ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಟೋ ರಿಕ್ಷಾ ಪ್ರಯಾಣ ದರ ಪರಿಷ್ಕರಣೆ: ಸೆಪ್ಟೆಂಬರ್ 1 ರಿಂದ ಕನಿಷ್ಠ ದರ ₹40 ನಿಗದಿ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಟೋ ರಿಕ್ಷಾ ಪ್ರಯಾಣ ದರವನ್ನು ಪರಿಷ್ಕರಿಸಿ ಜಿಲ್ಲಾ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಆದೇಶ ಹೊರಡಿಸಿದೆ.

Published : August 31, 2026 at 5:32 PM IST
ಮಂಗಳೂರು(ದಕ್ಷಿಣ ಕನ್ನಡ): ಇಂಧನ ಬೆಲೆ ಹಾಗೂ ವಾಹನ ಬಿಡಿಭಾಗಗಳ ದರ ಏರಿಕೆಯ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಟೋ ರಿಕ್ಷಾ ಪ್ರಯಾಣ ದರವನ್ನು ಪರಿಷ್ಕರಿಸಿ ಜಿಲ್ಲಾ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಆದೇಶ ಹೊರಡಿಸಿದೆ. ಪರಿಷ್ಕೃತ ನೂತನ ದರಗಳು ದಿನಾಂಕ ಸೆಷ್ಟೆಂಬರ್ 1ರಿಂದ ಜಾರಿಗೆ ಬರಲಿವೆ.
ಜಿಲ್ಲಾಧಿಕಾರಿ ಹಾಗೂ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರಾದ, ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಚಾಲಕ - ಮಾಲೀಕರ ಸಂಘಟನೆಗಳ ಬೇಡಿಕೆ ಹಾಗೂ ಸಾರ್ವಜನಿಕರ ಹಿತಾಸಕ್ತಿಯನ್ನು ಪರಿಗಣಿಸಿ ಈ ದರ ನಿಗದಿಪಡಿಸಲಾಗಿದೆ.
ಪರಿಷ್ಕೃತ ಆಟೋ ದರಗಳ ವಿವರ:
- ಕನಿಷ್ಠ ಪ್ರಯಾಣ ದರ (ಮೊದಲ 1.5 ಕಿ.ಮೀ): ರೂ 40.00 (ಗರಿಷ್ಠ 3 ಜನ ಪ್ರಯಾಣಿಕರಿಗೆ). (ಹಿಂದೆ ರೂ 35 ಇತ್ತು)
- ನಂತರದ ಪ್ರತಿ ಕಿಲೋಮೀಟರ್ ದರ: ರೂ 20.00 (ಗರಿಷ್ಠ 3 ಜನ ಪ್ರಯಾಣಿಕರಿಗೆ). (ಹಿಂದೆ ರೂ 17 ಇತ್ತು)
- ಕಾಯುವಿಕೆ ದರ (Waiting Charges): ಮೊದಲ 10 ನಿಮಿಷ ಉಚಿತ. ನಂತರದ ಪ್ರತಿ 15 ನಿಮಿಷದವರೆಗೆ ರೂ 5.00.
- ಪ್ರಯಾಣಿಕರ ಸರಕು ದರ (Luggage Charges): ಒಬ್ಬ ಪ್ರಯಾಣಿಕ ಕಡ್ಡಾಯವಾಗಿ ಜೊತೆಗಿರಬೇಕು.
- ಮೊದಲ 20 ಕೆ.ಜಿ.ವರೆಗೆ ಉಚಿತ. ನಂತರದ ಪ್ರತಿ 20 ಕೆ.ಜಿ. ಅಥವಾ ಅದರ ಭಾಗಕ್ಕೆ ರೂ 5
- ರಾತ್ರಿ ವೇಳೆ ದರ (Night Charges): ರಾತ್ರಿ 10:00 ಗಂಟೆಯಿಂದ ಬೆಳಗಿನ ಜಾವ 05:00 ಗಂಟೆಯವರೆಗೆ ಸಾಮಾನ್ಯ ದರದ ಒಂದೂವರೆ ಪಟ್ಟು (1.5 Times) ದರವನ್ನು ಪಡೆಯಲು ಅವಕಾಶವಿದೆ.
ಪ್ರಾದೇಶಿಕ ಸಾರಿಗೆ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ದರದ ಪಟ್ಟಿಯನ್ನು ಪ್ರತಿಯೊಂದು ಆಟೋ ರಿಕ್ಷಾದಲ್ಲೂ ಸಾರ್ವಜನಿಕರಿಗೆ ಸ್ಪಷ್ಟವಾಗಿ ಕಾಣುವಂತೆ ಪ್ರದರ್ಶಿಸಬೇಕು. ಆಟೋ ಚಾಲಕ - ಮಾಲೀಕರು ತಮ್ಮ ಆಟೋಗಳ ಡಿಜಿಟಲ್ ಮೀಟರ್‌ಗಳನ್ನು ನಿಗದಿತ ಅವಧಿಯೊಳಗೆ ರಿಕ್ಯಾಲಿಬ್ರೇಶನ್ (Recalibration) ಹಾಗೂ ಸೀಲ್ ಮಾಡಿಸಿಕೊಳ್ಳಬೇಕು. ನಿಗದಿತ ದರಕ್ಕಿಂತ ಹೆಚ್ಚು ವಸೂಲಿ ಮಾಡಿದರೆ ಅಥವಾ ನಿಯಮ ಉಲ್ಲಂಘಿಸಿದರೆ ಕಾನೂನು ರೀತ್ಯಾ ದಂಡ ವಿಧಿಸುವುದು, ಪರವಾನಗಿ ಅಮಾನತು, ರದ್ದುಪಡಿಸುವಂತಹ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಪ್ರಾಧಿಕಾರ ಎಚ್ಚರಿಸಿದೆ.
ಈ ಬಗ್ಗೆ ಈಟಿವಿ ಭಾರತ ಜೊತೆಗೆ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಆಟೋರಿಕ್ಷಾ ಚಾಲಕ ಮತ್ತು ಮಾಲಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಭರತ್ ಕುಮಾರ್ ಮಂಗಳಾದೇವಿ ಅವರು, "ಇವತ್ತಿನ ದರ ಪರಿಷ್ಕರಣೆ ವಿಷಯದಲ್ಲಿ ಇಲಾಖೆಯಿಂದ ಸಣ್ಣದೊಂದು ತಪ್ಪು ನಡೆದಿದೆ. ಆದೇಶದ ಪ್ರತಿಯಲ್ಲಿ ಹಿಂದಿನ ಮಂಗಳೂರಿನ ದರ 35 ಮತ್ತು 17 ರೂ ಎಂದು ಹಾಕಿದ್ದಾರೆ, ಅದು ಹಳೆಯ ಆದೇಶ. ಪ್ರಸ್ತುತ ಮಂಗಳೂರಿನಲ್ಲಿ 35 ರೂ. ಕನಿಷ್ಠ ದರ ಹಾಗೂ ನಂತರದ ಪ್ರತಿ ಕಿ.ಮೀ.ಗೆ 20 ರೂ. ಚಾಲ್ತಿಯಲ್ಲಿತ್ತು. ಇಲಾಖೆಯವರು ಅದನ್ನೇ ಮುಂದುವರಿಸಿ ಈಗ 20 ರೂ. ಎಂದು ಹಾಕಿದ್ದಾರೆ. ಅಂದರೆ ಹೆಚ್ಚುವರಿ ಕಿ.ಮೀ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗೆ ತಿಳಿಸಿದ್ದು, ನಾಳೆ ಸರಿಪಡಿಸಿ ಕೊಡುವುದಾಗಿ ಭರವಸೆ ನೀಡಿದ್ದಾರೆ. ಇನ್ನು ಕನಿಷ್ಠ ದರದ ವಿಚಾರದಲ್ಲಿ ನಾವು 50 ರೂ.ಗೆ ಬೇಡಿಕೆ ಇಟ್ಟಿದ್ದೆವು, ಕನಿಷ್ಠ 45 ರೂ. ಸಿಗಬಹುದು ಎಂಬ ನಿರೀಕ್ಷೆಯಿತ್ತು. ಆದರೆ 40 ರೂ. ಮಾಡಲಾಗಿದೆ. ಯಾವುದೇ ಸರ್ಕಾರಿ ಇಲಾಖೆಯವರಿಗೆ ಪ್ರತಿ ವರ್ಷ ವೇತನ ಹೆಚ್ಚಳವಾಗುತ್ತದೆ. ನಮಗೆ 4-5 ವರ್ಷಗಳಿಗೊಮ್ಮೆ ಕೇವಲ 5 ರೂಪಾಯಿ ಜಾಸ್ತಿ ಮಾಡಿದರೆ ಹೇಗೆ? ಇದು ನಮಗೆ ಪೂರ್ಣ ತೃಪ್ತಿ ತಂದಿಲ್ಲ" ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹೋರಾಟಗಾದ ಹನುಮಂತ ಕಾಮತ್ ಈಟಿವಿ ಭಾರತ ಜೊತೆಗೆ ಮಾತನಾಡಿ, "ಪೆಟ್ರೋಲ್ ಮತ್ತು ದಿನೋಪಯೋಗಿ ವಸ್ತುಗಳ ಬೆಲೆ ಏರಿಕೆಯಿಂದ ಜನರು ಈಗಾಗಲೇ ತತ್ತರಿಸಿರುವಾಗ, ಆಟೋ ದರವನ್ನು ಒಮ್ಮೆಲೇ ಏರಿಕೆ ಮಾಡಿರುವುದು ಸರಿಯಲ್ಲ. ಇರಾನ್ ಯುದ್ಧದ ಪರಿಣಾಮದಿಂದ ಕಚ್ಚಾ ತೈಲ ದರ ಏರಿಕೆಯಾಗಿದ್ದು, ಇನ್ನೇನು ಯುದ್ಧ ನಿಲ್ಲುವ ಲಕ್ಷಣಗಳಿರುವುದರಿಂದ ಮುಂದಿನ ದಿನಗಳಲ್ಲಿ ತೈಲ ಬೆಲೆ ಇಳಿಕೆಯಾಗಬಹುದು. ಹಾಗಾಗಿ ಇನ್ನೆರಡು ತಿಂಗಳು ಕಾಯಬಹುದಿತ್ತು. ಆಟೋ ಬಳಸುವವರು ಹೆಚ್ಚಾಗಿ ಬಡವರು ಮತ್ತು ಮಧ್ಯಮ ವರ್ಗದವರು. ಅವರಿಗೆ ಈ ದರ ಏರಿಕೆ ಬಾರಿ ದೊಡ್ಡ ಹೊಡೆತವಾಗಲಿದೆ. ಈಗಿನ ಪರಿಸ್ಥಿತಿಯಲ್ಲಿ ಈ ನಿರ್ಧಾರ ಅತ್ಯಂತ ಆತುರದಿಂದ ಕೂಡಿದೆ" ಎಂದು ಹೇಳಿದರು.
ಇವುಗಳನ್ನೂ ಓದಿ:

