ETV Bharat / state

ಬಳ್ಳಾರಿ ಗಲಭೆ: ಮೃತ ಕಾಂಗ್ರೆಸ್​ ಕಾರ್ಯಕರ್ತ ರಾಜಶೇಖರ್ ಮನೆಗೆ ಭೇಟಿ ನೀಡಿದ ಡಿಸಿಎಂ

ಬಳ್ಳಾರಿ ಹಿಂಸಾಚಾರದಲ್ಲಿ ಮೃತಪಟ್ಟ ಕಾಂಗ್ರೆಸ್​ ಕಾರ್ಯಕರ್ತ ರಾಜಶೇಖರ್ ಮನೆಗೆ ಭೇಟಿ ನೀಡಿದ ಡಿಸಿಎಂ ಡಿಕೆ ಶಿವಕುಮಾರ್, ಮೃತ ವ್ಯಕ್ತಿಯ ಕುಟುಂಬಸ್ಥರಿಗೆ ಸಾಂತ್ವನ ತಿಳಿಸಿದರು.

BALLARI VIOLENCE: DCM DK SHIVAKUMAR MEETS THE FAMILY OF DECEASED RAJASHEKAR
ಮೃತ ಕಾಂಗ್ರೆಸ್​ ಕಾರ್ಯಕರ್ತ ರಾಜಶೇಖರ್ ಮನೆಗೆ ಭೇಟಿ ನೀಡಿದ ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಸಚಿವ ಜಮೀರ್ ಅಹಮದ್ ಖಾನ್ (ETV Bharat)
author img

By ETV Bharat Karnataka Team

Published : January 6, 2026 at 3:20 PM IST

2 Min Read
Choose ETV Bharat

ಬಳ್ಳಾರಿ: ನಗರದಲ್ಲಿ ಬ್ಯಾನರ್ ಕಟ್ಟುವ ವಿಚಾರದಲ್ಲಿ ನಡೆದ ಗಲಭೆಯಲ್ಲಿ ಗುಂಡೇಟಿಗೆ ಬಲಿಯಾದ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್​ ಅವರ ಕುಟುಂಬವನ್ನು ಡಿಸಿಎಂ ಡಿಕೆ ಶಿವಕುಮಾರ್ ಇಂದು ಭೇಟಿ ಮಾಡಿ ಸಾಂತ್ವನ ತಿಳಿಸಿದರು. ಬೆಳಗ್ಗೆ ಬೆಂಗಳೂರಿನಿಂದ ಹೊರಟು, ಮಧ್ಯಾಹ್ನದ ವೇಳೆಗೆ ರಾಜಶೇಖರ್‌ ಮನೆಗೆ ಭೇಟಿ ನೀಡಿದ ಡಿಸಿಎಂ, ಮೃತ ರಾಜಶೇಖರ್ ಅವರ ಕುಟುಂಬದವರಿಗೆ ಸಾಂತ್ವನ ಹೇಳಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊನ್ನೆ ನಡೆದ ಗಲಭೆಯಲ್ಲಿ ಓರ್ವ ಕಾಂಗ್ರೆಸ್ ಕಾರ್ಯಕರ್ತನ ಸಾವಾಗಿದೆ. ಮೃತ ರಾಜಶೇಖರ ಮನೆಗೆ ಭೇಟಿ ನೀಡಿ ಅವರ ಕುಟುಂಬದವರಿಗೆ ಸಾಂತ್ವನ ಹೇಳಿರುವೆ. ಘಟನೆ ಅಗಬಾರದಾಗಿತ್ತು. ಮೃತ ವ್ಯಕ್ತಿಯ ಕುಟುಂಬದ ದುಃಖದಲ್ಲಿ ನಾನು ಭಾಗಿಯಾಗುವೆ. ಕುಟುಂಬ ಜೊತೆಗೆ ಪಕ್ಷ ಇದೆ ಎಂದು ತಿಳಿಸಲು ಬಂದಿದ್ದೇನೆ. ಉಳಿದ ವಿಚಾರ ಕಾರ್ಯಕರ್ತರ ಚರ್ಚೆ ಮಾಡಿದ ಬಳಿಕ ಹೇಳುವೆ. ಮೃತ ವ್ಯಕ್ತಿಯ ಕುಟುಂಬ ಸರ್ಕಾರಿ ಉದ್ದೋಗಕ್ಕಾಗಿ ಬೇಡಿಕೆ ಇಟ್ಟಿದ್ದು, ಈ ಬಗ್ಗೆ ವಿಚಾರ ಮಾಡಲಾಗುತ್ತದೆ. ಪ್ರೊಸೀಜರ್ ನೋಡಿಕೊಂಡು ಕಾನೂನು ಚೌಕಟ್ಟಿನ ಅಡಿ ನೌಕರಿ ಕೊಡುವ ಪ್ರಯತ್ನ ಮಾಡುವೆ ಎಂದು ತಿಳಿಸಿದರು. ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ವಸತಿ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ಕೂಡ ಈ ವೇಳೆ ಇದ್ದರು.

ಮೃತ ಕಾಂಗ್ರೆಸ್​ ಕಾರ್ಯಕರ್ತ ರಾಜಶೇಖರ್ ಮನೆಗೆ ಭೇಟಿ ನೀಡಿದ ಡಿಸಿಎಂ (ETV Bharat)

ಪ್ರಕರಣ ಮುಚ್ಚಿಹಾಕುವ ಅನುಮಾನ ವ್ಯಕ್ತಪಡಿಸಿದ ರಾಮುಲು: ಇದಕ್ಕೂ ಮುನ್ನ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ಶ್ರೀರಾಮುಲು, ಮೃತರ ಮನೆಗೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಡಿಕೆ ಭೇಟಿಯಾಗಿ ಸಾಂತ್ವನ ಹೇಳಿದ್ದಾರೆ. ಇವರ ಆಗಮನಕ್ಕೂ ಮುನ್ನ ನಿಮ್ಮ ಸರ್ಕಾರದ ವತಿಯಿಂದ ಸತ್ಯ ಶೋದನ ಕಮಿಟಿ ಬಂದು ಪರಿಶೀಲನೆ ನಡೆಸಿತ್ತು. ಈಗ ನೀವು ಬಂದಿದ್ದೀರಿ. ಹಾಗಾದರೆ, ಈ ಪ್ರಕರಣವನ್ನು ಎಸ್ಐಟಿಗೆ ಕೊಡ್ತೀರಾ? ಪ್ರಕರಣದ ಮೂಲ ಬುಡವನ್ನು ಹುಡುಕುವ‌ ಕೆಲಸವಾಗ್ತಿಲ್ಲ. ಇದಕ್ಕಲ್ಲ ಕಾರಣ ಭರತ್ ರೆಡ್ಡಿ. ಮೊನ್ನೆ ಸಿಎಂ ಏರ್ಪೋರ್ಟ್​ಗೆ ಬಂದಾಗ ಭರತ್ ರೆಡ್ಡಿ ಹತ್ತಿರ ಮಾತನಾಡಿದ್ದಾರೆ. ಭರತ್ ರೆಡ್ಡಿ ಪ್ರಕರಣದ A1 ಜೊತೆಗೆ ಮಾತನಾಡ್ತಾರೆ. ಡಿಕೆ ಶಿವಕುಮಾರ್ ಈಗ ಬಂದು ಭರತ್ ರೆಡ್ಡಿ ಜೊತೆ ಸುದ್ದಿಗೋಷ್ಠಿ ಮಾಡಬಹುದು. ಈ ಮೂಲಕ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ಕೂಡ ನಡೆಸಬಹುದು ಎಂಬ ಅನುಮಾನ ಮೂಡುತ್ತಿದೆ ಎಂದು ಕಿಡಿಕಾರಿದರು.

ಘಟನೆ ಕುರಿತು ಮಾತನಾಡಿದ ಮಾಜಿ ಸಚಿವ ಶ್ರೀರಾಮುಲು (ETV Bharat)

ಮೃತ ರಾಜಶೇಖರನ ಕುಟುಂಬಕ್ಕೆ ಯಾವ ನ್ಯಾಯ ಕೊಡ್ತಾರೆ ಅನ್ನೋ ಬಗ್ಗೆ ಕಾದು ನೋಡ್ತೇನೆ. ಯಾವುದನ್ನು ಸಮರ್ಥನೆ ಮಾಡಿಕೊಳ್ಳಲ್ಲ. ಭರತ್ ರೆಡ್ಡಿ ಕಡೆಯವರು ಸತ್ಯವಂತರೇ? ಅವರು ಜನಾರ್ದನ ರೆಡ್ಡಿ ಮನೆಗೆ ಸಾವಿರಾರು ಗೂಂಡಾಗಳನ್ನು ಕರೆದುಕೊಂಡು ಬಂದು ಹಲ್ಲೆ ಮಾಡಿದಾಗ ನಾವು ಸುಮ್ಮನೆ ಕೂಡಬೇಕೇ? ಅವರು ಹೊಡೆದ್ರೇ ನಾವು ಕೈಕೊಟ್ಟಿ ಕುಳಿತುಕೊಳ್ಳಬೇಕೇ? ದಾಳಿಯಾದಾಗ ಪ್ರತಿದಾಳಿಯಾಗಿದೆ. ನೂಕು ನುಗ್ಗಲು ಆದಾಗ ಎರಡು ಕಡೆ ದಾಳಿಯಾಗಿರಬಹುದು. ಅವೇಶದಲ್ಲಿ ಕಟ್ಟಿಗೆ, ಕಾರದ ಪುಡಿ ತಂದಿರಬಹುದು. ಜನಾರ್ದನ ರೆಡ್ಡಿ ಪಕ್ಕದಲ್ಲಿದ್ದಾಗಲೇ ಗುಂಡು ಹಾರಿದೆ. ಜನಾರ್ದನ ರೆಡ್ಡಿ ಸ್ವಲ್ಪದರಲ್ಲಿ ಪಾರಾಗಿದ್ದಾರೆ. ಕಣ್ಣೆದುರು ನಾನು ನೋಡಿದಾಗ ಗೋಲಿ ಹೊಡೆದ್ರು. ಶ್ರೀರಾಮುಲುಗೆ ಗೋಲಿ ತಗುಲಿದೆ ಎಂದು ಜನರು ಓಡೋಡಿ ಬಂದ್ರು. ಇದು ಸಡನ್ ಅಗಿ ನಡೆದ ಘಟನೆ. ಇಬ್ಬರ ಪಾತ್ರ ಇರೋದಕ್ಕೆ ಎರೆಡು ಕಡೆ ಬಂಧನವಾಗಿದೆ. ನಾನು ಬೇಲ್ ಕೂಡ ತೆಗೆದುಕೊಳ್ಳಲ್ಲ. ತಪ್ಪಿದ್ದರೆ ನನ್ನನ್ನು ಬಂಧಿಸಲಿ ಎಂದು ಸವಾಲು ಹಾಕಿದರು.

ಇದನ್ನೂ ಓದಿ: ಬಳ್ಳಾರಿ ಗಲಾಟೆ: ಮೃತ ಕಾಂಗ್ರೆಸ್​ ಕಾರ್ಯಕರ್ತನ ಕುಟುಂಬಕ್ಕೆ ವೈಯಕ್ತಿಕವಾಗಿ ₹25 ಲಕ್ಷ ಆರ್ಥಿಕ ನೆರವು ನೀಡಿದ ಸಚಿವ ಜಮೀರ್