ETV Bharat / state

ಬಳ್ಳಾರಿ ಗೋಲಿ ಗಲಭೆಯ ತನಿಖೆ ತೀವ್ರ: 26 ಆರೋಪಿಗಳ ಬಂಧನ, 6 ಎಫ್‌ಐಆರ್ ದಾಖಲು

ಬ್ಯಾನರ್​ ಕಟ್ಟುವ ವಿಚಾರಕ್ಕೆ ನಡೆದ ಗಲಭೆ ಪ್ರಕರಣದಲ್ಲಿ ಬಳ್ಳಾರಿಯ ಬ್ರೂಸ್​ ಪೇಟೆ ಪೊಲೀಸರು 26 ಆರೋಪಿಗಳನ್ನು ಬಂಧಿಸಿ, ತನಿಖೆ ತೀವ್ರಗೊಳಿಸಿದ್ದಾರೆ.

BALLARI  GALI JANARDHAN REDDY  CONGRESS WORKER KILLED  ಬಳ್ಳಾರಿ ಗಲಭೆ
ಬಳ್ಳಾರಿ ಗಲಭೆ ಪ್ರಕರಣದ ತನಿಖೆ (ETV Bharat)
author img

By ETV Bharat Karnataka Team

Published : January 4, 2026 at 7:11 PM IST

2 Min Read
Choose ETV Bharat

ಬಳ್ಳಾರಿ: ನಗರದಲ್ಲಿ ಮೂರು ದಿನಗಳ ಹಿಂದೆ ಬ್ಯಾನರ್ ಕಟ್ಟುವ ವಿಚಾರವಾಗಿ ನಡೆದ ಭಾರಿ ಗಲಭೆಯಲ್ಲಿ, ಗುಂಡು ತಗುಲಿ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್​ ರೆಡ್ಡಿ ಎಂಬವರು ಸಾವನ್ನಪ್ಪಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿವರೆಗೆ 26 ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಬಳ್ಳಾರಿ ನಗರದ ವಾಲ್ಮೀಕಿ ವೃತ್ತ ಹಾಗೂ ಮಹರ್ಷಿ ಪುತ್ಥಳಿ ಉದ್ಘಾಟನಾ ಸಮಾರಂಭದ ನಿಮಿತ್ತ ಕಟ್ಟಲಾದ ಬ್ಯಾನರ್ಸ್, ಬಂಟಿಂಗ್ಸ್ ವಿಚಾರವಾಗಿ ಗಲಭೆ ನಡೆದು ಕಲ್ಲು ತೂರಾಟವಾಗಿತ್ತು. ಖಾಸಗಿ ಅಂಗರಕ್ಷಕರು ಗುಂಡು ಹಾರಿಸಿದ್ದರು. ಈ ವೇಳೆ ರಾಜಶೇಖರ್ ರೆಡ್ಡಿ ಎಂಬವರು ಮೃತಪಟ್ಟಿದ್ದರು. ಪೊಲೀಸ್ ಸಿಬ್ಬಂದಿ ಹಾಗೂ ಸಾರ್ವಜನಿಕರೂ ಗಾಯಗೊಂಡಿದ್ದರು. ಈ ಘಟನೆಗಳ ಹಿನ್ನೆಲೆಯಲ್ಲಿ ಪೊಲೀಸರು 6 ಎಫ್‌ಐಆರ್‌ ದಾಖಲಿಸಿಕೊಂಡಿದ್ದು, ತನಿಖೆ ತೀವ್ರಗೊಳಿಸಿದ್ದಾರೆ.

ಬಳ್ಳಾರಿ ಗೋಲಿ ಗಲಭೆಯ ತನಿಖೆ ತೀವ್ರ (ETV Bharat)

ಸಾಕ್ಷಿಗಳು ಹಾಗೂ ವಿಡಿಯೋ ಫೋಟೇಜ್‌ಗಳ ಮುಖಾಂತರ ಆರೋಪಿಗಳನ್ನು ಪತ್ತೆ ಹಚ್ಚಲಾಗುತ್ತಿದೆ.

ಮೃತ ಕಾರ್ಯಕರ್ತನ ಕುಟುಂಬಕ್ಕೆ ಸಚಿವ ಜಮೀರ್ ₹25 ಲಕ್ಷ ನೆರವು: ನಿನ್ನೆ(ಶನಿವಾರ) ವಸತಿ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್, ಮೃತಪಟ್ಟ ರಾಜಶೇಖರ್​ ರೆಡ್ಡಿ ಕುಟುಂಬಕ್ಕೆ 25 ಲಕ್ಷ ರೂ. ಆರ್ಥಿಕ ನೆರವು ವಿತರಿಸಿದ್ದರು. ಜತೆಗೆ, ಸುಸಜ್ಜಿತ ಮನೆ ನಿರ್ಮಿಸಿ ಕೊಡುವುದಾಗಿಯೂ ಭರವಸೆ ನೀಡಿದ್ದರು.

ಕಾಂಗ್ರೆಸ್​ ಸಂಸದ ತುಕಾರಾಂ ಭೇಟಿ, ಮೃತನ ಕುಟುಂಬಕ್ಕೆ ಸಾಂತ್ವನ: ಇಂದು ರಾಜಶೇಖರ್​ ರೆಡ್ಡಿ ಮನೆಗೆ ನೇರವಾಗಿ ತೆರಳಿದ ಕಾಂಗ್ರೆಸ್​ ಸಂಸದ ತುಕಾರಾಂ, ಕುಟುಂಬಕ್ಕೆ ಧೈರ್ಯ ತುಂಬಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, "ಅನಿರೀಕ್ಷಿತವಾಗಿ ಘಟನೆ ನಡೆದಿದೆ. ಏನೇನು ಆಗಿದೆ ಅಂತ ಸಂಪುರ್ಣ ವರದಿ ಬಂದ ಬಳಿಕ ತಿಳಿದುಕೊಳ್ಳಬೇಕು. ಕಾಂಗ್ರೆಸ್​ ಕಾರ್ಯಕರ್ತ ರಾಜಶೇಖರ್​ ಕುಟುಂಬಕ್ಕೆ ಸಾಂತ್ವನ ಹೇಳಿದ್ದೇನೆ. ನನ್ನ ಸಂಬಳದಿಂದ ಎರಡು ಲಕ್ಷ ರೂಪಾಯಿ ಸಹಾಯ ಮಾಡಿದ್ದೇನೆ. ಅಧಿಕಾರಿಗಳು ಕಾರ್ಯಾಂಗದಲ್ಲಿ ಕೆಲಸ ಮಾಡಬೇಕು. ಜನಪ್ರತಿನಿಧಿಗಳು, ಅಧಿಕಾರಿಗಳು ಲಾ ಆ್ಯಂಡ್​ ಆರ್ಡರ್ ಕಂಟ್ರೋಲ್​ಗೆ ತಂದಿದ್ದಾರೆ. ಇದೊಂದು ಕೆಟ್ಟ ಘಳಿಗೆ ಎಂದು ಮರೆಯಬೇಕು" ಎಂದರು.

"ಬಳ್ಳಾರಿಯಲ್ಲಿ ಇಂತಹ ಘಟನೆಗಳು ನಡೆಯದಂತೆ ಮುಂದೆ ನೋಡಿಕೊಳ್ಳಬೇಕು. ಕಾರ್ಯಾಂಗದಲ್ಲಿ ಸ್ವಲ್ಪ ನಿರ್ಲಕ್ಷ್ಯವಾಗಿದೆ. ಇದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ. ಎಸ್ಪಿ ಅವರಿಗೆ ಘಟನೆ ಬಗ್ಗೆ ಮಾಹಿತಿ ಇರಲಿಲ್ಲವಾ?. ಡಿಸಿ, ಎಸ್ಪಿ, ಪೊಲೀಸರು ಘಟನೆ ನಡೆಯದಂತೆ ನೋಡಿಕೊಳ್ಳಬೇಕಿತ್ತು. ಮುಂದಿನ ದಿನಗಳಲ್ಲಿ ಎಲ್ಲರೂ ಸರಿಪಡಿಸಿಕೊಂಡು ಹೋಗುತ್ತೇವೆ. ಘಟನೆಯಲ್ಲಿ ಅಧಿಕಾರಿಗಳ ನಡುವೆ ಕಮ್ಯುನಿಕೇಶನ್ ಗ್ಯಾಪ್ ಆಗಿದೆ" ಎಂದು ಹೇಳಿದರು.

ಇದನ್ನೂ ಓದಿ: ಹತ್ಯೆ ಸಂಚು ಆರೋಪ: 'Z' ಶ್ರೇಣಿಯ ಭದ್ರತೆ ಕೋರಿ ಜನಾರ್ದನ್​ ರೆಡ್ಡಿಯಿಂದ ಸಿಎಂ, ಅಮಿತ್ ಶಾ, ಪರಮೇಶ್ವರ್, ಡಿಜಿಐಜಿಪಿಗೆ ಪತ್ರ