ETV Bharat / state

ಸ್ವಚ್ಛತೆ ಮತ್ತು ಸಂಚಾರ ಸಮಸ್ಯೆ ಪರಿಹಾರಕ್ಕೆ ಉತ್ಸಾಹ: ಅವೇಕ್ ಕುಡ್ಲ ಆ್ಯಪ್ ರಚಿಸಿದ ಅಂಬಾ ಮಹೇಶ್ವರಿ ಸೇವಾ ಟ್ರಸ್ಟ್

ತ್ಯಾಜ್ಯ ನಿರ್ವಹಣೆ, ಸಂಚಾರ ದಟ್ಟಣೆ ಕುರಿತು ನಾಗರಿಕರು ಸುಲಭವಾಗಿ ವರದಿ ಮಾಡಲು ಅಂಬಾ ಮಹೇಶ್ವರಿ ಸೇವಾ ಟ್ರಸ್ಟ್, ಅವೇಕ್ ಕುಡ್ಲ ಎಂಬ ಆ್ಯಪ್ ರಚಿಸಿದೆ.

AWAKE KUDLA APP
ಅವೇಕ್ ಕುಡ್ಲ ಆ್ಯಪ್ ನಿರ್ವಹಣೆ ಮಾಡುತ್ತಿರುವ ಯುವತಿ (ETV Bharat)
author img

By ETV Bharat Karnataka Team

Published : January 5, 2026 at 4:21 PM IST

3 Min Read
Choose ETV Bharat

ವಿಶೇಷ ವರದಿ: ವಿನೋದ್ ಪುದು

ಮಂಗಳೂರು(ದಕ್ಷಿಣ ಕನ್ನಡ): ನಗರದ ಮುಳಿಹಿತ್ಲುವಿನಲ್ಲಿರುವ ಅಂಬಾ ಮಹೇಶ್ವರಿ ಸೇವಾ ಟ್ರಸ್ಟ್ ಸ್ವಚ್ಛತೆ ಮತ್ತು ಸಂಚಾರ ಸಮಸ್ಯೆ ಪರಿಹಾರಕ್ಕೆ ವಿಶೇಷ ರೀತಿಯಲ್ಲಿ ಕಾರ್ಯಾಚರಿಸುತ್ತಿದೆ. ಕಳೆದ ಕೆಲವು ವರ್ಷಗಳಿಂದ ಸಂಚಾರ ಮತ್ತು ಸ್ವಚ್ಛತೆಯ ವಿಚಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂಬಾ ಮಹೇಶ್ವರಿ ಸೇವಾ ಟ್ರಸ್ಟ್ ಜನರು ಪಾಲ್ಗೊಳ್ಳಲು ಅವೇಕ್ ಕುಡ್ಲ ಎಂಬ ಆ್ಯಪ್ ರಚಿಸಿದೆ.

ಮಂಗಳೂರು ನಗರವನ್ನು ಸ್ವಚ್ಛ, ಹಸಿರು ಮತ್ತು ಸುಸ್ಥಿರವಾಗಿ ಪರಿವರ್ತಿಸುವ ಗುರಿಯೊಂದಿಗೆ ಶ್ರೀ ಅಂಬಾ ಮಹೇಶ್ವರಿ ಸೇವಾ ಟ್ರಸ್ಟ್ ಅಭಿವೃದ್ಧಿಪಡಿಸಿರುವ ಅವೇಕ್ ಕುಡ್ಲ (Awake Kudla) ಆ್ಯಪ್ ಈಗ ನಗರದ ನಾಗರಿಕ ಸಮಸ್ಯೆಗಳ ಪರಿಹಾರದಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ತ್ಯಾಜ್ಯ ನಿರ್ವಹಣೆ, ಸಂಚಾರ ದಟ್ಟಣೆ, ಬ್ಲಾಕ್​​ಸ್ಪಾಟ್​​ಗಳು, ರಸ್ತೆ ಗುಂಡಿಗಳು ಮತ್ತು ಸಾರ್ವಜನಿಕ ಸ್ಥಳಗಳ ಸ್ವಚ್ಛತೆಯಂತಹ ಸಮಸ್ಯೆಗಳನ್ನು ನಾಗರಿಕರು ಸುಲಭವಾಗಿ ವರದಿ ಮಾಡಲು ಈ ಆ್ಯಪ್ ಅವಕಾಶ ಕಲ್ಪಿಸುತ್ತದೆ. ಫೋಟೋಗಳು ಮತ್ತು ವಿವರಗಳೊಂದಿಗೆ ದಾಖಲಾದ ದೂರುಗಳನ್ನು ಟ್ರಸ್ಟ್​ನ ಸ್ವಯಂಸೇವಕರು ಮತ್ತು ಕೋಆರ್ಡಿನೇಟರ್​​ಗಳು ಸಂಬಂಧಿತ ಅಧಿಕಾರಿಗಳಿಗೆ ತಲುಪಿಸಿ ಶೀಘ್ರವೇ ಕ್ರಮ ಕೈಗೊಳ್ಳುವಂತೆ ಮಾಡುತ್ತಾರೆ.

ಅವೇಕ್ ಕುಡ್ಲ ಆ್ಯಪ್ ರಚಿಸಿದ ಅಂಬಾ ಮಹೇಶ್ವರಿ ಸೇವಾ ಟ್ರಸ್ಟ್ (ETV Bharat)

ಆ್ಯಪ್ ರಚನೆಯ ಹಿನ್ನೆಲೆ ಮತ್ತು ಉದ್ದೇಶ: ಶ್ರೀ ಅಂಬಾ ಮಹೇಶ್ವರಿ ಸೇವಾ ಟ್ರಸ್ಟ್ ಹತ್ತು ವರ್ಷಗಳಿಂದ ಶಿಕ್ಷಣ, ಆರೋಗ್ಯ, ಪರಿಸರ ಸಂರಕ್ಷಣೆ ಮತ್ತು ಉದ್ಯೋಗ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದೆ. ಸುಮಾರು ಮೂರು ವರ್ಷಗಳ ಹಿಂದೆ ಪ್ರಾರಂಭವಾದ ಅವೇಕ್ ಕುಡ್ಲ ಮೊದಲು ಬೋಳಾರ್, ಹೊಯಿಗೆ ಬಜಾರ್ ಮತ್ತು ಮಂಗಳಾದೇವಿ ವಾರ್ಡ್​ಗಳಲ್ಲಿ ತ್ಯಾಜ್ಯ ಸಂಗ್ರಹಣೆ ಮತ್ತು ಸಂಚಾರ ಸಮಸ್ಯೆಗಳನ್ನು ಯಶಸ್ವಿಯಾಗಿ ಪರಿಹರಿಸಲು ಯತ್ನಿಸಿದೆ. ಈ ಯಶಸ್ಸನ್ನು ನಗರಾದ್ಯಂತ ವಿಸ್ತರಿಸುವ ಉದ್ದೇಶದಿಂದ 2025 ಜುಲೈ 16 ರಂದು ಆ್ಯಪ್​ನ್ನು ಸಾಫ್ಟ್ ಲಾಂಚ್ ಮಾಡಲಾಗಿದೆ.

ಮುಖ್ಯ ಉದ್ದೇಶಗಳು:

  • ತ್ಯಾಜ್ಯ ನಿರ್ವಹಣೆ ಸುಧಾರಣೆ (ಸಂಗ್ರಹಣೆ, ವಿಂಗಡಣೆ, ಸ್ವಚ್ಛತೆ).
  • ಸಂಚಾರ ಸಮಸ್ಯೆಗಳ ಪರಿಹಾರ (ಬ್ಲಾಕ್​​ಸ್ಪಾಟ್​​ಗಳು, ಟ್ರಾಫಿಕ್ ದಟ್ಟಣೆ).
  • ಸಾರ್ವಜನಿಕ ಸ್ಥಳಗಳು ಮತ್ತು ಹಸಿರು ವಲಯಗಳ ನಿರ್ವಹಣೆ.
  • ನಾಗರಿಕರಲ್ಲಿ “ನಮ್ಮ ಪರಿಸರ ನಮ್ಮ ಜವಾಬ್ದಾರಿ” ಎಂಬ ಜಾಗೃತಿ ಮೂಡಿಸುವುದು.

ಈ ಆ್ಯಪ್ ನಾಗರಿಕರು, ಅಧಿಕಾರಿಗಳು ಮತ್ತು ಸ್ಥಳೀಯ ಸಂಘಟನೆಗಳ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತದೆ. ಮಂಗಳೂರು ಸಿಟಿ ಕಾರ್ಪೊರೇಷನ್ (MCC), ಟ್ರಾಫಿಕ್ ಪೊಲೀಸ್ ಮತ್ತು ಜಿಲ್ಲಾಡಳಿತದ ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತಿದೆ.

ಆ್ಯಪ್ ಹೇಗೆ ಕಾರ್ಯನಿರ್ವಹಿಸುತ್ತದೆ?: ಅವೇಕ್ ಕುಡ್ಲ ಆ್ಯಪ್ ಸರಳವಾದ ಐದು ಹಂತಗಳ ಕಾರ್ಯವಿಧಾನವನ್ನು ಅನುಸರಿಸುತ್ತದೆ.

1. ಸಮಸ್ಯೆ ಗುರುತಿಸಿ ವರದಿ ಮಾಡಿ: ನಾಗರಿಕರು ತ್ಯಾಜ್ಯ, ಸಂಚಾರ ಅಥವಾ ಸ್ವಚ್ಛತೆ ಸಂಬಂಧಿತ ಸಮಸ್ಯೆಯನ್ನು ಗುರುತಿಸಿ ಆ್ಯಪ್​ನಲ್ಲಿ ಫೋಟೋಗಳು ಮತ್ತು ವಿವರಗಳೊಂದಿಗೆ ದಾಖಲಿಸುತ್ತಾರೆ.

2. ಮಾಹಿತಿ ಹಂಚಿಕೊಳ್ಳಿ: ದಾಖಲಾದ ಸಮಸ್ಯೆಯನ್ನು ಸಂಬಂಧಿತ ಇಲಾಖೆಗಳಾದ MCC ಆರೋಗ್ಯ ವಿಭಾಗ, ಎಂಜಿನಿಯರಿಂಗ್ ವಿಭಾಗ, MESCOM, ಟ್ರಾಫಿಕ್ ಪೊಲೀಸ್ ಹಾಗೂ ಸ್ಥಳೀಯ ಸ್ವಯಂಸೇವಕ ಸಂಘಟನೆಗಳೊಂದಿಗೆ ಹಂಚಿಕೊಳ್ಳಲಾಗುತ್ತದೆ.

3. ಅಧ್ಯಯನ ಮತ್ತು ಜಾಗೃತಿ: ಸಮಸ್ಯೆಯನ್ನು ಅಧ್ಯಯನ ಮಾಡಿ, ಸ್ಥಳೀಯರಲ್ಲಿ ಜಾಗೃತಿ ಮೂಡಿಸಿ, ಪ್ರಾಯೋಗಿಕ ಪರಿಹಾರ ಯೋಜನೆ ತಯಾರಿಸಲಾಗುತ್ತದೆ.

4. ಕ್ರಮ ಕೈಗೊಳ್ಳಿ: ಸರ್ಕಾರಿ ಇಲಾಖೆಗಳು, ಸಮುದಾಯ ಮತ್ತು ಸಂಘಟನೆಗಳ ಸಹಕಾರದೊಂದಿಗೆ ಕ್ರಮ ಜರುಗಿಸಲಾಗುತ್ತದೆ.

5. ಮೇಲ್ವಿಚಾರಣೆ: ಸಮಸ್ಯೆ ಪೂರ್ಣ ಪರಿಹಾರವಾಗಿದೆಯೇ ಎಂದು ಮೇಲ್ವಿಚಾರಣೆ ಮಾಡಿ, ಮರುಕಳಿಸದಂತೆ ನಿಗಾ ವಹಿಸಲಾಗುತ್ತದೆ.

ದೂರು ದಾಖಲಿಸಿದ ವ್ಯಕ್ತಿಯ ಸಕ್ರಿಯ ಭಾಗವಹಿಸುವಿಕೆ ಬಹಳ ಮುಖ್ಯ. ಸರಿಯಾದ ಮಾಹಿತಿ ನೀಡುವುದು, ತೊಡಗಿಸಿಕೊಳ್ಳುವುದು ಮತ್ತು ಜಾಗೃತಿ ಕಾರ್ಯಗಳಿಗೆ ಬೆಂಬಲ ನೀಡುವುದು ಪರಿಹಾರವನ್ನು ವೇಗಗೊಳಿಸುತ್ತದೆ.

2026 ಜನವರಿ 1ರಿಂದ ಅವೇಕ್ ಕುಡ್ಲ-2 ಹಂತದಡಿ ಪಾಂಡೇಶ್ವರ, ಕಂಟೋನ್ಮೆಂಟ್, ಪೋರ್ಟ್ ಮತ್ತು ಅತ್ತಾವರ ವಾರ್ಡ್​ಗಳಿಗೆ ಯೋಜನೆ ವಿಸ್ತರಣೆಯಾಗಿದೆ. ಪ್ರತಿ ಕ್ಲಸ್ಟರ್ಗೆ (3 ವಾರ್ಡ್​ಗಳು) ಒಬ್ಬ ತರಬೇತಿ ಪಡೆದ ಕೋಆರ್ಡಿನೇಟರ್​​ ನೇಮಕವಾಗಿದ್ದು, ಒಟ್ಟು 20 ಕೋಆರ್ಡಿನೇಟರ್​​ಗಳು ಕಾರ್ಯನಿರ್ವಹಿಸಲಿದ್ದಾರೆ. ಮನೆಗಳು, ವ್ಯಾಪಾರ ಸ್ಥಳಗಳು ಮತ್ತು ಸಂಸ್ಥೆಗಳಲ್ಲಿ ತ್ಯಾಜ್ಯ ನಿರ್ವಹಣೆ ಮತ್ತು ಸಂಚಾರ ಶಿಸ್ತು ಕುರಿತು ಜಾಗೃತಿ ಅಭಿಯಾನಗಳು ನಡೆಯುತ್ತಿವೆ. ಮುಂದೆ ನಗರದ ಎಲ್ಲ 60 ವಾರ್ಡ್​ಗಳಿಗೆ (20 ಕ್ಲಸ್ಟರ್ಗಳಾಗಿ) ವಿಸ್ತರಣೆಯ ಯೋಜನೆಯಿದೆ.

ಟ್ರಸ್ಟ್​ನ ಕೊಡುಗೆಗಳು: ಟ್ರಸ್ಟ್ ಪ್ಲಾಸ್ಟಿಕ್ ಕಡಿಮೆಗೊಳಿಸಲು ಬಟ್ಟೆ ಚೀಲ ವಿತರಣೆ, ಸ್ಕಿಲ್ ಡೆವಲಪ್ಮೆಂಟ್ ಕೇಂದ್ರ ನಿರ್ಮಾಣ, ಮಾದರಿ ವಾರ್ಡ್​ಗಳಲ್ಲಿ ತ್ಯಾಜ್ಯ ಸಂಗ್ರಹಣೆಯಂತಹ ಕಾರ್ಯಕ್ರಮಗಳನ್ನು ನಡೆಸಿದೆ. ಅವೇಕ್ ಕುಡ್ಲ ಆ್ಯಪ್ ಮಂಗಳೂರನ್ನು ಹೆಚ್ಚು ಸ್ವಚ್ಛ, ಸುಸಂಘಟಿತ ಮತ್ತು ನಾಗರಿಕ ಸ್ನೇಹಿ ನಗರವಾಗಿ ಮಾಡುವಲ್ಲಿ ಪ್ರಯತ್ನಿಸುತ್ತಿದೆ. ನಾಗರಿಕರು ಆ್ಯಪ್ ಡೌನ್ಲೋಡ್ ಮಾಡಿ, ಸಮಸ್ಯೆಗಳನ್ನು ವರದಿ ಮಾಡಿ ಸಕ್ರಿಯವಾಗಿ ಭಾಗವಹಿಸಬಹುದಾಗಿದೆ.

ಈ ಬಗ್ಗೆ ಮಾತನಾಡಿದ ಟ್ರಸ್ಟ್ ಮುಖಂಡೆ ಮಂಜುಳಾ, ಅಂಬಾ ಮಹೇಶ್ವರ ಟ್ರಸ್ಟ್ ಸಾಮಾಜಿಕ ಚಟುವಟಿಕೆ ನಡೆಸುತ್ತಿದೆ. ಇದೀಗ ಮೂರು ವಾರ್ಡ್​ಗಳಲ್ಲಿ ಸ್ವಚ್ಛತೆ ಮತ್ತು ಟ್ರಾಫಿಕ್ ಸಮಸ್ಯೆ ಪರಿಹರಿಸಲು ಆ್ಯಪ್ ಮಾಡಿದ್ದೇವೆ. ಅವೇಕ್ ಕುಡ್ಲದ ಪರಿಕಲ್ಪನೆಯಲ್ಲಿ ಯಾವುದೇ ಟ್ರಾಫಿಕ್ ಮ್ಯಾನೇಜ್​ಮೆಂಟ್ ಮತ್ತು ವೇಸ್ಟ್ ಮ್ಯಾನೇಜ್​ಮೆಂಟ್​ ಬಗ್ಗೆ ದೂರು ದಾಖಲಿಸಿದವರು, ದೂರು ದಾಖಲಿಸಿದವರು ನಮ್ಮ ಜೊತೆ ಕೈಜೋಡಿಸಬೇಕು. ಆ ಮೂಲಕ ಆ ಸಮಸ್ಯೆಗೆ ಪರಿಹಾರ ಕೊಡಿಸುವುದು ನಮ್ಮ ಉದ್ದೇಶ. ಈ ನಿಟ್ಟಿನಲ್ಲಿ ಆ್ಯಪ್ ತಂದಿದ್ದೇವೆ ಎಂದರು.

ಅವೇಕ್ ಕುಡ್ಲ ಆ್ಯಪ್ ನಿರ್ವಹಣೆ ಮಾಡುವ ನೇಹಾ ಮಾತನಾಡಿ, ಈಗಾಗಲೇ ಗೂಗಲ್ ಪ್ಲೆ ಸ್ಟೋರ್​​​ನಲ್ಲಿ ಲಭ್ಯ ಇದೆ. ಇದರಲ್ಲಿ ವೇಸ್ಟ್ ಮ್ಯಾನೇಜ್​​ಮೆಂಟ್​ ಮತ್ತು ಟ್ರಾಫಿಕ್ ಮ್ಯಾನೇಜ್​ಮೆಂಟ್​ ವಿಭಾಗ ಇದೆ. ಇದಕ್ಕೆ ಸಂಬಂಧಿಸಿದವುಗಳನ್ನು ಆಯಾ ವಿಭಾಗದಲ್ಲಿ ಅಪ್ಲೋಡ್ ಮಾಡಬಹುದು. ದೂರುದಾರರಿಗೆ ಯೂನಿಕ್ ಐಡಿ ಕ್ರಿಯೆಟ್ ಆಗುತ್ತದೆ. ಅವರ ದೂರನ್ನು ನಾವು ಸಂಬಂಧಿಸಿದವರಿಗೆ ಫಾರ್ವರ್ಡ್ ಮಾಡುತ್ತೇವೆ. ಅದನ್ನು ದೂರುದಾರರು ವೀಕ್ಷಿಸಬಹುದು. ಅದನ್ನು ಪರಿಹಾರ ಮಾಡಿದ ಬಳಿಕ ಅದನ್ನು ದೂರುದಾರರಿಗೂ ಮಾಹಿತಿ ಸಿಗುತ್ತದೆ ಎಂದು ಹೇಳಿದರು.

ಇವುಗಳನ್ನೂ ಓದಿ: