ಆಡಿಯೋ ವೈರಲ್: ಮಾಜಿ ಸಚಿವ ಜಮೀರ್ ಅಹಮ್ಮದ್ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿ ವರಿಷ್ಠರಿಗೆ ಪತ್ರ ಬರೆದ ಕಾಂಗ್ರೆಸ್ ನಾಯಕರು
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ.ಬಸವರಾಜ್ ಹಾಗೂ ಪಾಲಿಕೆ ಮಾಜಿ ಮೇಯರ್ ಕೆ. ಚಮನ್ ಸಾಬ್ ಹೈಕಮಾಂಡ್ಗೆ ಪತ್ರ ರವಾನಿಸಿದ್ದಾರೆ.

Published : June 2, 2026 at 11:20 AM IST
ದಾವಣಗೆರೆ: ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಹಾಗೂ ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಉಚ್ಚಾಟಿತ ಉಪಾಧ್ಯಕ್ಷ ಮೊಹಮ್ಮದ್ ಸಿರಾಜ್ ನಡುವೆ ನಡೆದಿದೆ ಎನ್ನಲಾದ ಆಡಿಯೋ ವೈರಲ್ ಆಗಿರುವುದು ಕಾಂಗ್ರೆಸ್ ವಲಯದಲ್ಲಿ ಬಿರುಗಾಳಿ ಎಬ್ಬಿಸಿದೆ. ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ವಿರುದ್ಧ ಸ್ವಪಕ್ಷದವರೇ ಆಕ್ರೋಶ ಹೊರಹಾಕುತ್ತಿದ್ದಾರೆ. ಅಲ್ಲದೇ ಪಕ್ಷ ವಿರೋಧಿ ಕೆಲಸ ಮಾಡಿದ್ದಾರೆ ಎಂದು ಪಕ್ಷದ ಹೈಕಮಾಂಡ್ಗೆ ಪತ್ರ ಬರೆದು ಅವರ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ.
ದಾವಣಗೆರೆ ಜಿಲ್ಲೆಯ ಕಾಂಗ್ರೆಸ್ ಮುಖಂಡರಿಂದ ಹೈಕಮಾಂಡ್ ಹಾಗೂ ರಾಜ್ಯ ನಾಯಕರಿಗೆ ದೂರು ನೀಡಿದ್ದಾರೆ. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ.ಬಸವರಾಜ್ ಹಾಗೂ ಪಾಲಿಕೆ ಮಾಜಿ ಮೇಯರ್ ಕೆ. ಚಮನ್ ಸಾಬ್ ಹೈಕಮಾಂಡ್ಗೆ ಪತ್ರ ರವಾನಿಸಿದ್ದಾರೆ.
ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಲು ಮಾಜಿ ಸಚಿವ ಜಮೀರ್ ಅಹಮ್ಮದ್ ಅವರು ಹುನ್ನಾರ ನಡೆಸಿದ್ದರು. ಉದ್ದೇಶ ಪೂರ್ವಕವಾಗಿ ಮುಸ್ಲಿಂ ಸಮಾಜದವರು ಮತದಾನದ ದಿನ ಮನೆ ಬಿಟ್ಟು ಹೊರಹೋಗದಂತೆ ನೋಡಿಕೊಳ್ಳುವಂತೆ ಹೇಳಿದ್ದಾರೆ. ಪಕ್ಷದ್ರೋಹಿಯಾದ ಜಮೀರ್ ಅಹ್ಮದ್ ಅವರನ್ನು ತಕ್ಷಣ ಪಕ್ಷದಿಂದ ಉಚ್ಚಾಟನೆ ಮಾಡಬೇಕು ಎಂದು ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಸುರ್ಜೇವಾಲಾ ಹಾಗೂ ಮೇಣುಗೋಪಾಲ್ ಅವರಿಗೆ ಪತ್ರ ಬರೆದು ಕಾಂಗ್ರೆಸ್ ಮುಖಂಡರು ಆಗ್ರಹಿಸಿದ್ದಾರೆ.
ಸಿಇಎನ್ ಠಾಣೆಗೆ ಸಿರಾಜ್ ದೂರು: ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಹಾಗೂ ಮಹಮ್ಮದ್ ಸಿರಾಜ್ ಅವರು ಸಂಭಾಷಣೆ ಮಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್ ವಿಚಾರವಾಗಿ ಆಡಿಯೋ ವೈರಲ್ ಮಾಡಿದವರ ವಿರುದ್ಧ ಸೂಕ್ತ ಕ್ರಮಕ್ಕೆ ಒತ್ತಾಯಿಸಿ ಸಿರಾಜ್ ಅವರು ದೂರು ದಾಖಲಿಸಿದ್ದಾರೆ. ವಿದ್ಯಾನಗರದಲ್ಲಿ ಇರುವ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ತೆರಳಿ ಮೊಹಮ್ಮದ್ ಸಿರಾಜ್ ಅವರು ಡಿವೈಎಸ್ಪಿ ಬಂಕಾಳಿ ನಾಗಪ್ಪ ಅವರಿಗೆ ದೂರು ನೀಡಿದರು. ಬೆಂಬಲಿಗರ ಜೊತೆ ಆಗಮಿಸಿ ದೂರು ನೀಡಿದ ಸಿರಾಜ್ ಅವರು ಷಡ್ಯಂತ್ರ ನಡೆಸಿದವರ ವಿರುದ್ದ ಕ್ರಮಕ್ಕೆ ಆಗ್ರಹಿಸಿದರು.
ದಾವಣಗೆರೆ ದಕ್ಷಿಣ ಉಪ ಚುನಾವಣೆಯ ಗೊಂದಲ ಇನ್ನು ಬಗೆಹರೆದಿಲ್ಲ. ಪಕ್ಷ ವಿರೋಧಿ ಚಡುವಟಿಕೆ ಮಾಡಿದ್ದಾರೆ ಎಂದು ಅಲ್ಪಸಂಖ್ಯಾತ ನಾಯಕರನ್ನು ಉಚ್ಚಾಟನೆ ಮಾಡಿದ್ರು ಪಕ್ಷ ವಿರೋಧಿ ವಿಚಾರ ತಣ್ಣಗಾಗುವಂತೆ ಕಾಣ್ತಿಲ್ಲ. ಈಗಾಗಲೇ ಫಲಿತಾಂಶ ಹೊರಬಿದ್ದಿದ್ದು, ಸಮರ್ಥ್ ಶಾಮನೂರು ಗೆದ್ದು ಬೀಗಿದ್ದಾರೆ. ಈ ಮಧ್ಯೆ ಜಮೀರ್ ಅಹ್ಮದ್ ಖಾನ್ ಹಾಗು ಮೊಹಮ್ಮದ್ ಸಿರಾಜ್ ಮಧ್ಯೆ ನಡೆದಿದೆ ಎನ್ನಲಾದ ಆಡಿಯೋ ಸಂಭಾಷಣೆ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.
ಆ ಆಡಿಯೋದಲ್ಲಿ ಸಮರ್ಥ್ ಶಾಮನೂರನ್ನು ಸೋಲಿಸಲು ಷಡ್ಯಂತ್ರ ಮಾಡಿದ್ದರು ಎನ್ನಲಾಗುತ್ತಿದೆ. ಸರ್ಮಥ್ ಶಾಮನೂರು ಷಡ್ಯಂತ್ರ ಮಾಡಿದವರ ವಿರುದ್ಧ ಬೆಂಕಿ ಉಗುಳಿದ್ದಾರೆ. ದೇವಿ ದುಗ್ಗಮ್ಮ ಷಡ್ಯಂತ್ರ ಮಾಡಲು ಬಿಡಲ್ಲ, ನಮ್ಮನ್ನು ಕಾಯುತ್ತಿದ್ದಾಳೆ ಎಂದು ವಿರೋಧಿಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: ಸಚಿವ ಸಂಪುಟ ರಚನೆ ಕಸರತ್ತು: ಇಂದು ರಾಹುಲ್ ಜತೆ ಮಹತ್ವದ ಮಾತುಕತೆ: ದೆಹಲಿಯಲ್ಲೇ ಬೀಡುಬಿಟ್ಟ ಡಿಕೆಶಿ - ಸಿದ್ದರಾಮಯ್ಯ

