ಕಿರುಕುಳ ಆರೋಪ: ಪಿಜಿಯೊಂದರಲ್ಲಿ ಆತ್ಮಹತ್ಯೆಗೆ ಶರಣಾದ ಬಿಬಿಎ ವಿದ್ಯಾರ್ಥಿನಿ
ಬೆಂಗಳೂರು ನಗರದ ಕಾಡುಸೊಣ್ಣಪ್ಪಹಳ್ಳಿಯ ಗ್ರೀನ್ ಗಾರ್ಡನ್ ಬಡಾವಣೆಯ ಪಿಜಿಯೊಂದರಲ್ಲಿ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿಬಿಎ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ.

Published : October 18, 2025 at 8:37 PM IST
ಬೆಂಗಳೂರು : ಖಾಸಗಿ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿಬಿಎ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯೊಬ್ಬರು ಪಿಜಿಯೊಂದರಲ್ಲಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ಬಾಗಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸನಾ ಪರ್ವಿನ್ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಮಗಳ ಸಾವಿಗೆ ರೀಫಾಸ್ ಎಂಬಾತ ಕಾರಣನಾಗಿದ್ದು, ಈತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ತಂದೆ ಅಬ್ದುಲ್ ನಜೀರ್ ಎಂಬುವರು ನೀಡಿದ ದೂರನ್ನು ಆಧರಿಸಿ ಆತ್ಮಹತ್ಯೆಗೆ ಪ್ರಚೋದನೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ಖಾಸಗಿ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿಬಿಎ ವ್ಯಾಸಂಗ ಮಾಡುತ್ತಿದ್ದ ಸನಾ ಪರ್ವೀನ್ ಅವರು, ನಗರದ ಕಾಡುಸೊಣ್ಣಪ್ಪಹಳ್ಳಿಯ ಗ್ರೀನ್ ಗಾರ್ಡನ್ ಬಡಾವಣೆಯ ಪಿಜಿಯೊಂದರಲ್ಲಿ ಗೆಳತಿಯರೊಂದಿಗೆ ವಾಸವಾಗಿದ್ದರು. 'ಅ.17ರಂದು ಬೆಳಗ್ಗೆ ವಿದ್ಯಾರ್ಥಿನಿ ವ್ಯಾಸಂಗ ಮಾಡುತ್ತಿದ್ದ ಕಾಲೇಜಿನ ಉಪನ್ಯಾಸಕಿ ಕರೆ ಮಾಡಿ, 'ನಿಮ್ಮ ಮಗಳಿಗೆ ಸೀರಿಯಸ್ ಆಗಿದೆ, ಕೂಡಲೇ ಬನ್ನಿ' ಎಂದು ತಿಳಿಸಿದ್ದರು. ಕೂಡಲೇ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಪಿಜಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದುಬಂತು' ಎಂದು ದೂರಿನಲ್ಲಿ ಅಬ್ದುಲ್ ತಿಳಿಸಿದ್ಧಾರೆ.
ಆರೋಪಿಯಿಂದ ಹಿಂಸೆ ತಾಳಲಾರದೇ ಪರ್ವಿನ್ ಆತ್ಮಹತ್ಯೆ ಆರೋಪ : ಮಗಳ ಆತ್ಮಹತ್ಯೆಯ ಕುರಿತ ಕಾರಣದ ಬಗ್ಗೆ ಪರಿಶೀಲಿಸಿದಾಗ 10 ತಿಂಗಳ ಹಿಂದೆ ಯುವಕನೊಬ್ಬ ಮಗಳನ್ನ ಹಿಂಬಾಲಿಸಿ ಬ್ಲ್ಯಾಕ್ ಮೇಲ್ ಮಾಡಿ ಟಾರ್ಚರ್ ನೀಡುತ್ತಿದ್ದ ಎಂಬುದನ್ನ ಹೇಳಿಕೊಂಡಿದ್ದಳು. ಆದರೆ, ಯಾವ ಕಾರಣಕ್ಕೆ ಎಂಬುದು ತಿಳಿದಿರಲಿಲ್ಲ. ಈ ವಿಷಯವನ್ನ ಕಾಲೇಜಿನ ಆಡಳಿತ ಮಂಡಳಿಯ ಗಮನಕ್ಕೆ ತಂದಾಗ ಆ ಯುವಕನನ್ನು ಕರೆಯಿಸಿ ತಿಳಿವಳಿಕೆ ಹೇಳಿ ಕಳುಹಿಸಿದ್ದರು. ಇತ್ತೀಚೆಗೆ ಮಗಳಿಗೆ ಅನುಚಿತವಾಗಿ ಮೇಸೆಜ್ ಮಾಡುತ್ತಿದ್ದ. ಇದಾದ ಬಳಿಕ ಮತ್ತೆ ಮಗಳಿಗೆ ಟಾರ್ಚರ್ ಕೊಡುವುದನ್ನ ಮುಂದುವರೆಸಿದ್ದ. ಆರೋಪಿಯಿಂದ ಹಿಂಸೆ ತಾಳಲಾರದೇ ಪರ್ವಿನ್ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ದೂರಿನಲ್ಲಿ ಪೋಷಕರು ಆರೋಪಿಸಿದ್ದಾರೆ.
ವಿದ್ಯಾರ್ಥಿನಿ ಸಾವಿನ ಬಗ್ಗೆ ಪೊಲೀಸರು ನೀಡಿರುವ ಮಾಹಿತಿ ಹೀಗಿದೆ; ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವ ಪೊಲೀಸರು ಪರ್ವಿನ್ ವ್ಯಾಸಂಗ ಮಾಡಿದ್ದ ಕಾಲೇಜಿನಲ್ಲಿ ಹಿಂಬಾಲಿಸುತ್ತಿದ್ದ ಯುವಕ ಸೀನಿಯರ್ ಆಗಿದ್ದ. ಕೋರ್ಸ್ ಮುಗಿಸಿಕೊಂಡು ಇದೀಗ ಕೇರಳದ ತ್ರಿಶೂರ್ನಲ್ಲಿ ನೆಲೆಸಿದ್ಧಾನೆ. ಇಬ್ಬರ ನಡುವೆ ಪ್ರೇಮಾಂಕುರವಾಗಿ ಪರಸ್ಪರ ಸಂಪರ್ಕದಲ್ಲಿದ್ದರು. ಇಬ್ಬರ ನಡುವೆ ಯಾವುದೋ ವಿಚಾರವಾಗಿ ವೈಮನಸ್ಸು ಮೂಡಿತ್ತು. ಇದರಿಂದ ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಸದ್ಯ ವಿಚಾರಣೆಗೆ ಹಾಜರಾಗಲು ಶಂಕಿತ ಆರೋಪಿಗೆ ನೋಟಿಸ್ ನೀಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ : ಬೆಂಗಳೂರು: ಇಬ್ಬರು ಮಕ್ಕಳ ಕೊಂದು ತಾಯಿ ಆತ್ಮಹತ್ಯೆ

