬೆಳಗಾವಿ ಡಿಸ್ಟ್ರಿಕ್ಟ್ ಸೆಂಟ್ರಲ್ ಕೋ-ಆಪ್ ಬ್ಯಾಂಕ್ ಲಿ. ಈ ಬ್ಯಾಂಕ್ ನೋಂದಾಯಿಸಲ್ಪಟ್ಟು, ಫೆಬ್ರುವರಿ 10, 1919ರಂದು ಬೆಳಗಾವಿ ಜಿಲ್ಲಾ ಮಧ್ಯವರ್ತಿ ಬ್ಯಾಂಕ್ ಅಧಿಕೃತವಾಗಿ ಶುಭಾರಂಭ ಮಾಡಿತು. ಮೊದಲ ಅಧ್ಯಕ್ಷರಾಗಿ ಆರ್.ಬಿ.ಕುಲಕರ್ಣಿ ಅವರು ಆಯ್ಕೆಯಾಗಿದ್ದರು.

ಆರಂಭದಲ್ಲಿ ಬೆಳಗಾವಿ ನಗರದ ಮಾರುತಿ ಗಲ್ಲಿಯಲ್ಲಿದ್ದ ಪಾಯೋನಿಯರ್ ಅರ್ಬನ್ ಸೊಸೈಟಿಯ ಕಟ್ಟಡದ ಒಂದು ಕೋಣೆಯಲ್ಲಿ ಬಾಡಿಗೆ ಪಡೆದು ಬ್ಯಾಂಕ್ ಕಾರ್ಯಾರಂಭ ಮಾಡಿತು. ಆಗ ತಿಂಗಳಿಗೆ 5 ರೂ. ಬಾಡಿಗೆ ಆಧಾರದಲ್ಲಿ ನಡೆಯುತ್ತಿತ್ತು. 1926ರಲ್ಲಿ ರಾಮದೇವ ಗಲ್ಲಿಯಲ್ಲಿ 7 ವರ್ಷ ಬಾಡಿಗೆ ಕಟ್ಟಡದಲ್ಲಿ, 1933ರಲ್ಲಿ ಬಾಂಧೂರ್ ಗಲ್ಲಿಯಲ್ಲಿ ಜಾಗ ಖರೀದಿಸಿ ಬ್ಯಾಂಕಿನ ಪ್ರಧಾನ ಕಚೇರಿಯ ಕಟ್ಟಡ ನಿರ್ಮಿಸಲಾಯಿತು.
ಆ ಕಾರ್ಯಾಲಯವನ್ನು ಅಂದಿನ ಮುಂಬೈ ಪ್ರಾಂತದ ಗವರ್ನರ್ ಆಗಿದ್ದ ಎಫ್.ಎಚ್.ಸಾಯಿಕ್ಸ್ ಉದ್ಘಾಟಿಸಿದ್ದರು. ಅದೇ ಕಟ್ಟಡದಲ್ಲಿ 1969ರ ವರೆಗೆ ಬ್ಯಾಂಕ್ ಕಾರ್ಯನಿರ್ವಹಿಸಿತು. ಬ್ಯಾಂಕ್ ಬೆಳೆದಂತೆ ಇನ್ನೂ ದೊಡ್ಡ ಕೇಂದ್ರ ಕಚೇರಿ ಹೊಂದಬೇಕೆಂಬ ಉದ್ದೇಶದಿಂದ ಈಗಿನ ಹಳೆ ಪುಣೆ-ಬೆಂಗಳೂರು ಹೆದ್ದಾರಿ ಮೇಲೆ ಕೇಂದ್ರ ಬಸ್ ನಿಲ್ದಾಣದ ಹತ್ತಿರ ವಿಶಾಲವಾದ ಕಟ್ಟಡವನ್ನು ಖರೀದಿಸಿ ಪ್ರಧಾನ ಕಚೇರಿಗೆ ಯೋಗ್ಯ ಎನಿಸುವಂತೆ ಮಾರ್ಪಾಡು ಮಾಡಲಾಗಿತ್ತು.

ಆ ಕಟ್ಟಡಕ್ಕೆ ಮುರಗೋಡದ ಮಹಾಂತ ಶಿವಯೋಗಿಗಳು ಚಾಲನೆ ನೀಡಿದ್ದರು. ಏಪ್ರಿಲ್ 24 1969ರಂದು ಅಂದಿನ ಕೇಂದ್ರ ಸರ್ಕಾರದ ಸಹಕಾರ ಮತ್ತು ಗ್ರಾಮೀಣ ಇಲಾಖೆ ರಾಜ್ಯ ಸಚಿವರಾದ ಎಂ.ಎಸ್. ಗುರುಪಾದಸ್ವಾಮಿ ಅವರು ಉದ್ಘಾಟಿಸಿದ್ದರು. ಈಗ ಅದೇ ಜಾಗದಲ್ಲಿ ಐದು ಅಂತಸ್ತಿನ ಸುಸಜ್ಜಿತ ಕಟ್ಟಡ ತಲೆ ಎತ್ತಿದೆ.
ಜಿಲ್ಲಾ ಮಧ್ಯವರ್ತಿ ಬ್ಯಾಂಕ್ ಹೆಸರಿನಿಂದ ಕರೆಯುತ್ತಿದ್ದ ಈ ಬ್ಯಾಂಕ್ ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959 ಕಾಯ್ದೆ ಜಾರಿಯಾದ ನಂತರ ದಿ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ. ಎಂದು ಮರುನಾಮಕರಣಗೊಂಡಿತು.
ಆರ್ಥಿಕ ಸ್ಥಿತಿಗತಿ: 13,043 ರೂ. ದುಡಿಯುವ ಬಂಡವಾಳದಿಂದ ಆರಂಭವಾದ ಬ್ಯಾಂಕ್ ಸದ್ಯ 500 ಕೋಟಿ ಅಧಿಕೃತ ಶೇರು ಬಂಡವಾಳ ಹೊಂದಿದ್ದು, ಆ ಪೈಕಿ 303 ಕೋಟಿ ಸಂಗ್ರಹಿಸಿದ ಶೇರು ಬಂಡವಾಳ. ಗ್ರಾಹಕರಿಂದ 6,087 ಕೋಟಿ ಠೇವಣಿ ಸಂಗ್ರಹಿಸಲಾಗಿದೆ. 2,275 ಕೋಟಿ ಹೂಡಿಕೆ ಮಾಡಲಾಗಿದೆ. 8,592 ಕೋಟಿ ದುಡಿಯುವ ಬಂಡವಾಳ ಹೊಂದಿದ್ದು, 5,892 ಕೋಟಿ ರೂ. ಸಾಲ ವಿತರಿಸಲಾಗಿದೆ. ಇದರಲ್ಲಿ 3432 ಕೋಟಿ ಕೃಷಿ ಸಾಲ, 21 ಸಕ್ಕರೆ ಕಾರ್ಖಾನೆಗಳು, ವೈದ್ಯಕೀಯ ಶಿಕ್ಷಣ ಸಂಸ್ಥೆಗಳು ಹಾಗೂ ಇತರೆ ಕೈಗಾರಿಕೋದ್ಯಮಗಳಿಗೆ 1875 ಕೋಟಿ, ಗೃಹ-ವಾಹನ-ಬಂಗಾರ ಅಡವು-ವೇತನ-ಸ್ವಸಹಾಯ ಸಾಲಗಳು ಸೇರಿ 586 ಕೋಟಿ ನೀಡಲಾಗಿದೆ. ಅಪೇಕ್ಸ್ ಬ್ಯಾಂಕಿನಿಂದ ಐದು ಬಾರಿ ಅತ್ಯುತ್ತಮ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಪ್ರಶಸ್ತಿ ಪಡೆದಿದೆ.
112 ಶಾಖೆಗಳು: ಜಿಲ್ಲೆಯಾದ್ಯಂತ 112 ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಶಾಖೆಗಳು ಕಾರ್ಯನಿರ್ವವಹಿಸುತ್ತಿದ್ದು, ಡಿಸಿಸಿ ಬ್ಯಾಂಕಿನಡಿ 1,249 ಪಿಕೆಪಿಎಸ್ಗಳಲ್ಲಿ 6 ಲಕ್ಷ ರೈತ ಸದಸ್ಯರು, 4 ಲಕ್ಷ ಭೂರಹಿತರು, ಕರಕುಶಲಕರ್ಮಿಗಳು ಸೇರಿ ಮುಂತಾದವರು ಸದಸ್ಯತ್ವ ಹೊಂದಿದ್ದಾರೆ.

ಪ್ರತಿ ವರ್ಷ ರೈತರಿಗೆ ಶೇ.10ರಷ್ಟು ಲಾಭಾಂಶ ಶೇರುದಾರ ರೈತರಿಗೆ ಹಂಚಿಕೆ ಮಾಡಲಾಗುತ್ತಿದೆ. ಅಲ್ಲದೇ ಬೀಜ, ಗೊಬ್ಬರ, ಪಡಿತರವನ್ನು ಪಿಕೆಪಿಎಸ್ ನಿಂದಲೇ ವಿತರಿಸಲಾಗುತ್ತದೆ. ಯಶಸ್ವಿ ಆರೋಗ್ಯ ವಿಮಾ ಯೋಜನೆ, ಅಪಘಾತ ವಿಮಾಯೋಜನೆ, ಬಿಡಿಪಿ ಯೋಜನೆಯಡಿ ಕೃಷಿಯೇತರ ಸಾಲ ಕೂಡ ನೀಡಲಾಗುತ್ತದೆ. 22 ಸ್ವಂತ ಕಟ್ಟಡ ಹೊಂದಿದ್ದು, ಎರಡು ಖುಲ್ಲಾ ಜಾಗ ಬ್ಯಾಂಕ್ ಹೊಂದಿದೆ ಎಂದು ಬ್ಯಾಂಕಿನ ಅಧಿಕಾರಿಗಳು ತಿಳಿಸಿದ್ದಾರೆ.
705 ಮಂದಿಗೆ ಕೆಲಸ: ಬ್ಯಾಂಕಿನಲ್ಲಿ ಮುಖ್ಯ ಕಾರ್ಯನಿರ್ವಾಹಕ, ಪ್ರಧಾನ ವ್ಯವಸ್ಥಾಪಕ, ಉಪ ಪ್ರಧಾನ ವ್ಯವಸ್ಥಾಪಕ, ತಾಲೂಕು ನಿಯಂತ್ರಣ ಅಧಿಕಾರಿಗಳು, ಬ್ಯಾಂಕ್ ಮೇಲ್ವಿಚಾರಕರು, ಶಾಖಾ ಮೇಲ್ವಿಚಾರಕರು, ಗುಮಾಸ್ತರು, ಸಿಪಾಯಿಗಳು ಸೇರಿ ಒಟ್ಟು 705 ಜನರು ಕಾರ್ಯ ನಿರ್ವಹಿಸುತ್ತಿದ್ದಾರೆ. ಇನ್ನು ಪಿಕೆಪಿಎಸ್ಗಳಲ್ಲಿ ಮುಖ್ಯ ಕಾರ್ಯನಿರ್ವಾಹಕ, ಗುಮಾಸ್ತ, ಸೇಲ್ಸ್ ಮ್ಯಾನ್, ಸಿಪಾಯಿ ಸೇರಿ ಸುಮಾರು 3500 ಜನ ಕೆಲಸ ಮಾಡುತ್ತಾರೆ.
ಅದ್ಧೂರಿ ಬೆಳ್ಳಿ, ಸುವರ್ಣ, ವಜ್ರ, ಅಮೃತ ಮಹೋತ್ಸವ: 1944ರಲ್ಲಿ ಬ್ಯಾಂಕಿನ ಬೆಳ್ಳಿ ಮಹೋತ್ಸವಕ್ಕೆ ಅಂದಿನ ಮುಂಬೈ ಪ್ರಾಂತದ ಸಹಕಾರಿ ಸಂಘಗಳ ರಿಜಿಸ್ಟ್ರಾರ್ ಮತ್ತು ರೂರಲ್ ಡೆವಲಪ್ಮೆಂಟ್ ಡೈರೆಕ್ಟರ್ ಆಗಿದ್ದ ಎಸ್.ಎಸ್.ವಿಕ್ರಾಮ್ ಐ.ಸಿ.ಎಸ್. ಅಧಿಕಾರಿ ಆಗಮಿಸಿದ್ದರು. ಬೆಳ್ಳಿ ಮಹೋತ್ಸವ ನಿಮಿತ್ಯ ಬಾಂಧೂರಗಲ್ಲಿಯಲ್ಲಿ ಗಡಿಯಾರ ಸ್ತಂಭ ನಿರ್ಮಿಸಲಾಗಿದ್ದು, ಅದು ಇನ್ನೂ ಕೂಡ ಇರುವುದು ವಿಶೇಷ.

1970ರಲ್ಲಿ ಬ್ಯಾಂಕಿನ 50 ವರ್ಷಗಳ ಸವಿನೆನಪಿಗೋಸ್ಕರ ಆಚರಿಸಿದ ಸುವರ್ಣ ಮಹೋತ್ಸವ ಸಮಾರಂಭವನ್ನು ಅವತ್ತಿನ ಅಖಿಲ ಭಾರತ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿದ್ದ ಎಸ್. ನಿಜಲಿಂಗಪ್ಪ ಉದ್ಘಾಟಿಸಿದ್ದರು. ಕರ್ನಾಟಕದ ಮುಖ್ಯಮಂತ್ರಿ ವೀರೇಂದ್ರ ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಆಗಿನ ಸಹಕಾರ ಸಚಿವ ಪಿ.ಎಂ.ನಾಡಗೌಡ ಕೂಡ ಉಪಸ್ಥಿತರಿದ್ದರು. 1980ರಲ್ಲಿ ನಡೆದ ವಜ್ರ ಮಹೋತ್ಸವ ಸಮಾರಂಭವನ್ನು ಆಗಿನ ಮುಖ್ಯಮಂತ್ರಿ ಆರ್.ಗುಂಡೂರಾವ್ ಉದ್ಘಾಟಿಸಿದ್ದರು. ಕೇಂದ್ರ ಶಿಕ್ಷಣ ಸಚಿವ ಬಿ.ಶಂಕರಾನಂದ ಅಧ್ಯಕ್ಷತೆ ವಹಿಸಿದ್ದರು.

ರಾಜ್ಯ ಸರ್ಕಾರದ ಸಹಕಾರ ಸಚಿವರಾಗಿದ್ದ ಎ.ಬಿ.ಜಕನೂರ ಅತಿಥಿಗಳಾಗಿ ಆಗಮಿಸಿದ್ದರು. ಅದೇ ರೀತಿ 1996ರಲ್ಲಿ ಆಚರಿಸಿದ ಅಮೃತ ಮಹೋತ್ಸವಕ್ಕೆ ಅಂದಿನ ಪ್ರಧಾನಮಂತ್ರಿ ಹೆಚ್.ಡಿ.ದೇವೇಗೌಡರು, ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಸೇರಿ ಅನೇಕರು ಸಾಕ್ಷಿಯಾಗಿದ್ದರು. ಕೋವಿಡ್ ಹಿನ್ನೆಲೆಯಲ್ಲಿ ಶತಮಾನೋತ್ಸವ ಆಚರಿಸಲು ಸಾಧ್ಯವಾಗಿಲ್ಲ.
ಜಿಲ್ಲೆಯ ರೈತರ ಜೀವನಾಡಿ: ಡಿಸಿಸಿ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕರಾದ ಎನ್.ಜಿ.ಕಲಾವಂತ ಅವರು ಈಟಿವಿ ಭಾರತ ಪ್ರತಿನಿಧಿ ಜೊತೆಗೆ ಮಾತನಾಡಿ, "ಸಹಕಾರಿ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ರೈತರ, ಕರಕುಶಲ ಕರ್ಮಿಗಳು ಮತ್ತು ಜನಸಾಮಾನ್ಯರ ಜೀವನಾಡಿಯಾಗಿ ಕಾರ್ಯನಿರ್ವಹಿಸುತ್ತಿದೆ. ಕಳೆದ 106 ವರ್ಷಗಳಿಂದ ಶೇರುದಾರರಾದ ರೈತರ ಅಭ್ಯುದಯಕ್ಕೆ ಬಡ್ಡಿರಹಿತ ಸೇರಿ ವಿವಿಧ ರೂಪದ ಸಾಲಗಳ ಮೂಲಕ ಶ್ರಮಿಸುತ್ತಿದೆ".
"ಕರ್ನಾಟಕ ಸರ್ಕಾರ ನಾಲ್ಕು ಬಾರಿ ಮಾಡಿದ ಸಾಲ ಮನ್ನಾದಲ್ಲಿ ಜಿಲ್ಲೆಯ 3.81 ಲಕ್ಷ ರೈತರ 3,400 ಕೋಟಿ ರೂ. ಸಾಲ ಮನ್ನಾ ಆಗಿದೆ. ಅತೀ ಕಡಿಮೆ ಕಟ್ ಬಾಕಿ ಹೊಂದಿದೆ. ಪ್ರಧಾನಮಂತ್ರಿಗಳ ಕನಸಿನ ಆತ್ಮನಿರ್ಭರ ಭಾರತ ಯೋಜನೆಯಡಿ 192 ಪಿಕೆಪಿಎಸ್ಗಳಿಗೆ ಸ್ವಂತ ಗೋಡಾವಲ್ ನಿರ್ಮಿಸಲು ಶೇ.1ರ ಬಡ್ಡಿದರದಲ್ಲಿ ಸಾಲ ಒದಗಿಸಿರುವುದು ರಾಜ್ಯದಲ್ಲೇ ಹೆಚ್ಚು" ಎಂದು ತಿಳಿಸಿದರು.
ರೈತರು ಹೇಳುವುದೇನು?: ಸವದತ್ತಿ ತಾಲ್ಲೂಕಿನ ಮುರಗೋಡದ ಪ್ರಗತಿಪರ ರೈತ ವೀರಭದ್ರಪ್ಪ ದೇಸಾಯಿ ಅವರನ್ನು ಈಟಿವಿ ಭಾರತ ಸಂಪರ್ಕಿಸಿದಾಗ, "ಕಳೆದ ಮೂವತ್ತು ವರ್ಷಗಳಿಂದ ನಮ್ಮ ಸ್ಥಳೀಯ ಪಿಕೆಪಿಎಸ್ ಮೂಲಕ ಡಿಸಿಸಿ ಬ್ಯಾಂಕಿನ ಜೊತೆಗೆ ವ್ಯವಹಾರ ಮಾಡುತ್ತಿದ್ದೇವೆ. ನನಗೆ ಬಡ್ಡಿರಹಿತವಾಗಿ 3 ಲಕ್ಷ ಸಾಲ ಸಿಕ್ಕಿದೆ. ಶೇ.3ರ ಬಡ್ಡಿ ದರದಲ್ಲಿ ಟ್ರ್ಯಾಕ್ಟರ್, ಕೃಷಿ ಉಪಕರಣಗಳ ಖರೀದಿಗೂ ಸಾಲ ಕೊಟ್ಟಿದ್ದಾರೆ. 1 ಲಕ್ಷ 75 ಸಾವಿರ ರೂ. ನನ್ನದು ಸಾಲ ಮನ್ನಾ ಆಗಿದೆ. ನಮ್ಮ ಮುರಗೋಡ ಮಹಾಂತ ಅಪ್ಪಗಳ ಆಶೀರ್ವಾದದಿಂದ ಬ್ಯಾಂಕ್ ನಮಗೆ ಬಹಳಷ್ಟು ಅನುಕೂಲ ಮಾಡಿದೆ" ಎಂದು ಹರ್ಷ ವ್ಯಕ್ತಪಡಿಸಿದರು.
ಇದನ್ನೂ ಓದಿ: ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ: ಜೊಲ್ಲೆ - ಜಾರಕಿಹೊಳಿ ಬ್ರದರ್ಸ್ ಒಂದಾಗಿದ್ದೇಕೆ?

