ETV Bharat / state

ಬ್ಯಾಂಕ್​ನಲ್ಲಿ ನಕಲಿ ಚಿನ್ನ ಅಡವಿಟ್ಟು ವಂಚಿಸಲು ಯತ್ನ: ಇಬ್ಬರ ಬಂಧನ

ಬ್ಯಾಂಕ್​ಗಳಲ್ಲಿ ನಕಲಿ ಚಿನ್ನ ಅಡವಿಟ್ಟು ವಂಚಿಸಲು ಯತ್ನಿಸಿದ ಇಬ್ಬರನ್ನು ಕಡಬ ಪೊಲೀಸರು ಬಂಧಿಸಿದ್ದಾರೆ.

DAKSHINA KANNADA  FAKE GOLD DEPOSIT AT BANK  ಬ್ಯಾಂಕ್​ನಲ್ಲಿ ನಕಲಿ ಚಿನ್ನ ಅಡಮಾನ  ವಂಚನೆ FAKE GOLD
ಬ್ಯಾಂಕ್​ನಲ್ಲಿ ನಕಲಿ ಚಿನ್ನ ಅಡವಿಟ್ಟು ವಂಚಿಸಲು ಯತ್ನ (ETV Bharat)
author img

By ETV Bharat Karnataka Team

Published : July 6, 2026 at 9:20 AM IST

1 Min Read
Choose ETV Bharat

ಕಡಬ (ದಕ್ಷಿಣ ಕನ್ನಡ): ಕಡಬ ಪಟ್ಟಣದ ಬ್ಯಾಂಕ್‌ಗಳಲ್ಲಿ ಚಿನ್ನದ ಆಭರಣಗಳನ್ನು ಅಡವಿಟ್ಟು ಮೋಸದಿಂದ ಹಣ ಪಡೆಯಲು ಯತ್ನಿಸಿದ್ದ ಆರೋಪದಡಿ ಕಡಬ ಪೊಲೀಸರು ಇಬ್ಬರನ್ನು ಬಂಧಿಸಿ, ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.

ಬಂಧಿತರನ್ನು ಉಪ್ಪಿನಂಗಡಿ ನಿವಾಸಿ ಮಹಮ್ಮದ್ ಫಾಯಿಝ್ (20) ಹಾಗೂ ಬಂಟ್ವಾಳ ಕಸಬಾ ನಿವಾಸಿ ಮೊಹಮ್ಮದ್ ಮುರ್ಷೀದ್ (45) ಎಂದು ಗುರುತಿಸಲಾಗಿದೆ.

ಜುಲೈ 3ರಂದು ಸಂಜೆ ಕಡಬ ಪೇಟೆಯಲ್ಲಿ ಆರೋಪಿಗಳು ಸಂಶಯಾಸ್ಪದವಾಗಿ ಓಡಾಡುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಕಡಬ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ತೆರಳಿ ಇಬ್ಬರನ್ನು ತಡೆದು ವಿಚಾರಣೆ ನಡೆಸಿದರು. ಪ್ರಾಥಮಿಕ ವಿಚಾರಣೆಯಲ್ಲಿ ಅವರು ಬ್ಯಾಂಕ್‌ನಲ್ಲಿ ಸುಮಾರು 120 ಗ್ರಾಂ ಚಿನ್ನದ ಆಭರಣವನ್ನು ಅಡವಿಡಲು ಬಂದಿರುವುದಾಗಿ ತಿಳಿಸಿದರು.

ಆದರೆ ಅವರ ನಡೆ-ನುಡಿ ಹಾಗೂ ಉತ್ತರಗಳಲ್ಲಿ ಅನುಮಾನ ಕಂಡುಬಂದ ಹಿನ್ನೆಲೆಯಲ್ಲಿ ಹೆಚ್ಚಿನ ವಿಚಾರಣೆಗಾಗಿ ಇಬ್ಬರನ್ನೂ ಠಾಣೆಗೆ ಕರೆತರಲಾಯಿತು. ಅವರ ಬಳಿಯಿದ್ದ ಚಿನ್ನದ ಆಭರಣಗಳ ಬಗ್ಗೆ ದಾಖಲಾತಿ ಅಥವಾ ಮಾಲೀಕತ್ವದ ಯಾವುದೇ ಸಮರ್ಪಕ ದಾಖಲೆಗಳನ್ನು ನೀಡಲು ವಿಫಲರಾದರು. ಹಾಗೆಯೇ ವಿಚಾರಣೆ ವೇಳೆ ಆಭರಣಗಳನ್ನು ಕೃತಕವಾಗಿ ಹೆಚ್ಚು ತೂಕ ಬರುವಂತೆ ಮಾರ್ಪಡಿಸಿ ಬ್ಯಾಂಕ್‌ನಲ್ಲಿ ಅಡವಿಟ್ಟು ಬ್ಯಾಂಕ್ ಅಧಿಕಾರಿಗಳಿಗೆ ಮೋಸ ಮಾಡಿ ಹಣ ಪಡೆಯುವ ಉದ್ದೇಶ ಹೊಂದಿದ್ದಾಗಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಹಿನ್ನೆಲೆಯಲ್ಲಿ ಕಡಬ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 83/2026ರಡಿ ಪ್ರಕರಣ ದಾಖಲಿಸಲಾಗಿದೆ. ಭಾರತೀಯ ನ್ಯಾಯ ಸಂಹಿತೆ (BNS–2023)ಯ ಕಲಂ 318(4) ಹಾಗೂ 62ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಈ ಪ್ರಕರಣದ ಮೂಲಕ ಬ್ಯಾಂಕ್‌ಗಳಿಗೆ ನಕಲಿ ಅಥವಾ ತೂಕ ಹೆಚ್ಚಿಸಿದ ಚಿನ್ನದ ಆಭರಣಗಳನ್ನು ಅಡವಿಟ್ಟು ವಂಚನೆ ನಡೆಸುವ ಯತ್ನದ ಜಾಲವಿದೆಯೇ ಎಂಬ ದಿಕ್ಕಿನಲ್ಲಿಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ವಶಪಡಿಸಿಕೊಂಡಿರುವ ಆಭರಣಗಳ ನೈಜತೆ ಹಾಗೂ ಅವುಗಳ ಮೂಲದ ಬಗ್ಗೆ ತಾಂತ್ರಿಕ ಮತ್ತು ವೈಜ್ಞಾನಿಕ ಪರೀಕ್ಷೆ ನಡೆಸುವ ಸಾಧ್ಯತೆಯೂ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಬ್ಯಾಂಕ್‌ಗಳು ಹಾಗೂ ಹಣಕಾಸು ಸಂಸ್ಥೆಗಳು ಚಿನ್ನದ ಅಡವಿನ ಸಂದರ್ಭದಲ್ಲಿ ಸೂಕ್ತ ಪರಿಶೀಲನೆ ನಡೆಸುವುದು ಅಗತ್ಯವಾಗಿದ್ದು, ಸಾರ್ವಜನಿಕರು ಕೂಡ ಇಂತಹ ಅಕ್ರಮ ಚಟುವಟಿಕೆಗಳ ಬಗ್ಗೆ ಮಾಹಿತಿ ದೊರೆತಲ್ಲಿ ತಕ್ಷಣ ಪೊಲೀಸರಿಗೆ ತಿಳಿಸುವಂತೆ ಇಲಾಖೆ ಮನವಿ ಮಾಡಿದೆ.

ಇದನ್ನೂ ಓದಿ:

ಹೋಟೆಲ್​ ರೂಮ್​ನಲ್ಲಿ ನಕಲಿ ನೋಟು​ ತಯಾರಿಸುತ್ತಿದ್ದ ಆರೋಪ; ಬೆಂಗಳೂರು ಐಐಟಿ ಪದವೀಧರನ ಬಂಧನ