ಅ.19ರಂದು ಬೆಳಗಾವಿ ಡಿಸಿಸಿ ಬ್ಯಾಂಕ್ ಎಲೆಕ್ಷನ್: 7 ಕ್ಷೇತ್ರ, 14 ಅಭ್ಯರ್ಥಿಗಳು, 676 ಮತದಾರರು
ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಗೆ ಮುಹೂರ್ತ ನಿಗದಿಯಾಗಿದೆ.

Published : October 17, 2025 at 9:47 PM IST
ಬೆಳಗಾವಿ: ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ (ಡಿಸಿಸಿ) ಬ್ಯಾಂಕಿನ 9 ನಿರ್ದೇಶಕ ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದ್ದು, ಉಳಿದ 7 ಸ್ಥಾನಗಳಿಗೆ ಅ.19ರಂದು ಭಾನುವಾರ ಬೆಳಿಗ್ಗೆ 9ರಿಂದ ಸಂಜೆ 4ರವರೆಗೆ ನಗರದ ಬಿ.ಕೆ.ಮಾಡೆಲ್ ಹೈಸ್ಕೂಲ್‌ನಲ್ಲಿ ಮತದಾನ ನಡೆಯಲಿದೆ ಎಂದು ಬಿಡಿಸಿಸಿ ಬ್ಯಾಂಕ್ ಚುನಾವಣಾಧಿಕಾರಿಯೂ ಆಗಿರುವ ಬೆಳಗಾವಿ ಉಪವಿಭಾಗಾಧಿಕಾರಿ ಶ್ರವಣ ನಾಯಕ್ ತಿಳಿಸಿದರು.
ಬೆಳಗಾವಿಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅಥಣಿ ತಾಲ್ಲೂಕಿನಿಂದ 125 ಅರ್ಹ ಮತದಾರರಿದ್ದು, ಬೈಲಹೊಂಗಲ 73, ಹುಕ್ಕೇರಿ 90, ಕಿತ್ತೂರು 29, ನಿಪ್ಪಾಣಿ 119, ರಾಯಬಾಗ 205 ಹಾಗೂ ರಾಮದುರ್ಗ 105 ಮತದಾರರು ಸೇರಿ ಒಟ್ಟು 676 ಮತದಾರರು ಮತದಾನ ಮಾಡಲಿದ್ದಾರೆ ಎಂದರು.
ಭಾನುವಾರವೇ ಫಲಿತಾಂಶ ಪ್ರಕಟ: ಭಾನುವಾರ ಒಂದೇ ದಿನದಲ್ಲಿ ಇಡೀ ಚುನಾವಣಾ ಪ್ರಕ್ರಿಯೆ ಮುಗಿಯಲಿದೆ. ಮತದಾನ ಮುಗಿದ ಬಳಿಕ, ಮತ ಎಣಿಕೆ ಪ್ರಕ್ರಿಯೆ ನಡೆಸಿ, ಫಲಿತಾಂಶ ಕೂಡ ಪ್ರಕಟಿಸಲಾಗುವುದು. ಏಳು ಸ್ಥಾನಗಳಿಗೆ 14 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ. ಮತದಾನಕ್ಕಾಗಿ ಏಳು ಮತಗಟ್ಟೆ ಕೇಂದ್ರಗಳನ್ನು ತೆರೆಯಲಾಗಿದೆ. ಎಲ್ಲ ಕೇಂದ್ರಗಳಲ್ಲಿಯೂ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗುವುದು. ಮತದಾನದ ಕೇಂದ್ರದ ಹೊರಗೆ ಹಾಗೂ ಒಳಗೆ ನಗರ ಪೊಲೀಸ್ ಆಯುಕ್ತ ಭೂಷಣ್ ಭೊರಸೆ ಅವರ ನೇತೃತ್ವದಲ್ಲಿ ಸೂಕ್ತ ಬಂದೋಬಸ್ತ್ ಕೈಗೊಳ್ಳಲಾಗಿದೆ ಎಂದು ಶ್ರವಣ ನಾಯಿಕ ಮಾಹಿತಿ ನೀಡಿದರು.
ಮತಗಟ್ಟೆಯಲ್ಲಿ ಮೊಬೈಲ್, ಪೆನ್ನು, ಪೆನ್ಸಿಲ್ ಅಥವಾ ಯಾವುದೇ ಎಲೆಕ್ಟ್ರಾನಿಕ್ ಸಾಮಗ್ರಿ ಬಳಕೆ ನಿಷೇಧಿಸಲಾಗಿದೆ. 33 ಚುನಾವಣಾ ಸಿಬ್ಬಂದಿ, ಏಜೆಂಟರು ಹಾಗೂ ಅಧಿಕೃತ ಪಾಸ್ ಪಡೆದ ಮಾಧ್ಯಮದವರಿಗೆ ಮಾತ್ರ ಪ್ರವೇಶ ಇರುತ್ತದೆ. ಮತದಾನ ಹಕ್ಕು ಹೊಂದಿರದ ಹಾಲಿ, ಮಾಜಿ ಸಚಿವರು, ಶಾಸಕರಿಗೆ ಮತದಾನ ಕೇಂದ್ರಕ್ಕೆ ಪ್ರವೇಶ ಇರುವುದಿಲ್ಲ. ಮತದಾನ ಹಾಗೂ ಮತ ಎಣಿಕೆ ಪ್ರಕ್ರಿಯೆಗೆ ಎಲ್ಲ ಅಭ್ಯರ್ಥಿಗಳಿಗೂ ತಲಾ ಒಬ್ಬರೇ ಏಜೆಂಟರು ಇರುತ್ತಾರೆ. ಅಭ್ಯರ್ಥಿಗಳು, ಚುನಾವಣೆ ಅಧಿಕಾರಿಗಳು ಹಾಗೂ ಮಾಧ್ಯಮದವರು ಸೇರಿದಂತೆ ಒಳಗೆ ಇರುವ ಎಲ್ಲರಿಗೂ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಹೇಳಿದರು.
ಮತದಾರರು ಗೌಪ್ಯತೆಯಿಂದ ಮತದಾನ ಮಾಡಬೇಕು. ಗೌಪ್ಯತೆ ಉಲ್ಲಂಘನೆಯಾಗುವ ಯಾವುದೇ ಕಾರ್ಯ ಚಟುವಟಿಕೆಗಳನ್ನು ಮಾಡುವಂತಿಲ್ಲ. ಎಲ್ಲ ಮತದಾರರೂ ಇದಕ್ಕೆ ಚುನಾವಣಾ ಸಿಬ್ಬಂದಿಗೆ ಸಹಕರಿಸಬೇಕು. ಕುಡಿಯುವ ನೀರು, ಶೌಚಾಲಯ ಸೇರಿದಂತೆ ಸೌಲಭ್ಯ ಕಲ್ಪಿಸಲಾಗಿದೆ. ಜೊತೆಗೆ ವೇದಿಕೆಯ ಸಿಬ್ಬಂದಿ, ಆಂಬುಲೆನ್ಸ್, ಅಗ್ನಿಶಾಮಕ ದಳದ ವ್ಯವಸ್ಥೆಯೂ ಇರಲಿದೆ. ಈಗಾಗಲೇ ಮತದಾನ ನಡೆಯಲಿರುವ ಬಿ.ಕೆ.ಮಾಡಲ್ ಪ್ರೌಢಶಾಲೆಯ ಸುತ್ತಮುತ್ತ 100 ಮೀಟರ್ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಗೆಲುವು ಸಾಧಿಸಿದ ಬಳಿಕ ಅಭ್ಯರ್ಥಿ ಐವರು ಬೆಂಬಲಿಗರ ಸಮೇತ ಆಗಮಿಸಿ ತಮ್ಮ ಪ್ರಮಾಣಪತ್ರ ಸ್ವೀಕರಿಸಿಕೊಂಡು ಹೋಗಬಹುದು ಎಂದು ವಿವರ ನೀಡಿದರು.
ಚುನಾವಣೆ ನಡೆಯಬೇಕಿರುವ 7 ಕ್ಷೇತ್ರಗಳಲ್ಲಿ ಒಟ್ಟು 698 ಪಿಕೆಪಿಎಸ್‌ಗಳಿವೆ. ಇದರಲ್ಲಿ ಕೆಲವು ಪಿಕೆಪಿಎಸ್‌ಗಳು ಮತದಾನದ ಹಕ್ಕು ಕಳೆದುಕೊಂಡಿವೆ. ಹಾಗಾಗಿ, ಠರಾವು ಪಾಸ್ ಮಾಡಿಕೊಂಡು ಮತದಾನದ ಹಕ್ಕು ಪಡೆದ ಒಟ್ಟು 676 ಮತದಾರರು ಮಾತ್ರ ಮತದಾನ ಮಾಡಲಿದ್ದಾರೆ. ಕೆಲವು ಪಿಕೆಪಿಎಸ್‌ಗಳು ಮತದಾನದ ಹಕ್ಕು ಪಡೆಯುವುದಕ್ಕಾಗಿ ನ್ಯಾಯಾಲಯದ ಮೊರೆ ಹೋಗಿರುವ ಮಾಹಿತಿ ಇದೆ. ಆದರೆ, ನ್ಯಾಯಾಲಯದಿಂದ ನಮಗೆ ಈವರೆಗೂ ಯಾವುದೇ ನಿರ್ದೇಶನ ಬಂದಿಲ್ಲ. ಒಂದು ವೇಳೆ ಕೋರ್ಟ್ ನಿರ್ದೇಶನ ಬಂದರೆ ಆ ಆದೇಶವನ್ನು ಪಾಲಿಸಲಾಗುತ್ತದೆ ಎಂದು ಶ್ರವಣ ನಾಯಿಕ ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಸಹಕಾರ ಇಲಾಖೆಯ ಉಪ ನಿಬಂಧಕ ರವೀಂದ್ರ ಪಾಟೀಲ, ಬಿಡಿಸಿಸಿ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ಎನ್.ಜಿ.ಕಲಾವಂತ ಇದ್ದರು.
ಇದನ್ನೂ ಓದಿ: ರಾಜ್ಯ ರಾಜಕಾರಣದಲ್ಲಿ ಸುದ್ದಿ ಮಾಡುತ್ತಿರುವ ಬೆಳಗಾವಿ ಡಿಸಿಸಿ ಬ್ಯಾಂಕ್ ಬೆಳೆದು ಬಂದ ಹಾದಿ

