ETV Bharat / state

ಶಿವಮೊಗ್ಗ : ಸಂಕೇತ್ ಮನೆಗೆ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಿ. ವೈ. ವಿಜಯೇಂದ್ರ

ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಅವರು ಮೃತ ಸಂಕೇತ್ ಮನೆಗೆ ತೆರಳಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

b-y-vijayendra-visited-sanket-house-and-console-the-family
ಮೃತ ಸಂಕೇತ್ ಮನೆಗೆ ತೆರಳಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಿ. ವೈ. ವಿಜಯೇಂದ್ರ (ETV Bharat)
author img

By ETV Bharat Karnataka Team

Published : February 28, 2026 at 6:28 PM IST

2 Min Read
Choose ETV Bharat

ಶಿವಮೊಗ್ಗ: ಸ್ನೇಹಿತರ ಜಗಳದಲ್ಲಿ ಮೃತಪಟ್ಟಿರುವ 10ನೇ ತರಗತಿ ವಿದ್ಯಾರ್ಥಿ ಸಂಕೇತ್ ಮನೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಭೇಟಿ ನೀಡಿ,‌ ಕುಟುಂಬಸ್ಥರಿಗೆ ಆರ್ಥಿಕ‌ ನೆರವು ನೀಡಿ ಸಾಂತ್ವನ ಹೇಳಿದರು. ನಂತರ ಮಾತನಾಡಿದ ಅವರು, ಕೆಲ ದಿನಗಳ‌ ಹಿಂದೆ ಸಂಕೇತ್ ಹಾಗೂ ಕೆಲವರ ನಡುವೆ ಹೊಡೆದಾಟ ಆಗಿ, ಅವರಿಗೆ ತೀವ್ರ ಪೆಟ್ಟು ಬಿದ್ದು ಸಾವನ್ನಪ್ಪಿದ್ದಾರೆ. ಅವರದು ಬಡ ಕುಟುಂಬವಾಗಿದೆ. ಅವರ ತಂದೆ ಟ್ರ್ಯಾಕ್ಟರ್ ಓಡಿಸಿಕೊಂಡು ಜೀವನ ನಡೆಸುತ್ತಿದ್ದಾರೆ. 10ನೇ ತರಗತಿ ಓದುವ ಮಕ್ಕಳಲ್ಲಿ‌ ಕೋಮು ಭಾವನೆ ಹುಟ್ಟಿಕೊಂಡಿದೆ ಎಂಬುದಕ್ಕೆ ಇದು ತಾಜಾ ಉದಾಹರಣೆ ಎಂದರು.

15-16 ನೇ ವಯಸ್ಸಿನಲ್ಲಿ ಇಂತಹ ಭಾವನೆ ಬರುವಂತದ್ದು, ಪ್ರಾಣ ತೆಗೆಯುವ ಮಟ್ಟಿಗೆ ಹೋಗುತ್ತಾರೆ ಅಂದ್ರೆ, ಬಹಳ ಆಘಾತಕಾರಿ ಘಟನೆಯಾಗಿದೆ. ಇಂತಹ ಘಟನೆ ಕರ್ನಾಟಕದಲ್ಲಿ ಮಾತ್ರ ನೋಡಲು ಸಾಧ್ಯ ಎಂದು ಅವರು ಕಿಡಿಕಾರಿದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಪ್ರತಿಕ್ರಿಯೆ (ETV Bharat)

ಇತ್ತೀಚಿಗೆ ಯಲ್ಲಾಪುರದಲ್ಲಿ ಹಿಂದೂ ಮಹಿಳೆಯ ಬರ್ಬರ ಹತ್ಯೆಯಾಗಿರುವಂತದ್ದು, ಶಿವಮೊಗ್ಗದಲ್ಲಿ ನಡೆದಿರುವ ಘಟನೆಯಲ್ಲಿ ಒಂದು‌ ಕೋಮಿನ ವಿದ್ಯಾರ್ಥಿಗಳು, ಯಾವ ರೀತಿ ಹೇಳಬೇಕೆಂದು ಸಹ ಗೊತ್ತಾಗುತ್ತಿಲ್ಲ. ಸಣ್ಣ ವಯಸ್ಸಿನಲ್ಲಿ ಹೊಡೆದಾಟದ ಮನೋಭಾವ, ಕೊಲೆ ಮಾಡುವುದು ತುಂಬ ಅಪಾಯಕಾರಿ ಆಗಿದೆ. ತಳ ಹಂತದ ಮಕ್ಕಳಲ್ಲಿಯೇ ಇಂತಹ ಮನೋಭಾವ ಬೆಳೆದಿರುವುದು ದುರಂತ ಎಂದು ಆತಂಕ ವ್ಯಕ್ತಪಡಿಸಿದರು.

ಬಾಲಕನ ಕುಟುಂಬಕ್ಕೆ ನೀಡಿರುವ ಪರಿಹಾರ ಖಂಡಿತ ತುಂಬಾ ಕಡಿಮೆಯಾಗಿದೆ. ಅದೇ ಮಂಗಳೂರಿನಲ್ಲಿ ಬೇರೆ ಕೋಮಿನವರು ಹತ್ಯೆಯಾದರೆ, 50 ಲಕ್ಷ 25 ಲಕ್ಷ ರೂ. ಪರಿಹಾರ ನೀಡುತ್ತಾರೆ‌. ಯಲ್ಲಾಪುರ ಮಹಿಳೆ ಕೊಲೆ‌ ಪ್ರಕರಣದಲ್ಲಿ ಎಸ್ಸಿ, ಎಸ್ಟಿ ಅಡಿ ಪರಿಹಾರ ನೀಡಿದ್ದಾರೆ. ಹೆಚ್ಚಿನ ಪರಿಹಾರಕ್ಕೆ ನಾವು ವಿನಂತಿಸಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ. ಸರ್ಕಾರ ಇದರ ಬಗ್ಗೆ ಚಿಂತನೆ ಮಾಡಬೇಕಿದೆ. ಬಡ ಕುಟುಂಬ ಇದೆ. ಅವರ ಕುಟುಂಬಕ್ಕೆ ಹೆಚ್ಚಿನ ಪರಿಹಾರ ನೀಡಬೇಕಿದೆ. ಇವರ ಕುಟುಂಬದವರಿಗೆ ಸರ್ಕಾರಿ ಉದ್ಯೋಗ ನೀಡಬೇಕಿದೆ ಎಂದು ಒತ್ತಾಯಿಸಿದರು.

ಕಾಂಗ್ರೆಸ್ ಸರ್ಕಾರ ಇರುವ ತನಕ ಇಂತಹ ಘಟನೆ ನಡೆಯುತ್ತಲೇ ಇರುತ್ತದೆ. ಗೃಹ ಸಚಿವರಿಗೂ, ಇದಕ್ಕೂ ಸಂಬಂಧನೇ ಇಲ್ಲ. ಬಾಗಲಕೋಟೆಯಲ್ಲಿ ಶಿವಾಜಿ ಜಯಂತಿಯಂದು ಕಲ್ಲು ತೂರಾಟ ನಡೆಸಿದ್ದಾರೆ. ಮಡಿಕೇರಿಯಲ್ಲಿ ಆದ ಘಟನೆ‌ಯಲ್ಲಿ ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತರ ಓಲೈಕೆ ಮಾಡುವಲ್ಲಿ ನಿರತವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಐದು ಗ್ಯಾರಂಟಿ ಬಗ್ಗೆ ಮಾತ್ರ ಸಿಎಂ, ಸಚಿವರು ಮಾತನಾಡುತ್ತಾರೆ. ಆರನೇ ಗ್ಯಾರಂಟಿ ಅಂದ್ರೆ ಅದು ಬೆಲೆ ಏರಿಕೆ. ಎಲ್ಲದರ ದರ ಏರಿಕೆ ಮಾಡುತ್ತಾ ಹೋಗುತ್ತಿದ್ದಾರೆ. ಯಾವ ಕಡೆ ಹೋದ್ರೂ ಸಹ ಜನ ಸರ್ಕಾರಕ್ಕೆ‌ ಶಾಪ ಹಾಕುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯಕ್ಕೆ ದರಿದ್ರಾ ಬಂದಿದೆ ಎಂದರು‌.

ರಾಜ್ಯದ ಅಭಿವೃದ್ದಿ ಮಾಡದೆ ಬಣ ರಾಜಕೀಯ ನಡೆಸಲಾಗುತ್ತಿದೆ. ಹಗ್ಗ- ಜಗ್ಗಾಟದಲ್ಲಿ ರಾಜ್ಯದ ಜನ ಬಡವಾಗುತ್ತಿದ್ದಾರೆ ಎಂದು ಕಿಡಿಕಾರಿದರು.

ಇದನ್ನೂ ಓದಿ : ಶಿವಮೊಗ್ಗ: ಸ್ನೇಹಿತರಿಂದಲೇ ಹತ್ಯೆಯಾದ ಬಾಲಕನ ಕುಟುಂಬಕ್ಕೆ ₹15 ಲಕ್ಷ ಪರಿಹಾರ