ETV Bharat / state

ಬಳ್ಳಾರಿ: ವೈದ್ಯಕೀಯ ಪದವಿ ಪಡೆಯದೇ ವೈದ್ಯ ವೃತ್ತಿ ಮಾಡುತ್ತಿದ್ದ ನಕಲಿ ವೈದ್ಯರ ಕ್ಲಿನಿಕ್ ಸೀಜ್

ಬಳ್ಳಾರಿಯ ವಿವಿಧೆಡೆ ನಕಲಿ ವೈದ್ಯರ ಕ್ಲಿನಿಕ್ ಅನ್ನು ಪತ್ತೆ ಹಚ್ಚಿದ ಅಧಿಕಾರಿಗಳು ಅವುಗಳನ್ನು ಸೀಜ್ ಮಾಡಿದ್ದಾರೆ.

FAKE DOCTOR
ಸಾಂದರ್ಭಿಕ ಚಿತ್ರ (ETV Bharat)
author img

By ETV Bharat Karnataka Team

Published : January 8, 2026 at 8:18 PM IST

2 Min Read
Choose ETV Bharat

ಬಳ್ಳಾರಿ: ವೈದ್ಯಕೀಯ ಪದವಿ ಪಡೆಯದೇ ತಾವು ವೈದ್ಯರೆಂದು ಬಿಂಬಿಸಿ ಜಿಲ್ಲೆಯ ವಿವಿಧೆಡೆ ವೈದ್ಯ ವೃತ್ತಿ ಮಾಡುತ್ತಿದ್ದ ನಕಲಿ ವೈದ್ಯರ ಕ್ಲಿನಿಕ್​ಗಳ ಮೇಲೆ ದಾಳಿ ನಡೆಸಿ ಸೀಜ್ ಮಾಡಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ್ ಬಾಬು ತಿಳಿಸಿದ್ದಾರೆ.

ನಗರದ ಮುಲ್ಲಂಗಿ ಸಂಜೀವಪ್ಪ ಬೀದಿಯ ಕೊಲ್ಮಿಚೌಕ್ ಹತ್ತಿರದಲ್ಲಿನ ಬಿಸ್ವಾಸ್ ಎಂಬುವವ ಯಾವುದೇ ವೈದ್ಯಕೀಯ ಪದವಿ ಮಾನ್ಯತೆ ಪಡೆಯದೇ ನಕಲಿ ವೈದ್ಯನಾಗಿದ್ದು, ತಾನು ಫೈಲ್ಸ್ ವೈದ್ಯನೆಂದು ಸಾರ್ವಜನಿಕರಲ್ಲಿ ಸುಳ್ಳು ಹೇಳಿ ತನ್ನ ಬಳಿ ಬಂದ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ. ಸಾರ್ವಜನಿಕರಿಂದ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಕ್ಲಿನಿಕ್ ಮೇಲೆ ದಾಳಿ ಮಾಡಿ ಕ್ಲಿನಿಕ್ ಸೀಜ್ ಮಾಡಲಾಗಿದೆ.

ಅಲ್ಲದೇ, ಕುಡುತಿನಿ ಗ್ರಾಮದಲ್ಲಿ ಮತ್ತೊಬ್ಬ ನಕಲಿ ವೈದ್ಯ ಎಂ.ಡಿ ಗೌಸ್ ಎಂಬುವರು ಸಾರ್ವಜನಿಕರಿಗೆ ವೈದ್ಯನೆಂದು ಬಿಂಬಿಸಿ ಯಾವುದೇ ವೈದ್ಯಕೀಯ ಪದವಿ ಪಡೆಯದೇ ಕೇವಲ 10ನೇ ತರಗತಿಯವರೆಗೆ ಓದಿ, ಔಷಧಗಳ ಬಗ್ಗೆ ಮಾಹಿತಿ ಪಡೆದುಕೊಂಡು ತನ್ನ ಬಳಿ ಬಂದ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ. ಈ ಸುದ್ದಿ ಗೊತ್ತಾಗುತ್ತಿದ್ದಂತೆ ಕ್ಲಿನಿಕ್ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ಈ ಕ್ಲಿನಿಕ್‌ ಅನ್ನು ಸಹ ಸೀಜ್ ಮಾಡಿದ್ದಾರೆ.

ಅದೇ ರೀತಿ ಬಳ್ಳಾರಿ ತಾಲೂಕಿನ ಸಿರಿವಾರ ಗ್ರಾಮದಲ್ಲಿ ಡಾ.ಪ್ರಕಾಶ್ ಎಂಬುವವರು, ಬಿ.ಎ.ಎಂ.ಎಸ್ ವಿದ್ಯಾರ್ಹತೆ ಪಡೆದು ಚಿಕಿತ್ಸೆ ನೀಡುತ್ತಿದ್ದು, ಕೆ.ಪಿ.ಎಂ.ಇ ಕಾಯ್ದೆ ಉಲ್ಲಂಘನೆ ಮಾಡಿರುವುದು ಕಂಡುಬಂದಿದೆ. ಇವರ ಎಂ.ಜಿ. ಕ್ಲಿನಿಕ್ ಅನ್ನು ಸಹ ಸೀಜ್ ಮಾಡಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ್ ಬಾಬು ಮಾಹಿತಿ ನೀಡಿದ್ದಾರೆ.

ಸಾರ್ವಜನಿಕರು ತಮ್ಮ ಆರೋಗ್ಯದ ದೃಷ್ಟಿಯಿಂದ ಅಧಿಕೃತ ವೈದ್ಯಕೀಯ ಪದವಿ ಪಡೆದ ವೈದ್ಯರ ಬಳಿ ತಪಾಸಣೆ ಮಾಡಿಸುವ ಮೂಲಕ ಚಿಕಿತ್ಸೆ ಪಡೆಯುವುದರಿಂದ ಆರೋಗ್ಯದ ಮೇಲೆ ಉಂಟಾಗಬಹುದಾದ ಗಂಭೀರ ಪರಿಣಾಮಗಳನ್ನು ತಡೆಯಬಹುದಾಗಿದೆ. ಗ್ರಾಮಗಳಲ್ಲಿ ವೈದ್ಯ ವೃತ್ತಿ ಮಾಡುತ್ತಿರುವವರು ಕಂಡುಬಂದಲ್ಲಿ ಸಾರ್ವಜನಿಕರು ಅವರ ವೈದ್ಯಕೀಯ ಪದವಿಯ ಮಾಹಿತಿಯನ್ನು ಪಡೆದುಕೊಂಡು ಚಿಕಿತ್ಸೆ ಪಡೆಯಬೇಕು. ಒಂದು ವೇಳೆ ನಕಲಿ ವೈದ್ಯರೆಂದು ಕಂಡುಬಂದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಾರ್ಯಾಲಯಕ್ಕೆ ದೂರು ನೀಡಿದರೆ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಅಧಿನಿಯಮ 2007ರ ಅಡಿ ಕ್ರಮ ಜರುಗಿಸಬಹುದಾಗಿದೆ ಎಂದು ಯಲ್ಲಾ ರಮೇಶ್ ಬಾಬು ತಿಳಿಸಿದ್ದಾರೆ.

ದಾಳಿಯ ಸಂದರ್ಭದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ.ಆರ್.ಅಬ್ದುಲ್ಲಾ ಮತ್ತು ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ.ಹನುಮಂತಪ್ಪ, ಆರೋಗ್ಯ ನಿರೀಕ್ಷಣಾಧಿಕಾರಿ ಕೆ.ಹೆಚ್ ಗೋಪಾಲ್, ಆರ್.ಬಿ.ಎಸ್.ಕೆ ಸಮಾಲೋಚಕ ಮನೋಹರ್ ಹಾಗೂ ವೈದ್ಯರು ಇದ್ದರು.

ಇದನ್ನೂ ಓದಿ: ನಕಲಿ ಮುಟೇಷನ್ ದಾಖಲೆ ಸೃಷ್ಟಿಸಿ ವಂಚನೆ ಆರೋಪ: ಡಿಸಿಸಿ ಬ್ಯಾಂಕ್ ನಿರ್ದೇಶಕ ಸೇರಿ ಮೂವರ ವಿರುದ್ಧ ದೂರು