ಮೈಸೂರು ಬಾಳೆಮೇಳಕ್ಕೆ ಯಶಸ್ವಿ ತೆರೆ: ನಾಲ್ಕು ಸಾವಿರಕ್ಕೂ ಹೆಚ್ಚು ಗ್ರಾಹಕರು ಭಾಗಿ
ಬಾಳೆ ಮೇಳದಲ್ಲಿ ಕೆಲವು ಅಪರೂಪದ ಬಾಳೆ ತಳಿಗಳನ್ನು ಕೊಳ್ಳಲು ಮಹಾರಾಷ್ಟ್ರ, ತೆಲಂಗಾಣ, ಕೇರಳ ಮತ್ತು ಆಂಧ್ರದಿಂದ ಆಸಕ್ತ ರೈತರು ಬಂದಿದ್ದು ವಿಶೇಷವಾಗಿತ್ತು.

Published : November 9, 2025 at 8:53 PM IST
ಮೈಸೂರು: ಮೈಸೂರಿನಲ್ಲಿ ಏರ್ಪಡಿಸಲಾಗಿದ್ದ ಎರಡು ದಿನಗಳ ಬಾಳೆ ಮೇಳಕ್ಕೆ ಭಾನುವಾರ ತೆರೆ ಎಳೆಯಲಾಯಿತು. ನಂಜರಾಜ ಬಹದ್ದೂರ್ ಛತ್ರದಲ್ಲಿ ಆಯೋಜಿಸಿದ್ದ 'ಬಾಳೆ ಮೇಳ'ದ ಕೊನೆಯ ದಿನವೂ ವೈವಿಧ್ಯಮಯ ಬಾಳೆಯನ್ನು ನೋಡಲು ಹೆಚ್ಚಿನ ಪ್ರಮಾಣದಲ್ಲಿ ಗ್ರಾಹಕರು ಆಗಮಿಸಿದ್ದರು.
ಸಹಜ ಸಮೃದ್ಧ, ಐಸಿಎಆರ್ - ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರ, ಕಿಸಾನ್ ಬಂಡಿ ಹಾಗೂ ಅಭಯ್ ನ್ಯಾಚುರಲ್ ಫುಡ್ಸ್ ಮತ್ತು ಬಾಕಾಹು ಅಡ್ಡ ಆರ್ಗ್ಯಾನಿಕ್ ಸಹಯೋಗದಲ್ಲಿ ಎರಡು ದಿನಗಳ ಬಾಳೆ ಮೇಳ ಆಯೋಜಿಸಲಾಗಿತ್ತು. ವಿವಿಧ ತಳಿಗಳ ಬಾಳೆ ಪ್ರದರ್ಶನ ಹಾಗೂ ಮಾರಾಟಕ್ಕೆ ವೇದಿಕೆಯಾದ ಈ ಮೇಳದಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ಗ್ರಾಹಕರು, ರೈತರು, ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ, ಬಾಳೆಯ ವಿವಿಧ ತಳಿಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಬಾಳೆಹಣ್ಣು, ಸಸಿ, ಗೆಡ್ಡೆ, ಮೌಲ್ಯವರ್ಧಿತ ಪದಾರ್ಥಗಳನ್ನು ಖರೀದಿಸಿದರು.
ಶಿರಸಿಯ ಬಾಳೆ ಸಂರಕ್ಷಕ ಪ್ರಸಾದ್ ರಾಮ ಹೆಗಡೆಯವರು ತಂದಿದ್ದ ನಮಸ್ತೆ ಬಾಳೆ, ಐಸ್ ಕ್ರೀಂ ಬಾಳೆ, ಕರಿ ಬಾಳೆ, ಕಾಡು ಬಾಳೆ, ಕೆಂಪು ಬಾಳೆ, ಸಹಸ್ರ ಬಾಳೆಯ ಕಂದುಗಳನ್ನು ಕೊಳ್ಳಲು ಜನ ಮುಗಿಬಿದ್ದರು. ಕೆಲವು ಅಪರೂಪದ ಬಾಳೆ ತಳಿಗಳ ಕಂದಿನ ಬೆಲೆ ಮೂರು ಸಾವಿರ ರೂಪಾಯಿಗಳಿಷ್ಟಿತ್ತು. ಇವನ್ನು ಕೊಳ್ಳಲು ಮಹಾರಾಷ್ಟ್ರ, ತೆಲಂಗಾಣ, ಕೇರಳ ಮತ್ತು ಆಂಧ್ರದಿಂದ ಆಸಕ್ತ ರೈತರು ಬಂದಿದ್ದು ವಿಶೇಷ.
ಮೈಸೂರಿನ ಸಹಜ ಸೀಡ್ಸ್ ರೈತ ಕಂಪನಿ ನಂಜನಗೂಡು ರಸಬಾಳೆ, ಮದರಂಗಿ, ಫಿಂಗರ್ ಬಾಳೆ, ಪೂವನ್, ಕರ್ಪೂರವಲ್ಲಿ, ಚಂದ್ರ ಬಾಳೆ, ಎಲಕ್ಕಿ ಬಾಳೆಗಳ 2500 ಗಿಡ ಮತ್ತು ಗೆಡ್ಡೆಗಳನ್ನು ಮಾರಾಟ ಮಾಡಿದರು. ಹೆಗ್ಗಡದೇವನಕೋಟೆಯ ಹುಲಿಕಾಡು ರೈತ ಉತ್ಪಾದಕರ ಕಂಪನಿ ನೇಂದ್ರ, ಪಚ್ಚಬಾಳೆ, ಏಲಕ್ಕಿಯ ಒಂದು ಸಾವಿರ ಗೆಡ್ಡೆ ಮತ್ತು ಸಾಕಷ್ಟು ಬಾಳೆ ಹಣ್ಣು ಮಾರಾಟ ಮಾಡಿದರು.
ಬಾಳೆಯ ಖಾದ್ಯ, ಸಿರಿಧಾನ್ಯ, ದೇಶಿ ಅಕ್ಕಿ, ಸಾವಯವ ಉತ್ಪನ್ನಗಳು, ಕರಕುಶಲ ಕಲಾಕೃತಿ ಹಾಗೂ ತರಹೇವಾರಿ ಮೌಲ್ಯವರ್ಧಿತ ಉತ್ಪನ್ನಗಳ ಮಾರಾಟ ಭರದಿಂದ ನಡೆಯಿತು.
ಬಾಳೆ ಜನಪ್ರಿಯಗೊಳಿಸಲು ಚಿತ್ರಕಲೆ ಮತ್ತು ಅಡುಗೆ ಸ್ಪರ್ಧೆ: ಬಾಳೆ ಮೇಳದ ಅಂಗವಾಗಿ, ವಿದ್ಯಾರ್ಥಿಗಳಿಗೆ ಚಿತ್ರ ಕಲಾ ಸ್ಪರ್ಧೆ ಆಯೋಜಿಸಲಾಗಿತ್ತು. 'ನಾ ಕಂಡಂತೆ ಬಾಳೆ' ಸ್ಥಳದಲ್ಲೇ ಚಿತ್ರ ಬರೆಯುವ ಸ್ಪರ್ಧೆಯ ಕಿರಿಯರ ವಿಭಾಗದಲ್ಲಿ ಮೌಲ್ಯ ಎಸ್ (ಪ್ರಥಮ), ನಯನ ಹೆಚ್ ಆರ್ (ದ್ವಿತೀಯ) ಶ್ರೀ ಆದ್ಯಾ ಕೋಟ (ತೃತೀಯ) ಮತ್ತು ಹಿರಿಯರ ವಿಭಾಗದಲ್ಲಿ ಈಶನ್ ಬಿ (ಪ್ರಥಮ), ಧೀರಜ್ ಕೆ. (ದ್ವಿತೀಯ), ಗೋಕುಲ್ (ತೃತೀಯ) ಬಹುಮಾನ ಗಳಿಸಿದರು. ಖ್ಯಾತ ಕಲಾವಿದ ವಿಷ್ಣು ತೀರ್ಪುಗಾರರಾಗಿದ್ದರು.
ಬಾಳೆ ಅಡುಗೆಗಳ ಸ್ಪರ್ಧೆಯಲ್ಲಿ ವತ್ಸಲಾ (ಪ್ರಥಮ), ಮಂಜುಳಾ (ದ್ವಿತೀಯ) ಮತ್ತು ನಾಗವೇಣಿ ವಿರೂಪಾಕ್ಷ (ತೃತೀಯ) ಬಹುಮಾನ ಗಳಿಸಿದರು. ತೀರ್ಪುಗಾರರಾಗಿ ಶ್ರೀವತ್ಸ ಗೋವಿಂದರಾಜು, ಸುಮತಿ, ಲೋಕೇಶ್ ಅವಂತಿ ಮತ್ತು ದೀಪಕ್ ಭಾಗವಹಿಸಿದ್ದರು. ಅಭಿಜಿತ್, ಕೇಶವಮೂರ್ತಿ ಮತ್ತು ಮಂಜು ಕೆ.ಎಸ್. ಸ್ಪರ್ಧೆಗಳ ಉಸ್ತುವಾರಿ ವಹಿಸಿದ್ದರು.
ಮೈಸೂರು ಭಾಗದಲ್ಲಿ ಬಾಳೆಯ ವೈವಿಧ್ಯ ಸಂರಕ್ಷಣೆಗೆ ಆಸಕ್ತ ಬಾಳೆ ಕೃಷಿಕರ ಸಂಘಕ್ಕೆ ಚಾಲನೆ ನೀಡಲಾಯಿತು.
ಇದನ್ನೂ ಓದಿ: ಮೈಸೂರಿನಲ್ಲಿ ಅಪರೂಪದ ಬಾಳೆ ತಳಿ ಪ್ರದರ್ಶನ; ಬಾಳೆಯಿಂದ ಬರಬಹುದಾದ ಆದಾಯದ ಕುರಿತು ಪ್ರಗತಿಪರ ರೈತರು ಹೇಳುವುದಿಷ್ಟು

